ಯುವ ನಟನ ಸಿನಿಮಾದ ಬೆತ್ತಲೆ ಪೋಸ್ಟರ್ ರಿಲೀಸ್ ಮಾಡಿದ ಸಂದೀಪ್ ರೆಡ್ಡಿ ವಂಗಾ: ಏನಂತಾರೆ ನೆಟ್ಟಿಗರು?
ಇದೂವರೆಗೂ ಬಂದಿರೋ ಸಾಕಷ್ಟು ಸಿನಿಮಾಗಳಲ್ಲಿ ನಟ-ನಟಿಯರು ಅರೆಬೆತ್ತಲಾಗಿ ನಟಿಸಿದ್ದನ್ನು ನೋಡಿದ್ದೇವೆ. ಅವರಲ್ಲಿ ಆಮಿರ್ ಖಾನ್ ಅಂತಹ ಸೂಪರ್‌ಸ್ಟಾರ್‌ಗಳು ಕೂಡ ಹೊರತಾಗಿಲ್ಲ. ಆದರೆ, ಹೀಗೆ ಬೆತ್ತಲಾಗಿ ನಟಿಸುವುದು ಸಿನಿಮಾ ಕಥೆಗೆ ಪೂರಕವಾಗಿದ್ದರೆ ಬೇರೆ ಮಾತು. ಇಲ್ಲದೇ ಹೋದಲ್ಲಿ ಸುಖಾ ಸುಮ್ಮನೆ ವಿವಾದಕ್ಕೆ ಸಿಕ್ಕಿಕೊಳ್ಳಬೇಕಾಗುತ್ತೆ. ಈ ಹಿಂದೆ ವಿವಾದಕ್ಕೆ ಸಿಕ್ಕಿಕೊಂಡಿರುವ ಸ್ಟಾರ್‌ಗಳ ಬಗ್ಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ಈಗ್ಯಾಕೆ ಈ ವಿಷಯ ಅಂತ ನೋಡುವುದಾರೇ, ಅದಕ್ಕೊಂದು ಕಾರಣವಿದೆ. ಮತ್ತೊಬ್ಬ ನಟ ಬೆತ್ತಲಾಗಿರುವ ಪೋಸ್ಟರ್ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯನ್ನು ಹುಟ್ಟಾಗಿದೆ. ಇಷ್ಟೇ ಅಲ್ಲದೆ, ಆ ಪೋಸ್ಟರ್ ಅನ್ನು ಅನಾವರಣ ಮಾಡಿದ್ದು, 'ಅರ್ಜುನ್ ರೆಡ್ಡಿ', 'ಅನಿಮಲ್' ಅಂತಹ ವಿವಾದಾತ್ಮಕ ಸಿನಿಮಾವನ್ನು ನಿರ್ದೇಶಿಸಿರುವ ಸಂದೀಪ್ ರೆಡ್ಡಿ ವಂಗಾ.

ಇನ್ನು ಸಿನಿಮಾಗಾಗಿ ಬೆತ್ತಲಾಗಿರುವ ಆ ಹೀರೋ ಯಾರು? ಹಿನ್ನೆಲೆ ಏನು? ಸಿನಿಮಾ ಯಾವುದು? ನಿರ್ದೇಶಕ ಯಾರು? ಇಂತಹ ಒಂದಿಷ್ಟು ಇಂಟ್ರೆಸ್ಟಿಂಗ್ ವಿಷಯಗಳು ಇಲ್ಲಿವೆ.
ತೆಲುಗು ಚಿತ್ರರಂಗದಲ್ಲಿ ಸದಾ ವಿಭಿನ್ನ ಪಾತ್ರಗಳಿಂದ ಗಮನ ಸೆಳೆದಿರುವ ನಟ ಚೈತನ್ಯ ರಾವ್ ಮಾದಡಿ. ಈಗ 'ದಿಲ್ ದಿಯಾ' ಎನ್ನುವ ಸಿನಿಮಾದ ಮೂಲಕ ಮತ್ತೆ ಸದ್ದು ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಸಿನಿಮಾಗೆ 'ಎ ನೇಕೆಡ್ ಟ್ರುತ್' ಎಂಬ ಅಡಿಬರಹ ಕೂಡ ಇದೆ. ಈ ಸಿನಿಮಾವನ್ನು ತೆಲುಗಿನ ಸೆನ್ಸಿಬಲ್ ನಿರ್ದೇಶಕ ಕೆ. ಕ್ರಾಂತಿ ಮಾಧವ್ ನಿರ್ದೇಶಿಸುತ್ತಿದ್ದಾರೆ.
ಇದೇ 'ದಿಲ್ ದಿಯಾ' ಸಿನಿಮಾದ ಪೋಸ್ಟರ್ ಈಗ ಎಲ್ಲರ ಹುಬ್ಬೇರಿಸಿದೆ. ಚೈತನ್ಯ ರಾವ್ ಮಾದಡಿ ಅವರ ಬೆತ್ತಲಾಗಿರುವ ಫಸ್ಟ್‌ಲುಕ್ ಅನ್ನು ಮತ್ತೊಬ್ಬ ವಿವಾದಾತ್ಮಕ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅನಾವರಣಗೊಳಿಸಿದ್ದಾರೆ. ಈ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.
'ದಿಲ್ ದಿಯಾ' ಪೋಸ್ಟರ್‌ನಲ್ಲಿ ಚೈತನ್ಯ ರಾವ್ ಸಂಪೂರ್ಣ ನಗ್ನವಾಗಿ ಸೋಫಾದ ಮೇಲೆ ಕೂತಿದ್ದಾರೆ. ಈ ಪೋಸ್ಟರ್ ನೋಡಿ ಪ್ರೇಕ್ಷಕರು ಹಾಗೂ ನೆಟ್ಟಿಗರು ಶಾಕ್ ಆಗಿದ್ದಾರೆ. ಹೀಗೆ ದಿಢೀರನೇ ಸಿನಿಮಾದ ನಾಯಕ ಬೆತ್ತಲಾಗಿರುವ ಪೋಸ್ಟರ್ ಅನ್ನು ರಿಲೀಸ್ ಮಾಡಿದ ಚಿತ್ರತಂಡ ನಡೆಯನ್ನು ನೆಟ್ಟಿಗರು ಅಚ್ಚರಿಯಿಂದ ನೋಡುತ್ತಿದ್ದಾರೆ. ಈ ಸಿನಿಮಾ ಕೇವಲ ಭಾವನಾತ್ಮಕ ಜರ್ನಿಯಷ್ಟೇ ಅಲ್ಲ. ಇಲ್ಲೊಂದು ಸಮಕಾಲೀನ ನಾಟಕೀಯ ಹಾಗೂ ಸೆಂಟಿಮೆಂಟ್ ಎಳೆಯನ್ನು ಹೊಂದಿದೆ. ಇದರೊಂದಿಗೆ ಸಿನಿಮಾದಲ್ಲಿ ಆಂತರಿಕ ಸಂಘರ್ಷಗಳು, ಮಾನವ ಸಂಬಂಧಗಳು ಹಾಗೂ ಮಾನಸಿಕ ಸಂಘರ್ಷಗಳಂತಹ ಆಳವಾದ ವಿಷಯಗಳನ್ನು ಹೇಳಲಾಗಿದೆ.
'ಓನಮಾಲು', 'ಮಲ್ಲೀ ಮಲ್ಲೀ ಇದಿ ರಾಣಿ ರೋಜು' ಹಾಗೂ 'ವರ್ಲ್ಡ್ ಫೇಮಸ್ ಲವರ್'ನಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ಕ್ರಾಂತಿ ಮಾಧವ್ ಈ ಸಿನಿಮಾಗೂ ಆಕ್ಷನ್ ಕಟ್ ಹೇಳಿದ್ದಾರೆ. ಯುವ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಭಾವನಾತ್ಮಕ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಆಧುನಿಕ ಸಂಬಂಧಗಳಲ್ಲಿ ಶುದ್ಧತೆ, ಪ್ರೀತಿ ಮತ್ತು ಭಾವನೆಗಳನ್ನು ಯುವಕರಿಗೆ ತಲುಪಿಸುವುದಕ್ಕೆ ನಿರ್ದೇಶಕರು ಹೊರಟಿದ್ದಾರೆ.
ಎ ಪೂರ್ಣ ನಾಯುಡು ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಪೂರ್ಣ ನಾಯುಡು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚೈತನ್ಯ ರಾವ್ ಮಾದಡಿ ಜೊತೆಗೆ ಇರಾ, ಸಖಿ, ಜೆಸ್ಸಿ, ಮಣಿ ಚಂದನ, ಪ್ರಮೋದಿನಿ, ವೀರ ಶಂಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಪೋಸ್ಟರ್ ಈಗ ಎಲ್ಲೆಡೆ ಚರ್ಚೆಗೆ ಒಳಗಾಗುತ್ತಿದೆ. ಸೋಶಿಯಲ್ ಮೀಡಿಯಾಗಳಲ್ಲಿ 'ದಿಲ್ ದಿಯಾ' ಸಿನಿಮಾ ಫಸ್ಟ್ ಲುಕ್‌ಗೆ ಪರ ಹಾಗೂ ವಿರೋಧದ ಚರ್ಚೆಗಳು ಶುರುವಾಗಿವೆ.
"ಪೋಸ್ಟರ್ ಅತ್ಯಂತ ಆಕರ್ಷಕವಾಗಿದೆ. ಈ ಸಿನಿಮಾ ದೊಡ್ಡ ಯಶಸ್ಸು ಗಳಿಸಿ, ಎಲ್ಲರಿಗೂ ಉತ್ತಮ ಹೆಸರು ಹಾಗೂ ಲಾಭ ತರಲಿ" ಎಂದು "ದಿಲ್ ದಿಯಾ" ತಂಡವನ್ನು ಸಂದೀಪ್ ರೆಡ್ಡಿ ವಂಗಾ ಅಭಿನಂದಿಸಿದ್ದಾರೆ. ಬೆತ್ತಲೆ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದಕ್ಕೆ 'ಸ್ಪಿರೀಟ್' ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿರುದ್ಧವೂ ಕೆಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಸಿನಿಮಾ 2026ರ ಮಾರ್ಚ್ ಏಪ್ರಿಲ್ ಹೊತ್ತಿಗೆ ಥಿಯೇಟರ್‌ಗಳಿಗೆ ಲಗ್ಗೆ ಇಡುವ ಸಾಧ್ಯತೆಯಿದೆ.


Click it and Unblock the Notifications











