ತೆಲುಗಿನ ಸತ್ಯದೇವ್ ಹೊಸ ಸಿನಿಮಾ 'ಸಮವರ್ತಿ'; ಟೈಟಲ್ ಜೊತೆ ಹೊರಬಿತ್ತು ಫಸ್ಟ್ ಲುಕ್
ಟಾಲಿವುಡ್‌ನಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ಸತ್ಯದೇವ್. ಈಗಾಗಲೇ ಇಂತಹ 15 ಸಿನಿಮಾಗಳಲ್ಲಿ ನಟಸಿದ್ದು, ಸಿನಿಮಾ ಪ್ರೇಮಿಗಳಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಈಗ ಮತ್ತೊಂದು ವಿಭಿನ್ನ ಸಿನಿಮಾಗೆ ಕೈ ಹಾಕಿದಂತೆ ಇದೆ. ಸತ್ಯದೇವ್ ಅವರ 16ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಟೈಟಲ್ ನೋಡಿನೇ ಅವರ ಫ್ಯಾನ್ಸ್ ಮತ್ತೊಂದು ಎಕ್ಸ್‌ಪೆರಿಮೆಂಟ್ ಸಿನಿಮಾ ಅಂತ ಗೆಸ್ ಮಾಡಿದಂತಿದೆ.
ಅಂದ್ಹಾಗೆ ಸತ್ಯದೇವ್ ದೇವ್ ನಟಿಸುತ್ತಿರುವ 16ನೇ ಸಿನಿಮಾದ ಟೈಟಲ್ 'ಸಮವರ್ತಿ'. ಈ ಸಿನಿಮಾದ ಟೈಟಲ್ ಜೊತೆಗೆ ಫಸ್ಟ್ ಲುಕ್ ಅನ್ನು ಸಿನಿಮಾ ತಂಡ ಅನಾವರಣ ಮಾಡಿದೆ. ಫಸ್ಟ್ ಲುಕ್ ಅಂತೂ ಸಖತ್ ಇಂಟ್ರೆಸ್ಟಿಂಗ್ ಆಗಿದೆ. ಟೈಟಲ್ ಜೊತೆ ಜೊತೆಗೆ ಫೋಟೊ ಕೂಡ ಅಷ್ಟೇ ಗಮನ ಸೆಳೆಯುತ್ತಿದೆ. ಅದರಲ್ಲೂ ಫಸ್ಟ್ ಲುಕ್‌ನಲ್ಲಿ ಸತ್ಯದೇವ್ ಹೆಡ್ ಫೋನ್ ಧರಿಸಿ ರಡಗ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೊಡಲಿ ಹಾಗೂ ಚಾಕು ಹಿಡಿದ ದಾಳಿಕೋರರು ಅವರ ಕಡೆಗೆ ನುಗ್ಗಿದ್ದು, ಈ ಪೋಸ್ಟರ್‌ನಲ್ಲಿ ನೋಡುಬಹುದು.

ಹೀಗಾಗಿ ಈ ಪೋಸ್ಟರ್ ಸಿನಿಪ್ರೇಮಿಗಳ ಗಮನ ಸೆಳೆದಿದ್ದು, ಮೂಲಗಳ ಪ್ರಕಾರ ಈ ಸಿನಿಮಾ ಎಕಾಲಜಿಕಲ್ ಆಕ್ಷನ್ ಥ್ರಿಲ್ಲರ್ ಎನ್ನಲಾಗಿದೆ. ಹೀಗಾಗಿ ಸಿನಿ ಪ್ರೇಮಿಗಳು ಜಬರ್ದಸ್ತ್ ಆಕ್ಷನ್ ಸಿನಿಮಾವನ್ನು ನಿರೀಕ್ಷೆ ಮಾಡಬಹುದು. ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ಟೈಟಲ್ ಹಾಗೂ ಪೋಸ್ಟರ್ ರಿಲೀಸ್ ಬಳಿಕ ಕುತೂಹಲ ಇನ್ನೂ ದುಪ್ಪಟ್ಟಾಗಿದೆ.
ತೆಲುಗಿನ 'ಸಮವರ್ತಿ' ಸಿನಿಮಾಗೆ ಅಜಯ್ ನಾಗ್ ವಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ರುದ್ರ ಪಿಕ್ಚರ್ಸ್ ಹಾಗೂ ಪಂಚಭೂತ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಶಿವಚರಣ್ ರೆಡ್ಡಿ ಜಕ್ಕಿಡಿ ಮತ್ತು ಶಶಿಧರ್ ರೆಡ್ಡಿ ಪದಮತಿ ನಿರ್ಮಾಣ ಮಾಡುತ್ತಿದ್ದಾರೆ. ತೆಲುಗು ಜೊತೆಗೆ ಕನ್ನಡ, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ 'ಸಮವರ್ತಿ' ಸಿನಿಮಾವನ್ನು ಏಕಕಾಲಕ್ಕೆ ರಿಲೀಸ್ ಮಾಡುವ ಆಲೋಚನೆಯಲ್ಲಿ ಚಿತ್ರತಂಡವಿದೆ.
ಇಕೋಲಾಜಿಕಲ್ ಆಕ್ಷನ್ ಥ್ರಿಲ್ಲರ್ ಕಥಾಹಂದರ ಆಗಿರೋದ್ರಿಂದ 'ಸಮವರ್ತಿ' ಸಾಹಸ ಸಿನಿಮಾಗಳ ಪ್ರಿಯರಿಗೆ ಇಷ್ಟ ಆಗಲಿದೆ. ಅಷ್ಟೇ ಅಲ್ಲದೆ, ಈ ಸಿನಿಮಾ ಸತ್ಯದೇವ್ ಕರಿಯರ್‌ನ ಹೈ ವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಲಿದೆ. ಇನ್ನು ಈ ಸಿನಿಮಾದಲ್ಲಿ ಸತ್ಯದೇವ್ ಕಾಂಚಾರಣ ಜೊತೆಗೆ ದಿಲೇಶ್ ಪೋಥನ್, ರಾಜೀವ್ ಕನಕಲಾ, ಗನವಿ ಲಕ್ಷ್ಮಣ್, ರವೀಂದ್ರ ವಿಜಯ್, ಮೋಹನ್ ಭಗತ್ ಮತ್ತು ಇತರರು ತಾರಾಬಳಗದಲ್ಲಿದ್ದಾರೆ.
ಸತ್ಯದೇವ್ ಈ ಹಿಂದೆ ಡಾಲಿ ಧನಂಜಯ್ ಜೊತೆ 'ಜೀಬ್ರಾ' ಸಿನಿಮಾದಲ್ಲಿ ನಟಿಸಿದ್ದರು. ಈ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದರು. ಆ ಬಳಿಕ ವಿಜಯ್ ದೇವರಕೊಂಡ ನಟನೆಯ 'ಕಿಂಗ್‌ಡಮ್' ಹಾಗೂ 'ಡ್ರೈವ್' ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದರೊಂದಿಗೆ 'ರಾವ್ ಬಹದ್ದೂರ್','ಫುಲ್ ಬ್ಯಾಟಲ್', 'ಗರುಡ ಚಾಪ್ಟರ್ 1' ಸಿನಿಮಾಗಳು ಕೈಯಲ್ಲಿವೆ. ಈಗ ಮತ್ತೊಂದು ಸಿನಿಮಾ ಅನೌನ್ಸ್ ಆಗಿದೆ.
ಕಲಾ ನಿರ್ದೇಶಕದ ಜವಾಬ್ದಾರಿಯನ್ನು ಮಾಂಡ್ರು ರವಿಕುಮಾರ್ ಹೊತ್ತಿದ್ದು, ಪ್ರಿಯಾಂಕಾ ರೆಬೆಕಾ ಶ್ರೀನಿವಾಸ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದು, ಉಲ್ಲಾಸ್ ಹೈದೂರ್ ಪ್ರೊಡಕ್ಷನ್ ಡಿಸೈನ್ ಅನ್ನು ಮಾಡುತ್ತಿದ್ದಾರೆ. ಆದಿತ್ಯ ತಿವಾರಿ ಸಂಕಲನ, ಹರ್ಷ ಮಲ್ಲಿಕಾರ್ಜುನ್, ದೇವ್ ದೀಪ್ ಗಂಡಿಕುಂದು ಕ್ಯಾಮರಾ ವರ್ಕ್ ಮಾಡುತ್ತಿದ್ದರೆ, ಸಿಂಜಿತ್ ಯರ್ರಮಿಲ್ಲಿ ಟ್ಯೂನ್ ಅನ್ನು ಹಾಕುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ.


Click it and Unblock the Notifications
