ಹೆಂಡತಿ ಮಕ್ಕಳು ಬೇರೆ ದೇಶದಲ್ಲಿದ್ದಾರೆ ಎಂದು ಭಾವುಕರಾದ ವಿಷ್ಣು ಮಂಚು
ಕೊರೊನಾ ವೈರಸ್ ನಿಯಂತ್ರಣಕ್ಕೆ ಕೈಗೊಂಡಿರುವ ಲಾಕ್‌ಡೌನ್ ನಿರ್ಣಯದಿಂದಾಗಿ ಅನೇಕ ಕುಟುಂಬಗಳು ದೂರ ದೂರವೇ ಉಳಿಯುವಂತಾಗಿದೆ. ಪೋಷಕರು-ಮಕ್ಕಳೇ ಸೇರುವಂತಹ ಅವಕಾಶ ಇಲ್ಲದಂತಾಗಿದೆ. ಸೆಲೆಬ್ರಿಟಿಗಳೂ ಇದರಿಂದ ಹೊರತಾಗಿಲ್ಲ. ಕೆಲವು ಚಿತ್ರತಂಡದವರು ವಿದೇಶಕ್ಕೆ ತೆರಳಿ ಅಲ್ಲಿಯೇ ಸಿಲುಕಿಕೊಳ್ಳುವಂತಾಗಿದೆ. ಇನ್ನು ಕೆಲವರು ಲಾಕ್‌ಡೌನ್‌ಗೂ ಮುನ್ನ ಈ ಬಿಕ್ಕಟ್ಟಿನ ನಡುವೆಯೂ ವಿದೇಶಕ್ಕೆ ತೆರಳಿದವರೂ ಅಲ್ಲಿಯೇ ಉಳಿದುಕೊಂಡಿದ್ದಾರೆ.
Recommended Video
ತಮ್ಮ ಹೆಂಡತಿ ಮತ್ತು ಮಕ್ಕಳು ಕೂಡ ಬೇರೆ ದೇಶದಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ನಟ ವಿಷ್ಣು ಮಂಚು ಭಾವುಕರಾಗಿ ಹೇಳಿಕೊಂಡಿದ್ದಾರೆ. ಜನತಾ ಕರ್ಫ್ಯೂ ದಿನದಂದು ಸಂಜೆ ಚಪ್ಪಾಳೆ ತಟ್ಟುವ ಮೂಲಕ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ವಿಡಿಯೋವೊಂದು ವೈರಲ್ ಆಗಿತ್ತು. ಆದರೆ ಅದರಲ್ಲಿ ಅವರ ಮನೆಯ ಇತರೆ ಸದಸ್ಯರು ಇದ್ದರು. ಪತ್ನಿ ಮತ್ತು ಮಕ್ಕಳು ಕಾಣಿಸಿರಲಿಲ್ಲ.
ವಿಷ್ಣು ಮಂಚು ಅವರ ಪತ್ನಿ ವಿರಾಣಿಕಾ, ಮಕ್ಕಳಾದ ಅರಿಯಾನಾ, ವಿವಿಯಾನಾ, ಅವ್ರಾಮ್ ಮತ್ತು ಆರ್ಯಾ ವಿದ್ಯಾ ಬೇರೆ ದೇಶದಲ್ಲಿ ಇದ್ದಾರೆ.

ಜನತಾ ಕರ್ಫ್ಯೂ ದಿನ ಕುಟುಂಬದ ಜತೆ
ಜನತಾ ಕರ್ಫ್ಯೂ ದಿನ ವಿಡಿಯೋದಲ್ಲಿ ವಿಷ್ಣು ಮಂಚು, ತಂದೆ ಮೋಹನ್ ಬಾಬು, ಸಹೋದರಿ ಲಕ್ಷ್ಮಿ ಮಂಚು ಮತ್ತು ಸಂಬಂಧಿ ವಿದ್ಯಾ ನಿರ್ವಾಣ ಮಾತ್ರ ಕಾಣಿಸಿದ್ದರು. ವಿಷ್ಣು ಅವರ ಪತ್ನಿ, ಮಕ್ಕಳು ಕಾಣಿಸುತ್ತಿಲ್ಲ ಎಂದು ಅನೇಕರು ಪ್ರಶ್ನಿಸಿದ್ದರು.
ಹೆಂಡತಿ ಮಕ್ಕಳಿಂದ ದೂರ
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಹಾಕಿರುವ ವಿಷ್ಣು, ಜನರ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಲಾಕ್‌ಡೌನ್ ಘೋಷಿಸಿದ ದಿನದಂದು ತಮ್ಮ ಪರಿಸ್ಥಿತಿ ಹೇಗಿತ್ತು ಎಂಬುದನ್ನೂ ತಾವು ನೆನಪಿಸಿಕೊಳ್ಳುವುದಿಲ್ಲ. ಹೆಂಡತಿ ಮಕ್ಕಳಿಂದ ದೂರ ಇರುವುದು ಕಷ್ಟವಾಗುತ್ತಿದೆ ಎಂದು ತಿಳಿಸಿದ್ದಾರೆ.

ಗಡ್ಡ ಬಿಡಲು ಕಾರಣ ಇದು
ವಿಷ್ಣು ಮಂಚು ಗಡ್ಡ ಬಿಡುತ್ತಿರುವುದು ಅನೇಕರಿಗೆ ಅಚ್ಚರಿ ಮೂಡಿಸಿತ್ತು. ತಮ್ಮ ಕುಟುಂಬ ಮತ್ತೆ ಸೇರಿದ ಬಳಿಕವೇ ಗಡ್ಡವನ್ನು ತೆಗೆಯಬೇಕು ಎನಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ. 'ನಮ್ಮ ಕುಟುಂಬದ ಸದಸ್ಯರೊಬ್ಬರಿಗೆ ಅನಾರೋಗ್ಯ ಉಂಟಾಗಿದ್ದರಿಂದ ನಾವೆಲ್ಲರೂ ವಿದೇಶಕ್ಕೆ ತೆರಳಿದ್ದೆವು. ಅಪ್ಪನ ಹುಟ್ಟುಹಬ್ಬ ಇದ್ದಿದ್ದರಿಂದ ನಾನು ಬೇಗನೆ ವಾಪಸ್ ಬಂದಿದ್ದೆ. ನಾನು ಬಂದ ಕೆಲವು ದಿನಗಳ ಬಳಿಕ ಅವರು ಮರಳಿ ಬರಬೇಕಿತ್ತು' ಎಂದು ವಿಷ್ಣು ಹೇಳಿದ್ದಾರೆ.

ಮಕ್ಕಳಿಂದ ದೂರ ಇರಲಿಲ್ಲ
'ಕಳೆದ ಏಳು ವರ್ಷಗಳಲ್ಲಿ ನಾನು ಎಂದಿಗೂ ನನ್ನ ಮಕ್ಕಳಿಂದ ದೂರ ಇರಲಿಲ್ಲ. ಅವರಿಗೆ ತುಂಬಾ ಅಟ್ಯಾಚ್ ಆಗಿದ್ದೆ. ಅವರೊಂದಿಗೇ ಕ್ವಾರೆಂಟೀನ್ ಆಗಿರುವುದು ಬೇರೆಯದೇ ಸಂಗತಿ ಆಗಿರುತ್ತಿತ್ತು. ಆದರೆ ಈ ಪರಿಸ್ಥಿತಿಯನ್ನು ನಾವು ಎದುರಿಸಲೇಬೇಕು. ಮನೆಯಲ್ಲಿಯೇ ಸುರಕ್ಷಿತರಾಗಿರಿ' ಎಂದು ಸಲಹೆ ನೀಡಿದ್ದಾರೆ.


Click it and Unblock the Notifications











