ಸಂಕ್ರಾಂತಿಯಲ್ಲಿ ಮಹಾಕದನ: ಮಹೇಶ್ ಬಾಬು 'ಗುಂಟೂರು ಖಾರಂ' ಜೊತೆ ವೆಂಕಟೇಶ್ 'ಸೈಂಧವ' ಫೈಟ್!
ಹೊಸ ವರ್ಷ ಆರಂಭ ಆಗಿದೆ. ಸಿನಿಮಾ ಮಂದಿ ಹೊಸ ವರ್ಷದ ಸಂಭ್ರಮದಲ್ಲಿಯೇ ಇದ್ದಾರೆ. ಇನ್ನೊಂದು ಕಡೆ ಸಂಕ್ರಾಂತಿ ಹಬ್ಬಕ್ಕೂ ಸಿದ್ಧತೆಗಳು ಆರಂಭ ಆಗಿವೆ. ದಕ್ಷಿಣ ಭಾರತದ ಸಿನಿಮಾ ಮಂದಿಗೆ ಈ ಹಬ್ಬ ತುಂಬಾನೇ ವಿಶೇಷ. ಅದರಲ್ಲೂ ತೆಲುಗು ಹಾಗೂ ತಮಿಳು ಚಿತ್ರರಂಗಕ್ಕೆ ಸಂಕ್ರಾಂತಿ ತುಂಬಾನೇ ಸ್ಪೆಷಲ್.
ಟಾಲಿವುಡ್‌ನಲ್ಲಿ ಸಂಕ್ರಾಂತಿ ಹಬ್ಬಕ್ಕೆ ಎರಡು ದೊಡ್ಡ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿದೆ. ಮಹೇಶ್ ಬಾಬು ಅಭಿನಯದ 'ಗುಂಟೂರು ಖಾರಂ' ಜೊತೆ ವಿಕ್ಟರಿ ವೆಂಕಟೇಶ್ ಅಭಿನಯದ 'ಸೈಂಧವ'. ಈ ಎರಡೂ ಸಿನಿಮಾಗಳೂ ಹಬ್ಬದ ಸಂಭ್ರಮದಲ್ಲಿಯೇ ಬಿಡುಗಡೆಯಾಗುತ್ತಿದೆ.

ಸಂಕ್ರಾಂತಿ ಹಬ್ಬದಂದು ತೆಲುಗು ಸಿನಿಮಾಗಳು ಮುಖಾಮುಖಿ ಆಗೋದು ಹೊಸದೇನು ಅಲ್ಲ. ಪ್ರತಿ ವರ್ಷ ಸಂಕ್ರಾಂತಿಗೆ ಸಿನಿಮಾ ರಿಲೀಸ್ ಮಾಡುವುದಕ್ಕೆ ದೊಡ್ಡ ದೊಡ್ಡ ಸಿನಿಮಾಗಳು ಸಿದ್ಧತೆಗಳನ್ನು ಮಾಡಿಕೊಂಡಿರುತ್ತೆ. ಅಂತೆಯೇ ಈ ವರ್ಷ ಕೂಡ ಮಹೇಶ್ ಬಾಬು ನಟನೆಯ 'ಗುಂಟೂರು ಖಾರಂ' ಹಾಗೂ ವೆಂಕಟೇಶ ಸಿನಿಮಾ 'ಸೈಂಧವ' ಬಾಕ್ಸಾಫೀಸ್‌ನಲ್ಲಿ ಸೆಣೆಸಾಡಲಿವೆ.
'ಗುಂಟೂರು ಖಾರಂ' ಸಿನಿಮಾ ಜನವರಿ 12ರಂದು ರಿಲೀಸ್ ಆಗುತ್ತಿದ್ದರೆ, ಅತ್ತ ವಿಕ್ಟರಿ ವೆಂಕಟೇಶ್ ಸಿನಿಮಾ 'ಸೈಂಧವ' ಒಂದು ದಿನ ತಡವಾಗಿ ಅಂದರೆ, ಜನವರಿ 13ರಂದು ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಈ ಕ್ಲ್ಯಾಶ್ ಬಗ್ಗೆ, ಚಿತ್ರಮಂದಿರಗಳ ಕೊರತೆ ಬಗ್ಗೆ ವೆಂಕಟೇಶ್ ತೆಲುಗು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಇಬ್ಬರು ಸೂಪರ್‌ಸ್ಟಾರ್ ಸಿನಿಮಾಗಳು ಇದೇ ರೀತಿ ರಿಲೀಸ್ ಆಗಿದ್ದವು. ಪ್ರಭಾಸ್ ನಟನೆಯ 'ಸಲಾರ್' ಹಾಗೂ ಶಾರುಖ್ ಖಾನ್ ನಟನೆಯ 'ಡಂಕಿ' ಈ ಎರಡೂ ಸಿನಿಮಾಗಳೂ ಒಂದು ದಿನದ ಗ್ಯಾಪ್‌ನಲ್ಲಿ ರಿಲೀಸ್ ಆಗಿದ್ದವು. ಇದು ಬಾಕ್ಸಾಫೀಸ್‌ನಲ್ಲಿ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದ್ದವು. ಇದೇ ಸ್ಥಿತಿ ಈ ಎರಡೂ ಸಿನಿಮಾಗಳ ಮೇಲೂ ಬೀಳುತ್ತೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.

ಇದಕ್ಕೆ "ನಾನು ಇಂತಹ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕೆಲವೊಮ್ಮೆ ಇಂತಹ ಸಂದರ್ಭಗಳು ಎದುರಾಗುತ್ತವೆ. ಇಂತಹ ಸಂದರ್ಭಗಳು ನಿಜಕ್ಕೂ ದುರದೃಷ್ಟಕರ. ಆದರೆ, ಕೆಲವೊಮ್ಮೆ ಪ್ರೇಕ್ಷಕರು ತುಂಬಾ ಸ್ಮಾರ್ಟ್ ಆಗಿ ಯೋಚನೆ ಮಾಡುತ್ತಾರೆ. ತಮಗೆ ಯಾವುದು ಇಷ್ಟವೋ ಅಂತಹ ಸಿನಿಮಾಗಳನ್ನು ಮಾತ್ರ ನೋಡುತ್ತಾರೆ. ಎಲ್ಲ ಸಿನಿಮಾಗಳನ್ನೂ ನೋಡುತ್ತಾರೆ ಅಂತ ಅನಿಸುತ್ತೆ. ನಾವು ಧನಾತ್ಮಕವಾಗಿ ಯೋಚಿಸಬೇಕು." ಎಂದು ವೆಂಕಟೇಶ್ ಪ್ರತಿಕ್ರಿಯೆ ನೀಡಿದ್ದಾರೆ.
ವೆಂಕಟೇಶ್ ನಟಿಸಿರುವ 'ಸೈಂಧವ' ಸಿನಿಮಾವನ್ನು ಶೈಲೇಶ್ ಕೋಲಾನ ನಿರ್ದೇಶನ ಮಾಡಿದ್ದಾರೆ. ವೆಂಕಟೇಶ್ ಜೊತೆ ನಟ ಶ್ರದ್ಧಾ ಶ್ರೀನಾಥ್ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಮುಖೇಶ್ ರಿಷಿ, ನವಾಜುದ್ದೀನ್ ಸಿದ್ದಿಕಿ ಹಾಗೂ ಆರ್ಯ ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ. 'ಸೈಂಧವ' ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಜೊತೆ ರುಹಾನಿ ಶರ್ಮಾ ಮತ್ತು ಆಂಡ್ರಿಯಾ ಅವರಂತಹ ನಾಯಕಿಯರು ಸಹ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನೊಂದು ಕಡೆ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸಿರುವ 'ಗುಂಟೂರು ಖಾರಂ' ಸಿನಿಮಾ ಮೇಲೆ ನಿರೀಕ್ಷೆಗಳು ಹೆಚ್ಚಿವೆ. ಹಲವು ವರ್ಷಗಳ ಬಳಿಕ ಮಹೇಶ್ ಬಾಬುಗೆ ತ್ರಿವಿಕ್ರಮ್ ನಿರ್ದೇಶನ ಮಾಡಿದ್ದಾರೆ. ಶ್ರೀಲೀಲಾ, ಎಸ್ ಎಸ್ ತಮನ್ ಮ್ಯೂಸಿಕ್ ಈ ಸಿನಿಮಾದ ಹೈಲೈಟ್. ಹೀಗಾಗಿ ಎರಡು ಸಿನಿಮಾಗಳಲ್ಲಿ ಯಾವುದನ್ನು ಇಷ್ಟ ಪಡುತ್ತಾರೆ ಅನ್ನೋದೇ ಈಗ ಕುತೂಹಲ.


Click it and Unblock the Notifications











