ಆಸ್ಕರ್‌ಗಾಗಿ ₹80 ಕೋಟಿ ಖರ್ಚು? "ನಾವಾಗಿದ್ರೆ 8 ಸಿನಿಮಾ ಮಾಡಿ ಮುಖದ್ಮೇಲೆ ಎಸೆಯುತ್ತಿದ್ವಿ" ತಮ್ಮಾರೆಡ್ಡಿ
ಆಸ್ಕರ್ ಪ್ರಶಸ್ತಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬೆನ್ನಲ್ಲೇ 'RRR' ತಂಡ ಅಮೆರಿಕಗೆ ಹಾರಿದೆ. ಕಳೆದ ಕೆಲವು ತಿಂಗಳಿಂದ ರಾಜಮೌಳಿ, ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜಾ ಸೇರಿ ಇಡೀ ತಂಡ ಸಿನಿಮಾ ಬಗ್ಗೆ ಪ್ರಚಾರವನ್ನು ಮಾಡುತ್ತಿದೆ. ಮಾರ್ಚ್ 12ರಂದು ನಡೆಯಲಿರೋ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 'RRR' ಸಿನಿಮಾದ "ನಾಟು.. ನಾಟು.." ಸಾಂಗ್ ಪ್ರಶಸ್ತಿ ಗೆಲ್ಲುತ್ತಾ? ಅನ್ನೋ ಕುತೂಹಲ ಮೂಡಿದೆ.
'RRR' ತಂಡ ಮಾತ್ರ ಆಸ್ಕರ್ ಪ್ರಶಸ್ತಿ ಗೆಲ್ಲಲು ಮಾಡಬೇಕಿರೋ ಎಲ್ಲಾ ಕಸರತ್ತುಗಳನ್ನು ಮಾಡುತ್ತಿದೆ. ಇತ್ತೀಚೆಗೆ 'RRR' ಸಿನಿಮಾವನ್ನು ಅಮೆರಿಕದ ಹಲವು ಭಾಗಗಳಲ್ಲಿ ಮರು ಬಿಡುಗಡೆಯನ್ನು ಮಾಡಲಾಗಿತ್ತು. ಇದೇ ಸಂಬಂಧ, ತೆಲುಗು ಹಿರಿಯ ನಿರ್ದೇಶಕರೊಬ್ಬರು ರಾಜಮೌಳಿ ಹಾಗೂ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಆಸ್ಕರ್ ಪ್ರಚಾರಕ್ಕೆ ಅಂತಲೇ ಮಾಡಿರುವ ಹಣದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

'RRR' ಸಿನಿಮಾ ಬಗ್ಗೆ ಏನಿದು ಆರೋಪ?
ಎಸ್.ಎಸ್. ರಾಜಮೌಳಿ ನಿರ್ದೇಶಿಸಿದ್ದ 'RRR' ವಿಶ್ವದ ಮೂಲೆ ಮೂಲೆಯಲ್ಲಿ ಸದ್ದು ಮಾಡಿತ್ತು. ಈಗ ಓರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಈ ಸಿನಿಮಾದ "ನಾಟು ನಾಟು.." ಸಾಂಗ್ ಪೈಪೋಟಿ ಮಾಡುತ್ತಿದೆ. ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಈ ಹಾಡು ಪ್ರಶಸ್ತಿ ಗೆದ್ದಿದೆಯಾ ಇಲ್ವಾ? ಅನ್ನೋ ರಿವೀಲ್ ಆಗಲಿದೆ. ಈ ಬೆನ್ನಲ್ಲೇ ತೆಲುಗಿನ ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ಭಾರತದ್ವಾಜ್ ಚಿತ್ರತಂಡದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
'RRR' ತಂಡ ಆಸ್ಕರ್ ಪ್ರಶಸ್ತಿ ಗೆಲ್ಲಲು ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಅಮೆರಿಕದಲ್ಲಿ ಸಿಕ್ಕಾ ಹಣವನ್ನು ಸುರಿಯುತ್ತಿದೆ ಎಂದು ವಿವಾದಾತ್ಮಕ ನಿರ್ದೇಶಕ ತಮ್ಮಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ. ಖಾಸಗಿ ಸಮಾರಂಭವೊಂದರಲ್ಲಿ ನೀಡಿದ ತಿಮ್ಮಾರೆಡ್ಡಿ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ತಿಮ್ಮಾರೆಡ್ಡಿ ಭಾರದ್ವಾಜ್ ಮಾಡಿದ ಆರೋಪವೇನು?
ಟಾಲಿವುಡ್‌ನ ಹಿರಿಯ ನಿರ್ದೇಶಕ 'RRR' ಸಿನಿಮಾ ಬಗ್ಗೆ ಆಡಿದ ಮಾತುಗಳು ಯೂಟ್ಯೂಬ್‌ನಲ್ಲಿ ವೈರಲ್ ಆಗುತ್ತಿವೆ. ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಇನ್ನು ಮೂರು ದಿನ ಬಾಕಿ ಇರುವಾಗಲೇ ಪ್ರಚಾರಕ್ಕೆ 80 ಕೋಟಿ ರೂ. ಹಣ ವಿನಿಯೋಗಿಸಿದ್ದಾರೆಂದು ಆರೋಪ ಮಾಡಿದ್ದಾರೆ. ಇದೇ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
"ಆಸ್ಕರ್ ಪ್ರಚಾರಕ್ಕೆ 80 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಷ್ಟು ನಮಗೆ ಕೊಟ್ಟರೆ, 8 ಸಿನಿಮಾ ಮಾಡಿ ಅವರ ಮುಖದ ಮೇಲೆ ಎಸೆಯುತ್ತಿದ್ದೆವು. ಬರೀ ವಿಮಾನದ ಟಿಕೆಟ್‌ಗಳಿಗೆ ಕೋಟಿ ಕೋಟಿ ಖರ್ಚು ಮಾಡುತ್ತಿದ್ದಾರೆ. ಅದೆಲ್ಲ ಈಗ ಚರ್ಚೆ ಮಾಡೋ ಅವಶ್ಯಕತೆ ಇಲ್ಲ." ಎಂದು ತೆಲುಗು ಹಿರಿಯ ನಿರ್ದೇಶಕ ತಮ್ಮಾರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
'ಕೆಜಿಎಫ್ 2' ಬಜೆಟ್‌ಗಿಂತ ₹20 ಕೋಟಿ ಕಮ್ಮಿ
ಮೇಲ್ನೋಟಕ್ಕೆ 'RRR' ತಂಡ ಆಸ್ಕರ್ ಪ್ರಚಾರಕ್ಕೆ ಖರ್ಚು ಮಾಡುತ್ತಿದೆ ಅಂತ ಅನಿಸುತ್ತಿರೋದು ನಿಜ. ಕಳೆದ ಕೆಲವು ತಿಂಗಳುಗಳಿಂದ ರಾಜಮೌಳಿ,ಜೂ.ಎನ್‌ಟಿಆರ್,ರಾಮ್ ಚರಣ್ ಮೂವರೂ ಹೋಗಿ ಬಂದು ಮಾಡುತ್ತಲೇ ಇದ್ದಾರೆ. ಹೀಗಾಗಿಯೇ ತಿಮ್ಮಾರೆಡ್ಡಿ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಆಕ್ಷೇಪ ಹೊರಹಾಕಿದ್ದಾರೆ.
"'RRR' ಸಿನಿಮಾವನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಹಾಗೆ ನೋಡಿದರೆ, ಕೆಜಿಎಫ್ 2 ಸಿನಿಮಾದ ಬಜೆಟ್ 100 ಕೋಟಿ ರೂ. ಈ ಆಸ್ಕರ್ ಪ್ರಚಾರಕ್ಕೆ 'ಕೆಜಿಎಫ್ 2' ಬಜೆಟ್‌ಗಿಂತ ಕೇವಲ 20 ಕೋಟಿ ರೂ. ಕಡಿಮೆಯಷ್ಟೇ ಖರ್ಚು ಮಾಡಿದ್ದಾರೆ" ಎಂದು ತಿಮ್ಮಾರೆಡ್ಡಿ ಆರೋಪಿಸಿದ್ದಾರೆ. ಇದೇ ಮಾತು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.


Click it and Unblock the Notifications











