twitter
    X
    Home ಚಲನಚಿತ್ರಗಳ ಒಳನೋಟ

    ವರಾಹ ರೂಪಂ ಸೇರಿದಂತೆ ವಿವಾದಕ್ಕೆ ಒಳಗಾದ ಕನ್ನಡ ಹಾಡುಗಳ ಪಟ್ಟಿ ಇಲ್ಲಿದೆ.

    Author Sowmya Bairappa | Published: Saturday, November 19, 2022, 06:21 PM [IST]

    ಕನ್ನಡದ ಅನೇಕ ಹಾಡು ಕಾರಣಾಂತರಗಳಿಂದ ವಿವಾದಕ್ಕೆ ಒಳಗಾಗಿವೆ. ಕೆಲ ಹಾಡುಗಳು ಯೂಟ್ಯೂಬ್ ನಿಂದ ಕೂಡ ಡಿಲೀಟ್ ಆಗಿವೆ. ಹೀಗೆ ವಿವಾದಕ್ಕೆ ಸಿಲುಕಿದ ಕನ್ನಡದ ಹಾಡುಗಳ ಪಟ್ಟಿ ಇಲ್ಲಿದೆ.

    cover image

    ಎಮ್ಮೋ ಎಮ್ಮೋ

    ಮಲ್ಲ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಿಯಾಂಕ ಮುಖ್ಯಪಾತ್ರದಲ್ಲಿ ನಟಿಸಿದ್ದರು. ಸತತ ಸೋಲುಗಳಿಂದ ಕಂಗೆಟ್ಟಿದ್ದ ರವಿಚಂದ್ರನ್ ಅವರಿಗೆ ಈ ಸಿನಿಮಾ ಸಾಕಷ್ಟು ಯಶಸ್ಸು ತಂದು ಕೊಟ್ಟಿತು. ಇದು ಪ್ರಿಯಾಂಕಾ ಉಪೇಂದ್ರ ಅವರ ಮೂರನೇ ಸಿನಿಮಾವಾಗಿತ್ತು.  2004ರಲ್ಲಿ ಬಿಡುಗಡೆಯಾದ ಈ ಸಿನಿಮಾಗೆ ರವಿಚಂದ್ರನ್ ಅವರೇ ಆಕ್ಷನ್ ಕಟ್ ಹೇಳಿದ್ದು, ಸೂಪರ್ ಹಿಟ್ ಆಗಿತ್ತು. ಆದರೆ, ಮಲ್ಲ ಸಿನಿಮಾದ ಎಮ್ಮೋ ಎಮ್ಮೋ ಹಾಗೂ ಬಂಗಡೆ ಮೀನು ಬಳುಕಿದಾಗ ಹಾಡುಗಳು ವಿವಾದಕ್ಕೆ ಒಳಗಾಗಿದ್ದವು. ಈ ಹಾಡುಗಳಲ್ಲಿ ಪ್ರಿಯಾಂಕಾ ಅವರನ್ನು ತುಂಬಾ ಹಾಟ್ ಆಗಿ ತೋರಿಸಲಾಗಿದೆ ಎಂದು ಆರೋಪ ಮಾಡಲಾಗಿತ್ತು. ನಂತರ ಸಿನಿಮಾದ ಬಂಗಡೆ ಬಳುಕಿದಾಗ ಹಾಡನ್ನು ತೆಗೆದು ಹಾಕಲಾಗಿತ್ತು. ಅನಂತರ ಆ ಹಾಡನ್ನು ಪಾಂಡು ರಂಗ ವಿಠಲ ಸಿನಿಮಾದಲ್ಲಿ ಬಳಸಲಾಗಿದೆ.  

     

    'ಮೇಲುಕೋಟೆ ಹುಡುಗಿ'

    ಪ್ರೇಮ್ ಅಡ್ಡ ಸಿನಿಮಾದ ಮೇಲುಕೋಟೆ ಹುಡುಗಿ ಹಾಡು ಕೂಡಾ ವಿವಾದಕ್ಕೆ ಒಳಗಾಗಿತ್ತು. ಈ ಚಿತ್ರದ 'ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ' ಎಂಬ ಹಾಡಿನಲ್ಲಿ ಸೊಂಟದ ಕೆಳಗಿನ ಸಾಹಿತ್ಯ ಬಳಸಲಾಗಿದೆ ಎಂದು ಮೇಲುಕೋಟೆ ಜನ ಸಿಕ್ಕಾಪಟ್ಟೆ ರಾಂಗ್ ಆಗಿದ್ದರು. ಈ ಹಾಡಿನ ವಿರುದ್ಧ ಸಿಡಿದೆದ್ದ ಮೇಲುಕೋಟೆ ಜನ ಒಂದು ದಿನ ಬಂದ್ ಗೂ ಕರೆಕೊಟ್ಟಿದ್ದರು. ವಿ. ಹರಿಕೃಷ್ಣ ಅವರ ಸಂಗೀತವಿರುವ ಈ ಹಾಡನ್ನು ಚಿತ್ರದಿಂದ ಕೈಬಿಡಬೇಕು. ಇಲ್ಲದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ನಟ, ನಿರ್ದೇಶಕ ಪ್ರೇಮ್ ವಿರುದ್ಧ ಕಿಡಿಕಾರಿದ್ದರು. ಈ ಸಂಬಂಧ ತಹಸೀಲ್ದಾರ್ ಅವರಿಗೂ ದೂರು ನೀಡಿದ್ದರು. ನಂತರ ಎಚ್ಚೆತ್ತ ಸಿನಿಮಾ ತಂಡ ಹಾಡಿನ ಸಾಹಿತ್ಯವನ್ನು 'ಏಳು ಕೋಟಿ' ಎಂದು ಬದಲಾಯಿಸಿ ರೀ ರಿಲೀಸ್ ಮಾಡಿತ್ತು. 

    'ಹೇ ಹೂ ಆರ್ ಯೂ'

    ರಕ್ಷಿತ್​ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕಿರಿಕ್ ಪಾರ್ಟಿ ಸಿನಿಮಾದ 'ಹೇ ಹೂ ಆರ್ ಯೂ' ಹಾಡಿನಲ್ಲಿ ಶಾಂತಿ ಕ್ರಾಂತಿ ಚಿತ್ರದ 'ಮಧ್ಯರಾತ್ರೀಲಿ' ಹಾಡಿನ‌ ಟ್ಯೂನ್ ಅನ್ನು ಬಳಸಲಾಗಿತ್ತು. ಈ ಸಂಬಂಧ ಲಹರಿ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ವಿವಾದದಿಂದ ಚಿತ್ರತಂಡಕ್ಕೆ ಕಿರಿಕ್ ಪಾರ್ಟಿ ಸಿನಿಮಾ ಬಿಡುಗಡೆ ವೇಳೆ ಸಮಸ್ಯೆ ಎದುರಾಗಿತ್ತು. ಈ ಸಂಬಂಧ ನ್ಯಾಯಾಲಯದಿಂದ ಜಾಮೀನು ರಹಿತ ವಾರೆಂಟ್ ಜಾರಿಯಾಗಿತ್ತು.  ವಾರೆಂಟ್ ಹಿನ್ನೆಲೆಯಲ್ಲಿ ನಟ ರಕ್ಷಿತ್ ಶೆಟ್ಟಿ ಕೋರ್ಟ್ ಮುಂದೆ ಹಾಜರಾಗಿ, 10,000 ರೂಪಾಯಿ ಶ್ಯೂರಿಟಿ ನೀಡಿ ಜಾಮೀನು ಪಡೆದಿದ್ದರು. ಬಳಿಕ ಲಹರಿ ಸಂಸ್ಥೆ ಮಾತನಾಡಿ ಈ ಸಮಸ್ಯೆ ಬಗೆಹರಿಸಿಕೊಂಡಿದ್ದರು. 

    ಉಪ್ಪಿ ೨ - ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್

    ಉಪೇಂದ್ರ ಹಾಗೂ ಪಾರುಲ್ ಯಾದವ್ ಅಭಿನಯದ ಉಪ್ಪಿ-2 ಸಿನಿಮಾದ ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್ ಹಾಡು ವಿವಾದಕ್ಕೆ ಒಳಗಾಗಿತ್ತು. ಈ ಹಾಡಿನಲ್ಲಿ ಉಪೇಂದ್ರ ಅವರು ಸ್ಟಾರ್ ನಂತರ ಕಾಲೆಳೆದಿದ್ದಾರೆ. 'ಇದು ರೋಗಗ್ರಸ್ತರ ಮನಸ್ಸಿನಂತಿದೆ' ಅಂತ ಎಂದು ನವರಸ ನಾಯಕ ಜಗ್ಗೇಶ್ ಟ್ವಿಟ್ಟರ್ ಮೂಲಕ ಅಸಮಾಧಾನನ ಹೊರಹಾಕಿದ್ದರು. ಇದೇ ವಿಚಾರವಾಗಿ  ಇಬ್ಬರು ನಂತರ ಅಭಿಮಾನಿಗಳ ನಡುವೆ ಕೂಡ ಸಮರ ಏರ್ಪಟ್ಟಿತ್ತು. ಆದರೆ, ಉಪೇಂದ್ರ ಅವರು ಇದಕ್ಕೆ ಪ್ರತಿಕ್ರಿಸಿರಲಿಲ್ಲ. 

    ಕೋಲು ಮಂಡೆ ಜಂಗಮ ದೇವ

    ಕನ್ನಡ ಚಿತ್ರರಂಗದ ಅದ್ಭುತ ರ್ಯಾಪರ್ ಚಂದನ್ ಶೆಟ್ಟಿ. 2022ರಲ್ಲಿ ಇವರ ಕೋಲು ಮಂಡೆ ಜಂಗಮ ದೇವ ಹಾಡು ಕೂಡ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಈ ಹಾಡಿನಲ್ಲಿ ಮಲೇಮಹಾದೇಶ್ವರ ಸ್ವಾಮಿ ಇತಿಹಾಸವನ್ನು ಹೇಳುವ ಈ ಹಾಡಿನಲ್ಲಿ ಸಂಕವ್ವ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎಂದು ಮಲೇಮಹಾದೇಶ್ವರ ಭಕ್ತರು ಕಿಡಿಕಾರಿದ್ದರು. ಒಳ್ಳೆಯ ಜಾನಪದ ಹಾಡನ್ನು ತಮ್ಮ ಲಾಭಕ್ಕೆ ಬಳಸಿಕೊಂಡಿರುವುದು ತಪ್ಪು ಎಂದು ಅನೇಕ ಜನರು ಸಾಮಾಜಿಕ ಜಾಲಾತಾಣದಲ್ಲಿ ಆಕ್ರೋಶ ಹೊರಹಾಕಿದ್ದರು. ಬಳಿಕ ಚಂದನ್ ಶೆಟ್ಟಿ ಮಲೇಮಹಾದೇಶ್ವರ ಭಕ್ತರಲ್ಲಿ ಕ್ಷಮೆ ಕೇಳಿ, ಆ ಹಾಡನ್ನು ಡಿಲೀಟ್ ಮಾಡಿದ್ದರು.  

    ಮಾತನಾಡಿ ಮಾಯವಾದೆ

    ಐ ಲವ್ ಯು ಸಿನಿಮಾದ ಮಾತನಾಡಿ ಮಾಯವಾದೆ ಹಾಡು ಕೂಡ ವಿವಾದಕ್ಕೆ ಒಳಗಾಗಿತ್ತು. ಮಾತನಾಡಿ ಮಾಯವಾದೆ ಹಾಡು ರಿಲೀಸ್ ಆಗುತ್ತಿದ್ದಂತೆ ವಿವಾದಕ್ಕೆ ಸಿಕ್ಕಿಕೊಂಡಿತ್ತು. ರಚಿತಾ ಅಭಿಮಾನಿಗಳು ಐ ಲವ್ ಯೂ ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದನ್ನ ವಿರೋಧಿಸಿದ್ದರು. ಹೀಗಾಗಿ, ರಚಿತಾ ರಾಮ್ ಇನ್ಮುಂದೆ ಬೋಲ್ಡ್ ಸೀನ್​ಗಳಲ್ಲಿ ನಟಿಸೋದಿಲ್ಲ ಅಂತ ಹೇಳಿಕೆ ಕೊಟ್ಟಿದ್ದರು. ರಚಿತಾ ಆಡಿದ ಈ ಮಾತು ಐ ಲವ್ ಯು ಚಿತ್ರತಂಡವನ್ನ ಮುಜುಗರಕ್ಕೆ ಒಳಪಡಿಸಿತ್ತು. ಇದರ ಹಿಂದೆನೇ ರಚಿತಾ ರಾಮ್,  ಐ ಲವ್ ಯು ಚಿತ್ರದ ಮಾತನಾಡಿ ಮಾಯವಾದೆ ಹಾಡನ್ನ ಚಿನ್ನಿ ಪ್ರಕಾಶ್ ನಿರ್ದೇಶಿಸ್ಬೇಕಿತ್ತು. ಈ ಹಾಡಿನಲ್ಲಿ ನಟಿಸುವಾಗ ನಾನು ಮುಜುಗರಕ್ಕೆ ಒಳಗಾಗಿದ್ದೆ. ಈ ವೇಳೆ ಉಪೇಂದ್ರ ಅವರು ಇದು ಕೇವಲ ಪಾತ್ರವಷ್ಟೇ ಅಂತ ಹೇಳಿ ಒಪ್ಪಿಸಿದ್ದರು. ಹೀಗಾಗಿ ಬೋಲ್ಡ್ ಆಗಿ ಸಾಂಗ್​ನಲ್ಲಿ ನಟಿಸಿದೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ರಚಿತಾ ರಾಮ್ ವಿರುದ್ಧ ಉಪೇಂದ್ರ ಪತ್ನಿ ಪ್ರಿಯಾಂಕಾ ಕೆಂಡಕಾರಿದ್ದರು.

    ಸುಳ್ಳೇ ಸುಳ್ಳು

    ಪ್ರೀತಿ ಯಾಕೆ ಭೂಮಿ ಮೇಲಿದೆ ಸಿನಿಮಾದ ಸುಳ್ಳೇ ಸುಳ್ಳು ಹಾಡು ಕೂಡ ವಿವಾದ ಸೃಷ್ಟಿಸಿತ್ತು. ಈ ಹಾಡಿನಲ್ಲಿರುವ ಕೆಲ ಸಾಲುಗಳು ಹಿಂದೂಗಳು ಮತ್ತು ಇತರ ಸಮುದಾಯಗಳನ್ನು ತೆಗಳುವ ರೀತಿ ಇದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥರು ಪ್ರತಿಭಟನೆ ಮಾಡಿದ್ದರು. 

    ಗಾಂಜಾ ಹಾಡು

    ಅಂತ್ಯ ಸಿನಿಮಾದ ಗಾಂಜಾ ಹಾಡು ಭಾರಿ ವಿವಾದಕ್ಕೆ ಒಳಗಾಗಿತ್ತು. ಯುವಕರು ಮಾದಕ ವಸ್ತುಗಳ ಕಡೆಗೆ ಆಕರ್ಷಿತರಾಗುವಂತೆ ಹಾಡು ಇದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಕೋರ್ಟ್ ಕೂಡ ಚಂದನ್ ಶೆಟ್ಟಿಗೆ ಸಮನ್ಸ್ ಜಾರಿ ಮಾಡಿತ್ತು.ಈ ಸಿನಿಮಾ ರಿಲೀಸ್‌ ಆಗಿ ಮೂರು ವರ್ಷಗಳ ನಂತರ ಸಿಸಿಬಿ ಮಾದಕ ದ್ರವ್ಯ ತಡೆ ವಿಭಾಗ ನೋಟಿಸ್‌ ಜಾರಿ ಮಾಡಿತ್ತು.  

    ಕಾಂತಾರ - ವರಾಹ ರೂಪಂ

    ಕಾಂತಾರಾ ಸಿನಿಮಾದ ವರಾಹ ರೂಪಂ ಎನ್ನುವ ಫೇಮಸ್​ ಟ್ಯೂನ್​ ಅನ್ನು ಸಂಗೀತ ನಿರ್ದೇಶಕ ಅಜನೀಶ್​ ಬಿ. ಲೋಕನಾಥ್ 5 ವರ್ಷ ಹಳೆಯ ಮಲಯಾಳಂ ಭಾಷೆಯ 'ನವರಸಂ..' ಹಾಡಿನಿಂದ ಕಾಪಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.  ವರಾಹ ರೂಪಂ ಮತ್ತು ನವರಸಂ ಹಾಡುಗಳ ನಡುವೆ ಇರುವ ಸಾಮ್ಯತೆಯು ಕಾಪಿರೈಟ್‌ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್ ತಿಳಿಸಿತ್ತು. ಹೀಗಾಗಿ ತೈಕ್ಕುಡಂ ಬ್ರಿಡ್ಜ್ ಮ್ಯೂಸಿಕ್ ಬ್ಯಾಂಡ್‌ನ ಅನುಮತಿ ಇಲ್ಲದೆ ವರಾಹ ರೂಪಂ ಹಾಡನ್ನ ಬಳಕೆ ಮಾಡುವಂತಿಲ್ಲ ಎಂದು ಕೇರಳ ಕೋರ್ಟ್ ಆದೇಶ ನೀಡಿತ್ತು.  

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X