ಮದುವೆಗೆ ಸಜ್ಜಾದ ಅವಳಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು: ವರ ಯಾರು? ಯಾರೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನ?
ಹೈದರಾಬಾದ್: 2024 ರ ಕೊನೆಯಲ್ಲಿ ಮತ್ತೊಬ್ಬ ಕ್ರೀಡಾ ಲೋಕದ ಸೆಲೆಬ್ರಿಟಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಅವರೇ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ. ವಿ. ಸಿಂಧು. ಎರಡು ಬಾರಿ ಒಲಿಂಪಿಕ್ ಪದಕಗಳನ್ನು ಗೆದ್ದಿರುವ ಪಿ. ವಿ. ಸಿಂಧು ಉದ್ಯಮಿಯನ್ನು ಇದೇ ತಿಂಗಳು ಕೈ ಹಿಡಿಯಲಿದ್ದಾರೆ. ಈ ವಿಷಯವನ್ನು ಖುದ್ದು ಅವರ ತಂದೆಯೇ ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ವೃತ್ತಿ ಬದುಕಿನಲ್ಲಿ ಹಿನ್ನೆಲೆ ಅನುಭವಿಸಿದ್ದ ಪಿ. ವಿ. ಸಿಂಧು ಕಳೆದ ಭಾನುವಾರ ಸೈಯದ್ ಮೋದಿ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದಿದ್ದರು. ಈ ಖುಷಿಯ ಬೆನ್ನಲ್ಲೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಖುಷಿಯ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ. ಇದೇ ಡಿಸೆಂಬರ್ ತಿಂಗಳಲ್ಲಿ ಎರಡು ಬಾರಿ ಒಲಿಂಪಿಕ್ ಪ್ರಶಸ್ತಿ ಗೆದ್ದಿರುವ ತಾರೆ ಪಿ. ವಿ. ಸಿಂಧು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಮದುವೆ ಆಗುತ್ತಿರುವ ಉದ್ಯಮಿ ಯಾರು? ಯಾವಾಗ? ಎಲ್ಲಿ ಮದುವೆ? ಯಾರೆಲ್ಲ ಸೆಲೆಬ್ರಿಟಿಗಳಿಗೆ ಆಹ್ವಾನವನ್ನು ನೀಡಲಾಗಿದೆ ಎಂದು ಕೀಡಾ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಮದುವೆ ಉದಯಪುರದಲ್ಲಿ ಡಿಸೆಂಬರ್ 22ರಂದು ನಡೆಯಲಿದೆ. ಈಗಾಗಲೇ ಸಿದ್ಧತೆಗಳು ಆರಂಭ ಆಗಿವೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಈಗಾಗಲೇ ಆಹ್ವಾನ ಪ್ರತಿಕೆ ಹಂಚಲು ಕುಟುಂಬಸ್ಥರು ಮುಂದಾಗಿದ್ದಾರೆ. ಇನ್ನು ವಿವಾಹದ ಕಾರ್ಯಗಳು ಡಿಸೆಂಬರ್ 20ರಿಂದ ಆಗಲಿದ್ದು, ಡಿಸೆಂಬರ್ 22ಕ್ಕೆ ಮದುವೆ ನಡೆದರೆ, 25ನೇ ತಾರೀಕು ಆರತಕ್ಷತೆ ಕಾರ್ಯಕ್ರಮ ನಡೆಯುತ್ತಿದೆ.
ಅಂದ್ಹಾಗೆ ಪಿ. ವಿ. ಸಿಂಧು ವಿವಾಹ ಆಗುತ್ತಿರುವ ಹುಡುಗ ಹೈದರಾಬಾದ್ ಮೂಲದವರು. ಉದ್ಯಮಿಯಾಗಿರುವ ವೆಂಕಟದತ್ತ ಸಾಯಿ ಜೊತೆಗೆ ಸಿ.ವಿ ಸಿಂಧು ಹಸೆಮಣೆಯನ್ನು ಏರುತ್ತಿದ್ದಾರೆ. ಎರಡೂ ಕುಟುಂಬದವರು ಕೂಡ ಈ ಮದುವೆಗೆ ಒಪ್ಪಿಗೆ ನೀಡಿದ್ದು, ಮದುವೆ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಗಳ ಮದುವೆ ವಿಷಯವನ್ನು ಪಿ. ವಿ. ಸಿಂಧು ತಂದೆ ಪಿ.ವಿ ರಮಣ ಅವರೇ ಹಂಚಿಕೊಂಡಿದ್ದಾರೆ.
ಪಿ. ವಿ. ಸಿಂಧು ಅವರಿಗೆ ಬ್ಯಾಕ್ ಟು ಬ್ಯಾಕ್ ಪಂದ್ಯಗಳು ಇರುವುದರಿಂದ ಬ್ಯುಸಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡುವು ಇರದ ಕಾರಣ, ಡಿಸೆಂಬರ್ ತಿಂಗಳಲ್ಲಿ ಮದುವೆ ಮಾಡುವುದಕ್ಕೆ ಎರಡೂ ಕುಟುಂಬಗಳು ನಿರ್ಧರಿಸಿವೆ ಎಂದು ವರದಿಯಾಗಿದೆ. ಇನ್ನು ಸಿಂಧು ಜೊತೆ ಹಸೆಮಣೆ ಏರುತ್ತಿರುವ ಉದ್ಯಮಿ ವೆಂಕಟ ದತ್ತ ಸಾಯಿ ಬಿಬಿಎಯಲ್ಲಿ ಅಕೌಂಟಿಂಗ್ ಮತ್ತು ಫೈನಾನ್ಸ್ ಪದವಿ ಪಡೆದಿದ್ದಾರೆ. ಬಳಿಕ ಬೆಂಗಳೂರಿನಲ್ಲಿ ಡೇಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಪಿವಿ ಸಿಂಧು ಕೇವಲ ಕ್ರೀಡಾ ಜಗತ್ತಿಗಷ್ಟೇ ಅಲ್ಲ, ಸಿನಿಮಾ ಲೋಕದಲ್ಲೂ ಚಿರಪರಿಚಿತರು. ಸಿನಿಮಾ ತಾರೆಯರೊಂದಿಗೂ ಗುರುತಿಸಿಕೊಂಡಿದ್ದಾರೆ. 'ಪುಷ್ಪ 2' ನಟ ಅಲ್ಲು ಅರ್ಜುನ್, ಸೂಪರ್‌ಸ್ಟಾರ್ ರಜನಿಕಾಂತ್, ರಣ್‌ವೀರ್ ಸಿಂಗ್, ದೀಪಿಕಾ ಪಡುಕೋಣೆ, ದುಲ್ಖರ್ ಸಲ್ಮಾನ್, ಸಾನಿಯಾ ಮಿರ್ಜಾ, ಚಿರಂಜೀವಿ, ರಾಮ್ ಚರಣ್, ನಾಗಾರ್ಜುನ, ರಾಣಾ ದಗ್ಗುಬಾಟಿ ಸೇರಿದಂತೆ ಹಲವು ನಟರೊಂದಿಗೆ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಇವರೆಲ್ಲರೂ ಪಿವಿ ಸಿಂಧು ಮದುವೆಗೆ ಹಾಜರಾಗುವ ಸಾಧ್ಯತೆಯಿದೆ.
ಬ್ಯಾಡ್ಮಿಂಟನ್ ತಾರೆ ಸಿಂಧು ಮದುವೆ ಅದ್ಧೂರಿಯಾಗಿ ನಡೆಯಲಿದೆ. ಇದರಲ್ಲಿ ಎರಡೂ ಕುಟುಂಬಸ್ಥರು ಹಾಗೂ ಕ್ರೀಡೆ, ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಆಪ್ತರು ಭಾಗಿಯಾಗುವ ಸಾಧ್ಯತೆಯಿದೆ. ಬಳಿಕ ಹೈದರಾಬಾದ್‌ನಲ್ಲಿ ಆರತಕ್ಷತೆಯನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗುವ ಸಾಧ್ಯತೆಯಿದೆ.


Click it and Unblock the Notifications











