ಪ್ರಭಾಸ್ 'ಫೌಜಿ' ತಂಡಕ್ಕೆ ಬಡಿದ ಬರಸಿಡಿಲು ; ಭೀಕರ ಅಪಘಾತದಲ್ಲಿ ಓರ್ವ ಸಾವು, ಐವರಿಗೆ ಗಂಭೀರ ಗಾಯ
ಒಂದು ಸಿನಿಮಾ ಹಿಂದೆ ಹಲವು ಕಥೆ ಮತ್ತು ವ್ಯಥೆಗಳಿರುತ್ತಾವೆ. ಬೆಳ್ಳಿಪರದೆಯ ಮೇಲೆ ಅನಾವರಣವಾಗುವ ವರ್ಣರಂಜಿತ ದೃಶ್ಯಾವಳಿಗಳ ಹಿಂದೆ ಹಲವರ ಪರಿಶ್ರಮ ಇರುತ್ತೆ. ಸಾವಿರಾರು ತಂತ್ರಜ್ಞರು ಹಗಲಿರುಳು ಒಂದು ಚಿತ್ರಕ್ಕೆ ಶ್ರಮ ವಹಿಸುತ್ತಾರೆ.
ಆದರೆ.. ಇವರ ಸುರಕ್ಷತೆಗೆ ಹಿಂದೆಯೂ ಆದ್ಯತೆ ಸಿಕ್ಕಿಲ್ಲ. ಈಗಲೂ ಸಿಕ್ತಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಚಿತ್ರದ ಚಿತ್ರೀಕರಣದ ಸ್ಥಳದಲ್ಲಿ ಹಲವಾರು ಅವಘಡಗಳು ಸಂಭವಿಸಿವೆ. ದುರಾದೃಷ್ಟವಶಾತ್ ಹೀಗೆ ನಡೆದ ಈ ಅನಾಹುತಗಳಲ್ಲಿ ಕೆಲವರು ತಮ್ಮ ಪ್ರಾಣವನ್ನು ಕೂಡ ಕಳೆದುಕೊಂಡಿದ್ದಾರೆ. ಸದ್ಯ ನಡೆದ ಇಂತಹದ್ದೇ ಒಂದು ಅವಘಡ ತೆಲುಗು ಚಿತ್ರರಂಗ ಮತ್ತು ''ಫೌಜಿ'' ಚಿತ್ರತಂಡವನ್ನು ಬೆಚ್ಚಿ ಬೀಳಿಸಿದೆ.

ಹೌದು, ''ಫೌಜಿ''.. ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಚಿತ್ರ. ಹನು ರಾಘವಪೂಡಿ ನಿರ್ದೇಶನದ ಈ ಚಿತ್ರಕ್ಕೆ ಪ್ರಸಿದ್ದ ನಿರ್ಮಾಣ ಸಂಸ್ಥೆ ಮೈತ್ರಿ ಬಂಡವಾಳ ಹೂಡುತ್ತಿದೆ.
ಇನ್ನು ಪ್ರಭಾಸ್ ದೊಡ್ಡದೊಂದು ಗೆಲುವು ವರ್ಷಗಳೇ ಆಗಿವೆ. ಈ ಹಿನ್ನೆಲೆ ಈ ಬಾರಿ ಗೆಲ್ಲಲೇಬೇಕೆಂಬ ಉದ್ದೇಶದೊಂದಿಗೆ ಪ್ರಭಾಸ್ ಬೆವರು ಸುರಿಸುತ್ತಿದ್ದಾರೆ. ಹೈದರಾಬಾದ್‌ನ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಬಿಡಾರ ಹೂಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ.
ಇದೇ ವೇಳೆ ಹೈದರಾಬಾದ್‌ನ ಅಬ್ದುಲ್ಲಾಪುರಂ ಹತ್ತಿರ ಇಂದು ( ಮೇ 5 ) ಚಿತ್ರತಂಡದ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ ಪ್ರೊಡಕ್ಷನ್‌ನ ವಾಹನ ಭೀಕರ ಅಪಘಾತಕ್ಕೀಡಾಗಿದೆ. ಚಿತ್ರದ ಚಿತ್ರೀಕರಣಕ್ಕೆ ಎಂದು ತೆರಳುತ್ತಿದ್ದ ಸಮಯದಲ್ಲಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಡಿಕ್ಕಿ ಹೊಡೆದಿದ್ದು, ಅಪಘಾತದಲ್ಲಿ ವಾಹನ ಸಂಪೂರ್ಣ ನುಜ್ಜು ಗುಜ್ಜಾಗಿದೆ.
ಇನ್ನು ಅಪಘಾತಕ್ಕೀಡಾದ ವಾಹನದಲ್ಲಿ ಒಟ್ಟು ಆರು ಜನ ಪ್ರಯಾಣ ಮಾಡುತ್ತಿದ್ದರು. ಆ ಪೈಕಿ ಒಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಉಳಿದ ಐವರವನ್ನು ಖಾಸಗಿ ಆಸ್ಪತ್ರೆಗೆ
ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
ಅಪಘಾತ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ಹೈದರಾಬಾದ್‌ನ ಈ ಹೆದ್ದಾರಿಗಳಲ್ಲಿ ಹಲವರು ವೇಗದ ಮಿತಿಯೊಳಗೆ ಚಾಲನೆ ಮಾಡುವುದಿಲ್ಲ. ಅದರಲ್ಲಿಯೂ ತಡರಾತ್ರಿ ಇಲ್ಲಿ ವೇಗದ ಸಂಚಾರದಿಂದ ಹಲವರು ಪ್ರಾಣ ಕಳೆದುಕೊಂಡಿದ್ಧಾರೆ. ಈ ದುರಂತಕ್ಕೂ ಕೂಡ ಅತಿ ವೇಗವೇ ಪ್ರಾರ್ಥಮಿಕ ಕಾರಣ ಎಂದು ಪೊಲೀಸರು ಮಾಧ್ಯಮಗಳಿಗೆ ಹೇಳಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ದುರಂತಕ್ಕೆ ''ಫೌಜಿ'' ಚಿತ್ರತಂಡ ಕಂಬನಿ ಮಿಡಿದಿದ್ದು ಚಿತ್ರದ ಚಿತ್ರೀಕರಣವನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ.ನಮ್ಮ ಪ್ರೊಡಕ್ಷನ್ ವಾಹನವು ನಿಯಂತ್ರಣ ತಪ್ಪಿ ರಸ್ತೆ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ವಾಹನವು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಒಳಗಿದ್ದ ತಂತ್ರಜ್ಞರು ಮತ್ತು ಸಹಾಯಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರು ಪ್ರಾಣ ಕಳೆದುಕೊಂಡಿರುವುದು ತುಂಬಾ ದುಃಖಕರ ಎಂದು ''ಫೌಜಿ'' ತಂಡ ಪ್ರತಿಕ್ರಿಯಿಸಿದೆ ಎಂದು ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿದೆ.
ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಈ ಅಪಘಾತಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಇನ್ನೂ ಹಂಚಿಕೊಂಡಿಲ್ಲ.
ಒಟ್ನಲ್ಲಿ ಅಬ್ದುಲ್ಲಾಪುರಮೇಟ್‌ನಲ್ಲಿ ನಡೆದ ಈ ದುರಂತವು ಚಿತ್ರರಂಗಕ್ಕೆ ಒಂದು ಎಚ್ಚರಿಕೆಯ ಗಂಟೆ. ಸಿನಿಮಾ ಚಿಕ್ಕದಿರಲಿ ಅಥವಾ ಎಷ್ಟೇ ದೊಡ್ಡದಿರಲಿ ಚಿತ್ರಕ್ಕೆ ದುಡಿಯುವ ಪ್ರತಿಯೊಬ್ಬರ ಜೀವ ರಕ್ಷಣೆಯತ್ತ ಚಿತ್ರರಂಗ ಇನ್ನಾದರೂ ಗಮನ ಕೊಡಬೇಕಿದೆ. ಕೆಲಸದ ಅವಧಿ, ಚಾಲಕರಿಗೆ ಸರಿಯಾದ ವಿಶ್ರಾಂತಿ ಮತ್ತು ವಾಹನಗಳ ಸುಸ್ಥಿತಿಯ ಕಡೆ ಕೂಡ ಗಮನ ನೀಡಬೇಕಿದೆ.
ಇನ್ನುಳಿದಂತೆ ''ಫೌಜಿ'' ಚಿತ್ರದಲ್ಲಿ ಪ್ರಭಾಸ್‌ಗೆ ಇಮಾನ್ವಿ ನಾಯಕಿಯಾಗಿದ್ಧಾರೆ. ಈ ಮೂಲಕ ಚಿತ್ರರಂಗವನ್ನು ಪ್ರವೇಶಿಸುತ್ತಿದ್ದಾರೆ. ಹಿರಿಯ ನಟರಾದ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್ ಮತ್ತು ಹಿರಿಯ ನಟಿ ಜಯಪ್ರಧಾ ಕೂಡ ಈ ಚಿತ್ರದಲ್ಲಿದ್ದಾರೆ. ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣವಾಗಿದೆ ಎನ್ನುವ ಸುದ್ದಿ ಇದ್ದು ಚಿತ್ರದ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಇನ್ನೂ ಘೋಷಿಸಬೇಕಿದೆ.


Click it and Unblock the Notifications