Priyamani: "ನನ್ನ ಲೈಫ್‌ನಲ್ಲಿ ಇನ್ನು ಬಿಕಿನಿ ಧರಿಸೋದಿಲ್ಲ" ನಟಿ ಪ್ರಿಯಾಮಣಿ ಹೀಗಂದಿದ್ದೇಕೆ?
ಪ್ರಿಯಾಮಣಿ ಒಂದು ಕಾಲದ ಸ್ಟಾರ್ ನಟಿ. ದಕ್ಷಿಣ ಭಾರತದಲ್ಲಿ ಇವರು ಸೃಷ್ಟಿಸಿದ ಹಾವಾ ಹಾಗಿತ್ತು. ಬೆಂಗಳೂರಿನಲ್ಲಿ ಬೆಳೆದಿದ್ದರೂ, ತಮಿಳು, ತೆಲುಗು, ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಹೆಚ್ಚು ಜನಪ್ರಿಯತೆ ಗಿಟ್ಟಿಸಿಕೊಂಡಿದ್ದರು. ಈಗ ಪಾತ್ರ ಕಲಾವಿದೆಯಾಗಿ ಟಾಲಿವುಡ್, ಬಾಲಿವುಡ್, ಕಾಲಿವುಡ್‌ಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ 'ಸರಸ್ವತಿ' ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಸರಸ್ವತಿ ಸಿನಿಮಾದ ಪ್ರಚಾರದ ವೇಳೆ ನೀಡಿದ ಸಂದರ್ಶನದಲ್ಲಿ ತಮ್ಮ ವೃತ್ತಿ ಜೀವನದ ಚಾಲೆಂಜಿಂಗ್ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಪ್ರಿಯಾಮಣಿ 2003ರಲ್ಲಿ ತೆಲುಗಿನ 'ಎವಾರೆ ಅತಗಾಡು' ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದರು. ಈ ಸಮಯದಲ್ಲಿ ಪ್ರಿಯಾಮಣಿ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದರು.

ಚಿತ್ರರಂಗ ಕಾಲಿಟ್ಟ 6 ವರ್ಷಗಳ ಬಳಿಕ ಪ್ರಿಯಾಮಣಿ 'ರಾಮ್' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಬಳಿಕ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಇಂದಿಗೂ ಪ್ರಿಯಾಮಣಿ ತಮ್ಮ ವೃತ್ತಿ ಬದುಕಿನಲ್ಲಿ ಸಕ್ರಿಯರಾಗಿಯೇ ಇದ್ದಾರೆ. ಆದರೆ, ಇವರ ಆರಂಭದ ದಿನಗಳಲ್ಲಿ ಸಿನಿಮಾವೊಂದಕ್ಕೆ ಬಿಕಿನಿ ಧರಿಸಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಗ್ಗೆ ಪ್ರಿಯಾಮಣಿ ಈ ಸಂದರ್ಶನದಲ್ಲಿ ವಿವರಿಸಿದ್ದಾರೆ.
ಪ್ರಿಯಾಮಣಿ ಅವರ ವೃತ್ತಿಜೀವನದ ಆರಂಭದ ದಿನಗಳಲ್ಲಿ ನಟಿಸಿದ ಸಿನಿಮಾ 'ದ್ರೋಣ'. ಈ ಸಿನಿಮಾದಲ್ಲಿ ಪ್ರಿಯಾಮಣಿ ಬಿಕಿನಿ ಧರಿಸಿ ಸಂಚಲನ ಸೃಷ್ಟಿಸಿದ್ದರು. ಈ ಬಗ್ಗೆ ಈ ಸಂದರ್ಶನದಲ್ಲಿ ನಿರೂಪಕರು ಪ್ರಶ್ನಿಸಿದರು. ಇದಕ್ಕೆ ಪ್ರಿಯಾಮಣಿ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ."ಕೆಲವೊಮ್ಮೆ ಕಥೆಗೆ ತಕ್ಕಂತೆ ಮತ್ತು ಆಯಾ ಸಂದರ್ಭಕ್ಕೆ ಅನುಗುಣವಾಗಿ ವಸ್ತ್ರಗಳನ್ನು ಧರಿಸುವುದು ತಪ್ಪಲ್ಲ. ಸ್ವಿಮ್ಮಿಂಗ್ ಪೂಲ್ ದೃಶ್ಯವಿದ್ದಾಗ ಸೀರೆ, ಇಲ್ಲವೇ ಜೀನ್ಸ್ ಧರಿಸಲು ಸಾಧ್ಯವಿಲ್ಲ ಅಲ್ಲವೇ? ಅಂತಹ ಪರಿಸ್ಥಿತಿಯಲ್ಲಿ ಬಿಕಿನಿ ಧರಿಸಲೇಬೇಕಾಗುತ್ತದೆ" ಎಂದು ಪ್ರಿಯಾಮಣಿ ವಿವರಿಸಿದ್ದಾರೆ.
ಅಂದ್ಹಾಗೆ ಈ ದೃಶ್ಯವನ್ನು ಮಾಡುವಾಗ ಪ್ರಿಯಾಮಣಿಗೆ ಮೊದಲು ಭಯವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. "ನಿರ್ದೇಶಕರು ನನ್ನನ್ನು ಮನವೊಲಿಸಲು ಪ್ರಯತ್ನಿಸಿದರು. ಆಗ 'ತಶಾನ್' ಸಿನಿಮಾದಲ್ಲಿ ಕರೀನಾ ಕಪೂರ್ ಬಿಕಿನಿ ಧರಿಸಿದ್ದು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅದಕ್ಕಿಂತ ವಿಭಿನ್ನವಾಗಿ ನಿಮ್ಮನ್ನು ತೋರಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲಿಯವರೆಗೆ ನಾನು ಬಿಕಿನಿ, ಇಲ್ಲವೇ ಸ್ವಿಮ್‌ಸೂಟ್ ಧರಿಸಿರಲಿಲ್ಲ. ಒಮ್ಮೆ ಪ್ರಯತ್ನಿಸಿ ನೋಡೋಣ ಎಂದು ಒಪ್ಪಿಕೊಂಡೆ" ಎಂದು ಹೇಳಿದ್ದಾರೆ.

ಪ್ರಿಯಾಮಣಿ ಬಿಕಿನಿ ಧರಿಸಿದ ಬಳಿಕ ಬಹಳಷ್ಟು ಟೀಕೆಗಳಿಗೆ ಮತ್ತು ಟ್ರೋಲಿಂಗ್‌ಗೆ ಒಳಗಾಗಿದ್ದರು. ಈ ಸಂದರ್ಶನದಲ್ಲಿ ಅದನ್ನೂ ನೆನಪಿಸಿಕೊಂಡಿದ್ದಾರೆ."ನಾನು ಬಿಕಿನಿ ಧರಿಸುವವರೆಗೆ ಸಾಧಾರಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರಿಂದ ಪ್ರೇಕ್ಷಕರು ನನ್ನನ್ನು ಹೊಸ ಅವತಾರದಲ್ಲಿ ನೋಡಿ ಹಾಗೆ ಪ್ರತಿಕ್ರಿಯಿಸಿದ್ದರು. ನಟಿಯಾದಾಗ ಇಂತಹ ಸಂದರ್ಭದಲ್ಲಿ ಬಿಕಿನಿ ಧರಿಸಲೇಬೇಕು. ಆದರೆ, ನಮ್ಮ ಆರಾಮವನ್ನು ನಿರ್ಲಕ್ಷಿಸಬಾರದು. ಈಗ ಬಿಕಿನಿ ಹಾಕಲು ಕೇಳಿದರೆ ಖಂಡಿತಾ ಧರಿಸುವುದಿಲ್ಲ" ಎಂದು ಪ್ರಿಯಾಮಣಿ ಸ್ಪಷ್ಟವಾಗಿ ಹೇಳಿದ್ದಾರೆ.
ಪ್ರಿಯಾಮಣಿ ದಕ್ಷಿಣ ಭಾರತದ ಜನಪ್ರಿಯ ನಟಿ. ಇಲ್ಲಿ ಜನಪ್ರಿಯತೆ ಗಳಿಸಿಕೊಂಡ ಬಳಿಕ ಈಗ ಬಾಲಿವುಡ್‌ನಲ್ಲಿ ಸೆಟಲ್ ಆಗಿದ್ದಾರೆ. ಈಗ ಸಂದರ್ಶನದಲ್ಲಿ ಕೊಟ್ಟ ಖಡಕ್ ಹೇಳಿಕೆಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿವೆ. ವೃತ್ತಿ ಬದುಕಿನ ಕುರಿತ ಅವರ ಸ್ಪಷ್ಟ ನಿಲುವು, ಚಿತ್ರರಂಗದಲ್ಲಿನ ಸನ್ನಿವೇಶಗಳಿಗೆ ಬದಲಾಗಿದ್ದರ ಬಗ್ಗೆ ಸಿನಿಮಾಪ್ರಿಯರು ಮಾತಾಡಿಕೊಳ್ಳುತ್ತಿದ್ದಾರೆ.


Click it and Unblock the Notifications











