ವಿಜಯ್ ದೇವರಕೊಂಡಗೆ ರಶ್ಮಿಕಾ ಅಲ್ಲ.. ಶ್ರೀಲೀಲಾ ಹೀರೊಯಿನ್: ಟಾಲಿವುಡ್ ನಂ 1 ಪಟ್ಟದ ಮೇಲೆ ಕಣ್ಣು!
ಟಾಲಿವುಡ್‌ನಲ್ಲಿ ಕನ್ನಡದ ಹುಡುಗಿಯರ ದರ್ಬಾರ್ ಜೋರಾಗಿಯೇ ನಡೆಯುತ್ತಿದೆ. ಇಲ್ಲಿವರೆಗೂ ರಶ್ಮಿಕಾ ಮಂದಣ್ಣ ಹವಾ ಜೋರಾಗಿತ್ತು. ಅದ್ಯಾವಾಗ ರಶ್ಮಿಕಾ ಬಾಲಿವುಡ್ ಕಡೆ ಮುಖ ಮಾಡಿದ್ರೋ.. ಅಲ್ಲಿಂದ ತೆಲುಗಿನಲ್ಲಿ ಹೊಸ ಮುಖದ ಹುಡುಕಾಟದಲ್ಲಿತ್ತು. ಸದ್ಯಕ್ಕೀಗ ಟಾಲಿವುಡ್ ಅಂಗಳದಲ್ಲಿ ಕನ್ನಡದ ನಟಿಯ ದರ್ಬಾರ್ ಆರಂಭ ಆಗಿದೆ. ಅವರೇ ಶ್ರೀಲೀಲಾ. ಒಂದರ ಹಿಂದೊಂದು ಸಿನಿಮಾಗಳಿಗೆ ಶ್ರೀಲೀಲಾ ಸಹಿ ಮಾಡುತ್ತಿದ್ದು, ತೆಲುಗು ಚಿತ್ರರಂಗದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಮತ್ತೆ ಶ್ರೀಲೀಲಾ ಸುದ್ದಿಯಲ್ಲಿರೋದಕ್ಕೆ ಕಾರಣ ವಿಜಯ್ ದೇವರಕೊಂಡ.
'ಲೈಗರ್' ಹೀನಾಯ ಸೋಲಿನ ಬಳಿಕ ವಿಜಯ್ ದೇವರಕೊಂಡ ಸ್ವಲ್ಪ ಬ್ರೇಕ್ ಕೊಟ್ಟಿದ್ದರು. ಇನ್ನೊಂದು ಕಡೆ ನಟಿ ಸಮಂತಾ ಅನಾರೋಗ್ಯದ ಬೆನ್ನಲ್ಲೇ ಅವರೊಂದಿಗೆ ನಟಿಸುತ್ತಿದ್ದ 'ಖುಷಿ' ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿದೆ. ಇನ್ನೇನು ಆ ಸಿನಿಮಾದ ಶೂಟಿಂಗ್ ಮತ್ತೆ ಆರಂಭ ಆಗಬೇಕು ಅನ್ನುವಾಗಲೇ ವಿಜಯ್ ದೇವರಕೊಂಡ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾಗೆ ಕನ್ನಡದ ಶ್ರೀಲೀಲಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸತತ ಸೋಲುಗಳ ಬಳಿಕ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಸಿನಿಮಾ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದ್ರೀಗ ಶ್ರೀಲೀಲಾ ನಾಯಕಿಯಾಗಿ ಆಯ್ಕೆ ಆಗಿರುವುದು ಅಚ್ಚರಿ ಮೂಡಿಸಿದೆ.

ಶ್ರೀಲೀಲಾ ಒಂದರ ಹಿಂದೊಂದು ಬಿಗ್ ಪ್ರಾಜೆಕ್ಟ್‌ಗೆ ಸಹಿ ಮಾಡುತ್ತಿದ್ದಾರೆ. ಇದು ಟಾಲಿವುಡ್ ಮಂದಿಯ ಅಚ್ಚರಿಗೂ ಕಾರಣವಾಗಿದೆ. 'ಪೆಳ್ಳಿ ಸಂದಡಿ' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಶ್ರೀಲೀಲಾ ಬಹಳ ವೇಗವಾಗಿಯೇ ಹೊಸ ಹೊಸ ಸಿನಿಮಾಗಳಿಗೆ ಸಹಿ ಮಾಡುತ್ತಿದ್ದಾರೆ. ವಿಶೇಷ ಅಂದ್ರೆ, ಟಾಲಿವುಡ್‌ನ ಸಿತಾರಾ ಎಂಟರ್‌ಟೈನ್ಮೆಂಟ್ ಪ್ರೊಡಕ್ಷನ್ ಹೌಸ್‌ಗೆ ಶ್ರೀಲೀಲಾ ಬಹುತೇಕ ಸಿನಿಮಾಗಳನ್ನು ಸಹಿ ಮಾಡಿದ್ದಾರೆ. ಈಗ ವಿಜಯ್ ದೇವರಕೊಂಡ ಜೊತೆ ನಟಿಸುತ್ತಿರುವ ಸಿನಿಮಾವನ್ನೂ ಸಿತಾರಾ ಎಂಟರ್‌ಟೈನ್ಮೆಂಟ್ ನಿರ್ಮಾಣ ಮಾಡುತ್ತಿದೆ.
ಟಾಲಿವುಡ್ ನಿರ್ದೇಶಕ ಗೌತಮ್ ಟಿನ್ನನುರಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ವಿಜಯ್ ದೇವರಕೊಂಡ ಹಾಗೂ ಶ್ರೀಲೀಲಾ ಜೋಡಿಯಾಗಿ ನಟಿಸುತ್ತಿದ್ದಾರೆ. ಹೀಗಾಗಿ ಟಾಲಿವುಡ್‌ನಲ್ಲಿ ಶ್ರೀಲೀಲಾ ಭವಿಷ್ಯ ಉಜ್ವಲವಾಗಿದೆ ಎಂದೇ ಹೇಳಲಾಗುತ್ತಿದೆ. ಸ್ಯಾಂಡಲ್‌ವುಡ್‌ನಿಂದ ಶ್ರೀಲೀಲಾ ವೃತ್ತಿ ಬದುಕು ಆರಂಭ ಮಾಡಿದ್ದರೂ, ಇಲ್ಲಿ ಅದ್ಭುತ ಯಶಸ್ಸು ಸಿಕ್ಕಿರಲಿಲ್ಲ. ಆದ್ರೀಗ ತೆಲುಗು ಚಿತ್ರರಂಗದಲ್ಲಿ ಬಿಗ್ ಪ್ರಾಜೆಕ್ಟ್‌ಗಳು ಕೈಯಲ್ಲಿವೆ.
ರಶ್ಮಿಕಾ ಮಂದಣ್ಣ ಟಾಲಿವುಡ್‌ಗೆ ಎಂಟ್ರಿ ಕೊಟ್ಟಾಗಲೂ ಹೀಗೇ ಒಂದರ ಹಿಂದೊಂದು ಸಿನಿಮಾಗಳಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅಲ್ಲದೆ, ರಶ್ಮಿಕಾಗೆ ಬಿಗ್ ಪ್ರಾಜೆಕ್ಟ್‌ಗಳೇ ಸಿಕ್ಕಿದ್ದವು. ವಿಶೇಷ ಅಂದ್ರೆ, ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಗೀತಾ ಗೋವಿಂದಂ' ದೊಡ್ಡ ಬ್ರೇಕ್ ಸಿಕ್ಕಿತ್ತು. ಈಗ ವಿಜಯ್ ದೇವರಕೊಂಡ ಜೊತೆನೇ ನಟಿಸುತ್ತಿರುವ ಸಿನಿಮಾ ಮೂಲಕ ಶ್ರೀಲೀಲಾಗೂ ಅಂತಹದ್ದೇ ಬ್ರೇಕ್ ಸಿಗುತ್ತಾ? ಅನ್ನೋ ಲೆಕ್ಕಾಚಾರ ಹಾಕಲಾಗುತ್ತಿದೆ.

'ಪೆಳ್ಳಿ ಸಂದಡಿ', 'ಧಮಾಕಾ' ಸಿನಿಮಾಗಳ ಬಳಿಕ ತೆಲುಗು ಯುವ ನಟರಾದ ವೈಷ್ಣವ್ ತೇಜ್, ನವೀನ್ ಪೊಲಿಶೆಟ್ಟಿ ಜೊತೆ ಶ್ರೀಲೀಲಾ ಸಿನಿಮಾ ಮಾಡುತ್ತಿದ್ದಾರೆ. ಹಾಗೇ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು 28ನೇ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಟಾಲಿವುಡ್ ಪವರ್‌ಸ್ಟಾರ್ ಪವನ್ ಕಲ್ಯಾಣ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಹೀಗಾಗಿ ಈ ವರ್ಷ ಶ್ರೀಲೀಲಾಗೆ ಕರಿಯರ್‌ಗೆ ಹೊಸ ತಿರುವು ಸಿಗೋದು ಗ್ಯಾರಂಟಿ.
ಮಹೇಶ್ ಬಾಬು, ಪವನ್ ಕಲ್ಯಾಣ್ ಸಿನಿಮಾಗಳು ರಿಲೀಸ್ ಆದರೆ, ಶ್ರೀಲೀಲಾಗೆ ಇಮೇಜ್ ಬದಲಾಗೋದು ಗ್ಯಾರಂಟಿ. ಆದರೆ ಅದಕ್ಕೆ ಇನ್ನೂ ಸಮಯವಿದೆ. ಅಷ್ಟರೊಳಗೆ ವೈಷ್ಣವ್ ತೇಜ್ ಹಾಗೂ ನವೀನ್ ಪೊಲಿಶೆಟ್ಟಿ ಸಿನಿಮಾ ಗೆದ್ದರೆ ಶ್ರೀಲೀಲಾ ಬಂಪರ್. ಅಲ್ಲದೆ ಜೂ.ಎನ್‌ಟಿಆರ್, ಅಲ್ಲು ಅರ್ಜುನ್, ರಾಮ್ ಚರಣ್ ಜೊತೆ ಸಿನಿಮಾ ಮಾಡೋ ಅವಕಾಶ ಸಿಕ್ಕಿರೆ, ಟಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣ ಹಿಂದಿಕ್ಕಿ ನಂ 1 ನಟಿಯಾಗುವುದರಲ್ಲಿ ಅನುಮಾನವಿಲ್ಲ.


Click it and Unblock the Notifications











