CCTV Video: ಹೆಲ್ಮೆಟ್ ಧರಿಸಿದ್ದರಿಂದಲೇ ಸಾಯಿ ಧರಮ್ ತೇಜ ಪ್ರಾಣ ರಕ್ಷಣೆ
ಶುಕ್ರವಾರ ರಾತ್ರಿ ಸ್ಪೋರ್ಟ್ಸ್ ಬೈಕ್‌ನಲ್ಲಿ ತೆರಳುತ್ತಿದ್ದಾಗ ಸ್ಕಿಡ್ ಆಗಿ ಅಪಘಾತ ಸಂಭವಿಸಿದ್ದು, ನಟ ಸಾಯಿ ಧರಮ್ ತೇಜ ಗಂಭೀರವಾಗಿ ಗಾಯಗೊಂಡಿದ್ದಾರೆ, ತಲೆಗೆ, ಎದೆ ಭಾಗಕ್ಕೆ ಹಾಗೂ ಇನ್ನಿತರ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು ಆತಂಕ ಸೃಷ್ಟಿಸಿತ್ತು. ಕೂಡಲೇ ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಸಾಯಿ ಧರಮ್ ತೇಜ ಅವರ ಅಪಘಾತದ ಫೋಟೋಗಳು ಮತ್ತು ಸಿಸಿಟಿವಿ ದೃಶ್ಯ ಭಯ ಹುಟ್ಟಿಸುವಂತಿದ್ದು, ಅಭಿಮಾನಿಗಳು ಸಹಜವಾಗಿ ಆತಂಕಗೊಂಡಿದ್ದರು. ನಂತರ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ''ಸಾಯಿ ಧರಮ್ ತೇಜ್ ಜೀವಕ್ಕೆ ಅಪಾಯವಿಲ್ಲ, ಅವರು ಔಟ್ ಆಫ್ ಡೇಂಜರ್'' ಎಂದು ತಿಳಿಸಿದ್ದರು.
ಸಾಯಿ ಧರಮ್ ತೇಜ ಅವರ ಬೈಕ್ ಅಪಘಾತದ ಸಿಸಿಟಿವಿ ದೃಶ್ಯಗಳು ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೇಗವಾಗಿ ಬರುತ್ತಿದ್ದ ಸಾಯಿ ಧರಮ್ ಯಾರಿಗೂ ಡಿಕ್ಕಿ ಹೊಡೆಯದೆ, ಸ್ಕಿಡ್ ಆಗಿ ಬಿದ್ದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆಳಗೆ ಬಿದ್ದ ವೇಗ ತುಂಬಾ ದೂರ ಉರುಳಿಕೊಂಡು ಹೋಗಿರುವುದು ಈ ವಿಡಿಯೋದಲ್ಲಿ ಕಾಣುತ್ತಿದೆ. ಅತಿಯಾದ ವೇಗ ಈ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ಹೇಳಲಾಗುತ್ತಿದೆ. ಆದರೆ, ಹೆಲ್ಮೆಟ್ ಧರಿಸಿದ್ದ ಕಾರಣ ಸಾಯಿ ಧರಮ್ ತೇಜ ಪ್ರಾಣಕ್ಕೆ ಯಾವುದೇ ಅಪಾಯ ಆಗಿಲ್ಲ ಎನ್ನುವುದು ಸಮಾಧಾನಕರ ಸಂಗತಿ.
ವಿಡಿಯೋ ಮೂಲ: MIRCHI19 ಟ್ವಿಟ್ಟರ್
ಸಾಯಿ ಧರಮ್ ತೇಜ ಅಪಘಾತ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಮೆಗಾಸ್ಟಾರ್ ಚಿರಂಜೀವಿ, ನಟ-ರಾಜಕಾರಣಿ ಪವನ್ ಕಲ್ಯಾಣ್, ನಿರ್ಮಾಪಕ ಅಲ್ಲು ಅರವಿಂದ್, ವರುಣ್ ತೇಜ, ನಿಹಾರಿಕ ಸೇರಿದಂತೆ ಮೆಗಾ ಕುಟುಂಬದ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ಮುಂದೆ ಓದಿ...

ಕೇಸ್ ದಾಖಲಿಸಿದ ಪೊಲೀಸರು
ಇನ್ನು ರಾಯದುರ್ಗ ಪೊಲೀಸ್ ಠಾಣೆಯಲ್ಲಿ ನಟ ಸಾಯಿ ಧರಮ್ ತೇಜ ವಿರುದ್ಧ ಕೇಸ್ ದಾಖಲಾಗಿದೆ. ಅತಿಯಾದ ವೇಗದ ಚಾಲನೆ, ಚಾಲನೆಯಲ್ಲಿ ನಿರ್ಲಕ್ಷ್ಯ ಆಧಾರದ ಮೇಲೆ ದೂರು ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತ ಸಂಭವಿಸಿದ ನಂತರ ಸಾಯಿ ಧರಮ್ ತೇಜ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು ಎಂಬ ಮಾಹಿತಿ ಇದೆ. ಹಾಗಾಗಿ, ಗಾಯ ಗಂಭೀರತೆ ಬಗ್ಗೆ ಹೆಚ್ಚು ಆತಂಕ ಮೂಡಿತ್ತು. ಸಾಯಿ ಧರಮ್ ಯೋಗಕ್ಷೇಮ ವಿಚಾರಿಸಿ ಅಲ್ಲು ಅರವಿಂದ್, ಪವನ್ ಕಲ್ಯಾಣ್, ಚಿರಂಜೀವಿ ಎಲ್ಲರೂ 'ನಟ ಆರಾಮಾಗಿದ್ದಾರೆ, ಶೀಘ್ರದಲ್ಲಿ ಗುಣಮುಖ ಆಗ್ತಾರೆ' ಎಂದಷ್ಟೇ ಹೇಳಿದ್ದರು. ಇನ್ನು ಶನಿವಾರ ಬೆಳಗ್ಗೆ ಅಪೋಲೋ ಆಸ್ಪತ್ರೆ ಕಡೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಯಾರು ಈ ಸಾಯಿ ಧರಮ್ ತೇಜ?
ಸಾಯಿ ಧರಮ್ ತೇಜ ಯಾರೆಂದು ಕರ್ನಾಟಕದಲ್ಲಿ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಮೆಗಾ ಕುಟುಂಬದ ಸದಸ್ಯ ಎನ್ನುವುದು ಗೊತ್ತಿದ್ದರೂ ಚಿರಂಜೀವಿ ಮತ್ತು ಸಾಯಿ ಧರಮ್ ಸಂಬಂಧ ಏನು ಎನ್ನುವುದು ತುಂಬಾ ಜನರಿಗೆ ತಿಳಿಯದ ವಿಚಾರ. ಅಂದ್ಹಾಗೆ, ಮೆಗಾಸ್ಟಾರ್ ಚಿರಂಜೀವಿ ಸಹೋದರಿ ವಿಜಯ ದುರ್ಗ ಅವರ ಮಗ ಸಾಯಿ ಧರಮ್ ತೇಜ. ಇತ್ತೀಚಿಗಷ್ಟೆ ಉಪ್ಪೇನಾ ಎಂಬ ಸಿನಿಮಾ ಬಂದು ದೊಡ್ಡ ಹಿಟ್ ಆಯಿತು. ಆ ಚಿತ್ರದಲ್ಲಿ ನಾಯಕನಾಗಿ ನಟಿಸಿರುವ ವೈಷ್ಣವ್ ತೇಜ್, ಸಾಯಿ ಧರಮ್ ತೇಜ ಸಹೋದರರು.

2014ರಲ್ಲಿ ಚೊಚ್ಚಲ ಸಿನಿಮಾ
2014ರಲ್ಲಿ ಚಿತ್ರರಂಗ ಪ್ರವೇಶಿಸಿದ ಸಾಯಿ ಧರಮ್ ತೇಜ 'ಪಿಲ್ಲಾ ನುವ್ವು ಲೇನಿ ಜೀವಿತಂ' ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದರು. ಆ ನಂತರ ರೇ, ಸುಬ್ರಮಣ್ಯಂ ಫಾರ್ ಸೇಲ್, ಸುಪ್ರೀಂ, ತಿಕ್ಕ, ವಿನ್ನರ್, ಜವಾನ್, ಇಂಟಿಲಿಜೆಂಟ್, ತೇಜ್ ಐ ಲವ್ ಯೂ, ಚಿತ್ರಲಹರಿ, ಪ್ರತಿ ರೋಜು ಪಂಡಗೆ, ಸೋಲೋ ಬ್ರಾಥುಕೆ ಸೋ ಬೆಟರ್ ಅಂತಹ ಚಿತ್ರಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ 'ರಿಪಬ್ಲಿಕ್' ಎನ್ನುವ ಚಿತ್ರದಲ್ಲಿ ಸಾಯಿ ಧರಮ್ ತೇಜ ನಟಿಸುತ್ತಿದ್ದಾರೆ.

ಮಾಹಿತಿ ನೀಡಿದ ಮಾಧಪುರ್ ಡಿಜಿಪಿ
ಅಪಘಾತದ ಕುರಿತು 'ದಿ ಹಿಂದೂ' ಪತ್ರಿಕೆಗೆ ಮಾಧಪುರ್ ಡಿಜಿಪಿ ಎಂ ವೆಂಕಟೇಶ್ವರಲು ಮಾಹಿತಿ ನೀಡಿದ್ದು, ''ಈ ಅಪಘಾತ ಶುಕ್ರವಾರ ರಾತ್ರಿ ಸುಮಾರು 8.30ರ ಸಮಯಕ್ಕೆ ಸಂಭವಿಸಿದೆ. ಐಟಿ ಕಾರಿಡಾರ್‌ನಲ್ಲಿ ನಾಲೆಡ್ಜ್ ಸಿಟಿ ಹತ್ತಿರ ನಟ ತನ್ನ ಟ್ರಯಂಫ್ ಬೈಕ್ ನಲ್ಲಿ ಜುಬಿಲಿ ಹಿಲ್ಸ್ ನಿಂದ ಗಚಿಬೌಲಿ ಕಡೆಗೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬೈಕ್ ರಸ್ತೆಯಲ್ಲಿ ಸ್ಕಿಡ್ ಆಗಿದೆ. ಬೈಕ್‌ನಲ್ಲಿ ನಟನರೊಬ್ಬರೆ ಹೋಗುತ್ತಿದ್ದರಾ ಅಥವಾ ಸ್ನೇಹಿತರ ತಂಡವೂ ಇತ್ತಾ ಎನ್ನುವುದರ ಬಗ್ಗೆ ಸಿಸಿಟಿವಿ ದೃಶ್ಯಗಳಲ್ಲಿ ಪರೀಕ್ಷಿಸಲಾಗುತ್ತಿದೆ'' ಎಂದು ಡಿಜಿಪಿ ಎಂ ವೆಂಕಟೇಶ್ವರಲು ಮಾಹಿತಿ ನೀಡಿದ್ದಾರೆ.


Click it and Unblock the Notifications