"ಮೆಗಾಸ್ಟಾರ್ ಚಿರಂಜೀವಿಗಿಂತ ವಿಜಯ್ ಉತ್ತಮ ಡ್ಯಾನ್ಸರ್"; ಮೆಗಾ ಫ್ಯಾನ್ಸ್‌ಗೆ ಕ್ಷಮೆ ಕೇಳಿದ ಕೀರ್ತಿ ಸುರೇಶ್
ನಾಯಕಿಯಾಗುವುದಕ್ಕೆ ಗ್ಲಾಮರ್ ಮುಖ್ಯ ಎನ್ನುವಂತಹ ಕಾಲದಲ್ಲಿ ಪ್ರತಿಭೆಯೇ ಮುಖ್ಯ ಎಂದು ತೋರಿಸಿದ ನಟಿ ಕೀರ್ತಿ ಸುರೇಶ್. ಬಹುಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ನಟಿಗೆ ಅಪಾರ ಅಭಿಮಾನಿಗಳಿದ್ದಾರೆ. ಅದರಲ್ಲೂ ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಹೆಚ್ಚು ಅಭಿಮಾನಿ ಬಳಗವಿದೆ. ವಿವಾಹದ ಬಳಿಕ ಸಿನಿಮಾಗಳಿಂದ ಕೊಂಚ ದೂರ ಉಳಿದಿದ್ದರೂ, ಈಗಾಗಲೇ ಮುಗಿಸಿರುವ ಸಿನಿಮಾದ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ.
ಕೀರ್ತಿ ಸುರೇಶ್ ಭಾರತೀಯ ಚಿತ್ರರಂಗ ಕಂಡ ಅತ್ಯುತ್ತಮ ನಟಿ ಅನ್ನೋದರಲ್ಲಿ ಎರಡು ಮಾತಿಲ್ಲ. ತೆಲುಗಿನಲ್ಲಿ ನಟಿಸಿದ 'ಮಹಾನಟಿ' ಸಿನಿಮಾವೇ ಇದಕ್ಕೆ ಸಾಕ್ಷಿ. ಈ ಸಿನಿಮಾದಲ್ಲಿ ನಟನೆಯನ್ನು ಪರಿಗಣಿಸಿ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಇದು ಅವರ ಅಭಿನಯದ ಪ್ರತಿಭೆಯನ್ನು ಎತ್ತಿ ತೋರಿಸುತ್ತದೆ. ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಈ ನಟಿ ವಿವಾದದಿಂದ ಸದಾ ದೂರವೇ ಉಳಿದಿದ್ದರು. ಆದರೆ, ಇತ್ತೀಚೆಗೆ ಕೊಟ್ಟ ಒಂದು ಹೇಳಿಕೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಕೀರ್ತಿ ಸುರೇಶ್ ತಮ್ಮ ಸಿನಿಮಾದ ಪ್ರಚಾರದ ವೇಳೆ ನೀಡಿದ ಹೇಳಿಕೆ ತೆಲುಗು ಮಂದಿಯನ್ನು ಕೆರಳಿಸಿದೆ. ಅದರಲ್ಲೂ ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳಂತೂ ಕೆಂಡಾ ಮಂಡಲವಾಗಿದ್ದಾರೆ. ಇವರ ಆಕ್ರೋಶವನ್ನು ಮನಗಂಡ ನಟಿ ತನ್ನ ಹೇಳಿಕೆ ಬಗ್ಗೆ ಕ್ಲಾರಿಟಿ ಕೊಟ್ಟು ಅವರಿಗೆ ಕ್ಷಮೆಯನ್ನೂ ಕೋರಿದ್ದಾರೆ. ಹಾಗಿದ್ದರೆ, ಕೀರ್ತಿ ಸುರೇಶ್ ಮೆಗಾ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾಗಿದ್ದೇಕೆ? ಅಂತಹದ್ದು ಏನು ಹೇಳಿದರು? ತಿಳಿಯುವುದಕ್ಕೆ ಮುಂದೆ ಓದಿ.
ಕೀರ್ತಿ ಸುರೇಶ್ ಸದ್ಯಕ್ಕೀಗ 'ರಿವಾಲ್ವರ್ ರೀಟಾ' ಎಂಬ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಪ್ರಚಾರದಲ್ಲಿ ಭಾಗವಹಿಸಿದ್ದ ನಟಿ, ಒಂದು ಹೇಳಿಕೆಯನ್ನು ನೀಡಿದ್ದರು. ಅದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಸಂದರ್ಶನವೊಂದರಲ್ಲಿ "ಉತ್ತಮ ನೃತ್ಯಗಾರ ಯಾರು?" ಎಂದು ನಿರೂಪಕರು ಕೇಳಿದ ಪ್ರಶ್ನೆಗೆ ಕೀರ್ತಿ ಸುರೇಶ್ ಕೊಟ್ಟ ಉತ್ತರ ಮೆಗಾ ಫ್ಯಾನ್ಸ್ ನಿದ್ದೆ ಕೆಡಿಸಿತ್ತು.
"ಮೆಗಾಸ್ಟಾರ್ ಚಿರಂಜೀವಿಗಿಂತ ದಳಪತಿ ವಿಜಯ್ ಉತ್ತಮ ಡ್ಯಾನ್ಸರ್" ಎಂದು ಕೀರ್ತಿ ಸುರೇಶ್ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ, ಮೆಗಾ ಸ್ಟಾರ್ ಅಭಿಮಾನಿಗಳು ಆಕ್ರೋಶ ಹೊರ ಹಾಕಿದ್ದರು. ಕೀರ್ತಿ ಸುರೇಶ್ ಅವರನ್ನು ಲೆಫ್ಟ್ ರೈಟ್ ತೆಗೆದುಕೊಂಡಿದ್ದರು. " ಕೆಲಸ ಮಾಡುತ್ತಿರೋದು ತೆಲುಗು ಚಿತ್ರರಂಗದಲ್ಲಿ.. ಚಿರಂಜೀವಿಗೆ ಅವಮಾನ ಮಾಡುತ್ತೀರಾ?" ಎಂದು ಕೆಲವರು ಪ್ರಶ್ನೆ ಮಾಡಿದ್ದರು. ಇನ್ನು ಕೆಲ ಅಭಿಮಾನಿಗಳು ಅಸಮಾಧಾನವನ್ನು ಹೊರಹಾಕಿದ್ದರು.

ಈ ವಿವಾದವನ್ನು ಮನಗಂಡ ಕೀರ್ತಿ ಸುರೇಶ್ 'ರಿವಾಲ್ವರ್ ರೀಟಾ' ಪ್ರಚಾರಕ್ಕಾಗಿ ಹೈದರಾಬಾದ್‌ನಲ್ಲಿ ಬಂದಾಗ, ಪತ್ರಿಕಾಗೋಷ್ಠಿಯಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ. ಪ್ರೆಸ್‌ಮೀಟ್‌ನಲ್ಲಿ ವರದಿಗಾರರೊಬ್ಬರು "ಚಿರಂಜೀವಿ ಚಿತ್ರರಂಗದಲ್ಲಿಯೇ ಬೆಸ್ಟ್ ಡ್ಯಾನ್ಸರ್. ನಿಮ್ಮ ಫೇವರಿಟ್ ಹೀರೋ ವಿಜಯ್ ಆಗಿರಬಹುದು. ಆದರೆ, ಚಿರಂಜೀವಿಯವರನ್ನು ಯಾಕೆ ಅವಮಾನಿಸುತ್ತೀರಿ?" ಎಂದು ಪ್ರಶ್ನೆ ಮಾಡಿದ್ದರು. ಇದಕ್ಕೆ ಕೀರ್ತಿ ಸುರೇಶ್ "ಚಿರಂಜೀವಿಯವರನ್ನು ನಾನು ಎಷ್ಟು ಗೌರವಿಸುತ್ತೇನೆ ಅನ್ನೋದು ಅವರಿಗೆ ಗೊತ್ತಿದೆ. ಅವರೊಂದಿಗೆ ಕೆಲಸ ಮಾಡುವುದು ಹೆಮ್ಮೆ. ನಾನು ಈಗಾಗಲೇ ಚಿರಂಜೀವಿ ಅವರೊಂದಿಗೆ ಮಾತನಾಡಿದ್ದೇನೆ. ನನ್ನ ಹೇಳಿಕೆಯನ್ನು ಹೀಗೆ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆಂದು ಭಾವಿಸಿರಲಿಲ್ಲ. ಒಂದು ವೇಳೆ ಚಿರಂಜೀವಿ ಅಭಿಮಾನಿಗಳಿಗೆ ನೋವಾಗಿದ್ದರೆ ಕ್ಷಮಿಸಿ" ಎಂದು ಕ್ಷಮೆ ಕೇಳಿದ್ದಾರೆ.
ಹಾಗೇ "ಚಿರಂಜೀವಿ ಅವರನ್ನು ಕೀಳಾಗಿ ನೋಡುವುದು ನನ್ನ ಉದ್ದೇಶ ಆಗಿರಲಿಲ್ಲ. ಇಲ್ಲಿ ಚಿರಂಜೀವಿಯವರು ಹೇಗೆ ಜನಪ್ರಿಯರೋ.. ಹಾಗೇ ವಿಜಯ್ ಸರ್ ಅಲ್ಲಿ ಫೇಮಸ್. ಇಬ್ಬರೂ ದಿಗ್ಗಜರೇ. ಚಿರಂಜೀವಿ ಎಷ್ಟು ದೊಡ್ಡ ನಟ ಅನ್ನೋದು ಎಲ್ಲರಿಗೂ ಗೊತ್ತಿದೆ. ನನ್ನ ತಾಯಿ ಕೂಡ ಅವರೊಂದಿಗೆ ನಟಿಸಿದ್ದಾರೆ. ಚಿರಂಜೀವಿ ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು. ನಾನು ಅವರ ಬಗ್ಗೆ ಕೀಳಾಗಿ ಮಾತನಾಡಿಲ್ಲ" ಎಂದು ಕೀರ್ತಿ ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











