ಸಿನಿಮಾ ಟ್ರೇಲರ್ ನೋಡುವುದಕ್ಕೂ ದುಡ್ಡು ಪಾವತಿಸಿ: ರಾಮ್ ಗೋಪಾಲ್ ವರ್ಮಾ ಹೊಸ ತಂತ್ರ
ಲಾಕ್ ಡೌನ್ ಅವಧಿಯಲ್ಲಿ ಸಿನಿಮಾ ಚಟುವಟಕೆಗಳು ಬಹುತೇಕ ಸ್ಥಗಿತಗೊಂಡಿರುವ ಸಂದರ್ಭದಲ್ಲಿಯೂ ಚಿತ್ರೀಕರಣ ಮಾಡಿ ದುಡ್ಡು ಮಾಡಿಕೊಳ್ಳುತ್ತಿರುವ ವ್ಯಕ್ತಿಯೆಂದರೆ ರಾಮ್ ಗೋಪಾಲ್ ವರ್ಮಾ. ವಿವಾದಾತ್ಮಕ ಹೇಳಿಕೆ ಮತ್ತು ಸಿನಿಮಾಗಳಿಂದಲೇ ಸುದ್ದಿಯಲ್ಲಿರುವ ರಾಮ್ ಗೋಪಾಲ್ ವರ್ಮಾ, ಇತ್ತೀಚೆಗೆ ಪವನ್ ಕಲ್ಯಾಣ್ ಅವರನ್ನು ಅಣಕಿಸುವ 'ಪವರ್ ಸ್ಟಾರ್' ಸಿನಿಮಾ ಮಾಡುತ್ತಿರುವುದಾಗಿ ಘೋಷಿಸುವ ಮೂಲಕ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.
Recommended Video
ಲಾಕ್ ಡೌನ್ ಅವಧಿಯಲ್ಲಿ ಸಣ್ಣ ಸಣ್ಣ ಸಿನಿಮಾಗಳನ್ನು ಶೂಟಿಂಗ್ ಮಾಡಿ, ತಮ್ಮದೇ ಆಪ್‌ನಲ್ಲಿ ಬಿಡುಗಡೆ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ, ಅದರಿಂದಲೇ ಲಕ್ಷಗಟ್ಟಲೆ ಹಣ ದುಡಿಯುತ್ತಿದ್ದಾರೆ. ಅವರ ಆಪ್‌ನಲ್ಲಿ ಹಣ ಪಾವತಿಸಿದವರಿಗೆ ಮಾತ್ರವೇ ಸಿನಿಮಾ ವೀಕ್ಷಿಸಲು ಅವಕಾಶವಿದೆ. ಆದರೆ 'ಪವರ್ ಸ್ಟಾರ್' ಸಿನಿಮಾದ ಟ್ರೇಲರ್ ನೋಡಲು ಕೂಡ ಹಣ ಪಾವತಿಸಬೇಕಿದೆ. ಮುಂದೆ ಓದಿ...

ಟ್ರೇಲರ್ ವೀಕ್ಷಣೆಗೆ ಹಣ
ಪವನ್ ಕಲ್ಯಾಣ್ ಅವರನ್ನೇ ಹೋಲುವ ವ್ಯಕ್ತಿಯನ್ನು ಹಾಕಿಕೊಂಡು ಸಿನಿಮಾ ಮಾಡುತ್ತಿರುವ ರಾಮ್ ಗೋಪಾಲ್ ವರ್ಮಾ ಅದರ ಟ್ರೇಲರ್ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಸಾಮಾನ್ಯವಾಗಿ ಸಿನಿಮಾಗಳ ಬಗ್ಗೆ ಕುತೂಹಲ ಮೂಡಿಸಲು ಟ್ರೇಲರ್‌ಅನ್ನು ಬಿಡುಗಡೆ ಮಾಡಲಾಗುತ್ತದೆ. ಟ್ರೇಲರ್‌ಗೆ ಇದುವರೆಗೂ ಯಾರೂ ದುಡ್ಡು ನಿಗದಿ ಮಾಡಿದ ಉದಾಹರಣೆ ಇಲ್ಲ. ಆದರೆ ರಾಮ್ ಗೋಪಾಲ್ ವರ್ಮಾ ಅಂತಹದೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.

25 ರೂ. ಕೊಟ್ಟರೆ ಮಾತ್ರ ಟ್ರೇಲರ್
'ಪವರ್ ಸ್ಟಾರ್' ವಿವಾದದ ಕಾರಣದಿಂದ ಕುತೂಹಲ ಕೆರಳಿಸಿದೆ. ಹೀಗಾಗಿ ಪವನ್ ಕಲ್ಯಾಣ್ ಅಭಿಮಾನಿಗಳ ಆದಿಯಾಗಿ ಸಾವಿರಾರು ಮಂದಿ ಸಿನಿಮಾ ಟ್ರೇಲರ್ ವೀಕ್ಷಿಸಲು ಮುಗಿಬೀಳುತ್ತಾರೆ ಎನ್ನುವುದು ಆರ್‌ಜಿವಿಗೆ ಗೊತ್ತು. ಅದಕ್ಕಾಗಿ ಟ್ರೇಲರ್ ವೀಕ್ಷಣೆಗೆ 25 ರೂ. ನಿಗದಿ ಮಾಡಿದ್ದಾರೆ. ಜುಲೈ 22ರಂದು ಬೆಳಿಗ್ಗೆ 11 ಗಂಟೆಗೆ 'ಪವರ್ ಸ್ಟಾರ್' ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ. 25 ರೂ ಪಾವತಿಸಿದರೆ ಮಾತ್ರ ಈ ಟ್ರೇಲರ್ ವೀಕ್ಷಣೆಗೆ ಲಭ್ಯವಾಗಲಿದೆ.

ಜುಲೈ 25ರಂದು ಸಿನಿಮಾ ಬಿಡುಗಡೆ
ವಿಶೇಷವೆಂದರೆ ಟ್ರೇಕರ್ ಬಿಡುಗಡೆಯಾದ ಮೂರು ದಿನಕ್ಕೆ, ಅಂದರೆ ಜುಲೈ 25ಕ್ಕೆ ಸಿನಿಮಾ ಕೂಡ ಬೆಳಿಗ್ಗೆ 11 ಗಂಟೆಗೆ ಆರ್‌ಜಿವಿ ವರ್ಲ್ಡ್ ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಇದಕ್ಕೆ ಮುಂಗಡ ಬುಕಿಂಗ್‌ಗೆ ಅವಕಾಶ ಮಾಡಿಕೊಡಲಾಗುತ್ತದೆ.

ಮುಂಗಡ ಬುಕಿಂಗ್‌ಗೆ ಕಡಿಮೆ ಹಣ
ಟ್ರೇಲರ್ ಬಿಡುಗಡೆಯಾದ ದಿನವೇ ಚಿತ್ರದ ಟಿಕೆಟ್‌ನ ಮುಂಗಡ ಬುಕಿಂಗ್ ಶುರುವಾಗಲಿದೆ. ಮುಂಗಡ ಬುಕಿಂಗ್ ಮಾಡಿದವರಿಗೆ 150 ರೂ. ಮತ್ತು ಜಿಎಸ್‌ಟಿ ವೆಚ್ಚ ಇರಲಿದೆ. ಜುಲೈ 25ರ ಬೆಳಿಗ್ಗೆ 11 ಗಂಟೆಯವರೆಗೂ ಈ ಅವಕಾಶ ಇರಲಿದೆ. ಸಿನಿಮಾ ಬಿಡುಗಡೆಯಾದ ಬಳಿಕ ವೀಕ್ಷಿಸುವವರು 250 ರೂ ಮತ್ತು ಜಿಎಸ್‌ಟಿ ವೆಚ್ಚ ಪಾವತಿ ಮಾಡಬೇಕಾಗುತ್ತದೆ.

ಪಕ್ಷದ ಸೋಲಿನಿಂದ ಕಥೆ ಆರಂಭ
'ಮನಸೇನಾ ಪಕ್ಷವು ಚುನಾವಣೆಯಲ್ಲಿ ಸೋತು ಪವರ್ ಸ್ಟಾರ್ ನಿರಾಶೆಗೊಳ್ಳುವ ಕಥೆ ಹೊಂದಿದೆ. ಪಕ್ಷದ ಸೋಲಿನೊಂದಿಗೆ ಚಿತ್ರ ಆರಂಭವಾಗುತ್ತದೆ. ಪವನ್ ಕಲ್ಯಾಣ್ ಅವರ ರಷ್ಯಾ ಮೂಲದ ಮೂರನೆಯ ಹೆಂಡತಿ, ಅವರ ಫಾರ್ಮ್ ಹೌಸ್‌ನಲ್ಲಿರುವ ಪ್ರಾಣಿಗಳು ಮತ್ತು ಗಿಡಗಳ ಬಗ್ಗೆ ಸಹ ತೋರಿಸಲಾಗುತ್ತದೆ' ಎಂದು ರಾಮ್ ಗೋಪಾಲ್ ವರ್ಮಾ ಪರೋಕ್ಷವಾಗಿ ಬಹಿರಂಗಪಡಿಸಿದ್ದಾರೆ.


Click it and Unblock the Notifications