"ಡ್ರಗ್ಸ್ ಸೇವಿಸಿಲ್ಲ ಎಂದರೂ ಯಾರೂ ಕೇಳಲಿಲ್ಲ.. ಸಾಯಬೇಕು ಅಂದುಕೊಂಡಿದ್ದೆ" ನಟಿ ಹೇಮಾ
ಟಾಲಿವುಡ್‌ನ ಜನಪ್ರಿಯ ಪೋಷಕ ನಟಿ ಹೇಮಾ ಹಲವು ವರ್ಷಗಳಿಂದ ತೆಲುಗು ಮಂದಿಯನ್ನು ತಮ್ಮ ನಟನೆಯಿಂದ ರಂಜಿಸುತ್ತಿದ್ದಾರೆ. ತೆರೆಯ ಮೇಲೆ ತಮ್ಮ ಪಾತ್ರಗಳಿಂದ ರಂಜಿಸಿದರೆ, ರಿಯಲ್ ಲೈಫ್‌ನಲ್ಲಿ ಇವರು ಮಾತಿನ ಮಲ್ಲಿ. ತನಗೆ ಅನಿಸಿದ್ದನ್ನು ನೇರವಾಗಿ ಹೇಳಿಬಿಡಬಲ್ಲ ನಟಿ. ಕೆಲವೊಮ್ಮೆ ಇದೇ ಇವರ ಬದುಕಿನ ಮೇಲೆ ಪರಿಣಾಮ ಬೀರಿದ್ದು ಕೂಡ ಇದೆ.
ತಮ್ಮ ನೇರ ನುಡಿಗಳಿಂದಲೇ ಹಲವು ಬಾರಿ ವಿವಾದಗಳಿಗೂ ಸಿಲುಕಿದ್ದಾರೆ. ಸದ್ಯ ಇವರಿಗೆ ಸಿನಿಮಾಗಳಲ್ಲಿ ಆಫರ್ ಕಡಿಮೆ ಆಗಿದೆ. ಅದರಲ್ಲೂ ಇತ್ತೀಚೆಗೆ ಬೆಂಗಳೂರಿನ ಡ್ರಗ್ಸ್ ಪ್ರಕರಣದಲ್ಲಿ ಇವರ ಹೆಸರು ಕೇಳಿ ಬಂದ ಮೇಲಂತೂ ವೃತ್ತಿಜೀವನ ಮತ್ತಷ್ಟು ಹಿನ್ನೆಡೆ ಕಂಡಿದೆ.

ಎರಡು ವರ್ಷಗಳ ಹಿಂದೆ ಅಂದರೆ, 2024ರ ಮೇ 19ರಂದು ನಡೆದ ಘಟನೆ ಇವರ ಬದುಕಿಗೆ ಕಪ್ಪುಚುಕ್ಕಿಯಾಗಿ ಉಳಿದಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್.ಫಾರ್ಮ್‌ಹೌಸ್‌ನಲ್ಲಿ ರೇವ್ ಪಾರ್ಟಿ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಮದ್ಯ ಮತ್ತು ಮಾದಕ ವಸ್ತುಗಳನ್ನು ಸೇವಿಸುತ್ತಿದ್ದ ಸುಮಾರು 88 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಕೂಡ ಇದ್ದರು.
ನಟಿ ಹೇಮಾ ತಾವು ಬೆಂಗಳೂರಿನ ರೇವಾ ಪಾರ್ಟಿಯಲ್ಲಿ ಇದ್ದಿದ್ದು ನಿಜವಾಗಿದ್ದರೂ, ಯಾವುದೇ ಮಾದಕ ವಸ್ತು ಸೇವಿಸಿಲ್ಲ ಎಂದು ಹೇಳಿದ್ದರು. ಆದರೆ, ಪೊಲೀಸರು ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ದೀರ್ಘಕಾಲದ ನಡೆದ ವಿಚಾರಣೆ ಬಳಿಕ 2025ರ ಜನವರಿ 2ರಂದು ಬೆಂಗಳೂರಿನ ನ್ಯಾಯಾಲಯ ನಟಿ ಹೇಮಾ ನಿರ್ದೋಷಿ ಎಂದು ಕ್ಲೀನ್‌ಚಿಟ್ ನೀಡಿದೆ.
ನ್ಯಾಯಾಲಯದ ತೀರ್ಪಿನ ಬಳಿಕ ನಟಿ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಡ್ರಗ್ಸ್ ತೆಗೆದುಕೊಂಡಿಲ್ಲ ಎಂದರೂ ಯಾರೂ ಕೇಳಲಿಲ್ಲ. ಇದರಿಂದ ನನ್ನ ತಾಯಿ, ನಾನು ಮತ್ತು ಕುಟುಂಬ ಎಷ್ಟು ಮಾನಸಿಕ ಯಾತನೆ ಅನುಭವಿದ್ದೇವೆ ಗೊತ್ತಾ? ಡ್ರಗ್ಸ್ ಪ್ರಕರಣಗಳಲ್ಲಿ ಬಂಧಿತರೆಲ್ಲರೂ ತಪ್ಪಿತಸ್ಥರಲ್ಲ, ಜೈಲಿಗೆ ಹೋದ ಮಾತ್ರಕ್ಕೆ ಯಾರೂ ಅಪರಾಧಿಗಳಲ್ಲ" ಎಂದು ನಟಿ ಹೇಮಾ ಭಾವುಕರಾಗಿದ್ದಾರೆ.
ಈ ಪ್ರಕರಣದಲ್ಲಿ ಅವರು ಹೆಸರು ಕೇಳಿ ಬರುತ್ತಿದ್ದಂತೆ ಮಾಧ್ಯಮಗಳು ವರದಿ ಬಗ್ಗೆನೂ ನಟಿ ಹೇಮಾ ಅಸಮಧಾನ ಹೊರ ಹಾಕಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ. "ಡ್ರಗ್ಸ್ ಪರೀಕ್ಷೆಯಲ್ಲಿ ನನ್ನ ವರದಿ ಪಾಸಿಟಿವ್ ಎಂದು ಬಂದಿಲ್ಲವಾದರೂ, ಕೆಲವು ಮಾಧ್ಯಮಗಳು ಬಂದಿದೆ ಎಂಬಂತೆ ವರದಿ ಮಾಡಿದ್ದವು. ನನಗೂ ಕುಟುಂಬವಿದೆ, ನಮ್ಮ ನೋವನ್ನು ಅರ್ಥಮಾಡಿಕೊಳ್ಳಿ. ಸುದ್ದಿ ಬರೆಯುವ ಮೊದಲು ಹಲವು ಬಾರಿ ಖಚಿತಪಡಿಸಿಕೊಂಡು ಮಾಡಿ" ಎಂದು ಹೇಳಿದ್ದಾರೆ.
"ನನ್ನ ಮೇಲೆ ಕೇಸು ದಾಖಲು ಮಾಡಿದಾಗ ಮಾಧ್ಯಮಗಳು ವರದಿ ಮಾಡಿದವು. ಆದರೆ, ನಿರ್ದೋಷಿ ಎಂದಾಗ ಅಷ್ಟೇ ಉತ್ಸಾಹದಲ್ಲಿ ವರದಿ ಮಾಡಲಿಲ್ಲ. ಕೆಲವೇ ಕೆಲವು ಮಾಧ್ಯಮಗಳು ಮಾತ್ರ ವರದಿ ಮಾಡಿದವು" ಎಂದು ಆಕ್ಷೇಪಿಸಿದರು. "ಡ್ರಗ್ಸ್ ಪ್ರಕರಣದ ಸಮಯದಲ್ಲಿ ನಾನೂ ನನ್ನ ಕುಟುಂಬವೂ ತೀವ್ರ ಕಷ್ಟಪಟ್ಟೆವು. ಅದು ತುಂಬಾ ಕಠಿಣ ಸಮಯ. ಒಂದು ಹಂತದಲ್ಲಿ ಸಾಯಬೇಕೆಂದು ಕೂಡ ಯೋಚಿಸಿದ್ದೆ" ಎಂದು ಆ ಘಟನೆಯನ್ನು ನೆನಪಿಸಿಕೊಂಡು ಭಾವುಕರಾದರು.


Click it and Unblock the Notifications











