ಮುಂಬೈನಲ್ಲಿ 'ಸಲಾರ್' ಟಿಕೆಟ್ ಬೆಲೆ ₹2500; ದೆಹಲಿ, ಕೊಲ್ಕತ್ತಾ, ಬೆಂಗಳೂರಿನಲ್ಲಿ ಎಷ್ಟು ಬೆಲೆ?
'ಬಾಹುಬಲಿ' ಹೀರೊ, ಕೆಜಿಎಫ್ ನಿರ್ದೇಶಕ ಇಬ್ಬರೂ ಒಟ್ಟಿಗೆ ಸೇರಿದರೆ ಸಿನಿಮಾ ಹೇಗಿರುತ್ತೆ ಅನ್ನೋದಕ್ಕೆ ಈಗಾಗಲೇ ಚಿಕ್ಕದೊಂದು ಝಲಕ್ ಸಿಕ್ಕಿದೆ. ಪ್ರಶಾಂತ್ ನೀಲ್ ಒಂದಲ್ಲ ಎರಡೆರಡು ಟ್ರೈಲರ್ ಅನ್ನು ರಿಲೀಸ್ ಮಾಡಿದ್ದಾರೆ. ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನ ಇದೇ ಅನ್ನುವಾಗಲೇ ರಿಲೀಸ್ ಟ್ರೈಲರ್ ಬಿಡುಗಡೆ ಮಾಡಲಾಗಿತ್ತು.
ಎರಡು ಟ್ರೈಲರ್ ಹಾಗೂ ಒಂದು ಹಾಡು 'ಸಲಾರ್' ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಈಗಾಗಲೇ ಸಿನಿಮಾದ ಅಡ್ವಾನ್ಸ್ ಬುಕಿಂಗ್‌ಗೆ ಭರ್ಜರಿ ಬೇಡಿಕೆ ಸಿಕ್ಕಿದೆ. ದೇಶ-ವಿದೇಶದಲ್ಲಿ 'ಸಲಾರ್' ಸಿನಿಮಾ ಬಗ್ಗೆ ಕ್ರೇಜ್ ದಿಢೀರನೇ ಹೆಚ್ಚಾಗಿದೆ.

ಬಜೆಟ್ ವಿಚಾರದಲ್ಲಿ 'ಕೆಜಿಎಫ್' ಸಿನಿಮಾಗಿಂತಲೂ ಮುನ್ನ ದುಬಾರಿ ಎನಿಸಿಕೊಂಡಿರುವ 'ಸಲಾರ್' ಬಗ್ಗೆ ಸಹಜವಾಗಿಯೇ ನಿರೀಕ್ಷೆ ಹೆಚ್ಚಾಗಿದೆ. ಈ ಬೆನ್ನಲ್ಲೇ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾದ ಟಿಕೆಟ್ ಬೆಲೆ ಶೇ.10 ಪಟ್ಟು ಹೆಚ್ಚಾಗಿದೆ. ಮುಂಬೈ, ದೆಹಲಿ, ಕೊಲ್ಕತ್ತಾ, ಬೆಂಗಳೂರಿನಲ್ಲಿ ಟಿಕೆಟ್ ಬೆಲೆ ದುಬಾರಿ ಎನಿಸಿಕೊಂಡಿದೆ.
ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಬಿಟ್ಟು ಪ್ರಮುಖ ಮೆಟ್ರೋಪಾಲಿಟಿನ್ ನಗರಗಳಲ್ಲಿ 'ಸಲಾರ್' ಸಿನಿಮಾ ಬಲು ದುಬಾರಿ ಎನಿಸಿಕೊಂಡಿದೆ. ಮೊದಲ ದಿನ ಈ ನಗರಗಳ ಕೆಲವು ಪ್ರಮುಖ ಚಿತ್ರಮಂದಿರದಲ್ಲಿ 'ಸಲಾರ್' ಟಿಕೆಟ್ ಬೆಲೆ ಎರಡು ಸಾವಿರ ದಾಟಿದೆ. ಅದರಲ್ಲೂ ಮಾಯಾನಗರಿ ಮುಂಬೈನಲ್ಲಿ 'ಸಲಾರ್' ಟಿಕೆಟ್ ಬೆಲೆ 2500 ರೂಪಾಯಿವರೆಗೂ ಚಾರ್ಜ್ ಮಾಡಲಾಗುತ್ತಿದೆ.

ಮುಂಬೈನಲ್ಲಿ ಮೈಸನ್ ಪಿವಿಆರ್: ಲಿವಿಂಗ್ ರೂಮ್, ಜಿಯೋ ವರ್ಲ್ಡ್ ಡ್ರೈವ್, ಬಿಕೆಸಿಗಳಲ್ಲಿ ಒಂದು ಟಿಕೆಟ್ ಬೆಲೆ 2500 ರೂಪಾಯಿ ಆಗಿದೆ. ಪಿವಿಆರ್ ಐಕಾನ್, ಅಂದೇರಿ ವೆಸ್ಟ್‌ನಲ್ಲಿರುವ ಚಿತ್ರಮಂದಿರಗಳಲ್ಲಿ 1600 ರಿಂದ 1800ರವರೆಗೂ ಇದೆ. ಹೀಗಾಗಿ ಮುಂಬೈ ಅಂತಹ ನಗರಗಳಲ್ಲಿ 'ಸಲಾರ್' ಸಿನಿಮಾಗೆ ಶಾರುಖ್ ಖಾನ್ 'ಡಂಕಿ' ಎದುರು ಕ್ರೇಜ್ ಜೋರಾಗಿದೆ ಇದೆ.
ಹಾಗಂತ 'ಸಲಾರ್' ಟಿಕೆಟ್ ಬೆಲೆ ಬೆಂಗಳೂರಿನಲ್ಲೇನು ಕಮ್ಮಿಯಿಲ್ಲ. 'ಸಲಾರ್' ತೆಲುಗು ವರ್ಷನ್‌ಗೆ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯಿದೆ. ತೆಲುಗು ವರ್ಷನ್‌ಗೆ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆಯಿದ್ದು, 2200ರವರೆಗೂ ಟಿಕೆಟ್ ಬೆಲೆಯಲ್ಲಿ ಏರಿಕೆ ಕಂಡಿದೆ. ಪಿವಿಆರ್‌ನ ಕೆಲವು ಪ್ರಾಪರ್ಟಿಗಳು, ರೆಕ್ಸ್ ಅಂತಹ ಸ್ಕ್ರೀನ್‌ಗಳಲ್ಲಿ ಬೆಲೆ ಹೆಚ್ಚಿದೆ.
ದೆಹಲಿಯಲ್ಲೂ 'ಸಲಾರ್' ಟಿಕೆಟ್ ಬೆಲೆ ಏನು ಕಮ್ಮಿಯಿಲ್ಲ. ದೆಹಲಿಯ ಪಿವಿಆರ್ ಡೈರೆಕ್ಟರ್ಸ್ ಕಟ್, ಐನಾಕ್ಸ್ ಇನ್‌ಸಿಗ್ನಿಯಾ ಅಂತಹ ಪ್ರಾಪರ್ಟಿಗಳಲ್ಲಿ ಟಿಕೆಟ್ ಬೆಲೆ 2100 ರಿಂದ 1600ರವರೆಗೂ ಇದೆ. ಇಂಟ್ರೆಸ್ಟಿಂಗ್ ವಿಚಾರ ಅಂದರೆ, ಕೊಲ್ಕತ್ತಾದ ಪ್ರಮುಖ ಮಲ್ಟಿಪ್ಲೆಕ್ಸ್‌ನಲ್ಲೂ ಸಿನಿಮಾ ಬೆಲೆ 1100 ದಾಟಿದೆ, ಉತ್ತರ ಪ್ರದೇಶದ ಲಕ್ನೌದಲ್ಲಿ ಬೆಲೆ 1400 ರೂಪಾಯಿ ದಾಟಿದೆ.


Click it and Unblock the Notifications











