ಡ್ರಗ್ಸ್ ಪ್ರಕರಣದಲ್ಲಿ ಪವನ್ ಕಲ್ಯಾನ್ ಸಿನಿಮಾದ ನಿರ್ದೇಶಕ ಕ್ರಿಶ್; ಡಿಸಿಪಿ ಹೇಳಿದ್ದೇನು?
ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ದೊಡ್ಡ ಮಟ್ಟಕ್ಕೆ ಸದ್ದು ಮಾಡುತ್ತಿದೆ. ರಾಡಿಸನ್ ಹೋಟೆಲ್ ಡ್ರಗ್ ಪ್ರಕರಣದಲ್ಲಿ ಒಂಬತ್ತು ಮಂದಿಯನ್ನು ಈಗಾಗಲೇ ಬಂಧಿಸಿರುವುದ ತೆಲುಗು ಚಿತ್ರರಂಗದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಅದಕ್ಕೆ ಕಾರಣ ಈಗಾಗಲೇ ಪ್ರಕರಣ ದಾಖಲಿಸಿರುವ 9 ಮಂದಿಯಲ್ಲಿ ಟಾಲಿವುಡ್‌ನ ಟಾಪ್ ಡೈರೆಕ್ಟರ್ ಕ್ರಿಶ್ ಕೂಡ ಇದ್ದಾರೆ. ಹೀಗಾಗಿ ಟಾಲಿವುಡ್‌ನಲ್ಲಿ ಮತ್ತೆ ಡ್ರಗ್ಸ್ ಕೇಸ್ ಸದ್ದು ಮಾಡುತ್ತಿದೆ.
ಈ ಡ್ರಗ್ಸ್ ಪ್ರಕರಣದಲ್ಲಿ ಟಾಲಿವುಡ್ ಹಲವು ಸೆಲೆಬ್ರಿಟಿಗಳು ಆರೋಪಿಗಳಾಗಿದ್ದಾರೆ ಎಂಬ ಸುದ್ದಿಯೂ ಓಡಾಡುತ್ತಿದೆ. ಅದರಲ್ಲೂ ತೆಲುಗಿನ ಟಾಪ್ ಡೈರೆಕ್ಟರ್ ಕ್ರಿಶ್ ಜಗರ್ಲಮುಡಿ 8ನೇ ಆರೋಪಿ ಎನ್ನಲಾಗಿದೆ. ಈ ಬಗ್ಗೆ ತೆಲಂಗಾಣದ ಡಿಸಿಸಿ ವಿನೀತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಡ್ರಗ್ಸ್ ಕೇಸ್‌ನಲ್ಲಿ ಯಾರೆಲ್ಲ ಇದ್ದಾರೆ? ತನಿಖೆ ಯಾವ ಹಂತದಲ್ಲಿದೆ? ಇಂತಹದ್ದೇ ಒಂದಿಷ್ಟು ವಿಷಯಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಪೊಲೀಸರು ಈಗಾಗಲೇ ರಾಡಿಸನ್ ಡ್ರಗ್ಸ್ ಕೇಸ್‌ನಲ್ಲಿ ಪೆಡ್ಲರ್ ಅಬ್ಬಾಸ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಬ್ಬಾಸ್‌ನನ್ನು ವಿಚಾರಣೆಗೆ ಒಳಪಡಿಸಿದ್ದು, ಅಬ್ಬಾಸ್ ಇದೂವರೆಗೂ ವಿವೇಕಾನಂದ ಎಂಬುವವರಿಗೆ 10 ಬಾರಿ ಕೊಕೇನ್ ತಲುಪಿಸಿದ್ದಾನೆ ಎನ್ನಲಾಗಿದೆ. ಈ ಡ್ರಗ್ಸ್ ಪ್ರಕರಣದ ಆರೋಪಿಗಳಾದ ಗಣೇಶ್ ಕಲ್ಲಾಪು, ಶ್ವೇತಾ ಹಾಗೂ ಸಂದೀಪ್ ತಲೆ ಮರೆಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇನ್ನೊಬ್ಬ ಆರೋಪಿ ಚರಣ್ ಸದ್ಯ ಬೆಂಗಳೂರಿನಲ್ಲಿದ್ದಾರೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಟಾಲಿವುಡ್‌ನಲ್ಲಿ ನಿರ್ದೇಶಕ ಕ್ರಿಶ್ ಜಗರ್ಲಮುಡಿ ಕೂಡ ಈ ಪಾರ್ಟಿಯಲ್ಲಿ ಭಾಗಿಯಾಗಿದ್ದರು ಎಂದು ಡಿಸಿಪಿ ತಿಳಿಸಿದ್ದಾರೆ. ಆದರೆ, ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಿಶ್ ಡ್ರಗ್ಸ್ ಸೇವನೆ ಮಾಡಿದ್ದಾರೋ ಇಲ್ಲವೋ ಅನ್ನೋದನ್ನು ತಿಳಿಸುವುದಾಗಿ ಹೇಳಿದ್ದಾರೆ.
ವಿವೇಕಾನಂದ, ಕೇದಾರ್ ಮತ್ತು ನಿರ್ಭಯ್ ಕೊಕೇನ್ ಸೇವಿಸಿರುವುದು ಖಚಿತವಾಗಿದೆ ಎಂದು ಡಿಸಿಪಿ ವಿನೀತ್ ಬಹಿರಂಗಪಡಿಸಿದ್ದಾರೆ. ಆದರೆ, ಉಳಿದವರು ಡ್ರಗ್ಸ್ ತೆಗೆದುಕೊಂಡಿದ್ದಾರೋ ಇಲ್ಲವೋ ಅನ್ನೋದು ಇನ್ನಷ್ಟೆ ತಿಳಿಯಬೇಕಿದೆ. ಕ್ರಿಶ್ ಜೊತೆಗೆ ತಲೆಮರೆಸಿಕೊಂಡಿರುವ ಲಿಶಿ ಗಣೇಶ್ ಕಲ್ಲಾಪು, ಶ್ವೇತಾ ಮತ್ತು ಸಂದೀಪ್ ರಕ್ತ ಹಾಗೂ ಮೂತ್ರ ಪರೀಕ್ಷೆಗೆ ಒಳಗಾಗಬೇಕಿದೆ. ಆ ಬಳಿಕ ಅವರು ಡ್ರಗ್ಸ್ ತೆಗೆದುಕೊಂಡಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಗೊತ್ತಾಗಲಿದೆ ಎಂದು ಡಿಸಿಪಿ ಹೇಳಿದ್ದಾರೆ.
ಇದೇ ವೇಳೆ ಈ ತನಿಖೆಯಲ್ಲಿ ರಕ್ತ ಮತ್ತು ಮೂತ್ರ ಪರೀಕ್ಷೆಯ ಫಲಿತಾಂಶ ಬಂದ ಮೇಲೆ ನಿರ್ದೇಶಕ ಕ್ರಿಶ್ ಡ್ರಗ್ಸ್ ಸೇವಿಸಿದ್ದಾರೆಯೇ ಅಥವಾ ಇಲ್ಲವೇ ಎಂಬು ಗೊತ್ತಾಗಲಿದೆ. ಪವನ್ ಕಲ್ಯಾಣ್ ನಟಿಸುತ್ತಿರುವ 'ಹರಿ ಹರ ವೀರ ಮಲ್ಲು' ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ 'ಮಣಿಕರ್ಣಿಕಾ', 'ಗೌತಮಿಪುತ್ರ ಶಾತಕರ್ಣಿ' ಅಂತಹ ಬಿಗ್ ಬಜೆಟ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.


Click it and Unblock the Notifications











