ಟಾಲಿವುಡ್ ನಿರ್ಮಾಪಕ ದಿಲ್ ರಾಜು 2ನೇ ಬಾಲಿವುಡ್ ಸಿನಿಮಾಗೂ ಸೋಲು!
ದಿಲ್ ರಾಜು ಟಾಲಿವುಡ್‌ನ ಜನಪ್ರಿಯ ನಿರ್ದೇಶಕ. ಈ ನಿರ್ಮಾಪಕ ಹಣ ಹೂಡಿದ ತೆಲುಗು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದು ತೀರಾ ವಿರಳ. ತೆಲುಗು ಚಿತ್ರರಂಗದಲ್ಲಿ ದಿಲ್ ರಾಜು ಸಿನಿಮಾಗಳ ಸಕ್ಸಸ್ ರೇಟ್ ಹೆಚ್ಚಿದೆ. ಸ್ಟಾರ್ ಹೀರೊಗಳ ಸಿನಿಮಾಗಳನ್ನು ನಿರ್ಮಿಸಿ ದಿಲ್ ರಾಜು ಗೆದ್ದಿದ್ದಾರೆ.
ಟಾಲಿವುಡ್‌ನಲ್ಲಿ ಸಕ್ಸಸ್‌ಫುಲ್ ಸಿನಿಮಾಗಳನ್ನು ನೀಡಿದ ಬಳಿಕ ದಿಲ್ ರಾಜು ಬಾಲಿವುಡ್ ಕಡೆ ಪಯಣ ಬೆಳೆಸಿದ್ದರು. ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನಿಸಿದ್ದರು. ಆದರೆ, ಅದ್ಯಾಕೋ ಬಾಲಿವುಡ್‌ನಲ್ಲಿ ದಿಲ್ ರಾಜ್‌ಗೆ ಸಕ್ಸಸ್ ಸಿಗುತ್ತಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲುಂಡಿವೆ.
ಬಾಲಿವುಡ್‌ನಲ್ಲಿ ದಿಲ್ ರಾಜುಗೆ 2ನೇ ಸೋಲು
ದಿಲ್ ರಾಜು ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಗಳಿಗೆನೇ ಚೆನ್ನಾಗಿಲ್ಲ. ದಿಲ್ ರಾಜು ನಿರ್ಮಿಸಿದ ಎರಡೂ ಸಿನಿಮಾ ಬಾಲಿವುಡ್‌ನಲ್ಲಿ ಹೀನಾಯ ಸೋಲುಂಡಿವೆ. ಈಗ ದಿಲ್ ರಾಜು ನಿರ್ಮಿಸಿದ ಎರಡನೇ ಸಿನಿಮಾ 'ಹಿಟ್' ಕೂಡ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿದೆ.

ತೆಲುಗಿನಲ್ಲಿ 'ಹಿಟ್' ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೇ ಸಿನಿಮಾವನ್ನು ಬಾಲಿವುಡ್‌ನಲ್ಲಿ ಇದೇ ಹೆಸರಿಟ್ಟು ಸಿನಿಮಾ ನಿರ್ಮಾಣ ಮಾಡಿದ್ದರು. ಆದ್ರೀಗ 'ಹಿಟ್' ಸಿನಿಮಾ ಮಕಾಡೆ ಮಲಗಿದೆ ಎಂದು ವರದಿ ಬಂದಿದೆ. ಹಿಟ್ ಸಿನಿಮಾ ಎರಡು ದಿನಗಳಲ್ಲಿ ಕೇವಲ 4.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮೊದಲ ದಿನ ಸಿನಿಮಾ 1.5 ಕೋಟಿ ಕಲೆ ಹಾಕಿತ್ತು. ಅದೇ ಎರಡನೇ ದಿನ 2.5 ರಿಂದ 3 ಕೋಟಿ ಕಲೆಕ್ಷನ್ ಮಾಡಿದೆ ಎಂದು ಅಂದಾಜಿಸಲಾಗಿದೆ.
ರಾಜ್‌ಕುಮಾರ್ ರಾವ್ ಅಭಿನಯದ ಸಿನಿಮಾ
ಹಿಂದಿ ಹಿಟ್ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಹಾಗೂ ದಂಗಲ್ ಖ್ಯಾತಿಯ ಸಾನಿಯಾ ಮಲ್ಹೋತ್ರಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆದರೆ, ಈ ಕಾಂಬಿನೇಷನ್ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡುವಲ್ಲಿ ಸೋತಿದೆ.
ಈ ಮೂಲಕ ದಿಲ್ ರಾಜು ನಿರ್ಮಾಣದ ಎರಡನೇ ಸಿನಿಮಾವೂ ಬಾಕ್ಸಾಫೀಸ್‌ನಲ್ಲಿ ಡಿಸಾಸ್ಟರ್ ಎಂದು ಸಾಬೀತಾಗಿದೆ. ಅಷ್ಟಕ್ಕೂ ದಿಲ್ ರಾಜ್ ಸೋಲಿಗೆ ಕಾರಣವೇನು? ಅನ್ನೋದು ಚರ್ಚೆಯಾಗುತ್ತಿದೆ. ರಿಮೇಕ್ ಸಿನಿಮಾಗೆ ಹಣ ಹೂಡುತ್ತಿರುವುದು ಕೈ ಹಿಡಿಯುತ್ತಿಲ್ಲವೆಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ.

ಮೊದಲ ಸಿನಿಮಾ ಶಾಹಿದ್ ಕಪೂರ್ 'ಜೆರ್ಸಿ'
'ಹಿಟ್' ಸಿನಿಮಾಗೂ ಮುನ್ನ ದಿಲ್ ರಾಜು ಶಾಹಿದ್ ಕಪೂರ್ ಅಭಿನಯದ 'ಜೆರ್ಸಿ' ಸಿನಿಮಾಗೂ ಹಣ ಹೂಡಿದ್ದರು. ಈ ಸಿನಿಮಾ ಕೂಡ ತೆಲುಗಿನಲ್ಲಿ ಇದೇ ಹೆಸರಿನಲ್ಲಿ ರಿಲೀಸ್ ಆಗಿತ್ತು. ಅದನ್ನೇ ಶಾಹಿದ್ ಕಪೂರ್‌ಗೆ ಸಿನಿಮಾ ಮಾಡಿದ್ದರು. ಆದರೆ ಮೊದಲ ಸಿನಿಮಾವೇ ಮಕಾಡೆ ಮಲಗಿತ್ತು.
ಈ ಸೋಲನ್ನೇ ಸವಾಲಾಗಿ ಸ್ವೀಕರಿಸಿದ್ದ ದಿಲ್ ರಾಜು 'ಹಿಟ್' ಸಿನಿಮಾ ನಿರ್ಮಾಣ ಮಾಡಿದ್ದರು. ಆದರೆ, ಅದೂ ಕೂಡ ದಿಲ್ ರಾಜು ಕೈ ಸುಡುವಂತೆ ಮಾಡಿದೆ. ಈಗ ಮೂರನೇ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ವಿಶೇಷ ಅಂದರೆ, ಅದು ಕೂಡ ರಿಮೇಕ್ ಸಿನಿಮಾವೇ. 'ಹಿಟ್' ಸೋಲಿನ ಬಳಿಕ ತಮ್ಮ ನಿರ್ಧಾರ ಬದಲಾಯಿಸುತ್ತಾರಾ? ಎನ್ನುವುದು ನೋಡಬೇಕಿದೆ.


Click it and Unblock the Notifications











