ರಾಮ್ ಚರಣ್ 'ಪೆದ್ದಿ'ಗೆ ಕಣ್ಮುಚ್ಕೊಂಡ್ ಹೋಗಿದ್ದಲ್ಲ ಶಿವಣ್ಣ; ' ದಪ್ಪ ಮೀಸೆ 'ಗೌರ್ ನಾಯ್ಡು' ಅಂದ್ರೆ ಸುಮ್ನೆ ಅಲ್ಲ!
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಪಕ್ಕಾ ರಗಡ್ ಲುಕ್‌ನಲ್ಲಿ ಕಿಕ್ ಕೊಡ್ತಿರಬೇಕಾದ್ರೆ, ಇನ್ನು ಶಿವಣ್ಣನ ರೋಲ್ ಹೇಗಿರ್ಬೇಡಾ? ಅಭಿಮಾನಿಗಳಲ್ಲಿ ಇಂತಹದ್ದೊಂದು ಪ್ರಶ್ನೆ ಇದ್ದೇ ಇತ್ತು. ಮಾಸ್ ಆಗಿರುತ್ತೋ? ಕ್ಲಾಸ್ ಆಗಿರುತ್ತೋ? ಅನ್ನೋ ಗೊಂದಲದಲ್ಲಿ ಇದ್ದರು. 'ಜೈಲರ್'ನಂತೆ ಮತ್ತೊಂದು ಸಿನಿಮಾದ ಪಾತ್ರದ ಕಿಕ್ ಕೊಡುತ್ತಾ? ಅಂತ ಕುತೂಹಲದಲ್ಲಿ ಉಗುರು ಉಚ್ಚಿಕೊಳ್ತಿದ್ರು. ಕೊನೆಗೂ ಸಿನಿಮಾ ತಂಡ ಬರ್ತ್‌ಡೇಗೆ ಒಂದು ಝಲಕ್ ಕೊಟ್ಟೇ ಬಿಟ್ಟಿದೆ.
'ಪೆದ್ದಿ' ಸಿನಿಮಾದಲ್ಲಿ ಗೋಬಲ್ ಸ್ಟಾರ್ ರಾಮ್ ಚರಣ್ ಒಂದ್ಕಡೆಯಾದರೆ, ಇನ್ನೊಂದು ಕಡೆ ಗಮನ ಸೆಳೆಯುತ್ತಿರೋದೇ ಶಿವಣ್ಣ ಪಾತ್ರ. ಇದೊಂದು ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಆಗಿದ್ದರೂ, ಇವರಿಬ್ಬರ ಪಾತ್ರಗಳ ಮೇಲೆ ಎಲ್ಲರ ಗಮನವಿದೆ. ಇಲ್ಲಿವರೆಗೂ ಶಿವಣ್ಣ ಲುಕ್ ಅನ್ನು ರಿವೀಲ್ ಮಾಡದ ಚಿತ್ರತಂಡ ಬರ್ತ್‌ಡೇ ಹಿನ್ನೆಲೆಯಲ್ಲಿ ರಿವೀಲ್ ಮಾಡಿದೆ. ಆ ಲುಕ್ ನೋಡಿ ಫ್ಯಾನ್ಸ್ ಕಳೆದು ಹೋಗಿರುವುದಂತೂ ಅಷ್ಟೇ ಸತ್ಯ.

ಶಿವಣ್ಣ ಲುಕ್‌ಗೆ ಪರಭಾಷೆಯ ನಿರ್ದೇಶಕರು ಫಿದಾ ಆದಂತೆ ಇದೆ. ಸ್ಪೆಷಲ್ ರೋಲ್‌ಗೆ ಅಂತ ಕರೆದುಕೊಂಡು ಹೋಗಿ ರಗಡ್ ಇಮೇಜ್ ಕೊಟ್ಟು ಕಳಿಸುತ್ತಿದ್ದಾರೆ. ಶಿವಣ್ಣಗೆ ಕೂಡ ಬ್ಯಾಕ್ ಟು ಬ್ಯಾಕ್ ಇಂತಹದ್ದೇ ಪಾತ್ರಗಳು ಹುಡುಕಿಕೊಂಡು ಬರುತ್ತಿವೆ. ಈಗ 'ಪೆದ್ದಿ' ಸಿನಿಮಾದ ಲುಕ್ ಕೂಡ ಕಿಕ್ ಕೊಡುವುದಕ್ಕೆ ಶುರು ಮಾಡಿದೆ. 63ನೇ ವಯಸ್ಸಿನಲ್ಲೂ ಶಿವಣ್ಣ ಪೈಪೋಟಿ ಕೊಡುತ್ತಿರೋದು ನೋಡಿದರೆ, 'ಪೆದ್ದಿ' ಸಿನಿಮಾದಲ್ಲೂ ತಮ್ಮ ಪಾತ್ರದ ಮೂಲಕ ಪ್ರೇಕ್ಷಕರಿಂದ ಶಿಳ್ಳೆ ಗಿಟ್ಟಿಸಿಕೊಳ್ಳೋದು ಗ್ಯಾರಂಟಿ.
ಅಂದ್ಹಾಗೆ ಶಿವರಾಜ್‌ಕುಮಾರ್ ನಟಿಸುತ್ತಿರುವ ಪಾತ್ರದ ಹೆಸರು 'ಗೌರ್ ನಾಯ್ಡು'. ಉಗ್ರ ನೋಟ, ದಪ್ಪ ಮೀಸೆ ಮತ್ತು ರಗಡ್ ಲುಕ್, ಇವೆಲ್ಲವನ್ನೂ ನೋಡಿದರೆ, ಶಿವಣ್ಣ ಪಾತ್ರ ಸಿಕ್ಕಾಪಟ್ಟೆ ಪವರ್‌ಫುಲ್ ಆಗಿರುತ್ತೆ ಅನ್ನೋದರಲ್ಲಿ ಅನುಮಾನವೇ ಇಲ್ಲ. ಶಿವಣ್ಣ ಕಾಸ್ಟ್ಯೂಮ್ ಹಾಗೂ ಲುಕ್ ನೋಡಿದ ಮೇಲೆ ಹಳ್ಳಿ ಮುಖಂಡನ ಪಾತ್ರದಲ್ಲಿ ಶಿವಣ್ಣ ನಟಿಸುತ್ತಿರಬಹುದೆಂದು ಗೆಸ್ ಮಾಡಬಹುದು.

ರಾಮ್ ಚರಣ್ ಹಾಗೂ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಪೆದ್ದಿ' ಒಂದು ಸ್ಪೋರ್ಟ್ಸ್ ಆಕ್ಷನ್ ಡ್ರಾಮಾ ಸಿನಿಮಾ. ಈಗಾಗಲೇ ರಾಮ್ ಚರಣ್ ಲುಕ್ ರಿವೀಲ್ ಆಗಿದೆ. ಅದನ್ನು ನೋಡಿದ್ಮೇಲೆ ಮೆಗಾ ಪವರ್‌ಸ್ಟಾರ್ ಈ ಬಾರಿ ಪವರ್‌ಫುಲ್ ಆಗಿ ಅಖಾಡಕ್ಕೆ ಇಳಿಯೋದು ಅವರ ಫ್ಯಾನ್ಸ್‌ಗೆ ಕನ್ಫರ್ಮ್ ಆಗಿದೆ. ಜೊತೆಗೆ ಬಾಲಿವುಡ್ ನಟಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನ ಮತ್ತೊಬ್ಬ ದಿಗ್ಗಜ ಜಗಪತಿ ಬಾಬು ಕೂಡ ನಟಿಸುತ್ತಿದ್ದಾರೆ. ಇವರದ್ದು ಬಹುಶ: ನೆಗೆಟಿವ್ ಶೇರ್ ಇರಬಹುದೆಂದು ಗೆಸ್ ಮಾಡಲಾಗಿದೆ. ಹಾಗೇ ಮತ್ತೊಬ್ಬ ಬಾಲಿವುಡ್ ನಟ ದಿವೇಂದು ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
'ಪೆದ್ದಿ' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ, ಎ ಆರ್ ರೆಹಮಾನ್ ಸಂಗೀತ. ಬಿಗ್ ಬಜೆಟ್‌ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಮುಂದಿನ ವರ್ಷ ಅಂದರೆ, 2026, ಮಾರ್ಚ್ 27ರಂದು ಬಹುಭಾಷೆಯಲ್ಲಿ ನಿರ್ಮಾಣ ಆಗುತ್ತಿದೆ. ರಾಮ್ ಚರಣ್ ಬರ್ತ್‌ಡೇಗೆ ಸಿನಿಮಾ ರಿಲೀಸ್ ಮಾಡಬೇಕು ಅಂತ ನಿರ್ದೇಶಕ ಬುಚ್ಚಿಬಾಬು ಸನಾ ಶತ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಶೂಟಿಂಗ್ ಕೂಡ ಭರದಿಂದ ಸಾಗಿದೆ. ಈ ದುಬಾರಿ ಬಜೆಟ್ ಸಿನಿಮಾವನ್ನು ವೆಂಕಟ ಸತೀಶ್ ಕಿಲಾರು ಹಣ ಹಾಕುತ್ತಿದ್ದರೆ, ಮೈತ್ರಿ ಮೂವೀ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ನಿರ್ಮಾಣದಲ್ಲಿ ಸಾಥ್ ನೀಡಿದೆ.
'ಪೆದ್ದಿ' ಸಿನಿಮಾದ ಈ ಫಸ್ಟ್ ಲುಕ್ ಈ ಬಾರಿ ಶಿವಣ್ಣನ ಬರ್ತ್‌ಡೇಯನ್ನು ಸ್ಪೆಷಲ್ ಮಾಡಿದೆ. ಅವರ ಅಭಿಮಾನಿಗಳು ಕೂಡ ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಇದರೊಂದಿಗೆ ಶಿವಣ್ಣನ ಸಾಲು ಸಾಲು ಸಿನಿಮಾಗಳು ಸೆಟ್ಟೇರಿವೆ. ಒಬ್ಬರ ಹಿಂದೊಬ್ಬರು ಸಿನಿಮಾ ಮಾಡುವುದಕ್ಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಕನ್ನಡದಲ್ಲಿಯೂ ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗಿದ್ದು, ಮುಂದಿನ ವರ್ಷ ರಾಜ್ ಕುಟುಂಬದ ಅಭಿಮಾನಿಗಳಿಗೆ ಹಬ್ಬವೋ ಹಬ್ಬ.


Click it and Unblock the Notifications











