ಚಿತ್ರೀಕರಣದ ವೇಳೆ ಕಾರು ಪಲ್ಟಿ, ವಿಜಯ್ ದೇವರಕೊಂಡ, ಸಮಂತಾಗೆ ಗಾಯ
ವಿಜಯ್ ದೇವರಕೊಂಡ ಹಾಗೂ ಸಮಂತಾ ನಟಿಸುತ್ತಿರುವ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿದ್ದು, ಚಿತ್ರೀಕರಣದ ವೇಳೆ ನಡೆದ ಅಪಘಾತದಲ್ಲಿ ಇಬ್ಬರೂ ಮುಖ್ಯ ನಟರು ಗಾಯಗೊಂಡಿದ್ದಾರೆ.
ವಿಜಯ್ ದೇವರಕೊಂಡ ಹಾಗೂ ಸಮಂತಾ 'ಖುಷಿ' ಹೆಸರಿನ ಹೊಸ ಸಿನಿಮಾಕ್ಕಾಗಿ ಕಾಶ್ಮೀರದಲ್ಲಿ ಚಿತ್ರೀಕರಣ ನಡೆಸುತ್ತಿದ್ದು, ಚಿತ್ರೀಕರಣದ ವೇಳೆ ಇಬ್ಬರು ಮುಖ್ಯ ನಟರು ಪ್ರಯಾಣಿಸುತ್ತಿದ್ದ ಕಾರು ನೀರಿಗೆ ಬಿದ್ದು ಇಬ್ಬರೂ ನಟರು ಗಾಯಗೊಂಡಿದ್ದಾರೆ. ಆದರೆ ಇಬ್ಬರಿಗೂ ಹೆಚ್ಚಿನ ತೊಂದರೆ ಆಗಿಲ್ಲ ಎನ್ನಲಾಗುತ್ತಿದೆ.
ಕಾಶ್ಮೀರದ ಪಹಲ್‌ಗಮ್ ಎಂಬುವಲ್ಲಿ ವಿಜಯ್ ದೇವರಕೊಂಡ ಹಾಗೂ ಸಮಂತಾ ಇಬ್ಬರೂ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದರು. ಕಾರು ಚೇಸಿಂಗ್ ದೃಶ್ಯವೊಂದರಲ್ಲಿ ನಟಿಸುತ್ತಿರುವ ವೇಳೆ, ಕಾರು ಆಯತಪ್ಪಿ ನೀರಿಗೆ ಬಿದ್ದಿದೆ. ಇದರಿಂದ ಇಬ್ಬರೂ ನಟರಿಗೆ ಗಾಯಗಳಾಗಿವೆ. ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಚಿತ್ರೀಕರಣ ಮಾಡಿದ್ದರಿಂದ ಇಬ್ಬರಿಗೂ ಹೆಚ್ಚಿನ ಗಾಯಗಳಾಗಿಲ್ಲ ಎನ್ನಲಾಗುತ್ತಿದೆ.
ಗಾಯಗಳಿಂದ ಚೇತರಿಸಿಕೊಂಡು ಒಂದೇ ದಿನದಲ್ಲಿ ಇಬ್ಬರೂ ನಟರು ಮತ್ತೆ ಚಿತ್ರೀಕರಣದಲ್ಲಿ ಪಾಲ್ಗೊಂಡರಂತೆ. ಕಾಶ್ಮೀರದ ಶ್ರೀನಗರದ ದಾಲ್ ನದಿಯ ಬಳಿ ಸಿನಿಮಾದ ಹೆಚ್ಚಿನ ಭಾಗದ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.

ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ
ಅಪಘಾತ ಆಗುತ್ತಿದ್ದಂತೆ ವಿಜಯ್ ದೇವರಕೊಂಡ ತಮಗೆ ಬೆನ್ನಿಗೆ ಏಟು ಬಿದ್ದಿರುವುದಾಗಿ ಹೇಳಿದರಂತೆ, ಕೂಡಲೇ ಸಮಂತಾ ಹಾಗೂ ವಿಜಯ್ ದೇವರಕೊಂಡ ಇಬ್ಬರನ್ನೂ ಶ್ರೀನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತತಂತೆ, ಮೂಳೆತಜ್ಞರು ವಿಜಯ್ ದೇವರಕೊಂಡ ಅವರನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದ್ದಾರೆ. ಸಮಂತಾಗೆ ಸಹ ಚಿಕಿತ್ಸೆ ನೀಡಲಾಗಿದೆ. ಬಿಗಿ ಭದ್ರತೆ ನಡುವೆ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆಯಂತೆ.

ಡಿಸೆಂಬರ್ 25 ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ
'ಖುಷಿ' ಸಿನಿಮಾವು ಆಕ್ಷನ್ ತುಂಬಿದ ಪ್ರೇಮಕತೆಯಾಗಿದ್ದು, ಇದೊಂದು ಭಿನ್ನವಾದ ಸಿನಿಮಾ ಆಗಿರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೇ ವರ್ಷ ಡಿಸೆಂಬರ್ 25 ಕ್ಕೆ ಸಿನಿಮಾ ತೆರೆಗೆ ಬರಲಿದೆ. ತೆಲುಗು, ಕನ್ನಡ, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸಮಂತಾ
ಸಮಂತಾ ನಟನೆಯ ಹಲವು ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ, ವಿಚ್ಛೇಧನದ ಬಳಿಕವಂತೂ ಹಲವು ವೈವಿಧ್ಯಮಯ ಪಾತ್ರಗಳಲ್ಲಿ ಸಮಂತಾ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಸಮಂತಾ ನಟಿಸಿಸರುವ 'ಶಾಕುಂತಲಂ' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಬಳಿಕ 'ಯಶೋಧ' ಸಿನಿಮಾ ತೆರೆಗೆ ಬರಲಿದೆ. ಇದೀಗ 'ಖುಷಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇಂಗ್ಲೀಷ್‌ನ 'ಅರೇಂಜ್‌ಮೆಂಟ್ಸ್ ಆಫ್ ಲವ್' ಸಿನಿಮಾದಲ್ಲಿ ದ್ವಿಲಿಂಗಿಯ ಪಾತ್ರದಲ್ಲಿ ನಟಿಸಲಿದ್ದಾರೆ. ಬಳಿಕ ತಾಪ್ಸಿ ಪನ್ನು ನಿರ್ಮಿಸುತ್ತಿರುವ ಹಿಂದಿ ಸಿನಿಮಾದಲ್ಲಿ ಸಹ ಸಮಂತಾ ಕಾಣಿಸಿಕೊಳ್ಳಲಿದ್ದಾರೆ.

ಹಲವು ಸಿನಿಮಾಗಳಲ್ಲಿ ವಿಜಯ್ ಬ್ಯುಸಿ
ಇನ್ನು ನಟ ವಿಜಯ್ ದೇವರಕೊಂಡ ಸಹ ಸಖತ್ ಬ್ಯುಸಿಯಾಗಿದ್ದಾರೆ. ವಿಜಯ್ ನಟಿಸಿ, ಪುರಿ ಜಗನ್ನಾಥ್ ನಿರ್ದೇಶನದ 'ಲೈಗರ್' ಸಿನಿಮಾ ಆಗಸ್ಟ್ 25 ರಂದು ತೆರೆಗೆ ಬರಲಿದೆ. ಅದರ ಬಳಿಕ ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಆನಂದ್ ಅಣ್ಣಮಲೈ ನಿರ್ದೇಶನದ 'ಹೀರೋ' ಸಿನಿಮಾದಲ್ಲಿ ನಟಿಸಲಿದ್ದಾರೆ. ನಂತರ ಮತ್ತೆ ಪುರಿ ಜಗನ್ನಾಥ್ ನಿರ್ದೇಶನದ 'ಜನ ಗಣ ಮನ' ಸಿನಿಮಾದಲ್ಲಿ ನಟಿಸಲಿದ್ದಾರೆ. ಸಮಂತಾ ಜೊತೆಗೆ 'ಖುಷಿ' ಸಿನಿಮಾ ಚಿತ್ರೀಕರಣ ಚಾಲ್ತಿಯಲ್ಲಿದೆ. ಕೊನೆಗೆ ಕರಣ್ ಜೋಹರ್ ನಿರ್ಮಾಣದ ಪೂರ್ಣ ಪ್ರಮಾಣದ ಹಿಂದಿ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ.


Click it and Unblock the Notifications











