ತೆಲುಗು ನಿರ್ದೇಶಕಿ ಸಂಜನಾ ರೆಡ್ಡಿಗೆ ತೀವ್ರ ಅನಾರೋಗ್ಯ, ಸ್ಥಿತಿ ಗಂಭೀರ
ಇತ್ತೀಚೆಗಷ್ಟೇ ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ ಕುರಿತು ಬಯೋಪಿಕ್ ನಿರ್ದೇಶಿಸುವುದಾಗಿ ಪ್ರಕಟಿಸಿದ್ದ ತೆಲುಗು ಚಿತ್ರರಂಗದ ನಿರ್ದೇಶಕಿ ಸಂಜನಾ ರೆಡ್ಡಿ ತೀವ್ರ ಅನಾರೋಗ್ಯದ ಸಮಸ್ಯೆಗೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ.
ನರ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ಸಂಜನಾ ಅವರನ್ನು ಭಾನುವಾರ ಮಧ್ಯಾಹ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿರುವ ಅವರನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ವೆಂಟಿಲೇಟರ್ ಅಳವಡಿಸಲಾಗಿದೆ. ಆದರೆ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮುಂದೆ ಓದಿ...

ರೋಗ ಪತ್ತೆಗೆ ಪ್ರಯತ್ನ
'ಅಧಿಕ ಜ್ವರದಿಂದ ಬಳಲುತ್ತಿದ್ದ ಸಂಜನಾ ರೆಡ್ಡಿ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಸ್ಥಿತಿ ಗಂಭೀರವಾದ ಕಾರಣ ಜೀವ ಸಂರಕ್ಷಕದಲ್ಲಿ ಇರಿಸಲಾಗಿದೆ. ನರರೋಗ ತಜ್ಞರೊಬ್ಬರು ಅವರ ಅನಾರೋಗ್ಯದ ಸಮಸ್ಯೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದಾರೆ. ಪ್ರಸ್ತುತ ಅವರ ಸ್ಥಿತಿ ಬಹಳ ಗಂಭೀರವಾಗಿದೆ' ಎಂದು ಮೂಲಗಳು ತಿಳಿಸಿವೆ.

ಡಯಟ್‌ನಿಂದಾಗಿ ಸಮಸ್ಯೆ
'ಅವರು ಕೆಲವು ಸಮಯದಿಂದ ಡಯಟ್‌ನಲ್ಲಿದ್ದರು. ಕೆಲವೊಂದೆರಡು ದಿನಗಳಿಂದ ಕೇವಲ ದ್ರವ ರೂಪದಲ್ಲಿ ಆಹಾರ ಸೇವನೆ ಮಾಡುತ್ತಿದ್ದರು. ಇದರಿಂದ ಅವರಲ್ಲಿ ನಿಶ್ಶಕ್ತಿ ಉಂಟಾಗಿತ್ತು. ಅವರು ಬಹಳ ನಿತ್ರಾಣರಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಕ್ಕಿಂತ ಹೆಚ್ಚೇನೂ ಆಗಿಲ್ಲ. ಕೆಲವು ದಿನಗಳಲ್ಲಿ ಅವರು ಬಿಡುಗಡೆಯಾಗಲಿದ್ದಾರೆ' ಎಂದು ನಿರ್ಮಾಪಕ ಕೋನಾ ವೆಂಕಟ್ ರೆಡ್ಡಿ ತಿಳಿಸಿದ್ದಾರೆ.

ನರಕ್ಕೆ ಸಂಬಂಧಿಸಿದ ಸಮಸ್ಯೆ
ಆದರೆ ಸಂಜನಾ ಅವರ ಸಂಬಂಧಿಕರು ಹೇಳುವಂತೆ ಅವರು ಬಹಳ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನರ ಮಂಡಲಕ್ಕೆ ಸಂಬಂಧಿಸಿದಂತೆ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಅವರ ಸ್ಥಿತಿ ಹೇಗಿದೆ ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ಯಶೋದಾ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ತಿಳಿಸಿವೆ.

ಕರ್ಣಂ ಮಲ್ಲೇಶ್ವರಿ ಸಿನಿಮಾ
2018ರಲ್ಲಿ ರಾಜ್ ತರುಣ್ ನಾಯಕರಾಗಿದ್ದ 'ರಾಜು ಗಾಡು' ಎಂಬ ಚಿತ್ರ ನಿರ್ದೇಶಿಸುವ ಮೂಲಕ ಸಂಜನಾ ರೆಡ್ಡಿ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದರು. ಕ್ರೀಡಾಪಟು ಕರ್ಣಂ ಮಲ್ಲೇಶ್ವರಿ ಜನ್ಮದಿನದಂದು ಅವರ ಬಯೋಪಿಕ್ ಘೋಷಣೆಯಾಗಿತ್ತು. ಕೋನ ವೆಂಕಟ್ ನಿರ್ಮಾಣದಲ್ಲಿ ಸಂಜನಾ ರೆಡ್ಡಿ ಚಿತ್ರ ನಿರ್ದೇಶಿಸಲಿದ್ದಾರೆ ಎಂದು ತಿಳಿಸಲಾಗಿತ್ತು.


Click it and Unblock the Notifications











