"ಸೂಪರ್‌ಸ್ಟಾರ್‌ಗೆ ಪವಿತ್ರಾ ಲೋಕೇಶ್ ಕೈ ಅಡುಗೆ ಇಷ್ಟ.. ಈ ಸಂಬಂಧಕ್ಕೆ ಮಹೇಶ್ ಬಾಬು ಗ್ರೀನ್ ಸಿಗ್ನಲ್"- ನರೇಶ್
ಇತ್ತೀಚೆಗೆ ಟಾಲಿವುಡ್ ಹಾಗೂ ಸ್ಯಾಂಡಲ್‌ವುಡ್‌ನಲ್ಲಿ ಈ ಜೋಡಿ ಸಿಕ್ಕಾ ಪಟ್ಟೆ ಫೇಮಸ್. ಹೋದಲ್ಲೆಲ್ಲಾ ಇವರ ಬಗ್ಗೆನೇ ಮಾತು. ನರೇಶ್ ಹಾಗೂ ಪವಿತ್ರಾ ಲೋಕೇಶ್ ಸಂಬಂಧದ ಬಗ್ಗೆ ಈಗಾಗಲೇ ಗೊತ್ತಿದೆ. ಅವರು ಕೂಡ ಬಹಿರಂಗವಾಗಿಯೇ ತಮ್ಮ ಸಂಬಂಧದ ಬಗ್ಗೆ ಮಾತಾಡುತ್ತಿದ್ದಾರೆ.
ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಜೊತೆಗಿನ ಕಿತ್ತಾಟ. ಮೈಸೂರು ಹೋಟೇಲ್ ರಾದ್ಧಾಂತ. ನಟಿ ಪವಿತ್ರಾ ಲೋಕೇಶ್ ಜೊತೆಗೆ ಲಿವ್ ಇನ್ ರಿಲೇಷನ್‌ಶಿಪ್. ಇವೆಲ್ಲವೂ ಕಳೆದ ಕೆಲವು ದಿನಗಳಿಂದ ನಡೆಯುತ್ತಲೇ ಇದೆ. ಈ ಬೆನ್ನಲ್ಲೇ ತಮ್ಮದೇ ಬದುಕಿನ ಕಥೆಯನ್ನು ತೆರೆಮೇಲೆ ತರುವುದಕ್ಕೆ ಮುಂದಾಗಿದ್ದಾರೆ.

ತೆಲುಗಿನಲ್ಲಿ 'ಮಳ್ಳಿ ಪೆಳ್ಳಿ', ಕನ್ನಡದಲ್ಲಿ 'ಮತ್ತೆ ಮದುವೆ' ಸದ್ಯ ಎರಡು ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ಸ್ವತ: ನಿರ್ಮಿಸಿ, ನಟಿಸಿದ್ದಾರೆ. ಹೀಗಾಗಿ ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಈ ವೇಳೆ ತಮ್ಮಿಬ್ಬರ ಸಂಬಂಧದ ಬಗ್ಗೆ ಮುಕ್ತವಾಗಿ ಮಾತಾಡುತ್ತಿದ್ದಾರೆ. ಅಲ್ಲದೆ ಮಹೇಶ್ ಬಾಬು ಹಾಗೂ ದಿವಂಗತ ಸೂಪರ್‌ಸ್ಟಾರ್ ಕೃಷ್ಣ ಈ ಸಂಬಂಧಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿರೋ ಬಗ್ಗೆ ನರೇಶ್ ರಿವೀಲ್ ಮಾಡಿದ್ದಾರೆ.
ನರೇಶ್ ಕುಟುಂಬದಲ್ಲಿ ಪವಿತ್ರ ಲೋಕೇಶ್‌ಗೇನು ಸ್ಥಾನ?
ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರ ಸಂಬಂಧ ಹೊರಬೀಳುತ್ತಿದ್ದಂತೆ ಈ ಬಗ್ಗೆ ಮುಕ್ತವಾಗಿ ಮಾತಾಡಿಕೊಳ್ಳುತ್ತಿದ್ದಾರೆ. ಕೆಲವು ದಿನಗಳಿಂದ ನರೇಶ್ ಹಾಗೂ ಪವಿತ್ರ ಲೋಕೇಶ್ ಮದುವೆ ಆಗುವುದಾಗಿಯೂ ಹೇಳಿಕೆ ಕೊಡುತ್ತಿದ್ದಾರೆ. ಅಲ್ಲದೆ ಲಿವ್ ಇನ್ ರಿಲೇಷನ್‌ಶಿಫ್‌ನಲ್ಲೂ ಇರುವುದಾಗಿ ಹೇಳಿಕೊಂಡಿದ್ದಾರೆ.
ಟಾಲಿವುಡ್ ದಿಗ್ಗಜ ಸೂಪರ್‌ಸ್ಟಾರ್ ಕೃಷ್ಣ ಹಾಗೂ ವಿಜಯ ನಿರ್ಮಲಾ ಅವರ ಪುತ್ರ ನರೇಶ್. ಹೀಗಾಗಿ ಚಿತ್ರರಂಗದ ಈ ಪ್ರತಿಷ್ಠಿತ ಕುಟುಂಬ ಇವರಿಬ್ಬರ ಸಂಬಂಧವನ್ನು ಒಪ್ಪಿದ್ದಾರೆಯೇ? ಅನ್ನೋ ಪ್ರಶ್ನೆಗೆ ನರೇಶ್ ಪ್ರತಿಕ್ರಿಯಿಸಿದ್ದಾರೆ. ಇತ್ತೀಚೆಗೆ ತೀರಿಕೊಂಡ ಮಹೇಶ್ ಬಾಬು ತಂದೆ ಕೃಷ್ಣ ಕೂಡ ತಮ್ಮ ಹಾಗೂ ಪವಿತ್ರಾ ಲೋಕೇಶ್ ಅವರ ಸಂಬಂಧವನ್ನು ಒಪ್ಪಿದ್ದರು ಎಂದು ಹೇಳಿಕೊಂಡಿದ್ದಾರೆ.

ಸೂಪರ್‌ಸ್ಟಾರ್ ಕೃಷ್ಣ, ಮಹೇಶ್ ಗ್ರೀನ್ ಸಿಗ್ನಲ್
ನರೇಶ್ ಹಾಗೂ ಪವಿತ್ರಾ ಲೋಕೇಶ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿರೋದು ಕುಟುಂಬಕ್ಕೆ ಗೊತ್ತಿದೆ. ತಮ್ಮ ಸಂಬಂಧಕ್ಕೆ ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಹಾಗೂ ದಿವಂಗತ ಕೃಷ್ಣ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದರೆಂದು ನರೇಶ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇವರಿಬ್ಬರ ಸಂಬಂಧದ ಬಗ್ಗೆ ಮಹೇಶ್ ಬಾಬು ಪಾಸಿಟಿವ್ ಆಗಿ ಇದ್ದಾರೆ. ಅವರ ಅಭ್ಯಂತರವೇನು ಇಲ್ಲ ಎಂದು ಸ್ವತ: ನರೇಶ್ ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೆ, ಕಳೆದ ವರ್ಷ ಟಾಲಿವುಡ್ ಲೆಜೆಂಡ್ ಕೃಷ್ಣ ನಿಧನದ ಸಂದರ್ಭದಲ್ಲಿ ಪಾರ್ಥೀವ ಶರೀರದ ಮುಂದೆ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಪವಿತ್ರಾ ಲೋಕೇಶ್ ಅಡುಗೆ ಇಷ್ಟ
ಟಾಲಿವುಡ್ ಲೆಜೆಂಟ್ ಕೃಷ್ಣ ಬದುಕಿದ್ದಾಗ, ಪವಿತ್ರಾ ಲೋಕೇಶ್ ಅವರ ಕೈ ಅಡುಗೆಯನ್ನು ಇಷ್ಟ ಪಟ್ಟಿದ್ದಂತೆ. ಪವಿತ್ರಾ ಲೋಕೇಶ್ ಕೈ ರುಚಿ ಅವರ ಕುಟುಂಬಕ್ಕೆ ಇಷ್ಟ. ಹೀಗಾಗಿ ಪವಿತ್ರಾರನ್ನು ಎಲ್ಲರೂ ಒಪ್ಪಿಕೊಂಡಿದ್ದಕ್ಕೆ ಖುಷಿಯಾಗಿದೆ ಎಂದು ನರೇಶ್ ಸ್ಪಷ್ಟಪಡಿಸಿದ್ದರು.
ಇತ್ತೀಚೆಗೆ ನರೇಶ್ ಸಾವಿರ ಕೋಟಿ ಆಸ್ತಿಯ ಬಗ್ಗೆ ಪ್ರತಿಕ್ರಿಯಿಸಿದ್ದರು. ಅದು ಪಿತ್ರಾರ್ಜಿತವಾಗಿ ಬಂದ ಆಸ್ತಿ ಎಂದು ಹೇಳಿದ್ದರು. ಇದೇ ಆಸ್ತಿಗಾಗಿ ನರೇಶ್ ಜೊತೆ ನಟಿ ಪವಿತ್ರಾ ಲೋಕೇಶ್ ಸಂಬಂಧ ಬೆಳೆಸಿದ್ದಾರೆ ಅನ್ನೋ ಟೀಕೆ ವ್ಯಕ್ತವಾಗಿತ್ತು. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪವಿತ್ರಾ ಲೋಕೇಶ್ ಈ ಆರೋಪಗಳನ್ನು ತಳ್ಳಿ ಹಾಕಿದ್ದರು.


Click it and Unblock the Notifications











