ರಾಜಮೌಳಿ ಕುಟುಂಬದಲ್ಲಿ ಶೋಕ.. ಪ್ರಿಯಾಂಕಾ ಚೋಪ್ರಾ ಬ್ಯುಸಿ.. ಮಹೇಶ್ ಬಾಬು ಚಿತ್ರಕ್ಕೆ ಬ್ರೇಕ್?
ಜಾಗತಿಕ ಮಟ್ಟದಲ್ಲಿ RRR ಸಿನಿಮಾವನ್ನು ತೆಗೆದುಕೊಂಡು ಹೋಗಿದ್ದ ರಾಜಮೌಳಿ ಮುಂದಿನ ಸಿನಿಮಾ ಬಗ್ಗೆ ಸುಳಿವು ಸಿಗುತ್ತಿಲ್ಲ. ಮಹೇಶ್ ಬಾಬು ಜೊತೆ ಸಿನಿಮಾ ಮಾಡೋದು ಪಕ್ಕಾ ಅಂದಿದ್ದ ರಾಜಮೌಳಿ ಜನವರಿ 2ರಂದು ಔಪಚಾರಿಕವಾಗಿ ಸಿನಿಮಾದ ಪೂಜಾ ಕಾರ್ಯಗಳನ್ನು ನೆರವೇರಿಸಿದ್ದಾರೆ ಅಂತ ಟಾಲಿವುಡ್‌ನಲ್ಲಿ ಸುದ್ದಿಯಾಗಿತ್ತು. ಅದು ಬಿಟ್ಟರೆ, ಸಿನಿಮಾದ ಶೂಟಿಂಗ್ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇಲ್ಲ.
ರಾಜಮೌಳಿ ಸಿನಿಮಾ ಒಂದುವರ್ಷಕ್ಕೆ ಮುಗಿಯುವುದಿಲ್ಲ ಅನ್ನೋದು ಸಿನಿಪ್ರಿಯರಿಗೆ ಗೊತ್ತಾಗಿ ಹೋಗಿದೆ. RRR ಸಿನಿಮಾ ಮಾಡುವಾಗಲೂ ಜೂ.ಎನ್‌ಟಿಆರ್ ಹಾಗೂ ರಾಮ್ ಚರಣ್ ಅಭಿಮಾನಿಗಳು ಕಾದೂ ಕಾದು ಸುಸ್ತಾಗಿದ್ದರು. ಈಗ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿಮಾನಿಗಳ ಸರದಿ. ಯಾಕಂದ್ರೆ ಇದೂವರೆಗೂ ಈ ಜೋಡಿಯಿಂದ ಒಂದೇ ಒಂದು ಮಾಹಿತಿ ಕೂಡ ಹೊರ ಬಿದ್ದಿಲ್ಲ.

ಮಹೇಶ್ ಬಾಬುಗಾಗಿ ರಾಜಮೌಳಿ ಅತಿ ದುಬಾರಿ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರ ಬಜೆಟ್ ಸಾವಿರ ಕೋಟಿ ದಾಟುತ್ತೆ ಅನ್ನೋ ಚರ್ಚೆ ಕೂಡ ಇದೆ. ಕಳೆದ ಕೆಲವು ದಿನಗಳಿಂದ ಮಹೇಶ್ ಬಾಬು ಸಿನಿಮಾವನ್ನು ರಾಜಮೌಳಿ ನಿಲ್ಲಿಸಿದ್ದರು ಅನ್ನೋ ಸುದ್ದಿಯೊಂದು ಸದ್ದು ಮಾಡುತ್ತಿದೆ. ಅಷ್ಟಕ್ಕೂ ರಾಜಮೌಳಿ ಕುಟುಂಬದಲ್ಲಿ ಅಂತಹದ್ದೇನು ದುರಂತ ನಡೀತು. ನಿಜಕ್ಕೂ ಶೂಟಿಂಗ್ ನಿಂತಿತ್ತೇ? ಮತ್ತೆ ಶುರುವಾಗಿದೆಯೋ ಇಲ್ಲವೋ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಆರ್‌ಆರ್‌ಆರ್ ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾವನ್ನು ಹಾಲಿವುಡ್ ದಿಗ್ಗಜರೇ ಮೆಚ್ಚಿಕೊಂಡಿದ್ದರು. ಈ ಕಾರಣಕ್ಕೆ ರಾಜಮೌಳಿ ತಮ್ಮ ಮುಂದಿನ ಸಿನಿಮಾವನ್ನು ಜಗತ್ತಿನ ಮಾರುಕಟ್ಟೆಯನ್ನು ನೆನಪಿನಲ್ಲಿ ಇಟ್ಟುಕೊಂಡೇ ಮಾಡುವುದಕ್ಕೆ ಮುಂದಾಗಿದ್ದಾರೆ. ಅದಕ್ಕೆ ಸಿನಿಮಾ ಬಜೆಟ್ ಕೂಡ ಗಗನಕ್ಕೇರಿದೆ. ಈಗ ಮಹೇಶ್ ಬಾಬು 29ನೇ ಸಿನಿಮಾ ಆರಂಭ ಆಗಿದೆ ಅಂತೇನೋ ಸುದ್ದಿಯಿತ್ತು. ಅದನ್ನು ಅಧಿಕೃತವಾಗಿ ರಾಜಮೌಳಿ ಅನೌನ್ಸ್ ಮಾಡಿರಲಿಲ್ಲ. ಆದರೆ, ಟಾಲಿವುಡ್ ಮಾತ್ರ ಈಗಾಗಲೇ ಜಕ್ಕಣ್ಣ ಶೂಟಿಂಗ್ ಶುರು ಮಾಡಿದ್ದಾರೆ ಅಂತಲೇ ವರದಿಯಾಗಿತ್ತು.
ಜನವರಿಯಲ್ಲಿ ಪೂಜೆ ಮಾಡಿದ ಬಳಿಕ ಹೈದರಾಬಾದ್‌ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಸೆಟ್ ಹಾಕಲಾಗಿತ್ತು. ಅಲ್ಲಿ ಕೆಲವು ದಿನಗಳ ಕಾಲ ಶೂಟಿಂಗ್ ಕೂಡ ಮಾಡಿದ್ದರು. ಆದರೆ, ಪ್ರಿಯಾಂಕಾ ಚೋಪ್ರಾ ಹಾಗೂ ರಾಜಮೌಳಿಯಿಂದ ಸಿನಿಮಾದ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು. ರಾಜಮೌಳಿ ಕುಟುಂಬದಲ್ಲಿ ಸಂಬಂಧಿಯೊಬ್ಬರು ನಿಧನರಾಗಿದ್ದರು. ಈ ಕಾರಣಕ್ಕೆ ಇಡೀ ಕುಟುಂಬ ಅಲ್ಲಿಗೆ ಹೋಗಿದ್ದರಿಂದ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿದ್ದರು. ಇನ್ನೊಂದು ಕಡೆ ಪ್ರಿಯಾಂಕಾ ಚೋಪ್ರಾ ತನ್ನ ಸಹೋದರನ ಮದುವೆಯಲ್ಲಿ ಬ್ಯುಸಿಯಾಗಿದ್ದರಿಂದ ಶೂಟಿಂಗ್‌ಗೆ ಅವರು ಅವರು ಲಭ್ಯವಿರಲಿಲ್ಲ. ಈ ಕಾರಣಕ್ಕೆ ಶೂಟಿಂಗ್ ನಿಲ್ಲಿಸಿದ್ದರು ಅಂತ ಟಾಲಿವುಡ್‌ನಲ್ಲಿ ಗುಲ್ಲೆದ್ದಿದೆ.

ಕೆಲವು ದಿನಗಳು ವಿರಾಮ ಕೊಟ್ಟ ಬಳಿಕ ಎಸ್ ಎಸ್ ರಾಜಮೌಳಿ ಮತ್ತೆ ಶೂಟಿಂಗ್ ಆರಂಭ ಮಾಡಿದ್ದಾರಂತೆ. ಇಲ್ಲಿಂದ ನಿರಂತರವಾಗಿ ಶೂಟಿಂಗ್ ಆರಂಭ ಆಗಲಿದೆ ಅನ್ನೋದು ಸುದ್ದಿ ತೆಲುಗು ಮಾಧ್ಯಮಗಳಲ್ಲಿ ಓಡಾಡುತ್ತಿದೆ. ಇನ್ನು ಮಹೇಶ್ ಬಾಬು 29ನೇ ಸಿನಿಮಾದಲ್ಲಿ ದೊಡ್ಡ ಸ್ಟಾರ್ ಕಾಸ್ಟ್ ಅನ್ನೇ ರಾಜಮೌಳಿ ಕರೆದುಕೊಂಡು ಬಂದಿದ್ದಾರೆ ಅನ್ನೋದು ಸುದ್ದಿನೂ ಇದೆ. ಇನ್ನು ಆ ಬಗ್ಗೆನೂ ಯಾವುದೇ ವಿಷಯವನ್ನು ರಿವೀಲ್ ಮಾಡಿಲ್ಲ.
ಟಾಲಿವುಡ್ ಮೂಲಗಳ ಪ್ರಕಾರ ಮಹೇಶ್ ಬಾಬು ಸಿನಿಮಾಗೆ ಪ್ರಿಯಾಂಕಾ ಚೋಪ್ರಾದ ಜೊತೆಗೆ ಇಂಡೋನೇಷ್ಯಾದ ನಟಿ ಚೆಲ್ಸಿಯಾ ಇಸ್ಲಾನ್ ನಟಿಸಲಿದ್ದಾರೆ. ಹಾಗೇ ಬಾಲಿವುಡ್ ನಟಿ ಜಾನ್ ಅಬ್ರಹಾಂ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರಂತೆ. ಜೊತೆಗೆ ಹಾಲಿವುಡ್ ತಾರೆಯರು ಈ ಸಿನಿಮಾ ನಟಿಸಲಿದ್ದು, ಈ ಸಿನಿಮಾಗಾಗಿ ವಿಶೇಷವಾಗಿ ದುಬಾರಿ ಸೆಟ್‌ಗಳನ್ನು ಹಾಕುತ್ತಿದ್ದಾರೆ ಎನ್ನಲಾಗಿದೆ. ಹಾಗೇ ಈ ಸಿನಿಮಾಗೆ ಸಂಬಂಧಿಸಿದಂತೆ ಯಾವುದೇ ವಿಷಯಗಳು ಸೋರಿಕೆಯಾಗದಂತೆ ರಾಜಮೌಳಿ ಕಟ್ಟು ನಿಟ್ಟಿನ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.


Click it and Unblock the Notifications











