ಮತ್ತೆ ತೆಲುಗಿನಲ್ಲಿ ನಟಿಸಲಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ
'ಕಬ್ಜ', 'ಬುದ್ಧಿವಂತ 2', 'ಹೋಮ್ ಮಿನಿಸ್ಟರ್', 'ರವಿಚಂದ್ರ' ಸಿನಿಮಾಗಳಲ್ಲಿ ಬಿಜಿಯಾಗಿರುವ ನಟ, ನಿರ್ದೇಶಕ ಉಪೇಂದ್ರ ಅವರ ಕೈಯಲ್ಲಿ ಇನ್ನೂ ಎರಡು ಹೊಸ ಸಿನಿಮಾಗಳಿವೆ. ಈ ನಡುವೆ ಅವರು ಮತ್ತೆ ತೆಲುಗಿನಲ್ಲಿ ಬಣ್ಣ ಹಚ್ಚಲಿದ್ದಾರೆ ಎಂಬ ಸುದ್ದಿ ಬಂದಿದೆ.
ಉಪೇಂದ್ರ ಅವರಿಗೆ ತೆಲುಗು ಚಿತ್ರರಂಗ ಹೊಸದಲ್ಲ. ಕನ್ನಡದಲ್ಲಿ ನಿರ್ದೇಶಿಸಿದ್ದ 'ಓಂ' ಚಿತ್ರವನ್ನು 'ಓಂಕಾರಂ' ಹೆಸರಿನಲ್ಲಿ ತೆಲುಗಿನಲ್ಲಿ ತಾವೇ ನಿರ್ದೇಶಿಸಿದ್ದರು. ಬಳಿಕ 'ಕನ್ಯಾದಾನಂ', 'ಒಕೆ ಮಾಟಾ', 'ರಾ', 'ನೋತೊನ್ನೆ ವುಂಟುನು', 'ಟಾಸ್', 'ಸತ್ಯಂ', ಚಿತ್ರಗಳಲ್ಲಿ ನಟಿಸಿದ್ದರು. 2015ರಲ್ಲಿ ಅಲ್ಲು ಅರ್ಜುನ್ ಜತೆಗೆ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಅಭಿನಯಿಸಿದ್ದರು. ಈಗ ಮತ್ತೆ ಅವರು ಟಾಲಿವುಡ್‌ಗೆ ಕಾಲಿಡುತ್ತಿದ್ದಾರೆ. ವರುಣ್ ತೇಜ್ ಜತೆಗಿನ ಹೊಸ ಸಿನಿಮಾದಲ್ಲಿ ಉಪ್ಪಿ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ.

ತೆಲುಗಿನಲ್ಲಿ ಪರಭಾಷಿಕ ನಾಯಕರು
ತೆಲುಗಿನಲ್ಲಿ ಪರಭಾಷೆಯ ಪ್ರಮುಖ ನಾಯಕನಟರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವುದು ಸಂಪ್ರದಾಯದಂತೆ ಬೆಳೆಯುತ್ತಿದೆ. 80ರ ದಶಕದ ತಮಿಳು ನಾಯಕ ನಟರೂ ಈಗ ತೆಲುಗಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಮತ್ತೊಂದು ತೆಲುಗು ಸಿನಿಮಾಕ್ಕೆ ಪರಭಾಷಾ ಸೂಪರ್ ಸ್ಟಾರ್ ಎಂಟ್ರಿ ಕೊಡುತ್ತಿದ್ದಾರೆ.

ಮರು ಎಂಟ್ರಿ ಕೊಟ್ಟಿದ್ದ ಉಪ್ಪಿ
ಅಲ್ಲು ಅರ್ಜುನ್ ಅಭಿನಯಿಸಿದ್ದ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ನಟಿಸಿದ್ದ ಉಪೇಂದ್ರ ಅಭಿನಯ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿಂದೆ ತೆಲುಗು ಸಿನಿಮಾಗಳಲ್ಲಿ ನಟಿಸಿದ್ದ ಉಪ್ಪಿ, ಟಾಲಿವುಡ್‌ಗೆ ಮರು ಎಂಟ್ರಿ ಕೊಟ್ಟಿದ್ದಾರೆ ಎಂದೇ ಹೇಳಲಾಗಿತ್ತು.

ಸೈಮಾ ಅವಾರ್ಡ್ಸ್‌ನಲ್ಲಿ ಉಪ್ಪಿ ಹೆಸರು
S/o ಸತ್ಯಮೂರ್ತಿ ಚಿತ್ರದಲ್ಲಿನ ಅಭಿನಯಕ್ಕಾಗಿ ಐದನೇ ಸೈಮಾ ಅವಾರ್ಡ್ಸ್‌ನಲ್ಲಿ ಉತ್ತಮ ಪೋಷಕ ನಟ ವಿಭಾಗದಲ್ಲಿ ಉಪೇಂದ್ರ ಹೆಸರು ನಾಮನಿರ್ದೇಶನಗೊಂಡಿತ್ತು. 'ದೇವರಾಜ್' ಎಂಬ ಪಾತ್ರದಲ್ಲಿ ಉಪ್ಪಿ ನಟಿಸಿದ್ದರು. ಆದರೆ ಅದರ ಬಳಿಕ ಅವರು ಮತ್ತೆ ತೆಲುಗಿನಲ್ಲಿ ನಟಿಸಿರಲಿಲ್ಲ.

ಬಾಕ್ಸರ್ ಚಿತ್ರಕ್ಕೆ ಉಪ್ಪಿಗೆ ಆಹ್ವಾನ
ಈಗ ವರುಣ್ ತೇಜ್ ತಮ್ಮ ಮುಂಬರುವ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ನಟಿಸುವಂತೆ ಉಪೇಂದ್ರ ಅವರಿಗೆ ಮನವಿ ಮಾಡಿದ್ದಾರೆ. ವರುಣ್ ತೇಜ್ 'ಬಾಕ್ಸರ್' ಚಿತ್ರದಲ್ಲಿ ನಟಿಸುತ್ತಿದ್ದು, ಅದರಕ್ಕೆ ಸ್ಟಾರ್ ಹೀರೋ ಒಬ್ಬರ ಅತಿಥಿ ಪಾತ್ರದ ಅಗತ್ಯವಿದೆ. ಹೀಗಾಗಿ ಅವರು ಉಪೇಂದ್ರ ಅವರನ್ನು ಸಂಪರ್ಕಿಸಿದ್ದಾರೆ. ಅದರ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಲಾಗಿದೆ.

ಕಿಕ್ ಬಾಕ್ಸರ್ ಕಥೆ
'ಬಾಕ್ಸರ್' ಚಿತ್ರವನ್ನು ಹೊಸ ನಿರ್ದೇಶಕ ಕಿರಣ್ ಕೊರ್ರಪಟ್ಟಿ ನಿರ್ದೇಶಿಸುತ್ತಿದ್ದಾರೆ. ವರುಣ್ ತೇಜ್ ಕಿಕ್ ಬಾಕ್ಸರ್ ಆಗಿ ನಟಿಸುತ್ತಿದ್ದು, ಅದಕ್ಕಾಗಿ ಮುಂಬೈ ಹಾಗೂ ಅಮೆರಿಕದಲ್ಲಿ ವಿಶೇಷ ತರಬೇತಿ ಪಡೆದುಕೊಂಡಿದ್ದಾರಂತೆ.


Click it and Unblock the Notifications











