"ಅಲ್ಲು ಅರ್ಜುನ್‌ಗೆ ಕೈ ಕಾಲು ಹೋಗಿದ್ಯಾ? ಯಾಕೆ ಅಷ್ಟು ಕಣ್ಣೀರು ಹಾಕಿದ್ರು?" ಸಿಎಂ ರೇವಂತ್ ರೆಡ್ಡಿ
'ಪುಷ್ಪ 2' ಸಿನಿಮಾ ಪ್ರೀಮಿಯರ್ ವೇಳೆ ಅವಘಡ ನಡೆದಿತ್ತು. ಸಿನಿಮಾ ನೋಡುವುದಕ್ಕೆ ಬಂದಿದ್ದ ಜನರ ಕಾಲ್ತುಳಿತಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು. ಹಾಗೂ ಆಕೆಯ ಮಗ ಗಂಭೀರವಾಗಿ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬಳಿಕ ಅಲ್ಲು ಅರ್ಜುನ್, ಥಿಯೇಟರ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವರ ವಿರುದ್ಧ ಪ್ರಕರಣವನ್ನು ಪೊಲೀಸರು ದಾಖಲಿಸಿ ಬಂಧಿಸಿದ್ದರು.
ಅಲ್ಲು ಅರ್ಜುನ್ ಬಂಧನ ರಾಜಕೀಯ ಪ್ರೇರಿತ ಎಂದು ಆರೋಪ ಮಾಡಲಾಗಿತ್ತು. ಸಿಎಂ ರೇವಂತ್ ರೆಡ್ಡಿ ವಿರುದ್ಧ ತೆಲುಗು ಚಿತ್ರರಂಗ ತಿರುಗಿಬಿದ್ದಿತ್ತು. ಅಲ್ಲು ಅರ್ಜುನ್ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಇದೇ ವಿಚಾರವನ್ನು ಎಂಎಲ್‌ಎ ಅಕ್ಬರುದ್ದೀನ್ ಒವೈಸಿ ಸದನದಲ್ಲಿ ಎತ್ತಿದ್ದರು. ಅದಕ್ಕೆ ಸಿಎಂ ರೇವಂತ್ ರೆಡ್ಡಿ ತೆಲುಗು ತಾರೆಯರಿಗೆ ಅವಮಾನವೀಯರಾಗಬೇಡಿ ಎಂದು ಹೇಳಿ ಆಕ್ರೋಶ ಹೊರಹಾಕಿದ್ದಾರೆ. ಸಿಎಂ ರೇವಂತ್ ರೆಡ್ಡಿ ಸದನದಲ್ಲಿ ಅಲ್ಲು ಅರ್ಜುನ್ ಪ್ರಕರಣದ ಕುರಿತು ಹೇಳಿದ್ದಿಷ್ಟು..

"ಆ ಸಿನಿಮಾ ನಟ ಒಬ್ಬ ಜೈಲಿಗೆ ಹೋಗಿ ಬಂದರೆ, ಸಿನಿಮಾದ ಪ್ರಮುಖರೆಲ್ಲರೂ ಆತನ ಮನೆಗೆ ಹೋಗಿ ಅಪಘಾತದಲ್ಲಿ ಕೈ ಕಾಲು ಹೋದವರಂತೆ ಕಣ್ಣೀರು ಹಾಕುತ್ತಿದ್ದಾರೆ. ಇದೇ ಸಿನಿಮಾದ ಪ್ರಮುಖರು ಒಬ್ಬರಾದರೂ ಆಸ್ಪತ್ರೆಗೆ ಹೋಗಿದ್ರಾ ಅಧ್ಯಕ್ಷರೇ? ಸಿನಿಮಾ ಮಂದಿಯನ್ನೇ ಕೇಳುತ್ತಿದ್ದೇನೆ. ಒಬ್ಬ ಹೆಣ್ಣು ಮಗಳು ಸತ್ತು ಹೋಗಿದ್ದು, ಆಕೆಯ ಮಗನ ಬ್ರೈನ್ ಡೆಡ್ ಆಗಿದ್ದು, ಇನ್ನೂ ಆಸ್ಪತ್ರೆಯಲ್ಲಿ ಕೋಮಾದಲ್ಲಿ ಇದ್ದಾರೆ. ಹೀಗಿರುವಾಗ ಇದೇ ಸಿನಿಮಾ ಮಂದಿ ನನಗೆ ಬೈಯ್ಯುತ್ತಾರೆ. ಆತನನ್ನು ಹೊಗಳುತ್ತಾರೆ. ಆತನ ಕಣ್ಣು ಹೋಗಿದೆಯಾ? ಕಾಲು ಹೋಗಿದೆಯಾ? ಕೈ ಹೋಗಿದೆಯಾ? ಕಿಡ್ನಿ ಹೋಗಿದೆಯಾ? ಏನಕ್ಕೆ ಅಷ್ಟೊಂದು ಪ್ರಶಂಸೆ ಮಾಡುತ್ತಾರೆ?"
"ಅಕ್ಬರುದ್ದೀನ್ ಒವೈಸಿ ಏನು ಈ ಪ್ರಕರಣವನ್ನು ಎತ್ತಿದ್ದಾರೋ ಅದಕ್ಕೆ ಹೇಳುತ್ತಿದ್ದೇನೆ. ಇದು ನಾಚಿಗೇಡಿನ ಸಂಗತಿ. ಆತನನ್ನು ಒಂದು ದಿನ ಪೊಲೀಸ್ ಸ್ಟೇಷನ್‌ಗೆ ಕರೆದುಕೊಂಡು ಹೋಗಿದ್ದಕ್ಕೆ ತಕ್ಷಣಕ್ಕೆ ಜಾಮೀನು ಕೊಟ್ಟುಬಿಟ್ಟರು. ರಾತ್ರಿ 12 ಗಂಟೆಗೆ ಪೋನ್ ಮಾಡಿ ಜೈಲಿನ ಗೇಟ್ ತೆಗೆದು ಅವನನ್ನು ಬಿಡು ಎಂದರು. ಅರೇ.. ಅನುಮತಿ ಎಲ್ಲಿದೆ? ನಾನು ಹೇಗೆ ಬಿಡಲಿ?"
"ಅವರು ಫಿಲ್ಮ್ ಸ್ಟಾರ್ ಬಿಟ್ಟು ಬಿಡು ಅಂತಾರೆ. ಅರೇ.. ಮಾರನೇ ದಿನ ನಾನು ಇದ್ದರೇ ತಾನೇ ಅವರನ್ನು ಬಿಡುವುದಕ್ಕೆ. ಮಧ್ಯರಾತ್ರಿಯಲ್ಲಿ ಆತನನ್ನು ಬಿಡುವುದಕ್ಕೆ ಕಾನೂನಿನಲ್ಲಿ ಅನುಮತಿ ಇದೆ ಅಂದರೆ ಹೇಳಿ. ನಾನು ಬಿಡುತ್ತೇನೆ. ಹೀಗಾಗಿ ಇದೇ ಸಿನಿಮಾ ಮಂದಿ ಆ ಮಗುವನ್ನು ನೋಡುವುದಕ್ಕೂ ಹೋಗಿಲ್ಲ. ಇದು ತುಂಬಾನೇ ವಿಷಾದ ಪಡುವ ಸಂಗತಿ."
"20 ವರ್ಷ ಅಧಿಕಾರ ನಡೆಸಿರುವ ಪೊಲಿಟಿಕಲ್ ಪಾರ್ಟಿ ಲೀಡರ್‌ಗಳು ಕೂಡ ಆತನನ್ನು ಹೇಗೆ ಅರೆಸ್ಟ್ ಮಾಡಿದೆ ಅಂತ ಅವಾಜ್ ಹಾಕುತ್ತಾರೆ. ಅರೇ ನಿಮ್ಮ ಸ್ನೇಹಿತರಾಗಿದ್ದರೆ ಕ್ಷಮಿಸಿಬಿಡಬೇಕಾ? ನನ್ನ ಸಹೋದರನಿಗೇ ಕ್ಷಮೆಯಿಲ್ಲ. ಇನ್ನು ನಿಮಗಾಗಿ ಹೇಗೆ ಕ್ಷಮೆ ಕೇಳಲಿ? ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಕೊಟ್ಟಿರುವ ಕಾನೂನಿನಂತೆ ನಾನು ಸರ್ಕಾರವನ್ನು ನಡೆಸುತ್ತೇನೆ."
"ಕೆಲವು ಪ್ರೈವೆಟ್ ವಿಜ್ಯೂವಲ್ಸ್ ಇದೆ. ಕೆಲವು ಪಬ್ಲಿಕ್ ವಿಜ್ಯೂವಲ್ಸ್ ಇದೆ. ಪಬ್ಲಿಕ್ ವಿಜ್ಯೂವಲ್ಸ್ ನಲ್ಲಿ ಅಭಿಮಾನಿಗಳಿಗೆ ಕೈ ಮುಗಿದಿದ್ದು, ಒಳಗೆ ಹೋಗುವಾಗ ಮಾಡಿದ್ದಾರೆ. ಹೊರಗೆ ಬರುವಾಗಲೂ ಕೈ ಮುಗಿದಿದ್ದಾರೆ. ಪೊಲೀಸರು ಹೊರಗೆ ಹೋಗುವಂತೆ ಹೇಳಿದ್ದು ಎಲ್ಲವೂ ಸತ್ಯ. ಆದರೂ ಅವರಿಗೆ ಜಾಮೀನು ಸಿಕ್ಕಿದೆ. ನಾವು ಕಾನೂನನ್ನು ಒಪ್ಪಿಕೊಳ್ಳಲೇ ಬೇಕು. ನಾನು ದೊಡ್ಡ ದೊಡ್ಡ ಸಿನಿಮಾ ತಾರೆಯರು ಯಾರಿದ್ದಾರೆ ಅವರಿಗೆ ಹೀಗೆ ಅಮಾನವೀಯರಾಗಿ ಇರಬೇಡಿ ಎಂದು ಹೇಳುತ್ತೇನೆ." ಎಂದು ಸದನದಲ್ಲಿ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹೇಳಿದ್ದಾರೆ.


Click it and Unblock the Notifications











