ಸಂಕ್ರಾಂತಿಗೆ ಬಾಲಯ್ಯ, ರಾಮ್ ಚರಣ್, ವೆಂಕಟೇಶ್ ಬಾಕ್ಸಾಫೀಸ್ ಕದನ; ಯಾರ ಸಿನಿಮಾಗಿದೆ ಕ್ರೇಜ್?
ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ವಿಶೇಷ ಮಾನ್ಯತೆಯಿದೆ. ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇನ್ನು ಹಬ್ಬದ ಜೊತೆಗೆ ಥಿಯೇಟರ್‌ನಲ್ಲಿ ಸಿನಿಮಾ ಕ್ರಾಂತಿನೂ ಆಗುತ್ತೆ. ಸೂಪರ್‌ಸ್ಟಾರ್‌ಗಳು ತಮ್ಮ ಸಿನಿಮಾಗಳನ್ನು ರಿಲೀಸ್ ಮಾಡುವುದಕ್ಕೆ ಥಿಯೇಟರ್‌ಗಳನ್ನು ಹಿಡಿದುಕೊಂಡು ಕ್ಯೂನಲ್ಲಿ ನಿಂತಿರುತ್ತಾರೆ. ಈ ಬಾರಿಗೂ ಟಾಲಿವುಡ್‌ನಲ್ಲಿ ಅದೇ ವಾತಾವರಣವಿದೆ.
ಟಾಲಿವುಡ್‌ನಲ್ಲಿ ಮೂವರು ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಗ್ಲೋಬಲ್ ಸ್ಟಾರ್ ರಾಮ್ ಚರಣ್, ಟಾಲಿವುಡ್ ಲೆಜೆಂಡ್ ಬಾಲಕೃಷ್ಣ ಹಾಗೂ ವಿಕ್ಟರಿ ವೆಂಕಟೇಶ್ ಸಿನಿಮಾ ಈ ಬಾರಿ ಪ್ರಮುಖವಾಗಿ ಬಾಕ್ಸಾಫೀಸ್‌ನಲ್ಲಿ ಫೈಟ್ ಮಾಡಲಿವೆ. ಈಗಾಗಲೇ ರಿಲೀಸ್‌ಗೆ ವೇದಿಕೆನೂ ಸಿದ್ಧವಾಗಿದೆ. ಈ ಮೂರು ಸಿನಿಮಾಗಳು ಒಂದೇ ದಿನ ಅಲ್ಲದೇ ಹೋದರೂ, ಹಬ್ಬಕ್ಕೆ ರಿಲೀಸ್ ಆಗುತ್ತಿದೆ.

ರಾಮ್ ಚರಣ್ ಸಿನಿಮಾ 'ಗೇಮ್ ಚೇಂಜರ್', ಬಾಲಕೃಷ್ಣ ಸಿನಿಮಾ 'ಡಾಕು ಮಹಾರಾಜ್' ಹಾಗೂ ವೆಂಕಟೇಶ್ ಸಿನಿಮಾ 'ಸಂಕ್ರಾಂತಿಕಿ ವಸ್ತುನಾಂ' ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಈ ಮೂರು ಸಿನಿಮಾಗಳಲ್ಲಿ ಬಾಕ್ಸಾಫೀಸ್‌ನಲ್ಲಿ ಗೆಲ್ಲೋರು ಯಾರು ಅನ್ನೋದು ಲೆಕ್ಕಾಚಾರ ಈಗಾಗಲೇ ಶುರುವಾಗಿದೆ. ಹಾಗಂತ ಈ ಮೂವರು ಸೂಪರ್‌ಸ್ಟಾರ್‌ಗಳು ಈ ಹಿಂದೆನೂ ಇದೇ ಸಂಕ್ರಾಂತಿ ಹಬ್ಬದಂದೇ ಬಾಕ್ಸಾಫೀಸ್‌ನಲ್ಲಿ ಕಾದಾಡಿದ್ದರು. ಆಗ ಗೆದ್ದವರು ಯಾರು?ಈ ಬಾರಿ ಯಾವ ಸಿನಿಮಾ ಕಡೆಗೆ ಕ್ರೇಜ್ ಇದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ರಾಮ್ ಚರಣ್- 'ಗೇಮ್ ಚೇಂಜರ್'
ರಾಜಮೌಳಿಯ RRR ಸಿನಿಮಾ ಬಳಿಕ ರಾಮ್ ಚರಣ್ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡುವುದಕ್ಕೆ ಸಿದ್ಧರಾಗಿದ್ದಾರೆ. ಅದರಲ್ಲೂ ಪ್ಯಾನ್ ಇಂಡಿಯಾ ಡೈರೆಕ್ಟರ್ ಶಂಕರ್ ನಿರ್ದೇಶನದ ಸಿನಿಮಾ ಆಗಿದ್ದರಿಂದ ಕ್ರೇಜ್ ಇದೆ. ಇತ್ತೀಚೆಗೆ ರಿಲೀಸ್ ಆಗಿದ್ದ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರಾಮ್ ಚರಣ್ ಡಬಲ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದು, ಮೆಗಾ ಅಭಿಮಾನಿಗಳಿಗಂತೂ ಕಿಕ್ ಕೊಟ್ಟಿದೆ. ಈ ಬಾರಿ ಶಂಕರ್ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಾರೆ ಅಂತ ಲೆಕ್ಕ ಹಾಕಲಾಗಿದೆ.
ಬಾಲಯ್ಯ-'ಡಾಕು ಮಹಾರಾಜ್'
ಟಾಲಿವುಡ್ ಲೆಜೆಂಡ್ ಬಾಲಯ್ಯ ಸಿನಿಮಾ 'ಡಾಕು ಮಹಾರಾಜ್' ಕೂಡ ಸಂಕ್ರಾಂತಿಗೆ ರಿಲೀಸ್ ಆಗುತ್ತಿದೆ. ಡಕಾಯಿತನ ಪಾತ್ರದಲ್ಲಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ನಿಧಾನವಾಗಿ ಬಾಲಯ್ಯನ ಲುಕ್ ಹಾಗೂ ಖದರ್ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಅಷ್ಟೇ ಅಲ್ಲದೆ ಇತ್ತೀಚೆಗೆ ರಿಲೀಸ್ ಆಗಿರುವ ಹಾಡು ಟ್ರೆಂಡಿಂಗ್‌ನಲ್ಲಿದೆ. ಈ ಹಾಡಿನಲ್ಲಿ ಬಾಲಿವುಡ್ ನಟಿ ಊರ್ವಶಿ ರೌತೇಲಾ ಜೊತೆ ಬಾಲಯ್ಯ ಹೆಜ್ಜೆ ಹಾಕಿದ್ದಾರೆ.

ವೆಂಕಟೇಶ್-'ಸಂಕ್ರಾಂತಿಕಿ ವಸ್ತುನಾಂ'
ಇನ್ನು ವಿಕ್ಟರಿ ವೆಂಕಟೇಶ್ ಸಿನಿಮಾ 'ಸಂಕ್ರಾಂತಿಕಿ ವಸ್ತುನಾಂ' ಕೂಡ ಹಬ್ಬಕ್ಕೆ ರಿಲೀಸ್. ಇವರ ಸಿನಿಮಾದಲ್ಲಿ ಡ್ರಾಮಾ, ಕಾಮಿಡಿ, ಸೆಂಟಿಮೆಂಟ್ ಹಾಗೂ ಆಕ್ಷನ್‌ಗೇನು ಕಮ್ಮಿಯಿರೋದಿಲ್ಲ. ಹೀಗಾಗಿ 'ಸಂಕ್ರಾಂತಿಕಿ ವಸ್ತುನಾಂ' ಕೂಡ ಪ್ರೇಕ್ಷಕರ ಲಿಸ್ಟ್‌ನಲ್ಲಿದೆ.
2019ರಲ್ಲೂ ಇವರದ್ದೇ ಕದನ
ಇನ್ನು 2019ರಲ್ಲೂ ರಾಮ್ ಚರಣ್, ಬಾಲಕೃಷ್ಣ ಹಾಗೂ ವೆಂಕಟೇಶ್ ಬಾಕ್ಸಾಫೀಸ್‌ನಲ್ಲಿ ಮುಖಾಮುಖಿಯಾಗಿದ್ದರು. ರಾಮ್ ಚರಣ್ ನಟಿಸಿದ 'ವಿನಯ ವಿಧೇಯ ರಾಮ', ಬಾಲಕೃಷ್ಣ ನಟಿಸಿದ "ಎನ್‌ಟಿಆರ್: ಕಥಾನಾಯಕಡು' ಹಾಗೂ ವೆಂಕಟೇಶ್ ನಟಿಸಿದ 'ಎಫ್ 2' ರಿಲೀಸ್ ಆಗಿತ್ತು. ಐದು ವರ್ಷಗಳ ಹಿಂದೆ ಈ ಮೂವರು ಸಿನಿಮಾಗಳಲ್ಲಿ ವಿಕ್ಟರಿ ವೆಂಕಟೇಶ್ ನಟಿಸಿದ 'ಎಫ್ 2' ಸಿನಿಮಾವನ್ನು ಪ್ರೇಕ್ಷಕರು ಮೆಚ್ಚಿದ್ದರು. ಹಾಗೇ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು.


Click it and Unblock the Notifications











