'ಹನುಮಾನ್' ಚಿತ್ರದ ಪ್ರತಿ ಟಿಕೆಟ್‌ನಿಂದ 5 ರೂ. ದೇಣಿಗೆ; ಅಯೋಧ್ಯೆ ಶ್ರೀರಾಮ ಮಂದಿರ ಕೊಟ್ಟಿದ್ದೆಷ್ಟು ಕೋಟಿ?
ಸ್ಮಾಲ್ ಬಜೆಟ್ ಸಿನಿಮಾ ತೆಲುಗು ಪ್ಯಾನ್ ಇಂಡಿಯಾ ಸಿನಿಮಾ 'ಹನುಮಾನ್' ಬಾಕ್ಸಾಫೀಸ್ ಓಟ ಮುಂದುವರೆಸಿದೆ. ತೆಲುಗು ನಟ ತೇಜ ಸಜ್ಜಾ ನಟಿಸಿದ ಸೂಪರ್ ಹೀರೊಗೆ ಭಾರತದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ರಿಲೀಸ್ ಆಗಿ ಎರಡನೇ ವಾರಕ್ಕೆ ಕಾಲಿಟ್ಟಿದ್ದರೂ, ಬಾಕ್ಸಾಫೀಸ್ ಗಳಿಕೆಯಲ್ಲಿ ಹಿನ್ನೆಡೆ ಕಂಡಿಲ್ಲ.
'ಹನುಮಾನ್'ಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿಕ್ಕಿರೋ ರೆಸ್ಪಾನ್ಸ್‌ಗೆ ಸಿನಿಮಾ ಮಂದಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದೇ ಸಮಯದಲ್ಲೇ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಸಿದ್ಧತೆಗಳು ನಡೆಯುತ್ತಿವೆ. ಕಾಕತಾಳೀಯವೆಂಬಂತೆ ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆನೆ 'ಹನುಮಾನ್' ಸಿನಿಮಾ ಕೂಡ ರಿಲೀಸ್ ಆಗಿದೆ. ಇದು ಚಿತ್ರದ ಯಶಸ್ಸಿನ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿದ್ದಂತೂ ನಿಜ.

ಹೀಗಾಗಿ 'ಹನುಮಾನ್' ಚಿತ್ರತಂಡ ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ದೇಣಿಗೆ ನೀಡಲು ಮುಂದಾಗಿದೆ. ಇದೂವರೆಗೂ ಚಿತ್ರತಂಡ ಸುಮಾರು 53 ಲಕ್ಷದ 28 ಸಾವಿರದ 211 ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಅದರಲ್ಲಿ ಪ್ರತಿ ಟಿಕೆಟ್‌ನ 5 ರೂಪಾಯಿಯನ್ನು ದೇಣಿಯಾಗಿ ನೀಡುವುದಕ್ಕೆ ನಿರ್ಧಾರ ಮಾಡಿದೆ. ಈ ಮೂಲಕ ಸುಮಾರು 2 ಕೋಟಿ 66 ಲಕ್ಷದ 41 ಸಾವಿರದ 55 ರೂಪಾಯಿಯನ್ನು ದೇಣಿಗೆ ನೀಡಿದಂತಾಗಿದೆ.
'ಹನುಮಾನ್' ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಣಿಗೆ ನೀಡುತ್ತಿರೋದು ಇದೇ ಮೊದಲೇನೂ ಅಲ್ಲ. ಈ ಹಿಂದೆ 'ಹನುಮಾನ್' ಪ್ರೀಮಿಯರ್ ಮಾಡಿದ ಸಂದರ್ಭದಲ್ಲಿಯೂ ದೇಣಿಯನ್ನು ನೀಡಿದ್ದರು. ಆ ವೇಳೆ ಸುಮಾರು 2 ಲಕ್ಷದ 97 ಸಾವಿರದ 162 ಟಿಕೆಟ್ ಸೇಲ್ ಆಗಿತ್ತು. ಅದರಿಂದ ಸುಮಾರು 14 ಲಕ್ಷದ 85 ಸಾವಿರದ 810 ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದರು.

ನಾಳೆ (ಜನವರಿ 22) ಅಯೋಧ್ಯೆಯಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಗಳು ಕೂಡ ಆರಂಭ ಆಗಿವೆ. ಇದೇ ವೇಳೆ 'ಹನುಮಾನ್' ತಂಡ ತಮಗೆ ಸಿಕ್ಕಿದ ಯಶಸ್ಸನ್ನು ಸಂಭ್ರಮಿಸುತ್ತಿದೆ. ಇದೇ ವೇಳೆ ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಣಿ ನೀಡಿದ ಚಿತ್ರತಂಡದ ನಡೆಗೆ ನೆಟ್ಟಿಗರು ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.
ಜನವರಿ 12ರಂದು ತೆರೆಕಂಡಿದ್ದ 'ಹನುಮಾನ್' ಅನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ನಿನ್ನೆ 9ನೇ ದಿನವೂ ಸಿನಿಮಾ ಕಲೆಕ್ಷನ್ ಸ್ಟಡಿಯಾಗಿಯೇ ಇದೆ. ಎಲ್ಲಾ ಭಾಷೆಗಳಿಂದ ಭಾರತದಲ್ಲಿ ಸುಮಾರು 14.25 ಕೋಟಿ ರೂಪಾಯಿ (Nett) ಕಲೆಕ್ಷನ್ ಮಾಡಿದೆ. ಈ ಮೂಲಕ 'ಹನುಮಾನ್' 100 ಕೋಟಿ ಕ್ಲಬ್ ಸೇರಿದ್ದು, 114.10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯಾಗಿದೆ.
ಇನ್ನು 'ಹನುಮಾನ್' ಒಂದು ವಾರದಲ್ಲಿ 99.85 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಇದರಲ್ಲಿ ತೆಲುಗು 73.89 ಕೋಟಿ ರೂ., ಹಿಂದಿ 24.5 ಕೋಟಿ ರೂ. ತಮಿಳು 78 ಲಕ್ಷ ರೂ. ಕನ್ನಡ 52 ಲಕ್ಷ ರೂ. ಹಾಗೂ ಮಲಯಾಳಂನಲ್ಲಿ 16 ಲಕ್ಷ ರೂ. ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ವರದಿ ಮಾಡಿದ್ದಾರೆ. ಇಂದು (ಜನವರಿ 21) ಭಾನುವಾರ ಆಗಿರೋದ್ರಿಂದ ಸಿನಿಮಾದ ಕಲೆಕ್ಷನ್ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಯಿದೆ.


Click it and Unblock the Notifications











