ಸಲಾರ್ ಟ್ರೇಲರ್‌ನಲ್ಲಿ ನೀವು ಈ 5 ವಿಚಾರಗಳನ್ನು ಮಿಸ್ ಮಾಡಿರೋಕೆ ಸಾಧ್ಯವೇ ಇಲ್ಲ.. ಏನದು?
ಬಹುನಿರೀಕ್ಷಿತ ಸಲಾರ್ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಬಾಹುಬಲಿ ಚಿತ್ರದ ನಂತರ ಪ್ರಭಾಸ್‌ಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರೋ ಹಿಟ್ ಈ ಸಿನಿಮಾದಿಂದ ಸಿಗುತ್ತಾ ಅನ್ನೋ ಚರ್ಚೆಗೆ ಈಗ ಮತ್ತಷ್ಟು ವೇಗ ಸಿಕ್ಕಿದೆ.
ಇದು ಗೆಳೆಯರಿಬ್ಬರ ಸ್ಟೋರಿ ಎಂದು ಸಲಾರ್ ಬಗ್ಗೆ ಒನ್ ಲೈನರ್ ಕೊಟ್ಟಿದ್ದ ನಿರ್ದೇಶಕ ಪ್ರಶಾಂತ್ ನೀಲ್ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಸಿಕ್ಕಂತಾಗಿದೆ. ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿರುವ ಸಲಾರ್ ಟ್ರೈಲರ್ ನೋಡಿದವ್ರೆಲ್ಲಾ ಈ ಸಿನಿಮಾದ ಬಗ್ಗೆ ಕೆಲವೊಂದಷ್ಟು ವಿಚಾರಗಳನ್ನು ಖಂಡಿತಾ ಗಮನಿಸಿರುತ್ತಾರೆ. ಬಹುಶಃ ನೀವೂ ಇವುಗಳನ್ನು ನೋಡಿರ್ಬಹುದು.

ಸಲಾರ್‌ನಲ್ಲಿ 'ಉಗ್ರಂ' ಫ್ಲೇವರ್!
ಸಲಾರ್ ಟ್ರೇಲರ್ ನೋಡಿದ ಕನ್ನಡಿಗರಿಗಂತೂ ಮೊದಲು ನೆನಪಾಗೋದು ಉಗ್ರಂ. ಶ್ರೀಮುರಳಿ ಮತ್ತು ಹರಿಪ್ರಿಯಾ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದ ಈ ಸಿನಿಮಾದ ನಿರ್ದೇಶಕ ಪ್ರಶಾಂತ್ ನೀಲ್. ಇದು ಅವರ ಮೊದಲ ಸಿನಿಮಾ ಕೂಡಾ ಹೌದು. ಗೆಳೆತನ ಮತ್ತು ಅದಕ್ಕೆ ಬರೋ ನಾನಾ ಕುತ್ತುಗಳು, ಅದರಿಂದ ಉಂಟಾಗೋ ಕೋಲಾಹಲದ ಸುತ್ತಲಿನ ಕತೆ 'ಉಗ್ರಂ ಸಿನಿಮಾದ್ದು. ಆ ಸೂಪರ್ ಹಿಟ್ ಸಿನಿಮಾ ಕತೆಯ ಝಲಕ್ ಸಲಾರ್‌ನಲ್ಲಿ ನಿಮಗೆ ಕಾಣಿಸುತ್ತೆ ಎಂಬುದು ನೆಟ್ಟಿಗರ ವಾದ.
ಇದು ಗೆಳೆತನದ ಕತೆ
ಇಬ್ಬರು ಬಾಲ್ಯದ ಗೆಳೆಯರು ಇರುತ್ತಾರೆ. ಅದರಲ್ಲೊಬ್ಬ ವರದರಾಜ್ ಮನ್ನಾರ್. ಇವನು ದೊಡ್ಡದೊಂದು ಸಮುದಾಯದ ವಾರಸ್ದಾರ. ಉಗ್ರ ರಕ್ತಪಾತದ ಇತಿಹಾಸ ಇರೋ ಇವನ ಸಮುದಾಯದಲ್ಲಿ ಇವನನ್ನು ಮುಗಿಸೋಕೆ ಕಾಯೋ ಜನ ಸಾಕಷ್ಟಿದಾರೆ. ಅವರೆಲ್ಲರ ವಿರುದ್ಧ ಅವನು ಬಳಸೋ ಪವರ್‌ಫುಲ್ ಅಸ್ತ್ರ ಗೆಳೆಯ ದೇವಾ. ಒಬ್ಬ ದೇವಾ ಒಂದಿಡೀ ಸೈನ್ಯಕ್ಕೆ ಸಮ ಮತ್ತು ಅವನು ಗೆಳೆತನಕ್ಕೋಸ್ಕರ ಏನು ಬೇಕಿದ್ರೂ ಮಾಡೋಕೆ ರೆಡಿ ಇರ್ತಾನೆ. ಇಲ್ಲಿ ವರದರಾಜ್ ಮನ್ನಾರ್ ಪಾತ್ರವನ್ನು ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ನಿಭಾಯಿಸಿದ್ರೆ, ದೇವಾ ರೂಪದಲ್ಲಿ ಪ್ರಭಾಸ್ ಫಿಟ್ಟೆಸ್ಟ್ ಅವತಾರದಲ್ಲಿದ್ದಾರೆ.

ಇಲ್ಲೂ ಹೀರೋಯಿನ್‌ಗೆ ಕೆಲಸ ಇಲ್ವಾ?
ಪ್ರಶಾಂತ್ ನೀಲ್ ಹಿಂದಿನ ಚಿತ್ರ 'ಕೆಜಿಎಫ್'ನಲ್ಲಿ ನಾಯಕಿ ಶ್ರೀನಿಧಿ ಶೆಟ್ಟಿ ಅಷ್ಟೇನೂ ಪ್ರಾಮುಖ್ಯತೆ ಇರಲಿಲ್ಲ. ಸಲಾರ್ ಟ್ರೇಲರ್‌ನಲ್ಲಿ ನಾಯಕಿ ಶೃತಿ ಹಾಸನ್ ಒಂದೇ ಒಂದು ಫ್ರೇಮ್‌ನಲ್ಲಿ ಮಾತ್ರ ಕಾಣಸಿಗೋದು. ಅಂದ್ಮೇಲೆ ಅವರ ಪಾತ್ರಕ್ಕೆ ಎಷ್ಟು ಅವಕಾಶ ಇಲ್ಲಿ ಸಿಕ್ಕಿದೆ ಅನ್ನೋದನ್ನ ಅಂದಾಜಿಸಬಹುದು.
'ಕೆಜಿಎಫ್' ಶೇಡ್ ಇಲ್ಲೂ ಇದೆ
ಹೈ ಕಾಂಟ್ರಾಸ್ಟ್ ಬಣ್ಣಗಳ ಬಳಕೆ ಸಲಾರ್‌ನಲ್ಲಿ ಜೋರಾಗೇ ಇದೆ. ಅಲ್ಲಿ ಬಳಸಿರೋ ಆಯುಧಗಳು, ಪಾತ್ರಗಳು, ಸೆಟ್‌ನ ರೂಪ ಇವೆಲ್ಲಾ ಕೆಜಿಎಫ್‌ನ ನೆನಪಿಸೋದು ಖಚಿತ.
ಮಾಸ್ ಆಕ್ಷನ್
ಹೇಳಿ ಕೇಳಿ ಇದು ಆಕ್ಷನ್ ಓರಿಯೆಂಟೆಡ್ ಸಿನಿಮಾ. 'ಕೆಜಿಎಫ್' ಮತ್ತು 'ಕೆಜಿಎಫ್ 2'ನಲ್ಲಿ ಆಕ್ಷನ್ ಕಮಾಲ್ ಮಾಡಿದ್ದ ಅನ್ಬರೀವ್ ಸಹೋದರರು ಸಲಾರ್‌ನಲ್ಲೂ ತಮ್ಮ ಮ್ಯಾಜಿಕ್ ತೋರಿಸಿದಂತೆ ಕಾಣ್ತಾರೆ. ಈಗಾಗ್ಲೇ ಹಾಲಿವುಡ್ ಸೇರಿದಂತೆ ಅನೇಕ ಕಡೆ ಬಳಸಿ, ಪ್ರದರ್ಶಿಸೋ ಅನೇಕ ಟ್ರಿಕ್ಸ್ ಇಲ್ಲೂ ಬಳಕೆಯಾಗಿದೆ. ಇದಲ್ಲದೇ ಮತ್ತಷ್ಟು ವಿಚಾರಗಳು ಸಲಾರ್ ಬಗ್ಗೆ ನಿಮ್ಮ ಗಮನಕ್ಕೆ ಬಂದಿರಬಹುದು. ಆದರೆ, ಈ ಮೇಲಿನ 5 ಮಾತ್ರ ಪ್ರೇಕ್ಷಕರ ಗಮನವನ್ನೂ ಸೆಳೆಯದೇ ಇರಲು ಸಾಧ್ಯವೇ ಇಲ್ಲ ಅನ್ನೋದಂತೂ ಸತ್ಯ.


Click it and Unblock the Notifications











