'ಓಪನ್‌ಹೈಮರ್' ಭಗವದ್ಗೀತೆ ಓದಿದ್ದ.. ಆದರೆ, 0.0000001% ರಷ್ಟು ಭಾರತೀಯರು ಓದಿದ್ದೇ ಅನುಮಾನ"-ಆರ್‌ಜಿವಿ
ಹಾಲಿವುಡ್ ಸಿನಿಮಾ 'ಓಪನ್‌ಹೈಮರ್' ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಾಣುತ್ತಿದೆ. ಭಾರತದಲ್ಲೂ 'ಓಪನ್‌ಹೈಮರ್' ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಈ ಮಧ್ಯೆ ಸಿನಿಮಾದಲ್ಲಿರೋ ಭಗವದ್ಗೀತೆ ದೃಶ್ಯವೊಂದು ವಿವಾದಕ್ಕೂ ಸಿಕ್ಕಿಕೊಂಡಿದೆ.
'ಓಪನ್‌ಹೈಮರ್' ಸಿನಿಮಾದ ಬೋಲ್ಡ್ ದೃಶ್ಯವೊಂದರಲ್ಲಿ ಹೀರೊ ಭಗವದ್ಗೀತೆ ಪಠಿಸುತ್ತಾನೆ. ಈ ಸೀನ್ ವಿರುದ್ಧ ಭಾರತದಲ್ಲಿ ತೀವ್ರ ತರಹದ ಟೀಕೆಗಳು ವ್ಯಕ್ತವಾಗುತ್ತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕೆಲವು ಸಿನಿಮಾವನ್ನು ಭಾರತದಲ್ಲಿ ಬ್ಯಾನ್ ಮಾಡುವಂತೆ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ದೇಶದಾದ್ಯಂತ ಈ ಸಿನಿಮಾದ ಭಗವದ್ಗೀತೆ ದೃಶ್ಯದ ಬಗ್ಗೆ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಟಾಲಿವುಡ್‌ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಡಿದ ಟ್ವೀಟ್ ಮತ್ತಷ್ಟು ಕಿಚ್ಚು ಹಚ್ಚಿದೆ. ಅಷ್ಟಕ್ಕೂ ರಾಮ್ ಗೋಪಾಲ್ ಮಾಡಿದ ಟ್ವೀಟ್‌ನಲ್ಲಿ ಅಂತಹದ್ದೇನಿದೆ? ಅನ್ನೋದನ್ನು ನೋಡಲು ಮುಂದೆ ಓದಿ.
'ಓಪನ್‌ಹೈಮರ್' ಸಿನಿಮಾದ ವಿವಾದವೇನು?
ಹಾಲಿವುಡ್‌ನ ಜನಪ್ರಿಯ ನಿರ್ದೇಶಕ ಕ್ರಿಸ್ಟೋಫರ್ ನೋಲನ್ 'ಓಪನ್‌ಹೈಮರ್' ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾ ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಅಮೆರಿಕದ ವಿಜ್ಞಾನಿ 'ಓಪನ್‌ಹೈಮರ್' ಅಣುಬಾಂಬ್ ಅನ್ನು ಕಂಡು ಹಿಡಿಯುತ್ತಾರೆ. ಅದನ್ನೇ ಇಟ್ಟುಕೊಂಡು ಕಥೆಯನ್ನು ಹೆಣೆದಿದ್ದರು. ಈ ಸಿನಿಮಾ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತಿದೆ. ಆದರೆ, ಇದರಲ್ಲಿ ಸಿನಿಮಾ ಹೀರೊ ಭಗವದ್ಗೀತೆ ಓದುತ್ತಾ ಬೋಲ್ಡ್ ದೃಶ್ಯವೊಂದರಲ್ಲಿ ಕಾಣಿಸಿಕೊಂಡಿದ್ದಾನೆ. ಇದು ಭಾರತೀಯರ ನಿದ್ದೆ ಕೆಡಿಸಿದ್ದು, ವಿವಾದಕ್ಕೆ ತಿರುಗಿದೆ. ಈ ಬಗ್ಗೆ ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
"ಭಗವದ್ಗೀತೆಯನ್ನು ಎಷ್ಟು ಜನ ಓದಿದ್ದಾರೆ?"
ಭಾರತದಲ್ಲಿ 'ಓಪನ್‌ಹೈಮರ್' ಸಿನಿಮಾಗಳಿಗೆ ಟೀಕೆ ಟಿಪ್ಪಣಿಗಳು ಓಡಾಡುತ್ತಿದೆ. ಸಿನಿಮಾದ ಪ್ರಣಯದ ದೃಶ್ಯದಲ್ಲಿ ಭಗವದ್ಗೀತೆಯನ್ನು ಓದುವುದನ್ನು ಭಾರತೀಯರು ವಿರೋಧಿಸಿದ್ದಾರೆ. ಇದು ಭಗವದ್ಗೀತೆಗೆ ಮಾಡಿದ ಅವಮಾನ ಎಂದು ಕಿಡಿಕಾರುತ್ತಿದ್ದಾರೆ. ಈ ಸಿನಿಮಾದಿಂದ ಭಗವದ್ಗೀತೆ ದೃಶ್ಯವನ್ನು ಡಿಲೀಟ್ ಮಾಡಬೇಕು ಎಂದು ಒತ್ತಾಯಗಳು ಕೇಳಿ ಬರುತ್ತಿವೆ. ಈ ವಿವಾದಕ್ಕೆ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ ಮತ್ತಷ್ಟು ಕಿಡಿ ಹಚ್ಚಿದ್ದಾರೆ. "ವಿಪರ್ಯಾಸವೆಂದರೆ, ಅಮೆರಿಕದ ಅಣು ವಿಜ್ಞಾನಿ ಓಪೆನ್‌ಹೈಮರ್ ಭಗವದ್ಗೀತೆಯನ್ನು ಓದಿದ್ದಾನೆ. ಆದರೆ, 0.0000001% ಭಾರತೀಯರು ಓದಿದ್ದಾರಾ ಎಂಬ ಅನುಮಾನ ನನ್ನದು." ಎಂದು ಆರ್‌ಜಿವಿ ಟ್ವೀಟ್ ಮಾಡಿದ್ದಾರೆ.

"ನೆಟ್ಟಿಗರಿಂದ ವರ್ಮಾಗೆ ಕೌಂಟರ್"
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ನೀಡಿದ ಈ ಪ್ರತಿಕ್ರಿಯೆ ನೀಡುತ್ತಿದ್ದಂತೆ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ಆರ್‌ಜಿವಿಯನ್ನು ಸೋಶಿಯಲ್ ಮೀಡಿಯಾದಲ್ಲಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವರು ಭಗವದ್ಗೀತೆಯನ್ನು ಓದಿಲ್ಲವೆಂದು ಓಪ್ಪಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು ಆರ್‌ಜಿವಿಗೆ ಕೌಂಟರ್ ಕೊಡುತ್ತಿದ್ದಾರೆ. ಒಬ್ಬರು "ನಮ್ಮ ದೇಶದ 150 ಕೋಟಿ ಜನಸಂಖ್ಯೆಯಲ್ಲಿ 0.0000001% ಅಂದರೆ, 1.5 ಮಂದಿ ನಿಖರವಾಗಿ ಓದಿದ್ದಾರೆ" ಎಂದು ಟಾಂಗ್ ಕೊಟ್ಟಿದ್ದಾರೆ. ಮತ್ತೊಬ್ಬರು "ಆರ್ ಜಿವಿಗೆ ಆಧ್ಯಾತ್ಮಿಕ ಜ್ಞಾನವಿಲ್ಲ " ಎಂದಿದ್ದಾರೆ.
ಸೆನ್ಸಾರ್ ಮಂಡಳಿ ವಿರುದ್ಧ ಆಕ್ರೋಶ
'ಓಪನ್‌ಹೈಮರ್' ಸಿನಿಮಾದ ವಿವಾದದ ಬಗ್ಗೆ ಸೆಲೆಬ್ರೆಟಿಗಳು ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಇತ್ತೀಚೆಗೆ 'ಓಪನ್‌ಹೈಮರ್'ನಲ್ಲಿ ಭಗವದ್ಗೀತೆ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದರು. ರೊಮ್ಯಾಂಟಿಕ್ ದೃಶ್ಯದಲ್ಲಿ ಭಗವದ್ಗೀತೆ ಓದುವುದನ್ನು ತೋರಿಸುವುದು ಆಘಾತಕಾರಿ ಎಂದಿದ್ದರು. ಸೆನ್ಸಾರ್ ಮಂಡಳಿ ಇಂತಹ ಆಕ್ಷೇಪಾರ್ಹ ದೃಶ್ಯಗಳನ್ನು ಬಿಟ್ಟಿದ್ದೇಕೆ ಅಂತ ಆಕ್ರೋಶ ಹೊರಹಾಕಿದ್ದರು.


Click it and Unblock the Notifications











