'NBK 108'ರಲ್ಲಿ ಶ್ರೀ ಲೀಲಾ ಲೆಜೆಂಡ್ ಬಾಲಕೃಷ್ಣಗೆ ಮಗಳೂ ಅಲ್ಲ.. ನಾಯಕಿನೂ ಅಲ್ಲ: ಪಾತ್ರದ ಗುಟ್ಟೇನು?
ಟಾಲಿವುಡ್‌ನ 'ಗಾಢ್ ಆಫ್ ಮಾಸ್' ನಂದಮೂರಿ ಬಾಲಕೃಷ್ಣ ತಮ್ಮ ಹೊಸ ಸಿನಿಮಾದ ತಯಾರಿಯಲ್ಲಿದ್ದಾರೆ. 'NBK 108' ಈಗಾಗಲೇ ಸೆಟ್ಟೇರಿದ್ದು, ಯಶಸ್ವಿ ನಿರ್ದೇಶಕ ಅನಿಲ್ ರವಿಪುಡಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಬಾಲಯ್ಯ ಹಾಗೂ ಅನಿಲ್ ರವಿಪುಡಿಯ ಮೊದಲ ಕಾಂಬಿನೇಷನ್ ಸಿನಿಮಾ. ಆದರೆ, ಇಲ್ಲಿ ಸದ್ದು ಮಾಡುತ್ತಿರೋದು ಶ್ರೀಲೀಲಾ ರೋಲ್.
ಕನ್ನಡದ ನಟಿ ಶ್ರೀಲೀಲಾ ಟಾಲಿವುಡ್‌ನಲ್ಲಿ ನೆಲೆಯೂರಿದ್ದಾರೆ. ಬ್ಯಾಕ್ ಟು ಬ್ಯಾಕ್ ಟಾಲಿವುಡ್ ಪ್ರಾಜೆಕ್ಟ್‌ಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಸದ್ಯ 'NBK 108' ಶ್ರೀಲೀಲಾ ಪಾತ್ರವೇನು ಅನ್ನೋದು ಈಗ ಟಾಕ್ ಆಫ್ ಟೌನ್ ಆಗಿಬಿಟ್ಟಿದ್ದೆ. ಶ್ರೀಲೀಲಾ ಬಾಲಯ್ಯ ಸಿನಿಮಾಗೆ ಆಯ್ಕೆ ಆದಾಗಲೇ ಅವರ ರೋಲ್ ಏನು ಅನ್ನೋದು ಚರ್ಚೆಯಾಗುತ್ತಿತ್ತು.

ಬಾಲಯ್ಯನಿಗೆ ಶ್ರೀಲೀಲಾ ಹೀರೊಯಿನ್ ಅಂದಾಗ, ಸಿನಿಪ್ರಿಯರು ಕೊಂಚ ಮಟ್ಟಿಗೆ ಅಸಮಧಾನ ಹೊರಹಾಕಿದ್ದರು. ಬಳಿಕ ಹೀರೊಯಿನ್ ಅಲ್ಲ, ಮಗಳ ಪಾತ್ರ ಅಂದಾಗ ಫ್ಯಾನ್ಸ್ ಕೊಂಚ ಮಟ್ಟಿಗೆ ನಿಟ್ಟುಸಿರುಬಿಟ್ಟಿದ್ದರು. ಆದ್ರೀಗ ಮಗಳೂ ಅಲ್ಲ, ಹೀರೊಯಿನ್ ಅಲ್ಲ ಅಂತಿವೆ ಟಾಲಿವುಡ್ ಮೂಲಗಳು. ಅಷ್ಟಕ್ಕೂ ಅವರ ಪಾತ್ರವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಶ್ರೀಲೀಲಾ 'ಲೆಜೆಂಡ್' ಬಾಲಯ್ಯಗೆ ಮಗಳಲ್ಲ
ಬಾಲಯ್ಯ ಸಿನಿಮಾದಲ್ಲಿ ಶ್ರೀಲೀಲಾ ರೋಲ್ ಏನು? ಅನ್ನೋದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿತ್ತು. 'NBK 108'ಯಲ್ಲಿ ಬಾಲಯ್ಯ ಪವರ್‌ಫುಲ್ ಮಾಸ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಲ್ಲಿ ಶ್ರೀಲೀಲಾ ಮಗಳು ಅನ್ನೋದನ್ನು ಬಾಲಯ್ಯ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ರೀಗ ಶ್ರೀಲೀಲಾ ರೋಲ್ ಏನು? ಅನ್ನೋದು ರಿವೀಲ್ ಆಗಿದೆ.
'NBK 108'ರಲ್ಲಿ ಶ್ರೀಲೀಲಾ ಲೆಜೆಂಡ್ ಬಾಲಯ್ಯನ ಮಗಳಾಗಿ ನಟಿಸುತ್ತಿಲ್ಲ. ಬದಲಾಗಿದೆ ಶರತ್ ಕುಮಾರ್ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿಸಿದೆ. ಈ ಸಿನಿಮಾದಲ್ಲಿ ಶರತ್ ಕುಮಾರ್ ಹಾಗೂ ಬಾಲಯ್ಯ ನಡುವೆ ಪವರ್‌ಫುಲ್ ದೃಶ್ಯಗಳು ಇವೆಯಂತೆ. ಹೀಗಾಗಿ ಶ್ರೀಲೀಲಾ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ ಅನ್ನೋದು ಸಿನಿಮಾ ಬಿಡುಗಡೆಯಾದಗಲೇ ಗೊತ್ತಾಗುತ್ತೆ.

ಶ್ರೀಲೀಲಾಗಾಗಿ ದುಬಾರಿ ಸಾಂಗ್
'NBK 108'ರಲ್ಲಿ ಶ್ರೀಲೀಲಾಗಾಗಿ ದುಬಾರಿ ಸಾಂಗ್‌ವೊಂದನ್ನು ಕೊಡಲಾಗಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಸಾಂಗ್ ಒಂದನ್ನು ಶೂಟ್ ಮಾಡಲಾಗುತ್ತಿದೆ. ಇದರಲ್ಲಿ ಶ್ರೀಲೀಲಾ ಗ್ಲಾಮರಸ್ ಲುಕ್ ಕೊಟ್ಟಿದ್ದು, ಮುಂಬೈನಿಂದ ಡ್ಯಾನ್ಸರ್‌ಗಳನ್ನು ಕರೆತಂದು ಈ ಹಾಡಿನ ಚಿತ್ರೀಕರಣ ಮಾಡಲಾಗುತ್ತಿದೆ ಎನ್ನಲಾಗಿದೆ.
'NBK 108'ಗೆ ತಮನ್ ಟ್ಯೂನ್ ಹಾಕುತ್ತಿದ್ದಾರೆ. ಹೀಗಾಗಿ ಶ್ರೀಲೀಲಾಗೆ ದುಬಾರಿ ಸಾಂಗ್ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಇನ್ನು ದಸರಾ ಹಬ್ಬಕ್ಕೆ 'NBK 108' ಸಿನಿಮಾ ತೆರೆಕಾಣುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವಿಶೇಷ ಅಂದ್ರೆ, ಈ ಸಿನಿಮಾದಲ್ಲಿ ಬಾಲಕೃಷ್ಣಗೆ ಜೋಡಿಯಾಗಿ ಕಾಜಲ್ ಅಗರ್ವಾಲ್ ನಟಿಸುತ್ತಿದ್ದಾರೆ.
ಅಂದ್ಹಾಗೆ, ಬಾಲಕೃಷ್ಣ ಮತ್ತು ಕಾಜಲ್ ಅಗರ್ವಾಲ್ ಜೋಡಿಯಾಗಿ ನಟಿಸುತ್ತಿರುವ ಚೊಚ್ಚಲ ಚಿತ್ರ. ವಿವಾಹದ ಬಳಿಕ ಕಾಜಲ್ ಅಗರ್ವಾಲ್ ಮತ್ತೆ ಆಕ್ಟಿವ್ ಆಗಿದ್ದು, ಟಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಕೂಡ ಒಂದೆರಡು ಸಿನಿಮಾಗಳಲ್ಲಿ ಬಾಲಯ್ಯ ಜೊತೆ ಕಾಜಲ್ ಅಗರ್ವಾಲ್ ನಟಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಡ್ರಾಪ್ ಆಗಿತ್ತು.
ದಸರಾದಲ್ಲಿ ಬಾಲಯ್ಯ ಪೈಪೋಟಿ
ದಸರಾ ಹಬ್ಬಕ್ಕೆ ಮೂರು ಸಿನಿಮಾಗಳು ರಿಲೀಸ್ ಆಗುತ್ತಿವೆ. 'NBK 108' ಜೊತೆ ಮಾಸ್ ಮಹಾರಾಜ ರವಿತೇಜ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ 'ಟೈಗರ್ ನಾಗೇಶ್ವರ ರಾವ್' ರಿಲೀಸ್ ಆಗುತ್ತಿದೆ. ಬೋಯಪತಿ ಶ್ರೀನು ನಿರ್ದೇಶನದ ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿದೆ. ಇದರೊಂದಿಗೆ ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಕೂಡ ರಿಲೀಸ್ ಆಗಲಿದೆ.
ಒಟ್ನಲ್ಲಿ 'NBK 108' ಸಿನಿಮಾದಲ್ಲಿ ನಟಿಸೋಕೆ ಕನ್ನಡದ ನಟಿ ಶ್ರೀಲೀಲಾಗೆ ಒಂದೊಳ್ಳೆ ಅವಕಾಶ ಸಿಕ್ಕಿದೆ. ಹಲವು ಅವಕಾಶ ಸಿಕ್ಕಿದೂ, ಶ್ರೀಲೀಲಾಗೆ ಮೆಗಾಬ್ಲಾಕ್ ಬಸ್ಟರ್ ಸಿಕ್ಕಿಲ್ಲ. ಹೀಗಾಗಿ ಈ ಬಾರಿ ಯಶಸ್ಸಿನ ರುಚಿ ನೋಡುತ್ತಾರಾ? ಅನ್ನೋ ಕುತೂಹಲವಿದೆ.


Click it and Unblock the Notifications











