ಮಂಗ್ಲಿ ಕಾರು ಅಪಘಾತ ; ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದೇನು ಸ್ಟಾರ್ ಸಿಂಗರ್..?
ಕಣ್ಣು ಹೊಡಿಯಾಕಾ ಹಾಡಿನ ಮೂಲಕ ಕನ್ನಡಿಗರ ಹೃದಯ ಗೆದ್ದವರು ಮಂಗ್ಲಿ. ಆ ನಂತರ ಕನ್ನಡದಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡ ಮಂಗ್ಲಿ ಸದ್ಯಕ್ಕೆ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಹೌದು, ಅಸಲಿಗೆ ಮಂಗ್ಲಿ ಪ್ರಯಾಣಿಸುತ್ತಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಂಗಾ ರೆಡ್ಡಿ ಜಿಲ್ಲೆಯ ನಂದಿಗಮಾ ಕನ್ಹಾದಲ್ಲಿ, ಆಧ್ಯಾತ್ಮಿಕ ಉತ್ಸವದಲ್ಲಿ ಪಾಲ್ಗೊಂಡು ಮಂಗ್ಲಿ ಮನೆಗೆ ಹಿಂದಿರುಗುತ್ತಿದ್ದ ಸಮಯದಲ್ಲಿ ಅವರ ಕಾರು ಅಪಘಾತಕ್ಕೀಡಾಗಿದೆ. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಂಶಾಬಾದ್ ತೊಂಡುಪಲ್ಲಿ ಬಳಿ ಈ ಘಟನೆ ನಡೆದಿದ್ದು, ಟ್ರಕ್ ಮಂಗ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ.

ಮೇಘರಾಜ್ ಮತ್ತು ಮನೋಹರ್ ಜೊತೆ ಮಂಗ್ಲಿ ಪ್ರಯಾಣಿಸುತ್ತಿದ್ದರು. ಈ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಚಾಲಕ ಮದ್ಯದ ಅಮಲಿನಲ್ಲಿದ್ದ ಎಂದು ವರದಿಯಾಗಿದೆ. ಮತ್ತೊಂದೆಡೆ, ಮಂಗ್ಲಿ ಜನಪ್ರಿಯ ಗಾಯನ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿ ಸಿನಿಮಾದಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ಮಂಗ್ಲಿ ಪ್ರಾಣಾಪಾಯದಿಂದ ಪಾರಾಗುತ್ತಿದ್ದಂತೆ ಆಕೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.
ಮಂಗ್ಲಿ ಅವರು 2018ರಲ್ಲಿ ಸಿನಿಮಾ ರಂಗಕ್ಕೆ ಗಾಯಕಿ ಆಗಿ ಕಾಲಿಟ್ಟರು. ಆರಂಭದಲ್ಲಿ ಅವರು ತೆಲುಗು ಚಿತ್ರರಂಗದಲ್ಲಿ ಮಿಂಚಿದರು. ರಾಬರ್ಟ್ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟ ಮಂಗ್ಲಿ ಆ ನಂತರ 'ಪುಷ್ಪ' ಚಿತ್ರದ ಕನ್ನಡ ವರ್ಷನ್ನಲ್ಲಿ ಬರುವ 'ಹೂ ಅಂತೀಯಾ ಮಾವ..' ಹಾಡನ್ನು ಹಾಡಿ ಗಮನ ಸೆಳೆದರು.

ಇತ್ತೀಚಿಗೆ ತೆರೆಕಂಡು ಭರ್ಜರಿ ಯಶಸ್ಸು ಕಂಡ ಕಾಟೇರ ಚಿತ್ರದ ''ಪಸಂದಗವ್ನೆ ಹಾಡಿಗೂ ಧ್ವನಿಯಾಗಿದ್ದಾರೆ. ಈ ಸಾಂಗ್ ಕೂಡಾ ಸೂಪರ್ ಹಿಟ್ ಆಗಿತ್ತು. ಇವಷ್ಟೇ ಅಲ್ಲದೇ, ಹಲವಾರು ಕನ್ನಡ ಚಿತ್ರಗೀತೆಗಳಿಗೆ ಮಂಗ್ಲಿ ಅವರು ಹಿನ್ನೆಲೆ ಗಾಯಕರಾಗಿ ಕೆಲಸ ನಿರ್ವಹಿಸಿದ್ದಾರೆ.
ಗಾಯಾಳುಗಳ ದೂರಿನ ಆಧಾರದ ಮೇಲೆ ಪೊಲೀಸರು ಮಂಗ್ಲಿ ಕಾರಿಗೆ ಡಿಕ್ಕಿ ಹೊಡೆದ ಟ್ರಕ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತದ ವೇಳೆ ಅವರು ಮದ್ಯ ಸೇವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗ್ಲಿ ಅವರ ಕಾರಿನ ಹಿಂಭಾಗ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.ರಸ್ತೆ ಅಪಘಾತಕ್ಕೀಡಾದ ಗಾಯಕಿ ಮಂಗ್ಲಿ ಸುದ್ದಿ ಸ್ವಲ್ಪ ತಡವಾಗಿ ಬೆಳಕಿಗೆ ಬಂದಿದೆ. ಆದರೆ ಆತಂಕ ಪಡುವ ಅಗತ್ಯವಿಲ್ಲ ಎಂದು ಮಂಗ್ಲಿ ತಮ್ಮ ಆಪ್ತ ಮಾಧ್ಯಮ ಮಿತ್ರರಿಗೆ ಹೇಳಿದ್ದಾರೆ.

ನಿರೂಪಕಿಯಾಗಿದ್ದ ಮಂಗ್ಲಿ
ಚಿತ್ರರಂಗಕ್ಕೆ ಬರುವ ಮೊದಲು ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ ಮಂಗ್ಲಿ ನಂತರ ವಿಶೇಷ ಗಾಯಕಿಯಾದರು. ಫಿದಾ ಚಿತ್ರದಲ್ಲಿನ ಸಾರಂಗದರಿಯಾ ಹಾಡಿನ ಮೂಲಕ ಅವರು ಬಹಳ ಜನಪ್ರಿಯರಾದರು. ಅಲ್ಲಿಂದ ಅವರ ಗಾಯನ ವೃತ್ತಿ ಬೆಳೆದು ಹತ್ತಾರು ಹಾಡುಗಳನ್ನು ಹಾಡಿದರು.
ಇನ್ನೂ ಇದೆಲ್ಲದರ ಹೊರತಾಗಿ ಗಾಯಕಿ ಮಂಗ್ಲಿ ತನ್ನ ಸೋದರ ಸಂಬಂಧಿಯ ಮಗನನ್ನು ಮದುವೆಯಾಗುತ್ತಿದ್ದಾರೆ. ಎರಡು ಕುಟುಂಬಗಳ ನಡುವೆ ಮದುವೆ ಮಾತುಕತೆ ನಡೆಯುತ್ತಿದೆ ಎಂಬ ವದಂತಿ ಟಾಲಿವುಡ್ ಚಿತ್ರರಂಗದಲ್ಲಿ ಹರಿದಾಡುತ್ತಿದೆ.
ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡ ಮಂಗ್ಲಿ
ಆತ್ಮೀಯರೇ, ನಾನು ಸುರಕ್ಷಿತ ಮತ್ತು ಸದೃಢವಾಗಿದ್ದೇನೆ. ಇದು ಒಂದೆರಡು ದಿನಗಳ ಹಿಂದೆ ನಡೆದ ಅನಿರೀಕ್ಷಿತ ಸಣ್ಣ ಅಪಘಾತ. ದಯವಿಟ್ಟು ಹರಡುತ್ತಿರುವ ವದಂತಿಗಳಿಗೆ ಹೋಗಬೇಡಿ. ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು ಎಂದು ಮಂಗ್ಲಿ ಸಾಮಾಜಿಕ ಜಾಲತಾಣದ ಮೂಲಕ ವಿನಂತಿಯನ್ನ ಮಾಡಿಕೊಂಡಿದ್ದಾರೆ.


Click it and Unblock the Notifications











