ಮತ್ತೆ ಕೆಲಸಕ್ಕೆ ಮರಳಿದ ಸಮಂತಾ; ಕೆಲವೇ ದಿನಗಳಲ್ಲಿ ಆರೋಗ್ಯದ ಬಗ್ಗೆ ಪಾಡ್‌ಕಾಸ್ಟ್
ಸಮಂತಾ ರುಥ್ ಪ್ರಭು ಅನಾರೋಗ್ಯ ಹಿನ್ನೆಲೆಯಲ್ಲಿ ಸಿನಿಮಾದಿಂದ ಬ್ರೇಕ್ ಕೊಟ್ಟಿದ್ದರು. ವಿಜಯ್ ದೇವರಕೊಂಡ ಜೊತೆ ನಟಿಸಿದ 'ಖುಷಿ' ಸಿನಿಮಾ ಬಳಿಕ ನಟನೆಗೆ ಬ್ರೇಕ್ ಕೊಟ್ಟಿದ್ದರು. ಈಗ ಮತ್ತೆ ಸಮಂತಾ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬ್ರೇಕ್ ಬಳಿಕ ಮತ್ತೆ ಕೆಲಸಕ್ಕೆ ಮರಳುವುದಾಗಿ ನಟಿ ಸಮಂತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಸಮಂತಾ ಮಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾಗೆ ಬ್ರೇಕ್ ಕೊಟ್ಟಿದ್ದರು. ತಮಗೆ ಅವಕಾಶ ಸಿಕ್ಕಾಗಲೆಲ್ಲಾ ತನ್ನ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುತ್ತಿದ್ದರು. 'ಖುಷಿ' ಆರೋಗ್ಯದ ಕಡೆಗೆ ಗಮನ ನೀಡುವ ಸಲುವಾಗಿ ಹೆಚ್ಚು ಕಡಿಮೆ ಒಂದು ವರ್ಷ ಸಿನಿಮಾದಿಂದ ದೂರ ಉಳಿಯುವ ನಿರ್ಧಾರ ಮಾಡಿದ್ದರು.

ಆದರೆ, ಇತ್ತೀಚೆಗೆ ಸಮಂತಾ ತಮ್ಮ ಆರೋಗ್ಯ ವಿಚಾರದಲ್ಲಿ ಒಂದು ಉತ್ತಮ ನಿರ್ಧಾರ ತೆಗೆದುಕೊಂಡಿದ್ದಾರೆ. ತಾನು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳ ಕುರಿತು ಪಾಡ್‌ಕ್ಯಾಸ್ಟ್ ಆರಂಭಿಸಲು ನಿರ್ಧರಿಸಿದ್ದಾರೆ. ಇದರಲ್ಲಿ ಪ್ರತಿವಾರ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳ ಅಪ್‌ಡೇಟ್ ನೀಡುತ್ತಾರೆ. ಈ ಬಗ್ಗೆ ಇನ್‌ಸ್ಟಾಗ್ರಾಂ ರೀಲ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಸಮಂತಾ ವಿಚ್ಛೇದನದ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಆ ನೋವಿನಿಂದ ಹೊರಬರುತ್ತಿದ್ದಂತೆ ಅವರಿಗಿರುವ ಆರೋಗ್ಯ ಸಮಸ್ಯೆ ದೈಹಿಕವಾಗಿ ನೋವು ನೀಡಿತ್ತು. ಅಪರೂಪದ ಮಯೋಸೈಟಿಸ್ ಖಾಯಿಲೆಯಿಂದ ಹೊರಬರುವುದಕ್ಕೆ ಸಮಂತಾ ಇನ್ನಿಲ್ಲದ ಪ್ರಯತ್ನ ಮಾಡುತ್ತಲೇ ಇದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯುವುದಕ್ಕೆ ಕೆಲವು ತಿಂಗಳುಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು.
ಕೆಲವು ದಿನಗಳ ಕಾಲ ವಿದೇಶಕ್ಕೂ ಹೋಗಿ ಚಿಕಿತ್ಸೆ ಪಡೆದು ಬಂದಿದ್ದರು. ಸದ್ಯಕ್ಕೀಗ ಸಮಂತಾ ಹೊಸ ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಆದರೆ, ಇನ್‌ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳಿಗೆ ಮುಂದಿನ ಯೋಜನೆಗಳ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಅದುವೇ ಹೆಲ್ತ್ ಪಾಡ್‌ಕಾಸ್ಟ್. ತನ್ನ ಆತ್ಮೀಯ ಸ್ನೇಹಿತರೊಂದಿಗೆ ಸೇರಿ ಹೆಲ್ತ್ ಪಾಡ್‌ಕಾಸ್ಟ್ ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ.
"ಹೌದು, ನಾನು ಮತ್ತೆ ಕೆಲಸಕ್ಕೆ ಮರಳಿದ್ದೇನೆ. ಆದರೆ, ಕೆಲವು ದಿನಗಳು ನಾನು ಸಂಪೂರ್ಣ ಕೆಲಸ ಇಲ್ಲದವಳಾಗಿದ್ದೆ. ಬಟ್, ನಾನು ಸ್ನೇಹಿತರೊಂದಿಗೆ ಸೇರಿಕೊಂಡು ಮಜವಾದದ್ದು ಏನನ್ನೋ ಮಾಡುತ್ತಿದ್ದೇನೆ. ಅದು ಹೆಲ್ತ್ ಪಾಡ್‌ಕಾಸ್ಟ್. ಇದು ನಿಜವಾಗಲೂ ಅನಿರೀಕ್ಷಿತ. ಆದರೆ ಇದನ್ನು ನಾನು ನಿಜವಾಗಲೂ ಉತ್ಸಾಹದಿಂದ ಮಾಡುತ್ತಿದ್ದೇನೆ. ನಾನು ಪ್ಯಾಷನ್ ಇಟ್ಟುಕೊಂಡು ಶುರು ಮಾಡುತ್ತಿರುವ ಈ ಪಾಡ್‌ಕಾಸ್ಟ್ ಮುಂದಿನವಾರ ರಿಲೀಸ್ ಆಗುತ್ತಿದೆ. ಇದು ನಿಮ್ಮಲ್ಲಿ ಕೆಲವರಿಗೆ ಖಂಡಿತಾ ಉಪಯೋಗಕ್ಕೆ ಬರುತ್ತೆ. ನಾನು ನಿಜವಾಗಿಯೂ ಈ ಹಂತವನ್ನು ಆನಂದಿಸಿದ್ದೇನೆ.' ಎಂದು ಸಮಂತಾ ತಮ್ಮ ಹೊಸ ಆರೋಗ್ಯದ ಪಾಡ್‌ಕ್ಯಾಸ್ಟ್ ಬಗ್ಗೆ ಹೇಳಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಸಮಂತಾ ಹೊಸ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ತಮ್ಮ ಆರೋಗ್ಯದ ಬಗ್ಗೆನೇ ಸಂಪೂರ್ಣ ಗಮನ ಹಂಚಿಕೊಂಡಿದ್ದರು. ಈ ವೇಳೆ ಆತ್ಮೀಯರೊಂದಿಗೆ ಚರ್ಚೆಸಿ ಹುಟ್ಟಿಕೊಂಡ ಹೊಸ ಪ್ರಾಜೆಕ್ಟ್ ಈ ಹೆಲ್ತ್ ಪಾಡ್‌ಕಾಸ್ಟ್. ಜೊತೆಗೆ ಕೆಲಸಕ್ಕೆ ಮರಳಿದ್ದೇನೆ ಎಂದು ಹೇಳಿದ್ದರಿಂದ ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ನಟಿಸುವುದಕ್ಕೂ ಗ್ರೀನ್ ಸಿಗ್ನಲ್ ಕೊಡಬಹುದು ಎಂದು ನಿರೀಕ್ಷೆಯಲ್ಲಿ ಅಭಿಮಾನಿಗಳು ಇದ್ದಾರೆ.
ಸದ್ಯಕ್ಕೆ ಸಮಂತಾ ಹಾಗೂ ವರುಣ್ ಧವನ್ ನಟಿಸಿರುವ 'ಸಿಟಾಡೆಲ್' ಇಂಡಿಯನ್ ವರ್ಷನ್ ಬಿಡುಗಡೆಯಾಗಬೇಕಿದೆ. ಇತ್ತೀಚೆಗಷ್ಟೇ ಸಮಂತಾ ಈ ವೆಬ್ ಸೀರಿಸ್‌ಗೆ ಡಬ್ಬಿಂಗ್ ಮಾಡುತ್ತಿದ್ದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡಿದ್ದವು.


Click it and Unblock the Notifications











