'ದೇವಿ ಮಹಾತ್ಮೆ'ಯ ಶ್ರೀದೇವಿ ಮೊದಲು ಆಡಿಷನ್‌ಗೆ ಹೋಗಿದ್ದೇ ಜೀವಿತಾ ವಸಿಷ್ಠ; ಮುಂದೇನಾಯ್ತು?
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ 'ಶ್ರೀದೇವಿ ಮಹಾತ್ಮೆ' ಧಾರಾವಾಹಿ ಪ್ರೇಕ್ಷಕರ ಮನಸೆಳೆದಿದೆ. ಆರಂಭದ ದಿನಗಳಲ್ಲೇ ಉತ್ತಮ ಪ್ರತಿಕ್ರಿಯೆಯನ್ನು ಪಡೆದಿರುವ ಧಾರಾವಾಹಿಯಲ್ಲಿ ಪಾರ್ವತಿಯ ಪಾತ್ರವನ್ನು ಜೀವಿತಾ ವಸಿಷ್ಠ ನಿರ್ವಹಿಸುತ್ತಿದ್ದಾರೆ.
ಪೌರಾಣಿಕ ಪಾತ್ರಕ್ಕಾಗಿ ಸಾಕಷ್ಟು ಎಚ್ಚರಿಕೆಯ ಆಯ್ಕೆಗಳನ್ನು ಮಾಡುವ ಈ ಕಾಲದಲ್ಲಿ ತಮ್ಮ ಮೊದಲ ನಟನೆಯ ಹೆಜ್ಜೆಯಲ್ಲಿಯೇ ಪೌರಾಣಿಕ ಪಾತ್ರವನ್ನು ಗಳಿಸಿಕೊಂಡಿರುವ ನಟಿಯ ಕುರಿತು ಚಿಕ್ಕ ಪರಿಚಯ ಇಲ್ಲಿದೆ ನೋಡಿ.

ಈಗಾಗಲೇ ಕನ್ನಡಿಗರ ಮನೆಮನ ಗೆದ್ದಿರುವ ಜೀವಿತಾ ತಮ್ಮದೇ ಆದ ಸೆನ್ಸೇಶನ್ ಕ್ರಿಯೇಟ್ ಮಾಡಿದ್ದಾರೆ. ಅಲ್ಲದೇ ಈ ಪಾತ್ರವನ್ನು ನಿಭಾಯಿಸುವಾಗ ಅವರಿಗೂ ಪಾತ್ರದೊಂದಿಗೆ ಒಂದು ಭಾವುಕತೆಯ ಅನುಭವವಾಗುತ್ತದೆ ಎನ್ನುತ್ತಾರೆ. ಈ ಕುರಿತಂತೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಟಿ ಮಾತನಾಡಿದ್ದಾರೆ.
"ದೇವತೆಯ ಪಾತ್ರಕ್ಕಾಗಿ ಆಡಿಷನ್‌ಗೆ ಬಂದ ಮೊದಲ ಕಲಾವಿದೆ ನಾನು. ಮೊದಲಿನೆಯವಳಾಗಿ ಹೋಗುವಾಗ ಸ್ವಲ್ಪ ಹೆದರಿಕೆ ಇದ್ದೇ ಇತ್ತು. ಆಡಿಷನ್ ಆದ ಎರಡು ತಿಂಗಳ ನಂತರ, ಆ ಪಾತ್ರಕ್ಕಾಗಿ ಆಯ್ಕೆಯಾಗಿರುವ ಕರೆ ಬಂತು. ಅದು ಬೇರೆ ಶಿವರಾತ್ರಿಯ ದಿನವಾಗಿತ್ತು. ಪಾರ್ವತಿಯ ಪಾತ್ರವನ್ನು ನಿಭಾಯಿಸುವುದು ದೈವಿಕ ಆಶೀರ್ವಾದದಂತೆ ಭಾಸವಾಯಿತು'' ಎಂದು ಹೇಳಿಕೊಂಡಿದ್ದಾರೆ.
ಅಂತಹ ಮಹತ್ವದ ಪಾತ್ರಕ್ಕಾಗಿ ಜೀವಿತಾ ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಪ್ರಮುಖವಾಗಿ ಭಾಷೆಯ ಸ್ಪಷ್ಟತೆ. ಅದಕ್ಕಾಗಿ ನಟಿಗೆ ಭಗವದ್ಗೀತೆಯನ್ನು ಓದುವಂತೆ ಹೇಳಿದ್ದರಂತೆ. ಅದರಿಂದ ಭಾಷೆಯ ನಿರರ್ಗಳತೆಗೆ ಸಾಕಷ್ಟು ಸಹಾಯವಾಗಿದೆ ಎಂದು ಮೆಚ್ಚುಗೆಯನ್ನೂ ವ್ಯಕ್ತಪಡಿಸುತ್ತಾರೆ.

ಅಂದ ಹಾಗೆ ಜೀವಿತಾ ಅವರ ಆಧ್ಯಾತ್ಮಿಕದ ಕಡೆಗಿನ ಒಲವು ಈ ಪಾತ್ರದಿಂದ ಇನ್ನಷ್ಟು ಹೆಚ್ಚಾಗಿದೆಯಂತೆ. "ನಾನು ಯಾವಾಗಲೂ ಒಂದು ಮಟ್ಟಿಗೆ ಆಧ್ಯಾತ್ಮಿಕ ವ್ಯಕ್ತಿಯಾಗಿಯೇ ಇದ್ದೆ. ಆದರೆ, ಪಾರ್ವತಿ ದೇವಿಯ ಪಾತ್ರವು ನನಗೆ ಸಕಾರಾತ್ಮಕ ದೃಷ್ಟಿಕೋನವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಕಲಿಸಿದೆ. ನನ್ನ ಸುತ್ತಲಿನ ಪರಿಸರವನ್ನು ಖುಷಿಯಾಗಿಡುವುದರೊಂದಿಗೆ ನಾನೂ ಮೊದಲಿಗಿಂತ ಸಂತೋಷವಾಗಿದ್ದೇನೆ'' ಎಂದು ಜೀವಿತಾ ವಸಿಷ್ಠ ಹೇಳಿಕೊಂಡಿದ್ದಾರೆ.
ಅಲ್ಲದೆ ನಟಿ ಜೀವಿತಾ ಪಾರ್ವತಿಯ ಪಾತ್ರಕ್ಕೆ ತಮ್ಮದೇ ಆದ ಭಾವವನ್ನು ನೀಡಲು ಉತ್ಸುಕರಾಗಿದ್ದಾರೆ. ಮುಂಬರುವ ಸಂಚಿಕೆಗಳಲ್ಲಿ, ವಿಭಿನ್ನವಾಗಿ ಕಾಣಿಸಿಕೊಳ್ಳುವ ದೇವಿಯ ಬೇರೆ ಬೇರೆ ಅವತಾರಗಳಲ್ಲಿ ಪ್ರೇಕ್ಷಕರಿಗೆ ಇಷ್ಟ ಆಗುವ ಭರವಸೆಯಲ್ಲಿ ಇದ್ದಾರೆ.
ಜೀವಿತಾ ವಸಿಷ್ಠ ಅವರ ನಟನೆಗಿರುವ ಸಮರ್ಪಣೆ ಮತ್ತು ಉತ್ಸಾಹವು ಅವರ ತಯಾರಿ ಮತ್ತು ಪಾತ್ರವು ಮೂಡಿ ಬರುತ್ತಿರುವ ರೀತಿಯಲ್ಲಿ ಸ್ಪಷ್ಟವಾಗಿದೆ. 'ಶ್ರೀ ದೇವಿ ಮಹಾತ್ಮೆ' ವೀಕ್ಷಕರನ್ನು ಆಕರ್ಷಿಸುತ್ತಲೇ ಇರುವುದರಿಂದ, ಅವರ ಅಭಿನಯವು ಶಾಶ್ವತವಾದ ಪ್ರಭಾವವನ್ನು ಬೀರುವುದಂತೂ ಖಚಿತ.


Click it and Unblock the Notifications











