'RRR' ಚಿತ್ರಕ್ಕೆ ಪ್ರಭಾಸ್ ಆಯ್ಕೆ ಆಗಿಲ್ಲವೇಕೆ? ರಾಜಮೌಳಿ ಕೊಟ್ಟ ಕಾರಣವೇನು?
'ಬಾಹುಬಲಿ' ಭಾರತದ ಪ್ರೇಕ್ಷಕರಿಗೆ ಹೊಸ ಅಭಿರುಚಿಯನ್ನು ನೀಡಿದ ಸಿನಿಮಾ. ಪ್ರಭಾಸ್ ಹಾಗೂ ರಾಜಮೌಳಿ ಇಬ್ಬರೂ ಸಿನಿಮಾದ ಮೂಲಕವೇ ಸೂಪರ್‌ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಒಂದೇ ಸಿನಿಮಾದಿಂದ ನಿರ್ದೇಶಕ ಹಾಗೂ ನಾಯಕ ಇಬ್ಬರೂ ಸೂಪರ್‌ಸ್ಟಾರ್ ಪಟ್ಟಕ್ಕೆ ಏರಿದ ಉದಾಹರಣೆಗಳು ತೀರಾ ವಿರಳ. ಎಲ್ಲಕ್ಕಿಂತ ಹೆಚ್ಚಾಗಿ ತೆರೆಮೇಲೆ ಮ್ಯಾಜಿಕ್ ಮಾಡಿದ ಈ ಜೋಡಿ ಮತ್ತೆ ಒಂದಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಇಬ್ಬರೂ ಬೇರೆಯದ್ದೇ ಹಾದಿ ಹಿಡಿದು ಹಿಡಿದ್ದರು.
ಪ್ರಭಾಸ್ ಯುವ ನಿರ್ದೇಶಕನ ಸಿನಿಮಾಗೆ ಜೈ ಅಂದಿದ್ದರು. ರಾಜಮೌಳಿ RRR ಸಿನಿಮಾದ ತಯಾರಿಯಲ್ಲಿದ್ದರು. ಈಗ ಇಬ್ಬರೂ ಎರಡು ವಾರಗಳ ಅಂತರದಲ್ಲಿ ತಮ್ಮ ಸಿನಿಮಾವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈ ವೇಳೆ ಪ್ರಭಾಸ್ ಹಾಗೂ ರಾಜಮೌಳಿ ಮತ್ತೆ ಒಂದಾಗಿದ್ದು, RRR ಚಿತ್ರಕ್ಕೆ ರಾಜಮೌಳಿ ಯಾಕೆ ಪ್ರಭಾಸ್ ಅನ್ನು ಆಯ್ಕೆ ಮಾಡಿಲ್ಲ ಅನ್ನುವ ವಿಷಯ ಹೊರಬಿದ್ದಿದೆ. ಪ್ರಭಾಸ್ ಕೇಳಿದ ಈ ಪ್ರಶ್ನೆಗೆ ರಾಜಮೌಳಿ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

'RRR'ಗೆ ಪ್ರಭಾಸ್ ಯಾಕೆ ಆಯ್ಕೆಯಾಗಿಲ್ಲ?
ಪ್ರಭಾಸ್ ಸಿನಿಮಾ ಪ್ರಚಾರಕ್ಕೆ ರಾಜಮೌಳಿ ಎಂಟ್ರಿಕೊಟ್ಟಿದ್ದರು. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗಲೇ ರಾಜಮೌಳಿ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್‌ಗೆ ಜೊತೆಯಾಗಿದ್ದರು. ಒಂದೇ ವೇದಿಕೆ ಇಬ್ಬರೂ ತಮ್ಮ ಸಿನಿಮಾಗಳನ್ನು ಪ್ರಚಾರ ಮಾಡುತ್ತಿದ್ದರು. ರಾಜಮೌಳಿ ಹಾಗೂ ಪ್ರಭಾಸ್ ಒಬ್ಬರನ್ನಿಬ್ಬರು ಸಂದರ್ಶನ ಮಾಡುತ್ತಿದ್ದರು. ಈ ವೇಳೆ ಪ್ರಭಾಸ್ ತಮ್ಮ ಗುರು ರಾಜಮೌಳಿಗೆ 'RRR' ಚಿತ್ರಕ್ಕೆ ತನ್ನನ್ನು ಆಯ್ಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. ದಿಢೀರನೇ ಬಂದ ಪ್ರಶ್ನೆಗೆ ರಾಜಮೌಳಿ ತಮಾಷೆಯಾಗಿ ಉತ್ತರ ನೀಡಿದರು.

ಪ್ರಭಾಸ್ ಪ್ರಶ್ನೆಗೆ ರಾಜಮೌಳಿ ಉತ್ತರವೇನು?
'ಬಾಹುಬಲಿ'ಯಂತಹ ಸೂಪರ್ ಹಿಟ್ ಸಿನಿಮಾ ನೀಡಿದ್ದ ಜೋಡಿ ಮತ್ಯಾಕೆ ಒಂದಾಗಿಲ್ಲ ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಲೇ ಇತ್ತು. ಈ ಪ್ರಶ್ನೆಗೆ ರಾಜಮೌಳಿ ತನ್ನದೇ ಶೈಲಿಯಲ್ಲಿ ಉತರ ನೀಡಿದ್ದಾರೆ. " ನೀನೊಂದು ದೊಡ್ಡ ಹಡಗು ಇದ್ದಂತೆ. ಹಡಗಿನ ಅವಶ್ಯಕತೆ ಇಲ್ಲದೆ ಇದ್ದಿದ್ದರಿಂದ ಅದು ನಮ್ಮೊಂದಿಗೆ ಇರಲಿಲ್ಲ. ಆದರೆ, ನಮಗೆ ಆ ಹಡಗು ತುಂಬಾನೇ ಮುಖ್ಯ ಅಂತ ಅನಿಸಿದ್ದರೆ, ನಾವು ಅದೆಂತಹದ್ದೇ ಕ್ಷಣದಲ್ಲಿಯೂ ನಿನ್ನನ್ನು ಈ ಸಿನಿಮಾಗೆ ಕರೆದುಕೊಂಡು ಬರುತ್ತಿದ್ದೆವು." ಎಂದು ರಾಜಮೌಳಿ ಉತ್ತರ ನೀಡಿದ್ದಾರೆ.

ರಾಜಮೌಳಿ ಕಾಲೆಳೆದ ಪ್ರಭಾಸ್
ರಾಜಮೌಳಿ ಹಾಗೂ ಪ್ರಭಾಸ್ ಮಾತುಕತೆ ಇದೊಂದು ಪ್ರಶ್ನೆಗೆ ಮುಗಿದಿಲ್ಲ. ಈ ವಿಶೇಷ ಸಂದರ್ಶನದಲ್ಲಿ ಪ್ರಭಾಸ್ ಮೂವಿ ಮಾಂತ್ರಿಕ ಎಸ್ ಎಸ್ ರಾಜಮೌಳಿಯ ಕಾಲೆಳೆದಿದ್ದಾರೆ. "RRR ಚಿತ್ರಕ್ಕೆ ತನ್ನನ್ನು ಆಯ್ಕೆ ಮಾಡಿಕೊಳ್ಳದೆ ಇದ್ದಿದ್ದಕ್ಕೆ ಕಾರಣ ಬೇರೆನೇ ಇದೆ. ರಾಮ್ ಚರಣ್ ಹಾಗೂ ತಾರಕ್ ಇಬ್ಬರೂ ನನಗೆ ನಿಮಗೆ ಕ್ಲೋಸ್ ಇದ್ದಾರೆ. ಅದಕ್ಕೆ ಅವರನ್ನು ಆಯ್ಕೆ ಮಾಡಿಕೊಂಡಿದ್ದೀರ?" ಎಂದು ಕಾಲೆಳೆದಿದ್ದರು. ರಾಜಮೌಳಿ ಮನಸ್ಸು ಮಾಡಿದ್ದರೆ, ಪ್ರಭಾಸ್ ಅತಿಥಿ ಪಾತ್ರಕ್ಕೆ ಕರೆದುಕೊಂಡು ಬರಬಹುದಿತ್ತು. ಆದರೆ, ರಾಜಮೌಳಿ ಹಾಗೆ ಮಾಡಲಿಲ್ಲ.

ಈ ಜೋಡಿಯ ಮೂರು ಸಿನಿಮಾ ಹಿಟ್
ರಾಜಮೌಳಿ ಹಾಗೂ ಪ್ರಭಾಸ್ ಇಬ್ಬರೂ ಮೂರು ಸಿನಿಮಾಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. 2005ರಲ್ಲಿ 'ಛತ್ರಪತಿ' ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಕೂಡ ಚಿಂದಿ ಉಡಾಯಿಸಿತ್ತು. 'ಬಾಹುಬಲಿ' ಹಾಗೂ 'ಬಾಹುಬಲಿ 2' ಎರಡೂ ಸಿನಿಮಾಗಳೂ ದಾಖಲೆ ಬರೆದಿವೆ. ಮೂರು ಸೂಪರ್ ಹಿಟ್ ಸಿನಿಮಾ ಕೊಟ್ಟ ಈ ಜೋಡಿಯ ಮತ್ತೊಂದು ಸಿನಿಮಾಗಾಗಿ ಸಿನಿಪ್ರಿಯರು ಕಾದು ಕೂತಿದ್ದಾರೆ. ಅದ್ಯಾವಾಗ ಮತ್ತೆ ಒಂದಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











