Tollywood Half-Year Report 2023: ಚಿರು, ಬಾಲಯ್ಯ, ಸಾಯಿ ಧರಂ ತೇಜ್ ಬಿಟ್ರೆ ಉಳಿದವರು ಗೆದ್ದಿಲ್ಲ!
2023ಯ 6 ತಿಂಗಳು ಮುಗಿದೇ ಹೋಗಿದೆ. ಇನ್ನು ಆರು ತಿಂಗಳಲ್ಲೇ ಏನಿದ್ದರೂ ಕಲೆಕ್ಷನ್ ಆಗಬೇಕು. ಯಾಕಂದ್ರೆ, ಈ ವರ್ಷ ತೆಲುಗು ಚಿತ್ರರಂಗದಲ್ಲಿ ಹೇಳಿ ಕೊಳ್ಳುವಂತಹ ಕಲೆಕ್ಷನ್ ಅನ್ನು ಯಾರೂ ಮಾಡಿಲ್ಲ. ಮೆಗಾಸ್ಟಾರ್ ಚಿರಂಜೀವಿ, ಲೆಜೆಂಡ್ ಬಾಲಕೃಷ್ಣ, ಸಾಯಿ ಧರಂ ತೇಜ್ ಬಿಟ್ಟರೆ ಇನ್ಯಾರ ಸಿನಿಮಾವೂ ಗೆದ್ದಿಲ್ಲ.
ಟಾಲಿವುಡ್‌ನಲ್ಲಿ ಈ ಬಾರಿ ಸೂಪರ್‌ಸ್ಟಾರ್ ಸಿನಿಮಾಗಳೇ ಮಕಾಡೆ ಮಲಗಿವೆ. ಹಾಗೇ ನೋಡಿದರೆ ಎರಡನೇ ದರ್ಜೆಯ ಸ್ಟಾರ್‌ಗಳು ಹಾಗೂ ಹೊಸಬರ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ. ಹೀಗಾಗಿ ಮೊದಲ ಆರು ತಿಂಗಳಲ್ಲಿ ಟಾಲಿವುಡ್ ಬಾಕ್ಸಾಫೀಸ್‌ನಲ್ಲೂ ಹೇಳಿಕೊಳ್ಳುವಂತಹ ಕಲೆಕ್ಷನ್ ಆಗಿಲ್ಲ.

ಈ ಅರ್ಧ ವರ್ಷದಲ್ಲಿ ಟಾಲಿವುಡ್‌ಗೆ ಕೆಲವೇ ಕೆಲವು ಸೂಪರ್ ಹಿಟ್ ಸಿನಿಮಾಗಳು ಸಿಕ್ಕಿವೆ. ಬೇಸಿಗೆಯಲ್ಲಿ ಒಂದೇ ಒಂದು ಬಿಗ್ ಸಿನಿಮಾ ಕೂಡ ರಿಲೀಸ್ ಆಗಿಲ್ಲ. ಹಾಗಿದ್ದರೆ, ಈ ಆರು ತಿಂಗಳಲ್ಲಿ ಯಾವ್ಯಾವ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆದ್ದಿವೆ? ಯಾವ್ಯಾವ ಸಿನಿಮಾಗಳು ಸೋತಿವೆ? ಅನ್ನೋದನ್ನು ನೋಡೋಣ.
ಈ 6 ತಿಂಗಳಲ್ಲಿ ಗೆದ್ದವರು ಯಾರು?
ಟಾಲಿವುಡ್ ಪಾಲಿಗೆ 2023 ಶುಭಾರಂಭ ಆಗಿತ್ತು. ಇಬ್ಬರು ಸೂಪರ್‌ಸ್ಟಾರ್ ಸಿನಿಮಾಗಳು ಅಖಾಡಕ್ಕೆ ಇಳಿದಿದ್ದವು. ಮೆಗಾಸ್ಟಾರ್ ಚಿರಂಜೀವಿ ನಟನೆಯ ಸಿನಿಮಾ 'ವಾಲ್ತೇರು ವೀರಯ್ಯ' ಬಾಕ್ಸಾಫೀಸ್‌ನಲ್ಲಿ ಇದೂವರೆಗೂ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ. ಈ ಸಿನಿಮಾ ಜೊತೆನೇ ತೆರೆಕಂಡ ಮತ್ತೊಂದು ಸಿನಿಮಾ ಬಾಲಯ್ಯ ನಟನೆಯ 'ವೀರ ಸಿಂಹ ರೆಡ್ಡಿ'. ಈ ಸಿನಿಮಾ ಕೂಡ ಹಿಟ್ ಅಂತ ಸಾಬೀತಾಗಿದೆ.

ಎಲ್ಲಕ್ಕಿಂತ ಸರ್ಪ್ರೈಸ್ ರಿಸಲ್ಟ್ ಕೊಟ್ಟಿದ್ದು ಸಾಯಿ ಧರಂ ತೇಜ್ ನಟನೆಯ 'ವಿರೂಪಾಕ್ಷ'. ಬೈಕ್ ಅಪಘಾತದ ಬಳಿಕ ಸಾಯಿ ಧರಂ ತೇಜ್ ನಟನೆಯ ಸಿನಿಮಾ ಸೂಪರ್ ಹಿಟ್ ಆಗಿದೆ. ವಿಶ್ವದಾದ್ಯಂತ 100 ಕೋಟಿ ರೂ. ಗಳಿಕೆ ಕಂಡಿತ್ತು. ಇದು ಸಾಯಿ ಧರಂ ತೇಜ್ ವೃತ್ತಿ ಬದುಕಿನ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಆಗಿದೆ.
ಸೆಮಿ ಹಿಟ್ ಸಿನಿಮಾಗ್ಯಾವುವು?
ನಾನಿಯ ಪ್ಯಾನ್ ಇಂಡಿಯಾ ಸಿನಿಮಾ 'ದಸರಾ' ಸೆಮಿ ಹಿಟ್ ಅಂತ ಸಾಬೀತಾಗಿದೆ. 'ದಸರಾ' ತೆಲುಗು ಬಾಕ್ಸಾಫೀಸ್‌ನಲ್ಲಿ ಕಲೆಕ್ಷನ್ ಮಾಡಿತ್ತು. ಆದರೆ, ಉಳಿದ ಭಾಷೆಗಳಲ್ಲಿ ಸಿನಿಮಾ ಅಷ್ಟೊಂದು ಕಲೆಕ್ಷನ್ ಆಗಿಲ್ಲ. ಉಳಿದಂತೆ ಹೊಸಬರು ಸರ್ಪ್ರೈಸ್ ಹಿಟ್ ಕೊಟ್ಟಿದ್ದಾರೆ.
ದಿಲ್ ರಾಜು ಸಿನಿಮಾ 'ಬಳಗಂ' ಟಾಲಿವುಡ್ ಮಂದಿಗೆ ಅಚ್ಚರಿ ಕಲೆಕ್ಷನ್ ಮಾಡಿಕೊಟ್ಟಿತ್ತು. ಈ ವರ್ಷದ ಅಚ್ಚರಿಯ ಹಿಟ್ ಸಿನಿಮಾಗಳಲ್ಲಿ ಇದೂ ಒಂದು. ಹಾಗೇ ಡಬ್ಬಿಂಗ್ ಸಿನಿಮಾ 'ಬಿಚ್ಚಗಾಡು 2' ವಿತರಕರಿಗೆ ಲಾಭ ತಂದು ಕೊಟ್ಟಿತ್ತು. ಇವುಗಳನ್ನು ಬಿಟ್ಟರೆ ಉಳಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವಲ್ಲಿ ವಿಫಲವಾಗಿವೆ.
ಸೋತಿದ್ದೆಷ್ಟು.. ಮುಂದೇನು?
ಟಾಲಿವುಡ್‌ನಲ್ಲಿ ನಿರೀಕ್ಷೆ ಮಾಡಿದ ಸಿನಿಮಾಗಳೆಲ್ಲವೂ ಬಾಕ್ಸಾಫೀಸ್‌ನಲ್ಲಿ ಸೋತಿವೆ. 'ಅಮಿಗೋಸ್', 'ದಸ್ ಕ ಧಮ್ಕಿ','ರಂಗ ಮಾರ್ಥಾಂಡ','ರಾವಣಾಸುರ', 'ಶಾಕುಂತಲಂ', 'ಏಜೆಂಟ್','ರಾಮಭಾಣಂ', 'ಉಗ್ರಂ','ಕಸ್ಟಡಿ', 'ಆದಿಪುರುಷ್' ಬಾಕ್ಸಾಫೀಸ್‌ನಲ್ಲಿ ಪ್ರೇಕ್ಷಕರನ್ನು ಗೆಲ್ಲುವಲ್ಲಿ ಸೋತಿವೆ.
6 ತಿಂಗಳಲ್ಲಿ ಟಾಲಿವುಡ್ ಮಂದಿ ಸಾಧಿಸಿದ್ದು ಅಷ್ಟಕ್ಕಷ್ಟೇ.. ಆದರೆ, 6 ತಿಂಗಳಲ್ಲಿ ಬಿಗ್ ಬಜೆಟ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಚಿರಂಜೀವಿ ನಟನೆಯ 'ಭೋಳಾ ಶಂಕರ್', 'ವಿಜಯ್ ದೇವರಕೊಂಡ ಸಮಂತಾ ಸಿನಿಮಾ 'ಖುಷಿ', ಪವನ್ ಕಲ್ಯಾಣ್ ಸಿನಿಮಾ 'ಬ್ರೋ', ಪ್ರಭಾಸ್ ಸಿನಿಮಾ 'ಸಲಾರ್' ಬಿಡುಗಡೆಯಾಗಲಿವೆ. ಇವುಗಳ ಮೇಲೆ ನಿರೀಕ್ಷೆಯನ್ನಿಟ್ಟುಕೊಳ್ಳಲಾಗಿದೆ.


Click it and Unblock the Notifications











