ಶಿವನ ಪರಮಭಕ್ತ 'ಕಣ್ಣಪ್ಪ'ನ ಅವತಾರದಲ್ಲಿ ವಿಷ್ಣು ಮಂಚು; ಇದು ಅತೀ ದೊಡ್ಡ ಸಿನಿಮಾ ಆಗ್ಬೇಕು ಎಂದು ನಟ
ಈ ವರ್ಷ ಮೋಸ್ಟ್ ಎಕ್ಸ್‌ಪೆಕ್ಟೆಡ್ ತೆಲುಗು ಸಿನಿಮಾಗಳ ಪೈಕಿ 'ಕಣ್ಣಪ್ಪ' ಕೂಡ ಒಂದು. ಇದು ಟಾಲಿವುಡ್‌ನಲ್ಲಿ ನಿರ್ಮಾಣಗೊಂಡಿರುವ ಮತ್ತೊಂದು ಬಿಗ್ ಬಜೆಟ್ ಸಿನಿಮಾ. ವಿಷ್ಣು ಮಂಚು ನಾಯಕನಾಗಿ ಈ ಸಿನಿಮಾದಲ್ಲಿ ನಟಿಸಿದ್ದು, ಇದರಲ್ಲಿ ಅವರದ್ದು ಕಣ್ಣಪ್ಪನ ಪಾತ್ರ. ಶಿವನ ಭಕ್ತನಾಗಿ ನಟಿಸಿರುವ ವಿಷ್ಣು ಮಂಚು ವೃತ್ತಿ ಬದುಕಿಗೆ ಈ ಸಿನಿಮಾ ತುಂಬಾನೇ ಮಹತ್ವದ್ದಾಗಿದೆ.
ವಿಷ್ಣು ಮಂಚು ಜೊತೆ ತಾರಾಗಣದಲ್ಲಿ ಮೋಹನ್‌ಲಾಲ್, ಅಕ್ಷಯ್ ಕುಮಾರ್, ಪ್ರಭಾಸ್ ಮತ್ತು ಕಾಜಲ್ ಅಗರ್ವಾಲ್ ಅವರಂತಹ ದೊಡ್ಡ ತಾರಾಬಳಗವೇ ಇದೆ. ಕನ್ನಡದ ವರನಟ ಡಾ.ರಾಜ್‌ಕುಮಾರ್ ವೃತ್ತಿ ಬದುಕು ಆರಂಭಿಸಿದ್ದು ಇದೇ ಕಣ್ಣಪ್ಪ ಪಾತ್ರದ ಮೂಲಕ. 'ಬೇಡರ ಕಣ್ಣಪ್ಪ' ಸಿನಿಮಾ ಅಣ್ಣಾವ್ರ ವೃತ್ತಿ ಬದುಕನ್ನೇ ಬದಲಿಸಿತ್ತು. ಈಗ ವಿಷ್ಣು ಮಂಚು 'ಕಣ್ಣಪ್ಪ'ನಾಗಿ ಕಾಣಿಸಿಕೊಳ್ಳಲಿದ್ದು, ಕಾಕತಾಳೀಯವೆಂಬಂತೆ ಅಣ್ಣಾವ್ರ ಹುಟ್ಟುಹಬ್ಬದ ಮರು ದಿನವೇ ಬಿಡುಗಡೆಯಾಗುತ್ತಿದೆ.

'ಕಣ್ಣಪ್ಪ' ಸಿನಿಮಾ ಬಗ್ಗೆ ವಿಷ್ಣು ಮಂಚು ಫಿಲ್ಮಿಬೀಟ್‌ಗೆ ವಿಶೇಷ ಸಂದರ್ಶನವನ್ನು ನೀಡಿದ್ದಾರೆ. ಇದರಲ್ಲಿ ಕಣ್ಣಪ್ಪನ ಪಾತ್ರದ ಬಗ್ಗೆ, ಶಿವನ ಬಗ್ಗೆ ಸಖತ್ ಇಂಟ್ರೆಸ್ಟಿಂಗ್ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಕಣ್ಣಪ್ಪ ಹಾಗೂ ಶಿವನ ಸಂಬಂಧವನ್ನು ಈ ಸಿನಿಮಾದಲ್ಲಿ ಹೇಗೆ ತೋರಿಸಲಾಗಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಈ ಸಂದರ್ಶನದ ಆ ಇಂಡ್ರೆಸ್ಟಿಂಗ್ ವಿಷಯ ಇಲ್ಲಿದೆ.
ಕಣ್ಣಪ್ಪ ಸಿನಿಮಾದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳುವಾಗ ತಮ್ಮ ಧಾರ್ಮಿಕ ನಂಬಿಕೆ ಬಗ್ಗೆನೂ ಮಾತಾಡಿದ್ದಾರೆ. "ನಾನು ಹಿಂದೂ. ನನ್ನ ನಂಬಿಕೆಯಂತೆ ನಾನು ದೇವರನ್ನು ಪೂಜಿಸುತ್ತೇನೆ. ಅದು ನಿಮಗಿಂತ ವಿಭಿನ್ನವಾಗಿರಬಹುದು. ನೀವು ದೇವರೊಂದಿಗೆ ಮಾತಾಡುವುದು, ನಾನು ದೇವರೊಂದಿಗೆ ಮಾತಾಡುವುದು ವಿಭಿನ್ನವಾಗಿದೆ. ನನಗೆ ದೇವಸ್ಥಾನಕ್ಕೆ ಹೋಗಿ ದೇವರೊಂದಿಗೆ ಮಾತಾಡುವುದರಲ್ಲಿ ನಂಬಿಕೆ ಇಲ್ಲ. ನಾನು ಎಲ್ಲೋ ಹೋಗುವಾಗ ದೇವರೊಂದಿಗೆ ಮಾತಾಡಬೇಕು ಅಂದರೆ, ಅಲ್ಲಿಯೇ ಅವರೊಂದಿಗೆ ಮಾತಾಡುವುದಕ್ಕೆ ಶುರು ಮಾಡುತ್ತೇನೆ. ಕಣ್ಣಪ್ಪ ಸಿನಿಮಾ ಕೂಡ ಅದೇ. ಶುದ್ಧವಾದ ಹೃದಯ ಹಾಗೂ ಒಳ್ಳೆಯ ಉದ್ದೇಶದಿಂದ ದೇವರನ್ನು ನೆನಪಿಸಿಕೊಂಡರೆ, ದೇವರು ನಿಮ್ಮ ಜೊತೆ ಇರುತ್ತಾನೆ. " ಎನ್ನುತ್ತಾರೆ ವಿಷ್ಣು ಮಂಚು.
ಹಾಗೇ 'ಕಣ್ಣಪ್ಪ' ಅತೀ ದೊಡ್ಡ ಸಿನಿಮಾ ಆಗಬೇಕು ಎಂದು ಆಸೆ ಪಟ್ಟಿದ್ದಾರೆ. "ನನಗೆ ಕಣ್ಣಪ್ಪ ಅತೀ ದೊಡ್ಡ ಸಿನಿಮಾ ಆಗಬೇಕು ಅನ್ನೋ ಆಸೆಯಿದೆ. ಆದರೆ, ಅತೀ ದೊಡ್ಡ ಸಿನಿಮಾ ಆಗಬೇಕಾ? ದೊಡ್ಡ ಸಿನಿಮಾ ಆಗಬೇಕಾ? ಅನ್ನೋದು ಪ್ರೇಕ್ಷಕರ ಕೈಯಲ್ಲಿದೆ. ನಮ್ಮ ಆಸೆ ಜನರು ಇದನ್ನು ದೊಡ್ಡ ಸಿನಿಮಾ ಮಾಡಬೇಕು ಅನ್ನೋದು. ಈ ಹಿಂದೆ ಬಂದ ಭಕ್ತ ಕಣ್ಣಪ್ಪ ಸಿನಿಮಾ ದೊಡ್ಡ ಸಿನಿಮಾ ಆಗಿತ್ತು. ನಾನು ಆ ಲೆವೆಲ್‌ನಲ್ಲಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾನೆ ಅಂದುಕೊಂಡಿದ್ದೇನೆ. ಅದೂ ಕೂಡ ಪ್ರೇಕ್ಷಕರ ಕೈನಲ್ಲಿಯೇ ಇದೆ. ಈ ಸಿನಿಮಾ ಎಲ್ಲಿ ಇರಬೇಕು ಅಂತ ಅವರಿ ನಿರ್ಧಾರ ಮಾಡುತ್ತಾರೆ." ಎಂದು ವಿಷ್ಣು ಮಂಚು ಹೇಳಿದ್ದಾರೆ.
ಕಣ್ಣಪ್ಪ ಸಿನಿಮಾವನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಣೆ ಮಾಡಿದರೆ ಖುಷಿ ಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. "ನಾನು ಈ ಸಿನಿಮಾವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತೋರಿಸುವುದಕ್ಕೆ ಇಷ್ಟ ಪಡುತ್ತೇನೆ. ನನಗೆ ಅವರಿಗೆ ನನ್ನ ಸಿನಿಮಾ ತೋರಿಸುವುದಕ್ಕೆ ಅವಕಾಶ ಸಿಕ್ಕಿದರೆ, ನಾನು ಕೇವಲ ಈ ಸಿನಿಮಾವನ್ನು ಮಾತ್ರ ತೋರಿಸುತ್ತೇನೆ. ನನ್ನ ತಂದೆ ಅವರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದ್ದಾರೆ. ಅದನ್ನು ಇಟ್ಟುಕೊಂಡು ನನ್ನ ಸಿನಿಮಾವನ್ನು ನೋಡಿ ಅಂತ ಕೇಳುವುದು ಎಷ್ಟು ಸರಿ ಅನ್ನೋದು ನನಗೆ ಗೊತ್ತಿಲ್ಲ" ಎಂದಿದ್ದಾರೆ.


Click it and Unblock the Notifications











