ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಟ್ಯಾಟೂ ಕಿಕ್ ಕೊಟ್ಟ ರೇಣು ದೇಸಾಯಿ; ಇದರ ಅರ್ಥವಾದರೂ ಏನು?
ಪವನ್ ಕಲ್ಯಾಣ್ ಎರಡನೇ ಪತ್ನಿ ಕಮ್ ನಟಿ ರೇಣು ದೇಸಾಯಿ ಬಗ್ಗೆ ಗೊತ್ತೇ ಇದೆ. ಪವರ್‌ಸ್ಟಾರ್ ಪವನ್ ಕಲ್ಯಾಣ್ ಪ್ರೀತಿಸಿ ಮದುವೆಯಾಗಿದ್ದ ನಟಿಯೀಕೆ. ಪವನ್ ಕಲ್ಯಾಣ್ ಮೊದಲ ಪತ್ನಿ ನಂದಿಗೆ ವಿಚ್ಛೇದನ ನೀಡಿದ್ದರು. ಆ ಬಳಿಕ ನಟಿ ರೇಣು ದೇಸಾಯಿಯನ್ನು ಎರಡನೇ ಮದುವೆಯಾಗಿದ್ದರು. ಕೇವಲ ಮೂರು ವರ್ಷಗಳ ಅಂತರದಲ್ಲಿ ರೇಣು ದೇಸಾಯಿಗೆ ವಿಚ್ಛೇದನ ನೀಡಿದ್ದರು.
ಈಗ ರೇಣು ದೇಸಾಯಿ ತನ್ನಿಬ್ಬರು ಮಕ್ಕಳೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ವಿಚ್ಛೇದನ ಪಡೆದ ಬಳಿಕ ರೇಣು ದೇಸಾಯಿ ಮರು ಮದುವೆ ಆಗುವ ಬಗ್ಗೆ ಪ್ರಸ್ತಾಪ ಮಾಡಿದ್ದರು. ಆದರೆ, ಪವನ್ ಕಲ್ಯಾಣ್ ಅಭಿಮಾನಿಗಳು ರೇಣು ದೇಸಾಯಿ ವಿರುದ್ಧ ತಿರುಗಿಬಿದ್ದಿದ್ದರು. ಹೀಗೆ ಒಂದಲ್ಲ ಒಂದು ಕಾರಣಕ್ಕೆ ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ಮಧ್ಯೆ ಆಗಾಗ ಜಟಾಪಟಿ ನಡೆಯುತ್ತಲೇ ಇತ್ತು.

ಈಗ ರೇಣು ದೇಸಾಯಿ ಇನ್‌ಸ್ಟಾಗ್ರಾಂನಲ್ಲಿ ಟ್ಯಾಟೂ ಹಾಕಿಸಿಕೊಂಡ ಫೋಟೊವನ್ನು ಶೇರ್ ಮಾಡಿಕೊಂಡಿದ್ದಾರೆ. ಇದು ಪವನ್ ಕಲ್ಯಾಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ. ಆ ಟ್ಯಾಟೂ ಹಿನ್ನೆಲೆಯೇನು? ರೇಣು ದೇಸಾಯಿ ಆ ಟ್ಯೂಟೂ ಮೂಲಕ ಏನಾದರೂ ಸಂದೇಶ ಹೇಳುವುದಕ್ಕೆ ಹೊರಟಿದ್ದಾರೆಯೇ? ಎಂಬ ಪ್ರಶ್ನೆ ಕಾಡುವುದಕ್ಕೆ ಶುರುವಾಗಿದೆ.
ಪವನ್ ಕಲ್ಯಾಣ್ ಈ ಬಾರಿ ರಾಜಕೀಯದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಆಂಧ್ರ ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೆ ಮುಂದಾಗಿದ್ದಾರೆ. ಜಗನ್ ಸರ್ಕಾರವನ್ನು ಬೀಳಿಸಿ, ಅಧಿಕಾರಕ್ಕೆ ಬರಲೇಬೇಕು ಎಂದು ಪಟ್ಟಿ ಹಿಡಿದ್ದಾರೆ. ಹೀಗಾಗಿ ಪವನ್ ಕಲ್ಯಾಣ್ ಜನಸೇನಾ, ಚಂದ್ರ ಬಾಬು ನಾಯ್ಡು ಅವರ ಟಿಡಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧೆ ಮಾಡಲಿವೆ ಅನ್ನೋ ಮಾತು ಕೇಳಿ ಬರುತ್ತಿದೆ.
ಸಿನಿಮಾವನ್ನು ಕಂಪ್ಲೀಟ್ ಆಗಿ ಪಕ್ಕಕ್ಕಿಟ್ಟು, ರಾಜಕೀಯದ ಕಡೆ ಪವನ್ ಕಲ್ಯಾಣ್ ವಾಲಿದ್ದಾರೆ. ಇಂತಹದ ಸಂದರ್ಭದಲ್ಲೇ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಟ್ಯಾಟೂ ಹಾಕಿಕೊಂಡಿದ್ದಾರೆ. ಇದರಲ್ಲಿ 'ಮೌನಂ ಪರಮ ಶೀಲಂ' ಎಂದು ಬರೆದುಕೊಂಡಿದ್ದು, ಅದರ ಮುಂದೆ ಕಮಲದ ಹೂವು ಅರಳಿದೆ. ಈ ಟ್ಯಾಟೂ ಪವನ್ ಕಲ್ಯಾಣ್ ಅಭಿಮಾನಿಗಳ ನಿದ್ದೆ ಕೆಡಿಸಿದೆ.
ಈ ಹಿಂದೆ ಪವನ್ ಕಲ್ಯಾಣ್ ಬಗ್ಗೆ ಕಾಮೆಂಟ್‌ಗಳನ್ನು ಮಾಡಿ ಅವರ ಅಭಿಮಾನಿಗಳನ್ನು ಕೆರಳಿಸಿದ್ದರು. ಹೀಗಾಗಿ ಕೆಲವು ದಿನಗಳ ಕಾಲ ರೇಣು ದೇಸಾಯಿ ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳ ಮಧ್ಯೆ ಸೋಶಿಯಲ್ ಮೀಡಿಯಾಗಳಲ್ಲೇ ವಾರ್ ನಡೆದಿತ್ತು. ಈ ಹಿಂದೆ ಪವನ್ ಕಲ್ಯಾಣ್ ವಿರುದ್ಧ ರೇಣು ದೇಸಾಯಿ ಟೀಕೆ ಮಾಡಿದ್ದರು. ತಮ್ಮನ್ನು ಪವನ್ ಕಲ್ಯಾಣ್ ನಡೆಸಿಕೊಂಡ ರೀತಿ ತಪ್ಪು ಎಂದು ಹೇಳಿದ್ದರು. ಅದಕ್ಕೆ ಫ್ಯಾನ್ಸ್ ಕಿಡಿ ಕಾರಿದ್ದರು. ಈ ಬೆನ್ನಲ್ಲೇ ಪವನ್ ಕಲ್ಯಾಣ್‌ಗೆ ರಾಜಕೀಯದಲ್ಲಿ ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟಿದ್ದರು.
ರೇಣು ದೇಸಾಯಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಟ್ಯಾಟೂ ಫೋಟೊವನ್ನು ಶೇರ್ ಮಾಡಿಕೊಂಡಿದ್ದು, "ಕೆಲವೊಮ್ಮೆ ಇಂತಹ ಫೋಟೊಗಳು ಪದಗಳಿಗಿಂತ ಹೆಚ್ಚು ಮಾತಾಡುತ್ತವೆ" ಎಂದು ಬರೆದುಕೊಂಡಿದ್ದಾರೆ. ಜೊತೆ ಎಲೆಕ್ಷನ್ 2024 ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಹೀಗಾಗಿ ಇದು ಚುನಾವಣೆಗೆ ಸಂಬಂಧಿಸಿದ ಸಂದೇಶ ಎಂದೇ ಚರ್ಚೆಯಾಗುತ್ತಿದೆ. ಪವನ್ ಕಲ್ಯಾಣ್ ಅಭಿಮಾನಿಗಳು ಈ ಟ್ಯೂಟೂವನ್ನು ಡಿ ಕೋಡ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಹಾಗೇ ರೇಣು ದೇಸಾಯಿ ಬಿಜೆಪಿಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











