"ದಳಪತಿ ವಿಜಯ್ ಬಗ್ಗೆ ಮೊದಲೇ ಹೇಳಿದ್ದೆ" ಎಂದು ಹಳೇ ವಿಡಿಯೋ ಹಂಚಿಕೊಂಡ ವಿವಾದಾತ್ಮಕ ಜ್ಯೋತಿಷಿ
ತಮಿಳು ಚಿತ್ರರಂಗದ ಸ್ಟಾರ್ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಸಂಗೀತ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದು, ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಈ ಬಗ್ಗೆ ಇಬ್ಬರೂ ಅಧಿಕೃತವಾಗಿ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಈಗಾಗಲೇ ವರದಿಯಾಗಿರುವ ಪ್ರಕಾರ, ವಿಜಯ್ ಪತ್ನಿ ಸಂಗೀತಾ ಸೋರ್ನಲಿಂಗಂ ಚೆಂಗಲ್ಪಟ್ಟು ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ದಳಪತಿ ವಿಜಯ್-ಸಂಗೀತಾ ಇಬ್ಬರೂ 1999ರ ಆಗಸ್ಟ್ 25ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ವಿಜಯ್ ಅಭಿಮಾನಿಯಾಗಿದ್ದ ಸಂಗೀತಾ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಜೇಸನ್ ಸಂಜಯ್, ದಿವ್ಯಾ ಸಾಶಾ ಇಬ್ಬರು ಮಕ್ಕಳು. ಕಳೆದ ಕೆಲವು ದಿನಗಳಿಂದ ಇವರಿಬ್ಬರ ಮಧ್ಯೆ ವೈಮನಸ್ಸು ಮೂಡಿದ್ದು, ಅದಕ್ಕೆ ಬಹುಭಾಷಾ ನಟಿಯೊಬ್ಬರು ಕಾರಣ ಎಂದು ಹೇಳಲಾಗುತ್ತಿದೆ.

ಸುಮಾರು 27 ವರ್ಷಗಳ ಕಾಲ ಈ ಜೋಡಿ ಅನ್ಯೋನ್ಯವಾಗಿ ಕೌಟುಂಬಿಕ ಜೀವನವನ್ನು ನಡೆಸಿದ್ದರು. ಕಳೆದ ಎರಡು ವರ್ಷಗಳಿಂದ ಇವರಿಬ್ಬರಲ್ಲಿ ಭಿನ್ನಾಭಿಪ್ರಾಯಗಳು ಮೂಡಿದ್ದವು. ಪದೇ ಪದೆ ಇಂತಹ ಸುದ್ದಿಗಳು ಹಬ್ಬಿ ಸಂಚಲನ ಸೃಷ್ಟಿಸಿದ್ದರೂ, ಯಾರೂ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದ್ರೀಗ ದಿಢೀರನೇ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆಂದು ಅವರ ಅಭಿಮಾನಿಗಳು ಶಾಕ್ ಆಗಿದ್ದಾರೆ. ಈ ಮಧ್ಯೆ ತೆಲುಗಿನ ಜನಪ್ರಿಯ ಹಾಗೂ ವಿವಾದಾತ್ಮಕ ಜ್ಯೋತಿಷಿ ವೇಣು ಸ್ವಾಮಿ ಹಳೇ ವಿಡಿಯೋವನ್ನು ಮತ್ತೆ ಶೇರ್ ಮಾಡಿಕೊಂಡು ಸಂಚಲನ ಸೃಷ್ಟಿಸಿದ್ದಾರೆ.
ದಳಪತಿ ವಿಜಯ್ ಪತ್ನಿ ಸಂಗೀತಾ ಸ್ಪೆಷಲ್ ಮ್ಯಾರೇಜ್ ಆಕ್ಟ್‌ನ ಸೆಕ್ಷನ್ 27(1)(ಎ), 27(1)(ಡಿ) ಅಡಿಯಲ್ಲಿ ವಿಚ್ಛೇದನ ಕೋರಿದ್ದಾರೆ. ಇದರಲ್ಲಿ ಪ್ರಮುಖವಾಗಿ ಅಕ್ರಮ ಸಂಬಂಧ, ಮಾನಸಿಕ ಅಥವಾ ದೈಹಿಕ ಕ್ರೌರ್ಯಗಳು ಸೇರಿವೆ. ಅಲ್ಲದೇ ತಮ್ಮ ಮೇಲೆ ಆರ್ಥಿಕ ನಿರ್ಬಂಧಗಳನ್ನು ಹೇರಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ಇವರ ವಿಚ್ಚೇದನ ಸುದ್ದಿ ಇಷ್ಟೊಂದು ಸುದ್ದಿಯಾಗಿದ್ದರೂ, ದಳಪತಿ ವಿಜಯ್ ಕಡೆಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಸಿಕ್ಕಿಲ್ಲ. ಈ ಪ್ರಕರಣ ಮಾರ್ಚ್ 20ರಂದು ಚೆಂಗಲ್ಪಟ್ಟು ಕುಟುಂಬ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಒಂದ್ಕಡೆ ಇಷ್ಟೆಲ್ಲ ನಡೆಯುತ್ತಿರುವಾಗ ಇತ್ತ ವಿವಾದಾತ್ಮಕ ಜ್ಯೋತಿಷಿ ವೇಣುಸ್ವಾಮಿ ಮತ್ತೆ ಸದ್ದು ಮಾಡುತ್ತಿದ್ದಾರೆ. ಅದಕ್ಕೆ ಕಾರಣ ಅವರೇ ಈ ಹಿಂದೆ ಮಾಡಿದ್ದ ಒಂದು ವಿಡಿಯೋ. ಅದರಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಸಂಚಲನವೊಂದು ನಡೆಯಲಿದೆ. ಬಹಳ ವರ್ಷಗಳ ಹಿಂದೆ ವಿವಾಹವಾಗಿದ್ದ ಸೂಪರ್‌ಸ್ಟಾರ್ ಒಬ್ಬರು ವಿಚ್ಚೇದನ ಸಮಸ್ಯೆಯಿಂದ ಎದುರಿಸಬೇಕಾಗುತ್ತೆ. ಸ್ಟಾರ್ ನಟಿಯೊಂದಿಗೆ ಅವರ ಸಂಬಂಧ ಹೊರಬೀಳಲಿದೆ. ಹೀಗಾಗಿ ಅವರು ಪತ್ನಿಗೆ ವಿಚ್ಛೇದನ ನೀಡಿ, ಆ ನಾಯಕಿಯನ್ನು ಮದುವೆಯಾಗಲಿದ್ದಾರೆ." ಎಂದು ಹೇಳಿದ್ದರು.
2025 ಅಕ್ಟೋಬರ್‌ನಲ್ಲಿ ವೇಣುಸ್ವಾಮಿ ಮಾಡಿದ್ದ ಈ ವಿಡಿಯೋವನ್ನು ಅವರು ಮತ್ತೆ ಶೇರ್ ಮಾಡಿದ್ದು, ತಮ್ಮ ಭವಿಷ್ಯ ನಿಜವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಹಳೆ ವಿಡಿಯೋದಲ್ಲಿ ವೇಣುಸ್ವಾಮಿ ಯಾವುದೇ ನಾಯಕ ಅಥವಾ ನಾಯಕಿಯ ಹೆಸರನ್ನು ಉಲ್ಲೇಖ ಮಾಡಿರಲಿಲ್ಲ. ಈ ಹಿಂದೆ ಸಮಂತಾ-ನಾಗಚೈತನ್ಯ ವಿಚ್ಚೇದನದ ಬಗ್ಗೆನೂ ಹೇಳಿಕೆ ನೀಡಿದ್ದರು. ಇಲ್ಲಿಂದ ವೇಣುಸ್ವಾಮಿ ಜನಪ್ರಿಯತೆ ಹೆಚ್ಚಾಗಿತ್ತು. ಆದರೆ, ಇತ್ತೀಚೆಗೆ ಇವರು ನುಡಿದ ಭವಿಷ್ಯ ಸುಳ್ಳಾಗಿತ್ತು. ಹೀಗಾಗಿ ಹೆವೀ ಟ್ರೋಲ್ ಆಗಿದ್ದರು.
ಇತ್ತ ದಳಪತಿ ವಿಜಯ್ ರಾಜಕೀಯಕ್ಕೆ ಎಂಟ್ರಿ ಕೊಟ್ಟ ವೇಳೆನೇ ವಿವಾದಕ್ಕೆ ಸಿಕ್ಕಿಕೊಂಡಿದ್ದಾರೆ. ಇಲ್ಲಿವರೆಗೂ ಕ್ಲೀನ್ ಇಮೇಜ್ ಇಟ್ಟುಕೊಂಡು ರಾಜಕೀಯ ಪ್ರವೇಶ ಮಾಡಿರೋ ವಿಜಯ್‌ಗೆ ವಿಚ್ಚೇದನ ಪ್ರಕರಣ ರಾಜಕೀಯ ಭವಿಷ್ಯದ ಬಗ್ಗೆ ದೊಡ್ಡ ಪೆಟ್ಟು ಕೊಡಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಈಗ ವಿಜಯ್ ವಿರುದ್ಧ ರಾಜಕೀಯ ವಿರೋಧಿಗಳು ಟೀಕೆಗಳನ್ನು ಮಾಡುವ ಸಾಧ್ಯತೆಯಿದೆ. ಇದನ್ನೆಲ್ಲ ಅವರು ಹೇಗೆ ಎದುರಿಸುತ್ತಾರೋ? ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











