"ವಿಜಯ್.. ಪವನ್ ಕಲ್ಯಾಣ್ ಇಬ್ಬರಲ್ಲೂ ಏನೋ ಮ್ಯಾಜಿಕ್ ಇದೆ"- ನಟಿ ಸಮಂತಾ
ನಟಿ ಸಮಂತಾ ತಮ್ಮ ಹೊಸ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಮಾ ಇಂಟಿ ಬಂಗಾರಂ' ಸಿನಿಮಾ ಬಿಡುಗಡೆಗೂ ಮುನ್ನ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಸಮಂತಾ ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಇಬ್ಬರು ದಿಗ್ಗಜರೊಂದಿಗೆ ನಟಿಸಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರೇ ದಳಪತಿ ವಿಜಯ್ ಹಾಗೂ ಪವರ್‌ಸ್ಟಾರ್ ಪವನ್ ಕಲ್ಯಾಣ್.
ಸಮಂತಾ ರುಥ್ ಪ್ರಭು ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿ ಇದ್ದಾಗ ಈ ಇಬ್ಬರು ನಟರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ದಳಪತಿ ವಿಜಯ್ ಹಾಗೂ ಪವನ್ ಕಲ್ಯಾಣ್ ಇಬ್ಬರೂ ಸಿನಿಮಾದಲ್ಲಷ್ಟೇ ಅಲ್ಲ, ರಾಜಕೀಯದಲ್ಲೂ ಯಶಸ್ಸು ಕಂಡಿದ್ದಾರೆ. ಇಬ್ಬರೂ ರಾಜಕೀಯದಲ್ಲಿ ಉತ್ತುಂಗದಲ್ಲಿ ಇದ್ದಾರೆ. ಹೀಗಾಗಿ ಸಿನಿಮಾದ ಪ್ರಚಾರದ ವೇಳೆ ಈ ಇಬ್ಬರು ದಿಗ್ಗಜರ ಬಗ್ಗೆ ಮನಸಾರೆ ಮಾತಾಡಿದ್ದಾರೆ.

ಫಿಲ್ಮಿಬೀಟ್ ತೆಲುಗುಗೆ ನೀಡಿದ ಸಂದರ್ಶನದಲ್ಲಿ ಸಮಂತಾ ತನ್ನಿಬ್ಬರು ಕೋ-ಸ್ಟಾರ್‌ಗಳ ಯಶಸ್ಸಿನ ಬಗ್ಗೆ ಮಾತಾಡಿದ್ದಾರೆ. ಮುಖ್ಯಮಂತ್ರಿ ವಿಜಯ್ ಹಾಗೂ ಆಂಧ್ರದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಜೊತೆ ಸಿನಿಮಾ ಸೆಟ್‌ಗಳಲ್ಲಿ ಕಳೆದ ಅದ್ಭುತ ಕ್ಷಣಗಳು ಹಾಗೂ ಅವರ ವಿಶಿಷ್ಟ ನಟನಾ ಶೈಲಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
"ಇಬ್ಬರಲ್ಲೂ ಏನೋ ಮ್ಯಾಜಿಕ್ ಇದೆ"
ವಿಜಯ್ ಹಾಗೂ ಪವನ್ ಕಲ್ಯಾಣ್ ಅವರೊಂದಿಗೆ ನಟಿಸುವಾಗ ತಮಗೆ ಆದ ಅನುಭವವನ್ನು ಶೇರ್ ಮಾಡಿದ್ದಾರೆ. ಶೂಟಿಂಗ್ ಮಾಡುವ ಸಮಯದಲ್ಲಿಯೇ ಅವರಲ್ಲಿ ಏನೋ ಮ್ಯಾಜಿಕ್ ಇದೆ ಅಂತ ಅನಿಸುತ್ತೆ ಎಂದಿದ್ದರು. "ಅವರೊಂದಿಗೆ ಕೆಲಸ ಮಾಡುವಾಗಲೇ ನನಗೆ ಅನಿಸಿತ್ತು. ಇಬ್ಬರಲ್ಲೂ ಏನೋ ಮ್ಯಾಜಿಕ್ ಇದೆ. ಅವರು ವಿಭಿನ್ನವಾಗಿದ್ದಾರೆ. ಅವರು ಅದ್ಭುತವಾದುದ್ದನ್ನೇನೋ ಮಾಡುವುದಕ್ಕೆ ಇದ್ದಾರೆ ಅಂತ ನನಗೆ ಅಂದೇ ಗೊತ್ತಾಗಿತ್ತು. ನನಗೆ ಅವರಿಬ್ಬರೂ ವೈಯಕ್ತಿಕವಾಗಿ ಗೊತ್ತು. ಅವರಿಬ್ಬರೂ ತುಂಬಾನೇ ಒಳ್ಳೆಯ ವ್ಯಕ್ತಿಗಳು. ನಿಜಕ್ಕೂ ಅವರ ಬಗ್ಗೆ ತುಂಬಾನೇ ಹೆಮ್ಮೆ ಎನಿಸುತ್ತಿದೆ" ಎಂದು ಹೇಳಿದ್ದಾರೆ.
ವಿಜಯ್‌ಗೆ ಶುಭ ಕೋರಿದ್ದೇನೆ
ದಳಪತಿ ವಿಜಯ್ ತಮಿಳುನಾಡಿನ ಸಿಎಂ ಆದ ಮೇಲೆ ಸಮಂತಾ ಅವರಿಗೆ ವಿಶ್ ಮಾಡಿದ್ದಾಗಿ ಹೇಳಿದ್ದಾರೆ. "ವಿಜಯ್ ಅವರು ಸಿಎಂ ಆದ್ಮೇಲೆ ಅವರೊಂದಿಗೆ ಮಾತಾಡಿಲ್ಲ. ಆದರೆ, ಶುಭ ಕೋರಿದ್ದೇನೆ" ಎಂದೂ ಸಮಂತಾ ಸಂದರ್ಶನದಲ್ಲಿ ಹೇಳಿದ್ದಾರೆ. ಹಾಗೇ ಬೇರೆ ಮಾಧ್ಯಮಗಳಿಗೆ ಸಂದರ್ಶನ ನೀಡುವಾಗಲೂ ವಿಜಯ್ ಅವರ ಕಾರ್ಯ ವೈಖರಿಯನ್ನು ಹಾಡಿ ಹೊಗಳಿಸಿದ್ದಾರೆ.

ಹ್ಯಾಟ್ರಿಕ್ ಹಿಟ್ ಜೋಡಿಯ ಸೀಕ್ರೆಟ್
ಸಮಂತಾ ಹಾಗೂ ವಿಜಯ್ ಇಬ್ಬರೂ ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. 'ಕತ್ತಿ', 'ತೆರಿ', ಮತ್ತು 'ಮೆರ್ಸಲ್' ಅಂತಹ ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಇಬ್ಬರ ನಡುವಿನ ಆನ್‌ಸ್ಕ್ರೀನ್ ಕೆಮಿಸ್ಟ್ರಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಹಾಗಾಗಿಯೇ ವಿಜಯ್ ಜೊತೆ ಕೆಲಸ ಮಾಡಿದ ಅನುಭವದ ಬಗ್ಗೆ ಕೇಳಿದಾಗ ಸಮಂತಾ ಖುಷಿಯಿಂದಲೇ ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ಸಿಎಂ ವಿಜಯ್ ಸರಳತೆ ಬಗ್ಗೆ ಮೆಚ್ಚುಗೆ
ಸಿನಿಮಾದಿಂದ ರಾಜಕೀಯದ ಕಡೆಗೆ ಮುಖ ಮಾಡಿರುವ ವಿಜಯ್ ಅಲ್ಲೂ ಯಶಸ್ಸು ಕಂಡಿದ್ದಾರೆ. ಆದರೂ ಅವರ ಸರಳತೆ ಬಗ್ಗೆ ಸಮಂತಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಅವರ ಶಿಸ್ತು, ಸಮಯ ಪ್ರಜ್ಞೆ ಮತ್ತು ಡೌನ್ ಟು ಅರ್ಥ್ ಸ್ವಭಾವ ನನ್ನ ಮೇಲೆ ಆಳವಾದ ಪ್ರಭಾವ ಬೀರಿವೆ. ಅಂದೇ ಸಿನಿಮಾದಲ್ಲಿ ಇರುವಾಗಲೇ ನಾಯಕತ್ವದ ಗುಣಗಳು ಮತ್ತು ಜನರನ್ನು ಸೆಳೆಯುವ ಶಕ್ತಿ ಇತ್ತು. ಇಂದು ಅವರು ಈ ಸ್ಥಾನಕ್ಕೆ ತಲುಪಲು ಅವುಗಳೇ ಕಾರಣ" ಎಂದು ಸಮಂತಾ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.


Click it and Unblock the Notifications