ತಿರುಪತಿ ಲಡ್ಡು ವಿವಾದ; "ನನ್ನ ಮಾತನ್ನು ತಪ್ಪಾಗಿ ತಿಳ್ಕೊಂಡು ಏನ್ ಹೇಳ್ತಿದ್ದೀರಾ?" ಪವನ್ ಕಲ್ಯಾಣ್‌ಗೆ ಪ್ರಕಾಶ್ ರಾಜ್ ಕೌಂಟರ್
ತಿರುಪತಿ ಲಡ್ಡು ವಿವಾದ ದೊಡ್ಡದಾಗುವ ಹಾಗೆ ಕಾಣಿಸುತ್ತಿದೆ. ಪವನ್ ಕಲ್ಯಾಣ್ ಅಖಾಡಕ್ಕೆ ಇಳಿದು ದೇವಸ್ಥಾನ ಅಪವಿತ್ರ ಆಗಿದೆ ಎಂದು ಹೇಳುತ್ತಿದ್ದಾರೆ. ದೇವಸ್ಥಾನಗಳನ್ನು ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಸನಾತನ ಧರ್ಮ, ಹಿಂದೂ ಧರ್ಮ ಅಂತಿದ್ದಾರೆ. ಇತ್ತ ಪ್ರಕಾಶ್ ರಾಜ್ ಪವನ್ ಕಲ್ಯಾಣ್‌ಗೆ ಕೋಮುವಾದ ಹೆಚ್ಚಾಗಿ ಅಶಾಂತಿ ಹಬ್ಬಿಸಬೇಡಿ ಅಂದಿದ್ದರು.
ಪವನ್ ಕಲ್ಯಾಣ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ಗೆ ಪ್ರಕಾಶ್ ರಾಜ್ ಪ್ರತಿಕ್ರಿಯೆ ನೀಡಿದ್ದರು. ಅದು ಪವನ್ ಕಲ್ಯಾಣ್ ಅವರನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ ನೇರವಾಗಿ ಪ್ರಕಾಶ್ ರಾಜ್ ವಿರುದ್ಧ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ದರು. ಈಗ ಪ್ರಕಾಶ್ ರಾಜ್ ಅದಕ್ಕೊಂದು ವಿಡಿಯೋ ಮಾಡಿ ನಾನು ಹೇಳಿದ್ದೇ ಒಂದು. ನೀವು ತಿಳಿದುಕೊಂಡಿದ್ದೇ ಒಂದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ತಿರುಪತಿ ಲಡ್ಡು ವಿವಾದ ಈಗ ಪವನ್ ಕಲ್ಯಾಣ್ ಹಾಗೂ ಪ್ರಕಾಶ್ ರಾವ್ ನಡುವಿನ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿದೆ. ಸದ್ಯ ಇಬ್ಬರ ನಡುವೆ ವಾಗ್ಯುದ್ಧಗಳು ಆರಂಭ ಆಗಿದ್ದು ಇದು ಮುಂದಿನ ದಿನಗಳಲ್ಲಿ ಇನ್ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಆದರೆ, ಸದ್ಯ ಇಬ್ಬರ ನಡುವೆ ಮಾತಿನ ಚಕಮಕಿ ಅಂತೂ ಆರಂಭ ಆಗಿದೆ. ಪವನ್ ಕಲ್ಯಾಣ್ ಏಟಿಗೆ ಪ್ರಕಾಶ್ ರಾಜ್ ತಿರುಗೇಟು ಕೊಟ್ಟಿದ್ದಾರೆ.
ಇತ್ತೀಚೆಗೆ ತಿರುಪತಿ ತಿಮ್ಮಪ್ಪನ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬಳಸಿರುವುದು ಪತ್ತೆಯಾಗಿದೆ. ಈ ವಿಚಾರದಲ್ಲಿ ನಾವೆಲ್ಲರೂ ತೀವ್ರ ಅಸಮಾಧಾನಗೊಂಡಿದ್ದೇವೆಂದು ಎಕ್ಸ್ ಖಾತೆಯಲ್ಲಿ ಪವನ್ ಕಲ್ಯಾಣ್ ಎಕ್ಸ್ ಖಾತೆಯಲ್ಲಿ ಬರೆದು ಶೇರ್ ಮಾಡಿದ್ದರು. ಅದಕ್ಕೆ ಪ್ರಕಾಶ್ ರಾಜ್ ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿ ಈ ಘಟನೆ ನಡೆದಿದೆ. ದಯವಿಟ್ಟು ಈ ಘಟನೆಯನ್ನು ತನಿಖೆ ಮಾಡಿ. ಅಶಾಂತಿ ಯಾಕೆ ಹಬ್ಬಿಸುತ್ತಿದ್ದೀರಾ? ಎಂದು ತಿರುಗೇಟು ಕೊಟ್ಟಿದ್ದರು. ಇದು ಆಂಧ್ರ ಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರನ್ನು ಕೆರಳಿಸಿತ್ತು.
ಅದಕ್ಕೆ ಪವನ್ ಕಲ್ಯಾಣ್ ಮಾಧ್ಯಮಗಳ ಮುಂದೆ ಪ್ರಕಾಶ್ ವಿರುದ್ಧ ಕಿಡಿಕಾರಿದ್ದರು."ನಾನು ದೇವಸ್ಥಾನದ ಅಪವಿತ್ರ ಆಗಿರುವ ಬಗ್ಗೆ ಮಾತಾಡುತ್ತಿದ್ದೇನೆ. ಇದಕ್ಕೂ ಪ್ರಕಾಶ್ ರಾಜ್‌ಗೂ ಏನು ಸಂಬಂಧ? ನಾನು ಯಾವುದಾದರೂ ಧರ್ಮವನ್ನು ನಿಂದಿಸಿದ್ದೇನಾ? ಇಸ್ಲಾಂ ಅನ್ನು ನಿಂದನೆ ಮಾಡಿದ್ದೇನಾ? ಕ್ರಿಶ್ಚಿಯಾನ್ ಧರ್ಮವನ್ನು ನಿಂದನೆ ಮಾಡಿದ್ದೇನಾ? ಅಪವಿತ್ರ ಆಗಿದೆ. ಅದು ಆಗಬಾರದು ಅಂತ ಮಾತಾಡುತ್ತಿದ್ದೇನೆ. ಹಾಗಿದ್ದರೆ ತಪ್ಪು ನಡೆಯುತ್ತಿದ್ದರೂ ಮಾತಾಡಬಾರದಾ? ಪ್ರಕಾಶ್ ರಾಜ್‌ಗೂ ಇದೇ ಮಾತನ್ನು ಹೇಳುತ್ತಿದ್ದೇನೆ. ನಿಮ್ಮ ಬಗ್ಗೆ ನನಗೆ ಗೌರವವಿದೆ. ಜಾತ್ಯಾತೀತ ಅಂದ ಬಂದಾಗ ಪ್ರಕಾಶ್ ರಾಜ್ ಅವರೇ ಅದು ಟೂ ವೇ. ಒನ್ ವೇ ಅಲ್ಲ." ಎಂದು ಪವನ್ ಕಲ್ಯಾಣ್ ಆಕ್ರೋಶ ಹೊರ ಹಾಕಿದ್ದರು.
ಪ್ರಕಾಶ್ ರಾಜ್ ವಿರುದ್ಧ ಪವನ್ ಕಲ್ಯಾಣ್ ಆರೋಪ ಹೊರ ಹಾಕುತ್ತಿದ್ದಂತೆ ಪ್ರಕಾಶ್ ರಾವ್ ವಿಡಿಯೋ ರಿಲೀಸ್ ಮಾಡಿದ್ದಾರೆ. "ಶ್ರೀ ಪವನ್ ಕಲ್ಯಾಣ ಅವರೇ, ಈಗಲೇ ನಾನು ನಿಮ್ಮ ಪತ್ರಿಕಾಗೋಷ್ಠಿಯನ್ನು ನೋಡಿದೆ. ನಾನು ಹೇಳಿದ್ದೇನು? ನೀವು ತಪ್ಪಾಗಿ ತಿಳಿದುಕೊಂಡು ಹೇಳುತ್ತಿರುವುದೇನು? ನಾನೀಗ ವಿದೇಶದ ಶೂಟಿಂಗ್‌ನಲ್ಲಿ ಇದ್ದೇನೆ. 30ನೇ ತಾರೀಕಿನ ನಂತರ ಬರುತ್ತೇನೆ. ಬಂದು ನಿಮ್ಮ ಮಾತುಗಳಿಗೆ ಸಮಾಧಾನವನ್ನು ಹೇಳುತ್ತೇನೆ" ಎಂದು ವಿಡಿಯೋ ಮೂಲಕ ರಿವೀಲ್ ಮಾಡಿದ್ದಾರೆ.
ಈ ಮೊದಲು ತಿರುಪತಿ ಲಡ್ಡು ಬಗ್ಗೆ ಪವನ್ ಕಲ್ಯಾಣ್ ಎಕ್ಸ್ ಖಾತೆಯಲ್ಲಿ ಹೀಗೆ ಬರೆದು ಶೇರ್ ಮಾಡಿದ್ದರು. "ತಿರುಪತಿ ತಿಮ್ಮಪ್ಪನ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬು (ಮೀನಿನ ಎಣ್ಣೆ, ಹಂದಿ ಕೊಬ್ಬು, ಎತ್ತಿನ ಕೊಬ್ಬು) ಇರುವುದು ಪತ್ತೆಯಾಗಿದೆ. ಈ ವಿಚಾರದಲ್ಲಿ ನಾವೆಲ್ಲರೂ ಅತೀವವಾಗಿ ಬೇಸರಗೊಂಡಿದ್ದೇವೆ. ಈ ವಿವಾದದ ಕುರಿತು ಹಲವು ಪ್ರಶ್ನೆಗಳಿಗೆ ವೈಸಿಪಿ ಸರಕಾರ ಸ್ಥಾಪಿಸಿರುವ ಟಿಟಿಡಿ ಮಂಡಳಿಯೇ ಉತ್ತರ ಕೊಡಬೇಕು. ಈ ಪ್ರಕರಣದ ಬಗ್ಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ" ಎಂದು ಬರೆದು ಪೋಸ್ಟ್ ಮಾಡಿದ್ದರು.
ಈ ಪೋಸ್ಟ್‌ಗೆ ಪ್ರಕಾಶ್ ರಾಜ್ "ಆತ್ಮೀಯ ಪವನ್ ಕಲ್ಯಾಣ್ ಅವರೇ. ನೀವು ಉಪಮುಖ್ಯಮಂತ್ರಿಯಾಗಿರುವ ರಾಜ್ಯದಲ್ಲಿಯೇ ಈ ಘಟನೆ ನಡೆದಿರೋದು. ದಯವಿಟ್ಟು ಈ ಘಟನೆಯನ್ನು ಒಮ್ಮೆ ತನಿಖೆ ಮಾಡಿ. ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಿ. ಅದನ್ನು ಬಿಟ್ಟು ದೇಶದಲ್ಲಿ ಯಾಕೆ ಅಶಾಂತಿ ಹರಡುತ್ತಿದ್ದೀರಾ? ದೇಶಾದ್ಯಂತ ಹರಡುವಂತೆ ಏಕೆ ಮಾಡುತ್ತಿದ್ದೀರಾ? ನಮ್ಮ ದೇಶದಲ್ಲಿ ಈಗಾಗಲೇ ಸಾಕಷ್ಟು ಕೋಮು ಉದ್ವಿಗ್ನತೆ ಇದೆ. (ಕೇಂದ್ರದಲ್ಲಿರುವ ನಿಮ್ಮ ಸ್ನೇಹಿತರಿಗೆ ಧನ್ಯವಾದಗಳು)" ಎಂದು ಪ್ರಕಾಶ್ ರಾಜ್ ಕೌಟಂರ್ ಕೊಟ್ಟಿದ್ದರು.


Click it and Unblock the Notifications











