ಜೀ ಕನ್ನಡದ 'ಜೊತೆ ಜೊತೆಯಲಿ' ಧಾರಾವಾಹಿಗೆ ಎಂಟ್ರಿಕೊಟ್ಟ ಸೋನುಗೌಡ ಪಾತ್ರವೇನು?
'ಜೊತೆಜೊತೆಯಲಿ' ಜೀ ಕನ್ನಡದ ಜನಪ್ರಿಯ ಧಾರಾವಾಹಿ. ಇಷ್ಟು ದಿನ ಒಂದಲ್ಲ ಒಂದು ಕಾರಣಕ್ಕೆ ಜೊತೆ ಜೊತೆಯಲಿ ಕಿರುತೆರೆ ವೀಕ್ಷಕರ ಗಮನ ಸೆಳೆಯುತ್ತಿತ್ತು. ಈಗ ಈ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇಂದಿನಿಂದ (ಮಾರ್ಚ್ 09) ಈ ಜನಪ್ರಿಯ ಧಾರಾವಾಹಿಯಲ್ಲಿ ಮತ್ತೊಂದು ಮಹಾ ಟ್ವಿಸ್ಟ್ ಸಿಕ್ಕಿದೆ. ಅದುವೇ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸೋನು ಗೌಡ ಎಂಟ್ರಿ. ಈ ಮೂಲಕ 'ಜೊತೆ ಜೊತೆಯಲಿ' ಧಾರಾವಾಹಿಗೆ ಹೊಸ ರೂಪ ಸಿಗಲಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗುವ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ 'ಜೊತೆ ಜೊತೆಯಲಿ' ಕೂಡ ಒಂದು. ಕೇವಲ ಟ್ವಿಸ್ಟ್‌ಗಳಿಂದಷ್ಟೇ ಈ ಧಾರಾವಾಹಿ ಜನಪ್ರಿಯವಾಗಿಲ್ಲ. ಕನ್ನಡ ಕಿರುತೆರೆಯ ಧಾರಾವಾಹಿ ಲೋಕದಲ್ಲಿ ಶ್ರೀಮಂತಿಯನ್ನು ಪ್ರದರ್ಶಿಸಿದೆ. ಈ ಕಾರಣಕ್ಕೆ ನೂರಾರು ಸಂಚಿಕೆಗಳು ಟಿಆರ್‌ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿತ್ತು. ವಿಭಿನ್ನ ನಿರೂಪಣೆಯಿಂದ ಈ ಧಾರಾವಾಹಿ ಗಮನ ಸೆಳೆದಿದ್ದು, ಇಂದಿನಿಂದ (ಮಾರ್ಚ್ 09) ಹೊಸ ಪಾತ್ರವನ್ನು ಪರಿಚಯಿಸುತ್ತಿದೆ.

ಕಿರುತೆರೆಗೆ ಸೋನುಗೌಡ ಎಂಟ್ರಿ
ಅನಿರುದ್ಧ್ ಹಾಗೂ ಮೇಘಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಜೊತೆ ಜೊತೆಯಲಿ' ಧಾರಾವಾಹಿಗೆ ಸೋನು ಗೌಡ ಎಂಟ್ರಿಯಾಗಿದೆ. ಸಿನಿಮಾದಿಂದ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ನಟಿಯ ಪಾತ್ರವೇನು ಎಂದು ನೋಡುವುದಕ್ಕೆ ಕಿರುತೆರೆ ವೀಕ್ಷಕರು ಕಾದು ಕೂತಿದ್ದಾರೆ. ವಿಭಿನ್ನ ಕಥೆಯ ಮೂಲಕ ಆರಂಭದಿಂದಲೂ ಈ ಧಾರಾವಾಹಿ ವೀಕ್ಷಕರ ಗಮನ ಸೆಳೆದಿದೆ. ಸೀರಿಯಲ್ ಅನ್ನೇ ಸಿನಿಮಾ ಶೈಲಿಯಲ್ಲಿ ನಿರೂಪಿಸಿ ವೀಕ್ಷಕರು ಬೆರಗಾಗುವಂತೆ ಮಾಡಿದ ಮೊದಲ ಧಾರಾವಾಹಿ ಇದು. ನಂಬಿಕೆ ಎಂಬ ಮೂರಕ್ಷರವನ್ನು ಮೂಲವಾಗಿಟ್ಟುಕೊಂಡು ಸಾಗುತ್ತಿರುವ ಈ ಕಥೆ ಇದೂವರೆಗೂ ರೋಚಕ ಟ್ವಿಸ್ಟ್‌ಗಳನ್ನು ಕೊಟ್ಟಿದೆ. ಇದೇ ವೇಳೆ ಸೋನುಗೌಡರನ್ನು ಪರಿಚಯಿಸುತ್ತಿದೆ.

ನಟಿ ಸೋನುಗೌಡ ಪಾತ್ರವೇನು?
ಇಲ್ಲಿವರೆಗೂ ಆರ್ಯವರ್ಧನ್ ,ಅನು ಸಿರಿಮನೆ , ಪುಷ್ಪ , ಸುಬ್ಬು , ಝೇಂಡೆ ಪಾತ್ರಗಳು 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ರಂಜಿಸಿವೆ. ಕಿರುತೆರೆ ವೀಕ್ಷಕರಿಗೆ ಈ ಎಲ್ಲಾ ಪಾತ್ರಗಳ ಪರಿಚಯವಿದೆ. ಆದರೆ, ಧಾರಾವಾಹಿಯಲ್ಲಿ ಆಗಾಗ ರಾಜನಂದಿನಿ ಅನ್ನುವ ಒಂದು ಹೆಸರು ಕೇಳಿ ಬರುತ್ತಲೇ ಇತ್ತು. ಆದರೆ, ಎಂದಿಗೂ ಆ ಪಾತ್ರವನ್ನುತೆರೆಮೇಲೆ ತರುವ ಪ್ರಯತ್ನ ಮಾಡಿರಲಿಲ್ಲ. ಈಗ ಸೋನುಗೌಡ ಮೂಲಕ ರಾಜನಂದಿನಿ ಪಾತ್ರಕ್ಕೆ ಮತ್ತೆ ಜೀವ ಬಂದಿದೆ. ಅಂದ್ಹಾಗೆ ಆರ್ಯವರ್ಧನ್ ಮೊದಲ ಪತ್ನಿ ರಾಜನಂದಿನಿಯಾಗಿ ಸೋನುಗೌಡ ಕಾಣಿಸಿಕೊಳ್ಳಲಿದ್ದಾರೆ.

'ರಾಜನಂದಿನಿ ಅಧ್ಯಾಯ' ಆರಂಭ
ಇತೀಚೆಗೆ ಪ್ರಸಾರವಾದ ಸಂಚಿಕೆಗಳಲ್ಲಿ ಆರ್ಯವರ್ಧನ್ ಪಾತ್ರ ಖಳನಾಯಕನ ರೂಪ ಪಡೆದುಕೊಂಡಿತ್ತು. ಆರ್ಯವರ್ಧನ್ ತನ್ನ ಸುತ್ತ ಸುಳ್ಳಿನ ಕೋಟೆಯನ್ನೇ ಕಟ್ಟಿಕೊಂಡಿದ್ದಾನೆ. ತನ್ನ ಅಸಲಿ ಮುಖವಾಡ ಕಳಚಿ ಬೀಳುತ್ತಿರುವಾಗ ಅದರಿಂದ ಪಾರಾಗಲು ಇನ್ನಿಲ್ಲದ ಪ್ರಯತ್ನ ಮಾಡಿದ್ದನ್ನು ಕಿರುತೆರೆ ವೀಕ್ಷಕರು ನೋಡಿದ್ದರು. ರಾಜನಂದಿನಿ ರಹಸ್ಯ , ಸಂಕ್ರಾಂತಿ ಸಂಭ್ರಮ , ಮದುವೆ ಸಡಗರ , ಸೀಕ್ರೆಟ್ ರೂಮ್ ಎಲ್ಲವೂ ಅನಾವರಣಗೊಂಡ ಬಳಿಕ ಇದೀಗ 'ರಾಜನಂದಿನಿ ಅಧ್ಯಾಯ' ಆರಂಭ ಮಾಡಿದೆ. ಈ ಮೂಲಕ ನೋಡುಗರನ್ನು ಹೊಸ ಲೋಕಕ್ಕೆ ಕರೆದುಕೊಂಡು ಹೋಗಲಿದೆ.

ಸುಭಾಷ್ ಪಾಟೀಲ್ ಹಿನ್ನೆಲೆಯೇನು?
'ಜೊತೆ ಜೊತೆಯಲಿ' ಧಾರಾವಾಹಿ 650 ಸಂಚಿಕೆಗಳನ್ನು ಪೂರೈಸಿದೆ. ಈಗ ರಾಜನಂದಿನಿಯ ಅಧ್ಯಾಯ ಆರಂಭಿಸಲಿದ್ದು, ಸುಭಾಷ್ ಪಾಟೀಲ್ ಪಾತ್ರವೊಂದು ಜನ್ಮ ಪಡೆದುಕೊಂಡಿದೆ. ಈ ಸುಭಾಷ್ ಪಾಟೀಲ್ ಯಾರು ? ಈ ಪಾತ್ರಕ್ಕೂ ರಾಜನಂದಿನಿಗೂ ಏನು ಸಂಬಂಧ? ಈ ಸುಭಾಷ್ ಪಾಟೀಲ್ ಪಾತ್ರ ಅನು ಸಿರಿಮನೆ ಬದುಕಿನ ಪರಿಣಾಮ ಬೀರುತ್ತಾ? ಇಂತಹದ್ದೇ ಒಂದು ಕುತೂಹಲಗಳನ್ನು ಹೊತ್ತು ಇಂದಿನಿಂದ ಹೊಸ ಅಧ್ಯಾಯ ಆರಂಭ ಆಗಲಿದೆ.


Click it and Unblock the Notifications











