"ಪಾಕಿಸ್ತಾನ ಅನುಮತಿ ಕೊಟ್ಟಿದ್ದರೆ, ಒಂದು ಮರವೇ ಸಿಂಧೂ ನಾಗರೀಕತೆಯ ಕಥೆ ಹೇಳ್ತಿತ್ತು": ಆದರೆ..
ರಾಜಮೌಳಿ ದೇಶವೇ ಕಂಡ ಅತ್ಯದ್ಬುತ ನಿರ್ದೇಶಕ ಅನ್ನೋದು ಈಗಾಗಲೇ ಸಾಬೀತಾಗಿದೆ. 'ಬಾಹುಬಲಿ', 'RRR' ರಿಲೀಸ್ ಆದ ಬಳಿಕ ಜಕ್ಕಣ್ಣ ರೇಂಜ್ ಬದಲಾಗಿಬಿಟ್ಟಿದೆ. "ನಾಟು.. ನಾಟು.." ಆಸ್ಕರ್ ಗಿಟ್ಟಿಸಿಕೊಂಡ ಮೇಲಂತೂ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ.
ರಾಜಮೌಳಿಯನ್ನು ಹಾಲಿವುಡ್ ಮಂದಿಯೇ ಹಾಡಿ ಹೊಗಳಿದ್ದು, ತೆರೆಮೇಲೆ ಜಾದು ಮಾಡುವ ಕಲೆಗೆ ಮರುಳಾಗಿದ್ದಾರೆ. ಆದರೆ, ಈ ಹೆಸರು ಕೆಲವು ವರ್ಷಗಳ ಹಿಂದೆನೇ ಸಿಕ್ಕಿಬಿಡುತ್ತಿತ್ತು. ಪಾಕಿಸ್ತಾನ ಒಂದೇ ಒಂದು ಅನುಮತಿ ಕೊಟ್ಟಿದ್ದರೆ, ಇಡೀ ವಿಶ್ವವೇ ತಿರುಗಿ ನೋಡುವಂತಹ ಸಿನಿಮಾ ಮಾಡಿಬಿಡುತ್ತಿದ್ದರು.

ಸಿಂಧೂ ನಾಗರೀಕತೆ ಬಗ್ಗೆ ನಾವು ಕೇವಲ ಪಠ್ಯಪುಸ್ತಕದಲ್ಲಿ ಓದಿದ್ದೇವೆ. ಆಗಿನ ಕಾಲವನ್ನು ಕಲ್ಪಿಸಿಕೊಂಡಿದ್ದೇವೆ. ಅದೇ ಸಿನಿಮಾ ಆಗಿದ್ದಿದ್ದರೆ..? ಆ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದಿದ್ದರೆ? 14 ವರ್ಷಗಳ ಹಿಂದೆನೇ ತೆರೆಮೇಲೆ ಇಂತಹದ್ದೊಂದು ಸಿನಿಮಾ ಸೆಟ್ಟೇರುತ್ತಿತ್ತು. ಅಸಲಿಗೆ ಉದ್ಯಮಿ ಮುಂದೆ ರಾಜಮೌಳಿ ಬಿಚ್ಚಿಟ್ಟ ಆ ಸಂಗತಿಯೇನು?
ಸಿಂಧೂ ನಾಗರೀಕತೆ ಮೇಲೆ ಸಿನಿಮಾ ಮಾಡಿ!
ಸಿಂಧೂ ನಾಗರೀಕತೆ ಜಗತ್ತಿನ ಅತ್ಯಂತ ಹಳೆಯ ನಾಗರೀಕತೆ. ಈ ನಾಗರೀಕತೆ ಬಗ್ಗೆ ಶಾಲಾ, ಕಾಲೇಜುಗಳಲ್ಲಿ ಓದಿ ತಿಳಿದುಕೊಂಡಿದ್ದೇವೆ. ಇತ್ತೀಚೆಗೆ ನೆಟ್ಟಿಗರೊಬ್ಬರು ಆ ಕಾಲದ ನಗರಗಳು ಹೇಗಿದ್ದವು? ಅಲ್ಲಿನ ಜೀವನ ಶೈಲಿ ಹೇಗಿತ್ತು? ಅನ್ನೋ ಸಾಂಕೇತಿಕ ಫೋಟೊಗಳನ್ನು ಟ್ವೀಟ್ ಮಾಡಿದ್ದರು. ಈ ಫೋಟೊಗಳನ್ನು ಉದ್ಯಮಿ ಆನಂದ್ ಮಹೀಂದ್ರಾ ಮರು ಟ್ವೀಟ್ ಮಾಡಿ ರಾಜಮೌಳಿಗೆ ಟ್ಯಾಗ್ ಮಾಡಿದ್ದರು.
"ಇಂತಹ ವಿವರಣಾತ್ಮಕ ಫೋಟೊಗಳು ಇತಿಹಾಸಕ್ಕೆ ಮರುಜೀವ ತುಂಬುತ್ತವೆ. ನಮ್ಮ ಕಲ್ಪನೆಗೆ ಕಿಡಿ ಹೊತ್ತಿಸುತ್ತವೆ." ಎಂದು ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದರು. ಅಷ್ಟೇ ಅಲ್ಲದೆ ರಾಜಮೌಳಿಗೆ ಟ್ಯಾಗ್ ಮಾಡಿ, "ಸಿಂಧೂ ನಾಗರೀಕತೆಯ ಬಗ್ಗೆ ಸಿನಿಮಾ ಮಾಡುತ್ತೀರಾ ನೋಡಿ. ಜಾಗತೀಕ ಮಟ್ಟದಲ್ಲಿ ಈ ನಾಗರೀಕತೆಯ ಬಗ್ಗೆ ಜಾಗೃತಿ ಮೂಡಿಸಬಹುದು" ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮರವೇ ಕಥೆ ಹೇಳಬೇಕಿತ್ತು?
2009ರಲ್ಲಿ ರಾಜಮೌಳಿ ಹಾಗೂ ರಾಮ್‌ಚರಣ್ ಕಾಂಬಿನೇಷನ್‌ನಲ್ಲಿ 'ಮಗಧೀರ' ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದ ಶೂಟಿಂಗ್ ವೇಳೆನೇ ರಾಜಮೌಳಿ ಸಿಂಧೂ ನಾಗರೀಕತೆಯ ಸಿನಿಮಾ ಬಗ್ಗೆ ಆಲೋಚನೆ ಮಾಡಿದ್ದರು.
ಸಿಂಧೂ ನಾಗರೀಕತೆ ಹುಟ್ಟಿದ ನಗರಗಳಲ್ಲೊಂದು ಧೋಲವಿರ. ಇಲ್ಲಿ ರಾಜಮೌಳಿ 'ಮಗಧೀರ' ಶೂಟಿಂಗ್ ಮಾಡುತ್ತಿದ್ದರು. ಆ ವೇಳೆ ಅಲ್ಲಿ ಪಳೆಯುಳಿಕೆಯ ಮರವೊಂದು ಕಂಡಿತ್ತು. ಅದನ್ನೇ ನೋಡಿದ ಬಳಿಕ ಮರವೇ ಕಥೆ ಹೇಳಿದರೇ ಹೇಗೆ ಎಂದು ಚಿಂತಿಸಿದ್ದಾಗಿ ಆನಂದ್ ಮಹೀಂದ್ರ ಟ್ವೀಟ್ ಪ್ರತಿಕ್ರಿಯಿಸಿದ್ದರು.
ಪಾಕಿಸ್ತಾನ ಅನುಮತಿ ಕೊಡಲಿಲ್ಲ.
ಸಿಂಧೂ ನಾಗರೀಕತೆ ಬಗ್ಗೆ ಸಿನಿಮಾ ಮಾಡಿ ಎಂದಿದ್ದ ಆನಂದ್ ಮಹೀಂದ್ರಾಗೆ ರಾಜಮೌಳಿ ಟ್ವೀಟ್ ಮಾಡಿದ್ದರು. "ಧೋಲವಿರದಲ್ಲಿ 'ಮಗಧೀರ' ಶೂಟಿಂಗ್ ಮಾಡುತ್ತಿದ್ದೆವು. ಆ ವೇಳೆ ಅಲ್ಲಿ ಪಳೆಯುಳಿಕೆಯ ಮರವೊಂದು ಕಂಡಿತ್ತು. ಸಿಂಧೂ ನಾಗರಿಕತೆಯು ಹೇಗೆ ಹುಟ್ಟಿತು? ಅದು ಹೇಗೆ ಅವನತಿ ಕೊಂಡಿತು? ಈ ಬಗ್ಗೆ ಆ ಮರವೇ ಕಥೆ ಹೇಳಿದರೆ ಹೇಗೆ ಎಂಬ ಯೋಚನೆ ಬಂತು" ಎಂದು ರಾಜಮೌಳಿ ಹೇಳಿದ್ದಾರೆ.
ಈ ಆಲೋಚನೆ ಬರುತ್ತಿದ್ದಂತೆ ರಾಜಮೌಳಿ ಪಾಕಿಸ್ತಾನಕ್ಕೆ ತೆರಳಿದ್ದರು. "ನಾನು ಕೆಲವು ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಹೋಗಿದ್ದೆ. ಮೊಹೆಂಜೊದಾರೊಗೆ ಹೋಗಿ ಅಲ್ಲಿ ಸಂಶೋಧನೆ ಮಾಡಲು ಪ್ರಯತ್ನ ಪಟ್ಟಿದ್ದೆ. ಆದರೆ, ಪಾಕಿಸ್ತಾನ ಪರ್ಮಿಷನ್ ಕೊಡಲಿಲ್ಲ." ಎಂದು ಪ್ರತಿಕ್ರಿಯೆ ಕೊಟ್ಟಿದ್ದಾರೆ.


Click it and Unblock the Notifications











