"ಈ ದಿನ ನನಗಾಗಿ ಹೋರಾಡಬೇಡಿ.. ಆ ದಿನಕ್ಕಾಗಿ ಹೋರಾಡಿ" 'ಆದಿಪುರುಷ' ಡೈಲಾಗ್ 'ಬಾಹುಬಲಿ' ನೆನಪಿಸುತ್ತಿರೋದೇಕೆ?
ಪ್ರಭಾಸ್ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ ಮಾಡಿದ್ದೇ 'ಬಾಹುಬಲಿ'. ಈ ಸಿನಿಮಾ ರಿಲೀಸ್ ಆಗಿ ಎಂಟು ವರ್ಷಗಳಾಗಿದ್ದರೂ, ಇದನ್ನು ಮೀರಿಸೋ ಮತ್ತೊಂದು ಸಿನಿಮಾ ಬಂದೇ ಇಲ್ಲ. ಅಂದಿದ್ದ ಕ್ರೇಜ್ ಇಂದಿಗೂ ಹಾಗೇ ಇದೆ.
'ಬಾಹುಬಲಿ' ಪ್ರಭಾಸ್ ವೃತ್ತಿ ಬದುಕಿನ ಅತ್ಯುನ್ನತ ಸಿನಿಮಾ. ಇಲ್ಲಿಂದ ಮತ್ತೆಂದೂ 'ಬಾಹುಬಲಿ' ಮೀರಿಸೋ ಮತ್ತೊಂದು ಸಿನಿಮಾ ಕೊಟ್ಟೇ ಇಲ್ಲ. ಅದಕ್ಕೆ 'ಆದಿಪುರುಷ್' ಸಿನಿಮಾ ಮೇಲೆ ಎಲ್ಲರ ಕಣ್ಣು ಇಟ್ಟು ಕೂತಿದ್ದಾರೆ.

ರಾಮನ ಅವತಾರ ತಾಳಿರೋ ಪ್ರಭಾಸ್ ಕಣ್ತುಂಬಿಕೊಳ್ಳುವುದಕ್ಕೆ ಡಾರ್ಲಿಂಗ್ ಅಭಿಮಾನಿಗಳಷ್ಟೇ ಅಲ್ಲ, ಸಿನಿಪ್ರೇಮಿಗಳು ಕಾದು ಕೂತಿದ್ದಾರೆ. 'ಆದಿಪುರುಷ್' ಟೀಸರ್ ರಿಲೀಸ್ ಮಾಡಿ ಟೀಕೆಗೆ ಒಳಗಾಗಿದ್ದ ಸಿನಿಮಾತಂಡ ಟ್ರೈಲರ್ ಬಿಟ್ಟು ಮೆಚ್ಚುಗೆ ಗಳಿಸಿದೆ. ಇದೇ ವೇಳೆ ಸಿನಿಮಾ ಒಂದು ಡೈಲಾಗ್ 'ಬಾಹುಬಲಿ'ಯನ್ನು ನೆನಪಿಸುತ್ತಿದೆ. ಅಷ್ಟಕ್ಕೂ ಆ ಡೈಲಾಗ್ ಯಾವುದು? 'ಬಾಹುಬಲಿ'ಯನ್ನು ನೆನಪಿಸುತ್ತಿರೋದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
'ಬಾಹುಬಲಿ' ನೆನಪಿಸುತ್ತಿದೆ 'ಆದಿಪುರುಷ್'
'ಆದಿಪುರುಷ' ಟ್ರೈಲರ್ ಈಗ ಮತ್ತೆ 'ಬಾಹುಬಲಿ'ಯನ್ನು ನೆನಪಿಸುತ್ತಿದೆ. ತೆಲುಗು ಸಿನಿಮಾ ಪ್ರಿಯರು 'ಬಾಹುಬಲಿ' ನೆನೆಯುತ್ತಾ ಅದೇ ಜೋಷ್‌ನಲ್ಲೇ 'ಆದಿಪುರುಷ್' ಟ್ರೈಲರ್ ಅನ್ನು ಪದೇ ಪದೇ ನೋಡುತ್ತಿದ್ದಾರೆ. ಅದಕ್ಕೆ ಕಾರಣ ಬಾಹುಬಲಿಯ ಕ್ಲೈ ಮ್ಯಾಕ್ಸ್ ಸೀನ್ ಹಾಗೂ 'ಆದಿಪುರುಷ್' ಟ್ರೈಲರ್‌ನ ಒಂದು ಡೈಲಾಗ್.
'ಆದಿಪುರುಷ್' ಟ್ರೈಲರ್‌ನಲ್ಲಿ ಪ್ರಭಾಸ್ ಹೇಳುವ ಒಂದೇ ಒಂದು ಡೈಲಾಗ್ ಮತ್ತೆ ಬಾಹುಬಲಿಯ ಕ್ಲೈಮ್ಯಾಕ್ಸ್ ಸೀನ್ ಅನ್ನು ನೆನಪಿಸಿದೆ. ಪ್ರಭಾಸ್ ಸೈನಿಕರನ್ನು ಹುರಿದುಂಬಿಸುವ ಮೆಗಾ ಆಕ್ಷನ್ ಸೀನ್ ಇದು.

'ಬಾಹುಬಲಿ' ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ನೆನಪಿದೆಯೇ?
ಬಾಹುಬಲಿಯ ಸೀನ್‌ನಲ್ಲಿ ಶತ್ರುಗಳ ವಿರುದ್ಧ ತಿರುಗಿಬಿದ್ದ ಸೇನೆ ಆತ್ಮಬಲವನ್ನು ಕಳೆದುಕೊಂಡಿರುತ್ತೆ. ಈ ಸಂದರ್ಭದಲ್ಲಿ ಪ್ರಭಾಸ್ ತನ್ನ ಸೇನೆಗೆ ಆತ್ಮಸ್ಥೈರ್ಯ ತುಂಬುವ ದೃಶ್ಯವದು. ಆ ದೃಶ್ಯ, ಅದೇ ಡೈಲಾಗ್ ಮತ್ತೆ ಪ್ರೇಕ್ಷಕರಿಗೆ ನೆನಪು ತರುತ್ತಿದೆ.
"ಮಹಾಸೇನಾ.. ಏನದು ಸಾವು? ನಮ್ಮ ಆತ್ಮಸ್ಥೈರ್ಯಕ್ಕಿಂತ ಶತ್ರುವಿನ ಶಕ್ತಿ ದೊಡ್ಡದು ಎಂದು ತಿಳಿಯುವುದು ಸಾವು. ರಣರಂಗದಲ್ಲಿ ಸಾವಿಗಿಂತ ಹೇಡಿತನ ತೋರುವುದು ಸಾವು. ನಮ್ಮ ತಾಯಿಯನ್ನು ಅವಮಾನಿಸಿದ ನೀಚ ನಮ್ಮೆದುರಿಗೆ ನಿಂತು ನಗುತ್ತಿದ್ದಾನೆ. ಈಗ ಓಡಿ ಹೋಗದೇ ಸಾವಿಗೆ ಬೆನ್ನು ತೋರದೆ, ಆತನ ತಲೆ ಕಡಿದು ಅಮ್ಮನ ಕಾಲಡಿ ತರಲು ಹೊರಟಿದ್ದೇನೆ. ನನ್ನೊಂದಿಗೆ ಯಾರು ಬರುತ್ತೀರಾ? ನನ್ನೊಂದಿಗೆ ಯಾರು ಸಾಯುತ್ತೀರಾ?" ಎಂದು ಪ್ರಭಾಸ್ ಧೈರ್ಯ ತುಂಬುತ್ತಾರೆ.
ಆದಿಪುರುಷ್ ಡೈಲಾಗ್ ಏನು?
ಇಂದು (ಮೇ 9) ರಿಲೀಸ್ ಆಗಿರುವ 'ಆದಿಪುರುಷ್' ಟ್ರೈಲರ್‌ನಲ್ಲೂ ಹೀಗೆ ಆತ್ಮಸ್ಥೈರ್ಯ ತುಂಬುವ ಡೈಲಾಗ್ ಇದೆ. ಶ್ರೀರಾಮ ತನ್ನ ವಾನರ ಸೇನೆಯೊಂದಿಗೆ ಲಂಕೆಗೆ ಯುದ್ಧಕ್ಕೆ ಹೋಗುವುದಕ್ಕೂ ಮುನ್ನ ಈ ಡೈಲಾಗ್ ಇಡಲಾಗಿದೆ. ಈ ವೇಳೆ ರಾಮನ ಅವತಾರದಲ್ಲಿರೋ ಪ್ರಭಾಸ್ ಹೇಳಿದ ಡೈಲಾಗ್ ಹೀಗಿದೆ.
"ಈ ದಿನ ನನಗಾಗಿ ಹೋರಾಡಬೇಡಿ.. ಆ ದಿನಕ್ಕಾಗಿ ಹೋರಾಡಿ. ಇತಿಹಾಸದಲ್ಲಿ ನಿಮ್ಮ ಹೆಸರನ್ನು ಕೇಳಿದೊಡನೆ ಗೌರವದೊಂದಿಗೆ ತಲೆ ತಗ್ಗಿಸಬೇಕು. ಹೋರಾಡುವಿರಾ? ಧೈರ್ಯದಿಂದ ಅಹಂಕಾರಿಯ ಎದೆ ಸೀಳಿ ವಿಜಯಪತಾಕೆ ಹಾರಿಸಿ." ಎಂದು ಪ್ರಭಾಸ್ ಹೇಳಿದ ಡೈಲಾಗ್ ವೈರಲ್ ಆಗುತ್ತಿದೆ. ಇದೇ ಡೈಲಾಗ್ ಮತ್ತೆ ಬಾಹುಬಲಿಯನ್ನು ನೆನಪಿಸುತ್ತಿದೆ.


Click it and Unblock the Notifications











