ಕರ್ನಾಟಕದಲ್ಲಿ 'ಪುಷ್ಪ 2' ಬಲು ದುಬಾರಿ; ಮಲ್ಟಿಪ್ಲೆಕ್ಸ್‌ಗಿಂತ ಸಿಂಗಲ್ ಸ್ಕ್ರೀನ್‌ಗಳ ಟಿಕೆಟ್ ದರ ಜೇಬಿಗೆ ಕತ್ತರಿ
'ಕೆಜಿಎಫ್ 2' ಸಿನಿಮಾದ ದಾಖಲೆಯನ್ನು ಮುರಿಯಲೇ ಬೇಕು ಅಂತ ಪಟ್ಟು ಹಿಡಿದು ಕೂತಿರುವ 'ಪುಷ್ಪ 2' ಟಿಕೆಟ್ ಬೆಲೆಯನ್ನು ಏರಿಕೆ ಮಾಡಿದೆ. ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ಬೆಲೆ ಜಾಸ್ತಿ ಅಂತ ಸಿಂಗಲ್ ಸ್ಕ್ರೀನ್ ಕಡೆಗೆ ಮುಖ ಮಾಡಿದರೆ ಅಲ್ಲೂ ಟಿಕೆಟ್ ಬೆಲೆ ದುಬಾರಿಯಾಗಿದೆ. ಕರ್ನಾಟಕದಲ್ಲಿ ಇಷ್ಟೊಂದು ಬೆಲೆ ಕೊಟ್ಟು ಸಿನಿಮಾ ನೋಡುತ್ತಾರಾ? ಅನ್ನೋ ಪ್ರಶ್ನೆಯಂತೂ ಉದ್ಭವವಾಗಿದೆ.
'ಪುಷ್ಪ 2' ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಸಿನಿಮಾ ಆಗಿದ್ದರಿಂದ ಮೊದಲ ದಿನ ಕ್ರೇಜ್ ಇದ್ದೇ ಇರುತ್ತೆ. ಇನ್ನು ಫ್ಯಾನ್ಸ್ ಶೋಗಳಿಗೆ ಕೊಂಚ ಮಟ್ಟಿಗೆ ಟಿಕೆಟ್ ದರವನ್ನು ಏರಿಕೆ ಮಾಡುವುದು ಸಹಜ. ಆದರೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಬೆಲೆ ಏರಿಕೆ ಮಾಡಿದರೂ ಸಿನಿಪ್ರಿಯರು ಖರೀದಿ ಮಾಡಬಹುದಾದ ಬೆಲೆ ಇರುತ್ತಿತ್ತು. ಈಗ 'ಪುಷ್ಪ 2' ಟಿಕೆಟ್ ಬೆಲೆ ಅಲ್ಲೂ ಗಗನಕ್ಕೆ ಏರಿದೆ.

ತೆಲುಗು ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಮೊದಲು ಟಿಕೆಟ್ ಬುಕಿಂಗ್ ಓಪನ್ ಮಾಡಲಾಗಿತ್ತು. ಬೆಳಗ್ಗೆ ನಾಲ್ಕು ಗಂಟೆಯಿಂದಲೇ ಫ್ಯಾನ್ಸ್ ಶೋಗಳನ್ನು ಹಾಕಲಾಗಿದೆ. ಅಲ್ಲು ಅರ್ಜುನ್ ಅಭಿಮಾನಿಗಳು ಕೂಡ ಬೆಳ್ಳಂಬೆಳ್ಳಗೆ ಎದ್ದು ಸಿನಿಮಾ ನೋಡುವುದಕ್ಕೆ ತುದಿಗಾಲಲ್ಲಿ ನಿಂತಿದ್ದರು. ಆದರೆ, ಟಿಕೆಟ್ ಬೆಲೆ ಆ ಉತ್ಸಾಹವನ್ನು ಕಡಿಮೆ ಮಾಡಿದಂತೆ. ಹಾಗಂತ ಕರ್ನಾಟಕ ಅಷ್ಟೇ ತೆಲುಗು ಮಂದಿ ಕೂಡ ಸೋಶಿಯಲ್ ಮೀಡಿಯಾಗಳಲ್ಲಿ ಈ ವಿಚಾರವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
'ಪುಷ್ಪ 2' ಕರ್ನಾಟಕದಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಸಿನಿಮಾಗಳಿಗಷ್ಟೇ ಮೀಸಲಿದ್ದ ಚಿತ್ರಮಂದಿರಗಳು ಕೂಡ ತೆಲುಗು ಸಿನಿಮಾಗಳನ್ನು ಹಾಕುತ್ತಿದೆ. ಬೆಂಗಳೂರಿನಲ್ಲಿ ಸಿದ್ದೇಶ್ವರ, ಪ್ರಸನ್ನ, ವಿನಾಯಕ, ಶಾರದಾ, ಕೃಷ್ಣ, ವಜ್ರೇಶ್ವರಿ, ಸ್ವಾಗತ್ ಶಂಕರ್‌ನಾಗ್ ಅಂತ ಅಪ್ಪಟ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡುತ್ತಿದ್ದ ಥಿಯೇಟರ್‌ಗಳು ತೆಲುಗು ಹಾಕಿದೆ. ಅಷ್ಟೇ ಅಲ್ಲ ಫ್ಯಾನ್ಸ್ ಶೋಗೆ ಟಿಕೆಟ್ ದರವನ್ನು 800 ರಿಂದ 2000 ರೂಪಾಯಿವರೆಗೂ ಇಟ್ಟಿದೆ. ಇದು ಸಿನಿಪ್ರಿಯರ ನಿದ್ದೆಗೆಡಿಸಿದೆ.

ಇನ್ನು ಕೆಜಿ ರಸ್ತೆಯಲ್ಲಿರುವ ಮತ್ತೊಂದು ಕನ್ನಡ ಚಿತ್ರಮಂದಿರ ತ್ರಿವೇಣಿ ಕೂಡ 'ಪುಷ್ಪ 2' ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ. ಇಲ್ಲಿ ಟಿಕೆಟ್ ಬೆಲೆ ಸಾವಿರಕ್ಕೇರಿದ ಉದಾಹರಣೆಗಳು ತೀರಾ ಕಡಿಮೆ. ಆದರೆ, 'ಪುಷ್ಪ 2' ಸಿನಿಮಾದ ಮುಂಜಾನೆಯ ನಾಲ್ಕು ಗಂಟೆಯ ಶೋಗೆ ಸಾವಿರ ರೂಪಾಯಿ ಬೆಲೆಯನ್ನು ನಿಗದಿ ಪಡಿಸಿದೆ. ಅಲ್ಲದೆ ಸಾರ್ಮಲ್ ಶೋಗಳು ಕೂಡ ಮುನ್ನೂರು ರೂಪಾಯಿ ದಾಟಿವೆ.
ಮಲ್ಟಿಪ್ಲೆಕ್ಸ್‌ನಲ್ಲಿ ಟಿಕೆಟ್ ದರ ಏರಿಕೆ ವಿಚಾರವಾಗಿ ಆರೋಪಗಳು ಕೇಳಿ ಬರುತ್ತಿದ್ದವು. ಆದರೆ, 'ಪುಷ್ಪ 2' ಟಿಕೆಟ್ ದರದ ವಿಚಾರದಲ್ಲಿ ಉಲ್ಟಾ ಆಗಿದೆ. ಮಲ್ಟಿಪ್ಲೆಕ್ಸ್‌ಗಿಂತ ಸಿಂಗಲ್ ಸ್ಕ್ರೀನ್‌ಗಳ ಟಿಕೆಟ್ ದರವೇ ದುಬಾರಿ ಎನಿಸಿದೆ. ಯಾಕಂದ್ರೆ, ಮಲ್ಟಿಪ್ಲೆಕ್ಸ್‌ನಲ್ಲಿ ಬೆಳಗ್ಗೆ ಆರೂವರೆಯಿಂದ ಆರಂಭ ಆಗುವ ಶೋಗಳಿಗೆ 450 ರೂಪಾಯಿಂದ ಟಿಕೆಟ್ ದರ ಆರಂಭ ಆಗಲಿದೆ. ಈ ಕಾರಣಕ್ಕೆ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದರೂ ರೆಸ್ಪಾನ್ಸ್ ಸ್ಲೋಯಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.
ಮೊದಲ ದಿನ ಕರ್ನಾಟಕದಲ್ಲಿ 'ಪುಷ್ಪ 2ಗೆ ಎಷ್ಟು ಶೋಗಳು ಸಿಕ್ಕಿದೆ ಅನ್ನೋದು ಕೊನೆಯ ದಿನ ರಿವೀಲ್ ಆಗುತ್ತೆ. ಆದರೆ, ದುಬಾರಿ ಬೆಲೆಯನ್ನು ಕೊಟ್ಟು ಜನರು ಸಿನಿಮಾ ನೋಡುತ್ತಾರಾ? ಸಿನಿಮಾ ಹೌಸ್‌ಫುಲ್ ಆಗುತ್ತಾ? ಅನ್ನೋ ಪ್ರಶ್ನೆಗೆ ಡಿಸೆಂಬರ್ 5ಕ್ಕೆ ಉತ್ತರ ಸಿಗಲಿದೆ. ಆದರೆ, ಕನ್ನಡ ಎರಡು ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾಗಳಾಗಿದ್ದ 'ಕೆಜಿಎಫ್ 2' ಹಾಗೂ 'ಕಾಂತಾರ' ಟಿಕೆಟ್ ಬೆಲೆ ಇಷ್ಟೊಂದು ದುಬಾರಿ ಇರಲಿಲ್ಲ. ಪರಭಾಷೆಯ ಸಿನಿಮಾಗಳಿಗೆ ಟಿಕೆಟ್ ದರ ಏರಿಕೆ ಮಾಡಿದ್ದಾರೆಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ.


Click it and Unblock the Notifications











