ಮಾರ್ಚ್ 18 ಅಲ್ಲ.. ಏಪ್ರಿಲ್ 28 ಅಲ್ಲ.. RRR ಹೊಸ ರಿಲೀಸ್ ಡೇಟ್: ‘ಜೇಮ್ಸ್’ ದಾರಿ ಸುಗಮ
2022ರ ಬಹುನಿರೀಕ್ಷೆಯ ಸಿನಿಮಾ RRR ಸಿನಿಮಾ ಬಿಡುಗಡೆ ಬಗ್ಗೆ ಹಲವು ಗೊಂದಲಗಳಿತ್ತು. ಪ್ರತಿ ಬಾರಿ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗಲೂ ಬಿಡುಗಡೆಯನ್ನು ಮುಂದೂಡಬೇಕಾಗಿ ಬಂದಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಸಂಕ್ರಾಂತಿಗಿಂತ ಮುಂಚಿತವಾಗಿ ಇದೇ ಜನವರಿ 7ರಂದು ಸಿನಿಮಾ ಬಿಡುಗಡೆಯಾಗಬೇಕಿತ್ತು. ಆದರೆ, ದಿಢೀರನೇ ಕೊರೊನಾ ಹೆಚ್ಚಾಗಿದ್ದರಿಂದ RRR ರಿಲೀಸ್ ಡೇಟ್ ಅನ್ನು ಮುಂದೂಡಲ್ಪಟ್ಟಿತ್ತು. ಈಗ ಹೊಸ ಡೇಟ್ ಅನೌನ್ಸ್ ಮಾಡಿದ್ದಾರೆ. ರಾಜಮೌಳಿ.
RRR ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರಿಂದ ಐದೂ ಭಾಷೆಗಳಲ್ಲಿಯೂ ಭರ್ಜರಿ ಪ್ರಚಾರ ಮಾಡಿದ್ದರು. ಈ ಪ್ರಚಾರದ ಹಣದಲ್ಲೇ ಒಂದು ಸಿನಿಮಾ ತೆಗೆಯಬಹುದು ಎಂದು ಟಾಲಿವುಡ್ ಮಾತಾಡಿಕೊಂಡಿತ್ತು. ಇಷ್ಟೆಲ್ಲಾ ಖರ್ಚು ಮಾಡಿದ್ದರೂ, RRR ಸಿನಿಮಾವನ್ನು ಬಿಡುಗಡೆ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ರಾಜಮೌಳಿ ಎರಡು ದಿನವನ್ನು ಬಿಡುಗಡೆ ಇಟ್ಟುಕೊಂಡಿದ್ದರು. ಆದರೆ, ಅವೆರಡಲ್ಲೂ ಬಿಟ್ಟು ಮತ್ತೊಂದು ದಿನ ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ಈ ಮೂಲಕ ಪುನೀತ್ ರಾಜ್‌ಕುಮಾರ್ ಕೊನೆ ಸಿನಿಮಾ 'ಜೇಮ್ಸ್' ತಂಡ ಸ್ವಲ್ಪ ರಿಲ್ಯಾಕ್ಸ್ ಆದಂತಿದೆ.

ಮಾರ್ಚ್ 15 ಅಲ್ಲ ಮಾರ್ಚ್ 25ಕ್ಕೆ RRR ರಿಲೀಸ್
ಎಸ್ ಎಸ್ ರಾಜಮೌಳಿ ನಿರ್ದೇಶನದ RRR ಸಿನಿಮಾ ಬಿಡುಗಡೆಗೆ ಹೊಸ ದಿನ ಘೋಷಿಸಲಾಗಿದೆ. ಜನವರಿ 7ರಂದು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು ಪೋಸ್ಟ್‌ಪೋನ್ ಮಾಡಿದ ಬಳಿಕ ರಾಜಮೌಳಿ ಮಾರ್ಚ್ 18 ಇಲ್ಲವೇ ಎಪ್ರಿಲ್ 28ಕ್ಕೆ ಸಿನಿಮಾ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಈಗ ಈ ಎರಡೂ ದಿನಗಳಲ್ಲಿ ಬಿಟ್ಟು ಮಾರ್ಚ್ 25 ಅನ್ನು ರಾಜಮೌಳಿ ಲಾಕ್ ಮಾಡಿದ್ದಾರೆ. ಈ ಬಾರಿ ಮಿಸ್ ಮಾಡದೆ ಈ ದಿನ ಐದು ಭಾಷೆಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ.

ಗಟ್ಟಿ ಮನಸ್ಸು ಮಾಡಿ RRR ಬಿಡುಗಡೆ
ದೇಶದಲ್ಲಿ ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿದೆ. ಎಲ್ಲೆಲ್ಲಿ ಕೊರೊನಾದಿಂದ ಥಿಯೇಟರ್‌ಗಳು ಬಂದ್ ಆಗಿದ್ದವೋ ಅಲ್ಲೆಲ್ಲಾ ಓಪನ್ ಆಗುತ್ತಿವೆ. ಸದ್ಯ ಶೇ. 50 ಸೀಟು ಭರ್ತಿಗೆ ಅವಕಾಶ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ ನೀಡುವ ಸೂಚನೆಗಳಿವೆ. ಹೀಗಾಗಿ ರಾಜಮೌಳಿ ಗಟ್ಟಿ ಮನಸು ಮಾಡಿ RRR ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರೆ. ಜೂ. ಎನ್‌ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್‌ರನ್ನು ತೆರೆಮೇಲೆ ನೋಡಲು ಸಿನಿಪ್ರಿಯರು ಕಾದು ಕೂತಿದ್ದಾರೆ.

'ಜೇಮ್ಸ್' ರಿಲೀಸ್ ಆದರೆ ಗತಿಯೇನು?
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಕೊನೆಯ ಸಿನಿಮಾ 'ಜೇಮ್ಸ್' ಮಾರ್ಚ್ 17ಕ್ಕೆ ಬಿಡುಗಡೆ ಮಾಡಲು ಶತಪ್ರಯತ್ನ ನಡೆಯುತ್ತಿದೆ. ಪುನೀತ್ ಹುಟ್ಟುಹಬ್ಬಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಚಿತ್ರತಂಡ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಮಾರ್ಚ್ 17ಕ್ಕೆ 'ಜೇಮ್ಸ್' ರಿಲೀಸ್ ಆದರೆ, ಒಂದು ವಾರದ ಅಂತರದಲ್ಲಿ RRR ರಿಲೀಸ್ ಆಗುತ್ತೆ. ಹೀಗಾಗಿ ಒಂದು ವಾರದ ಅಂತರ ಸಾಕಾ ಅನ್ನುವುದು ಸದ್ಯದ ಅಭಿಮಾನಿಗಳನ್ನು ಕಾಡುತ್ತಿದೆ. ಆದರೆ, ಇದೂವರೆಗೂ ಚಿತ್ರತಂಡ 'ಜೇಮ್ಸ್' ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಿಲ್ಲ.

ಸೀತಾರಾಮ ರಾಜು-ಕೋಮರಂ ಭೀಮ್ ಯುದ್ಧ
ರಾಜಮೌಳಿ ಕಲ್ಪನೆಯಲ್ಲಿ ಜೂ. ಎನ್‌ಟಿಆರ್ ಕೋಮರಂ ಭೀಮ್ ಅವತಾರದಲ್ಲಿ, ರಾಮ್ ಚರಣ್ ಅಲ್ಲುರಿ ಸೀತಾ ರಾಮರಾಜು ಅವತಾರದಲ್ಲಿ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಸ್ಟಾರ್ ನಟರು ಒಂದೇ ತೆರೆಮೇಲೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಇಬ್ಬರು ಮಾಸ್ ಅಭಿಮಾನಿಗಳ ಅದ್ಧೂರಿ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ತೆರೆಮೇಲೆ ಬರಲಿದೆ. ಮತ್ತೆ ರಾಜಮೌಳಿ ಪ್ರಚಾರ ಆರಂಭಿಸಲಿದ್ದಾರೆ. ಕರ್ನಾಟಕದಲ್ಲಿ RRR ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಲಿದೆ.


Click it and Unblock the Notifications