ನಾರಾ ಲೋಕೇಶ್ ಹುಟ್ಟುಹಬ್ಬಕ್ಕೆ ಜೂ.ಎನ್‌ಟಿಆರ್ ವಿಶ್; ಟಿಡಿಪಿ, ಆಂಧ್ರ ರಾಜಕೀಯದಲ್ಲಿ ಏನಾಗುತ್ತಿದೆ?
ಟಾಲಿವುಡ್‌ನ ಜನಪ್ರಿಯ ನಟ ಜೂ.ಎನ್‌ಟಿಆರ್. ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ಬಿಡುಗಡೆವರೆಗೂ ದಕ್ಷಿಣ ಭಾರತದಲ್ಲಿ ಹೆಚ್ಚು ಜನಪ್ರಿಯರಾಗಿದ್ದ ನಟ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಅದರಲ್ಲೂ ಇತ್ತೀಚೆಗೆ ಹೃತಿಕ್ ರೋಷನ್ ಜೊತೆ ನಟಿಸಿದ 'ವಾರ್ 2' ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದರು. ಈಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿರುವ ಜೂ.ಎನ್‌ಟಿಆರ್ ಸಿನಿಮಾವಲ್ಲದ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.
ಎನ್‌ಟಿಆರ್ ಕುಟುಂಬದ ಕುಡಿಯಾಗಿರುವ ಜೂ.ಎನ್‌ಟಿಆರ್‌ಗೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಜೂ.ಎನ್‌ಟಿಆರ್ ಡ್ಯಾನ್ಸ್, ಆಕ್ಟಿಂಗ್, ಡೈಲಾಗ್ ಡಿಲೆವರಿಗೆ ಫಿದಾ ಆಗದವರೇ ಇಲ್ಲ. ಸದ್ಯ ತೆಲುಗು ಇಂಡಸ್ಟ್ರಿಯಲ್ಲಿರುವ ಸ್ಟಾರ್‌ಗಳಲ್ಲಿ ಜೂ. ಎನ್‌ಟಿಆರ್ ಉತ್ತುಂಗದಲ್ಲಿ ಇದ್ದಾರೆ. ಟಾಲಿವುಡ್‌ನ ಅತ್ಯಂತ ಜನಪ್ರಿಯರ ನಟರಲ್ಲಿ ಜೂ.ಎನ್‌ಟಿಆರ್ ಕೂಡ ಒಬ್ಬರು.

ಸಿನಿಮಾದಲ್ಲಿ ಜನಪ್ರಿಯತೆ ಗಳಿಸಿದಂತೆ ಜೂ.ಎನ್‌ಟಿಆರ್ ರಾಜಕೀಯಕ್ಕೂ ಎಂಟ್ರಿ ಕೊಡಬೇಕು. ತೆಲುಗು ದೇಶಂ ಪಕ್ಷದ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ. ಜೂ. ಎನ್‌ಟಿಆರ್ ಮೊದಲಿನಿಂದಲೂ ಟಿಡಿಪಿಗೆ (ತೆಲುಗು ದೇಶಂ ಪಕ್ಷ) ಬೆಂಬಲ ನೀಡುತ್ತಾ ಬಂದಿದ್ದಾರೆ. 2009ರ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿ, ಅಂದಿನ ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಜೂ.ಎನ್‌ಟಿಆರ್ ಮಾಡಿದ ಟೀಕೆಗಳು ಸಂಚಲನ ಮೂಡಿಸಿದ್ದವು.
ಯಂಗ್ ಟೈಗರ್ ಪ್ರಚಾರ ಮಾಡಿದ ಬಹುತೇಕ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆದ್ದಿದ್ದರು. ಹೀಗಾಗಿ ಜೂ.ಎನ್‌ಟಿಆರ್ ಜನಪ್ರಿಯತೆ ಮೇಲೆ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರೀಕ್ಷೆಗಳಿವೆ. ಆದರೆ, 2009ರ ಚುನಾವಣೆ ಬಳಿಕ ಜೂನಿಯರ್ ಎನ್‌ಟಿಆರ್ ಟಿಡಿಪಿಯಿಂದ ದೂರ ಉಳಿದು ಬಿಟ್ಟರು. ಅದಲ್ಲದೆ ನಂದಮೂರಿ ಹಾಗೂ ನಾರಾ ಕುಟುಂಬಗಳೊಂದಿಗೂ ಅಂತರ ಕಾಯ್ದುಕೊಂಡೇ ಬಂದಿದ್ದಾರೆ.
ಆಂಧ್ರ ರಾಜಕೀಯ ಬಲುರೋಚಕ. ಅಧಿಕಾರಗಳು ಹಸ್ತಾಂತರ ಆಗುತ್ತಲೇ ಇರುತ್ತೆ. 2019ರಲ್ಲಿ ವೈಎಸ್ ಜಗನ್ ವಿರುದ್ಧ ಟಿಡಿಪಿ ಸೋಲನುಭವಿಸಿದ ಬಳಿಕ ಎನ್‌ಟಿಆರ್‌ಗೆ ಪಕ್ಷದ ಚುಕ್ಕಾಣಿ ಹಿಡಿಯುವಂತೆ ಅಭಿಮಾನಿಗಳು ಒತ್ತಡ ಹೇರಿದ್ದರು. ಪಕ್ಷದ ಚುಕ್ಕಾಣಿಯನ್ನು ಹಿಡಿಯುವಂತೆ ಭಾರೀ ಬೇಡಿಕೆ ಸೃಷ್ಟಿಯಾಗಿತ್ತು. ಇಷ್ಟೇ ಅಲ್ಲದೆ, ಚಂದ್ರಬಾಬು ಮತ್ತು ನಾರಾ ಲೋಕೇಶ್ ಭಾಗವಹಿಸಿದ್ದ ಸಭೆಗಳಲ್ಲಿ "ಸಿಎಂ.. ಸಿಎಂ" ಎಂದು ಎನ್‌ಟಿಆರ್ ಅಭಿಮಾನಿಗಳು ಘೋಷಣೆ ಕೂಗಿದ್ದರು. ಅದು ಸಿಕ್ಕಾಪಟ್ಟೆ ಚರ್ಚೆಗ ಕಾರಣವಾಗಿತ್ತು.
2024ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಟಿಡಿಪಿ ವಿರುದ್ಧ ಜಯಗಳಿಸಿದೆ. ಹೀಗಾಗಿ ಜೂ.ಎನ್‌ಟಿಆರ್ ಅಭಿಮಾನಿಗಳು ಸೈಲೆಂಟ್ ಆಗಿದ್ದಾರೆ. ಇದೇ ವೇಳೆ ನಾರಾ ಲೋಕೇಶ್ ರಾಜಕೀಯದಲ್ಲಿ ಹಿಡಿತ ಸಾಧಿಸುತ್ತಿದ್ದಾರೆ. ಅವರ ಮಾತುಗಾರಿಕೆ ಹಾಗೂ ರಾಜಕೀಯ ನಡೆ ತೆಲುಗು ಮಂದಿಯಲ್ಲಿ ಅಚ್ಚರಿಯನ್ನು ಮೂಡಿಸಿದೆ. ಈ ಮೂಲಕ ಲೋಕೇಶ್ ತಾನೇ ಟಿಡಿಪಿಯ ಮುಂದಿನ ನಾಯಕ. ಆಂಧ್ರಪ್ರದೇಶದ ಭವಿಷ್ಯದ ಮುಖ್ಯಮಂತ್ರಿ ಎಂದು ಪರೋಕ್ಷ ಸಂದೇಶವನ್ನು ನೀಡುತ್ತಿದ್ದಾರೆ.
ಜನವರಿ 23ರಂದು ಲೋಕೇಶ್ ಜನ್ಮದಿನದಂದು ಜೂನಿಯರ್ ಎನ್‌ಟಿಆರ್ ಹೆಸರುಗಳು ಮತ್ತೊಮ್ಮೆ ಆಂಧ್ರ ಪ್ರದೇಶದ ರಾಜಕೀಯದಲ್ಲಿ ಚರ್ಚೆಯಾಗುತ್ತಿದೆ. ರಾಜ್ಯಾದ್ಯಂತ ಟಿಡಿಪಿ ಕಾರ್ಯಕರ್ತರು ಲೋಕೇಶ್ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಿದರು. ಈ ವೇಳೆ ಜೂನಿಯರ್ ಎನ್‌ಟಿಆರ್ ತಮ್ಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಭಾವ ನಾರಾ ಲೋಕೇಶ್‌ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಇದು "ಭಾವಮೈದುನರು ಮತ್ತೆ ಒಂದಾಗಿದ್ದಾರೆಯೇ? ಎನ್‌ಟಿಆರ್ ಮತ್ತೆ ನಾರಾ ಕುಟುಂಬಕ್ಕೆ ಹತ್ತಿರವಾಗುತ್ತಿದ್ದಾರೆಯೇ?" ಎಂಬ ಚರ್ಚೆ ಹುಟ್ಟಿಕೊಂಡಿದೆ. ಸದ್ಯಕ್ಕೆ, ಈ ಟ್ವೀಟ್ ಆಂಧ್ರಪ್ರದೇಶದ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.


Click it and Unblock the Notifications











