"ಆ ವ್ಯಕ್ತಿಯ ಉದ್ದೇಶವೇನು ಅನ್ನೋದು ಮೊದಲ 3 ನಿಮಿಷದಲ್ಲಿ ತಿಳಿದುಬಿಡುತ್ತೆ"; ತೆಲುಗು ನಟಿ ಅನಸೂಯಾ
ಚಿತ್ರರಂಗದಲ್ಲಿರೋ ಕಾಸ್ಟಿಂಗ್ ಕೌಚ್ ಬಗ್ಗೆ ಈಗ ಹಿಂಜರಿಕೆಯಿಲ್ಲ. ಈ ಹಿಂದೆ ನಟಿಯರು, ತಂತ್ರಜ್ಞರು ಮಾತಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ. ಮೀಟೂ ಪ್ರಕರಣದ ಬಳಿಕ ನಟಿಯರು ಓಪನ್ ಆಗಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತಾಡುತ್ತಿದ್ದಾರೆ. ತಮಗಾದ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಕೆಲವರು ಇಂತಹ ಸಂದರ್ಭವನ್ನು ಹೇಗೆ ಎದುರಿಸಿದ್ದೇವೆ ಅನ್ನೋದನ್ನು ಹೇಳಿಕೊಳ್ಳುತ್ತಿದ್ದಾರೆ.
ಟಾಲಿವುಡ್ ನಟಿ ಹಾಗೂ ಸ್ಟಾರ್ ನಿರೂಪಕಿ ಅನಸೂಯಾ ಭಾರದ್ವಾಜ್ ಇತ್ತೀಚೆಗೆ ವಿವಾದಗಳಿಂದ ಸುದ್ದಿಯಲ್ಲಿದ್ದಾರೆ. ತೆಲುಗಿನ ಜಬರ್ದಸ್ತ್ ರಿಯಾಲಿಟಿ ಶೋ ಮೂಲಕ ನಿರೂಪಕರಾಗಿ ಜನಪ್ರಿಯತೆ ಗಳಿಸಿದ್ದರು. ಬಳಿಕ ನಿರೂಪಣೆಗೆ ಬ್ರೇಕ್ ಹಾಕಿ, ಕೇವಲ ನಟನೆ ಮಾತ್ರ ಮಾಡುವುದಾಗಿ ಹೇಳಿಕೊಂಡಿದ್ದರು. ಸದ್ಯ ಯಾವುದೇ ರಿಯಾಲಿಟಿ ಶೋನಲ್ಲಿ ಅನಸೂಯಾ ನಿರೂಪಣೆ ಮಾಡುತ್ತಿಲ್ಲ.

'ಪುಷ್ಪ' ಸಿನಿಮಾದಿಂದ ನಟಿಸುತ್ತಿದ್ದಂತೆ ಅನಸೂಯಾ ಭಾರದ್ವಾಜ್‌ಗೆ ಅವಕಾಶಗಳು ಸಿಗುವುದಕ್ಕೆ ಆರಂಭ ಆಗಿವೆ. ಟಾಲಿವುಡ್‌ನ ಪೋಷಕ ಪಾತ್ರಗಳಲ್ಲಿ ಅನಸೂಯಾ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ ನಟಿಸಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಪ್ಯಾನ್ ಇಂಡಿಯಾ ಸಿನಿಮಾ 'ಪುಷ್ಪ 2'ನಲ್ಲೂ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿ ಅನಸೂಯಾ ಭಾರದ್ವಾಜ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಅನಸೂಯಾಗೆ ವಿವಾದಗಳು ಹೊಸದೇನೂ ಅಲ್ಲ. ಕಿರುತೆರೆಯಲ್ಲಿ ನಿರೂಪಣೆ ಮಾಡುವಾಗಲೂ ಹಾಟ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆಗ ವೀಕ್ಷಕರ ಟೀಕೆಗೆ ಗುರಿಯಾಗುತ್ತಿದ್ದರು. ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ಮಾಡಿಕೊಂಡ ವಿವಾದಗಳಿಂದಲೂ ಸುದ್ದಿಯಲ್ಲಿದ್ದರು. ಇಷ್ಟೆಲ್ಲ ಆದ ಬಳಿಕ ವಿವಾದಗಳಿಂದ ಕೊಂಚ ಮಟ್ಟಿಗೆ ದೂರವಿದ್ದಾರೆ. ಈ ಖಡಕ್ ನಟಿಗೆ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅನುಭವ ಆಗಿಲ್ಲವೇ? ಅನ್ನುವ ಪ್ರಶ್ನೆಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದ್ದಾರೆ.

ಕಾಸ್ಟಿಂಗ್ ಕೌಚ್ ಅನುಭವ ತಮಗೂ ಆಗಿದೆ ಅನ್ನೋದನ್ನು ಅನಸೂಯಾ ಭಾರದ್ವಾಜ್ ಹೇಳಿಕೊಂಡಿದ್ದು, ಇದರಿಂದ ನಾಜೂಕಾಗಿ ಪಾರಾಗಿದ್ದೇನೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಅಂತಹ ಕಷ್ಟಕರ ಸಂದರ್ಭಗಳನ್ನು ಹೇಗೆ ಎದುರಿಸಬೇಕು ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಸಿನಿಮಾ ವಿಷಯಕ್ಕೆ ಯಾರನ್ನಾದರೂ ಭೇಟಿ ಆದಾಗ, ಅವರ ಉದ್ದೇಶವೇನು ಅನ್ನೋದು ಮೊದಲ ಮೂರು ನಿಮಿಷಗಳಲ್ಲೇ ಗೊತ್ತಾಗುತ್ತೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಇಷ್ಟೇ ಅಲ್ಲದೆ ಇಂತಹ ಸಮಯದಲ್ಲಿ ಮುಜುಗರ ಪಡುವಂತಹ ಸ್ಥಿತಿ ಎದುರಾದರೆ, ತಕ್ಷಣವೇ ವಿಷಯ ಬದಲಿಸಿ, ಗಂಡ ಹಾಗೂ ಮಕ್ಕಳ ಬಗ್ಗೆ ಮಾತಾಡುವುದಕ್ಕೆ ಶುರು ಮಾಡುತ್ತಾರಂತೆ. ಚಿತ್ರರಂಗದಲ್ಲಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅದು ನಿಲ್ಲುವುದಿಲ್ಲ. ಹಾಗಾಗಿ ಯಾವುದೋ ಉದ್ದೇಶದಿಂದ ನಿಮ್ಮನ್ನು ಮಾತಾಡಿಸುವವರೊಂದಿಗೆ ಸ್ವಾಭಾವಿಕವಾಗಿ ನಟಿಸಬೇಕು ಎಂದು ಅನಸೂಯಾ ಹೇಳಿಕೊಂಡಿದ್ದಾರೆ.
ಅನಸೂಯಾ ಭಾರತದ್ವಾಜ್ ನೀಡಿದ ಸಲಹೆಗಳಿಗೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ನಿರೂಪಕಿಯಿಂದ ಕಲಿಯುವ ವಿಷಯ ಬಹಳಷ್ಟಿದೆ. ಅದನ್ನು ಕಲಿತರೆ, ಮೋಸ ಹೋಗುವ ಸಂಭವ ಕಡಿಮೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











