ಆ ಸಿನಿಮಾ ಒಪ್ಪಿಕೊಂಡು ತಪ್ಪು ಮಾಡಿದ್ರಾ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ?
'ಕಿರಿಕ್ ಪಾರ್ಟಿ' ಸಿನಿಮಾದಿಂದ ರಶ್ಮಿಕಾ ಮಂದಣ್ಣ ಮತ್ತೆಂದೂ ಹಿಂತಿರುಗಿ ನೋಡುತ್ತಲೇ ಇಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೆಟ್ಟೇರಿತ್ತಿದ್ದು, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ.
ಆರಂಭದಲ್ಲಿ ತೆಲುಗು ಸಿನಿಮಾಗಳನ್ನೇ ಹೆಚ್ಚಾಗಿ ಒಪ್ಪಿಕೊಳ್ಳುತ್ತಿದ್ದರು. ಈಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಚಲೋ', 'ಭೀಷ್ಮ', 'ಗೀತ ಗೋವಿಂದಂ' , 'ಸರಿಲೇರು ನೀಕೆವ್ವರು' , 'ಪುಷ್ಪ' ದಂತಹ ಸಿನಿಮಾಗಳು ರಶ್ಮಿಕಾ ಮಂದಣ್ಣಗೆ ಹಿಟ್ ಮೇಲೆ ಹಿಟ್ ಕೊಡುತ್ತಿವೆ. ಸೂಪರ್‌ಸ್ಟಾರ್ ಸಿನಿಮಾಗಳೊಂದಿಗೆ ನಟಿಸುವ ಮೂಲಕ ಸ್ಟಾರ್ ವ್ಯಾಲ್ಯೂವನ್ನು ಹೆಚ್ಚಿಸಿಕೊಂಡಿದ್ದಾರೆ.
ಕನ್ನಡ, ತೆಲುಗು, ಹಿಂದಿ ಬಳಿಕ ತಮಿಳು ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ದಳಪತಿ ವಿಜಯ್ ಜೊತೆ ಈಗಾಗಲೇ 'ವಾರಿಸು' ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಈಗ ತಮಿಳು ಚಿತ್ರರಂಗದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಅದೇನಂದರೆ, ಚಿಯಾನ್ ವಿಕ್ರಮ್ ಸಿನಿಮಾಗೂ ರಶ್ಮಿಕಾ ಮಂದಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಈ ಸಿನಿಮಾದಲ್ಲಿ ನಟಿಸಿದರೆ, ಅದು ರಶ್ಮಿಕಾ ಮಾಡುವ ಅತಿ ದೊಡ್ಡ ತಪ್ಪು ಎಂದು ಹೇಳುತ್ತಿದ್ದಾರೆ.

ವಿಕ್ರಮ್ ಜೊತೆ ರಶ್ಮಿಕಾ ನಟನೆ?
ರಶ್ಮಿಕಾ ಮಂದಣ್ಣ ಗ್ಲಾಮರಸ್ ಲುಕ್ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದಕ್ಕೆ ರಶ್ಮಿಕಾರನ್ನು ಪ್ರೀತಿಯಿಂದ ಕ್ರಶ್ಮಿಕಾ ಎಂದು ಕರೆಯುತ್ತಾರೆ. ಕಾರ್ತಿ ಜೊತೆ ನಟಿಸಿದ ಮೊದಲ ತಮಿಳು ಸಿನಿಮಾ 'ಸುಲ್ತಾನ್' ಸೋಲುಂಡಿತ್ತು. ಯಾಕೋ ರಶ್ಮಿಕಾಗೆ ಕಾಲಿವುಡ್ ಆಗಿ ಬರಲ್ಲ ಅಂತನೂ ಅಭಿಮಾನಿಗಳು ಮಾತಾಡಿಕೊಂಡಿದ್ದರು. ಮತ್ತೆ ಕೆಲವರು ಕಾಲಿವುಡ್ ಬಾಗಿಲು ಮುಚ್ಚಿದಂತೆ ಎಂದು ಹೇಳಿದ್ದರು. ಆದರೆ ಅದೆಲ್ಲಾ ಉಲ್ಟಾ ಆಗಿದೆ. ದಳಪತಿ ವಿಜಯ್ ಜೊತೆ 'ವಾರಿಸು' ಸಿನಿಮಾ ಬಳಿಕ ಚಿಯಾನ್ ವಿಕ್ರಮ್‌ಗೆ ನಾಯಕಿಯಾಗುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಇದೇ ರಶ್ಮಿಕಾ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

ರಶ್ಮಿಕಾ ಮಂದಣ್ಣ ದೊಡ್ಡ ತಪ್ಪು ಮಾಡುತ್ತಿದ್ದಾರೆ!
ರಶ್ಮಿಕಾ ಮಂದಣ್ಣ ಹಾಗೂ ಚಿಯಾನ್ ವಿಕ್ರಮ್ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತಿರುವುದಕ್ಕೆ ಫ್ಯಾನ್ಸ್ ನಿದ್ದೆ ಕೆಟ್ಟಿದೆ. ಯಾಕೆಂದರೆ, ಚಿಯಾನ್ ವಿಕ್ರಮ್‌ಗೀಗ 56 ವರ್ಷ. ರಶ್ಮಿಕಾ ಮಂದಣ್ಣಗೆ 26 ವರ್ಷ. ಇಬ್ಬರ ವಯಸ್ಸಿನ ಅಂತರ ಹೆಚ್ಚಿರುವುದರಿಂದ ತೆರೆಮೇಲೆ ಈ ಜೋಡಿ ಸರಿ ಹೊಂದುವುದಿಲ್ಲವೆಂಬುದು ಅಭಿಮಾನಿಗಳ ಆತಂಕ. ತಮಿಳು ಚಿತ್ರರಂಗದಲ್ಲಿ ಗೆಲುವು ಸಾಧಿಸಬೇಕು ಅಂತ ಕೂತಿರುವ ರಶ್ಮಿಕಾಗೆ ಮತ್ತೆ ಸೋಲು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ವಿಕ್ರಮ್ ಯಂಗ್ ನಟಿಯರ ಜೊತೆ ನಟನೆ
ಚಿಯಾನ್ ವಿಕ್ರಮ್ ಇತ್ತೀಚೆಗೆ ಯಂಗ್ ನಟಿಯರೊಂದಿಗೆ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಬಿಡುಗಡೆಗೆ ಸಜ್ಜಾಗಿರುವ 'ಕೋಬ್ರಾ' ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಈಗ ರಶ್ಮಿಕಾ ಮಂದಣ್ಣ ಹೆಸರು ಕೇಳಿ ಬರುತ್ತಿದೆ. ಈ ಕಾರಣಕ್ಕೆ ಈ ಜೋಡಿ ಸೂಟ್ ಆಗುವುದಿಲ್ಲ ಎಂದು ಟಾಲಿವುಡ್ ಕೂಡ ಅಭಿಪ್ರಾಯ ಪಟ್ಟಿದೆ. ಹಾಗೇನಾದರೂ ಒಪ್ಪಿಕೊಂಡರೆ, ರಶ್ಮಿಕಾ ಕರಿಯರ್‌ಗೆ ದೊಡ್ಡ ಪೆಟ್ಟು ಕೊಡುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಶ್ಮಿಕಾ ಕೈಯಲ್ಲಿ ದುಬಾರಿ ಸಿನಿಮಾಗಳು
ರಶ್ಮಿಕಾ ಮಂದಣ್ಣ ಕೈಯಲ್ಲಿ ದುಬಾರಿ ಸಿನಿಮಾಗಳಿವೆ. ಬಾಲಿವುಡ್‌ನಲ್ಲಿ ಕೈ ತುಂಬಾ ಸಿನಿಮಾಗಳಿರೋದು ಗೊತ್ತೇ ಇದೆ. 'ಮಿಷನ್ ಮಜ್ನು', 'ಗುಡ್ ಬೈ', 'ಅನಿಮಲ್', ಟ್ರೈಗರ್ ಶ್ರಾಫ್ ಜೊತೆ ಸಿನಿಮಾ, ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2' ಹಾಗೂ ದಳಪತಿ ವಿಜಯ್ ಸಿನಿಮಾ 'ವಾರಿಸು' ಈಗಾಗಲೇ ರಶ್ಮಿಕಾ ಒಪ್ಪಿಕೊಂಡಿದ್ದಾರೆ. ಹೀಗಾಗಿ ಕರಿಯರ್‌ನ ಉತ್ತುಂಗದಲ್ಲಿರುವ ರಶ್ಮಿಕಾ ಹುಷಾರಾಗಿ ಹೆಜ್ಜೆ ಇಡಬೇಕು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











