ಮಂಗಳೂರಿನಲ್ಲಿ 'ಕೊರಗಜ್ಜ' ಸಿನಿಮಾದ ಹಾಡುಗಳ ವೈಭವ; 31 ಹಾಡುಗಳೂ ಜೀ ಮ್ಯೂಸಿಕ್‌ಗೆ
ಕರಾವಳಿ ಭಾಗದ ಜನರ ನಂಬಿಕೆಯ ದೈವ ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಜನಪ್ರಿಯ. 'ಕಾಂತಾರ' ಸಿನಿಮಾ ಮೂಲಕ ರಿಷಬ್ ಶೆಟ್ಟಿ ದೈವವನ್ನು ಪರಿಚಯಿಸಿದ್ದರು. ಅಲ್ಲಿಂದ ಇಡೀ ದೇಶದ ಜನರು ಈ ದೈವಗಳ ಕಡೆಗೆ ತಿರುಗಿ ನೋಡುವಂತೆ ಮಾಡುತ್ತಿದೆ. ಇತ್ತೀಚೆಗೆ ಬಂದ 'ಕಾಂತಾರ ಚಾಪ್ಟರ್ 1' ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಬೆನ್ನಲ್ಲೇ ಮತ್ತೊಂದು ದೈವ 'ಕೊರಗಜ್ಜ'ನ ಮಹಿಮೆಯನ್ನು ಹೇಳುವುದಕ್ಕೆ ಸಿದ್ಧತೆಗಳು ನಡೆಯುತ್ತಿವೆ.
ಕಳೆದ ಮೂರು ವರ್ಷಗಳಿಂದ 'ಕೊರಗಜ್ಜ' ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಈ ಸಿನಿಮಾದಲ್ಲಿ ಕನ್ನಡ ಸೇರಿದಂತೆ ಪರ ಭಾಷೆಯ ದಿಗ್ಗಜರು ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೇವಲ ಕರಾವಳಿ ಮಂದಿಯಷ್ಟೇ ಅಲ್ಲ. ಕರ್ನಾಟಕದ ವಿವಿಧ ಮೂಲೆಗಳಿಂದಲೂ 'ಕೊರಗಜ್ಜ'ನ ದರ್ಶನಕ್ಕೆ ಬರುತ್ತಾರೆ. ಹಾಗೇ ಕನ್ನಡ ಚಿತ್ರರಂಗದ ತಾರೆಯರು ಕೂಡ ಬಂದು ಬೇಡಿಕೆ ಇಟ್ಟಿದ್ದರು. ಅದು ಈಡೇರಿದ ಬಳಿಕ ಬಂದು ಹೊರಕೆ ತೀರಿಸಿ ಹೋಗಿದ್ದಾರೆ. ಆ ಮಟ್ಟಿಗೆ ನಂಬಿಕೆಯಿದೆ.

ಹೀಗಾಗಿ 'ಕೊರಗಜ್ಜ'ನ ಮಹಿಮೆಯನ್ನು ವಿಶ್ವಕ್ಕೆ ತಿಳಿಸುವ ಪ್ರಯತ್ನಕ್ಕೆ ನಿರ್ದೇಶಕ ಸುಧೀರ್ ಅತ್ತಾವರ್ ಕೈ ಹಾಕಿದ್ದಾರೆ. ಸಕ್ಸಸ್ ಫಿಲ್ಮ್ಸ್ ಮತ್ತು ತ್ರಿವಿಕ್ರಮ ಸಿನಿಮಾಸ್ ಬ್ಯಾನರ್ ಮೂಲಕ ತ್ರಿವಿಕ್ರಮ ಸಾಪಲ್ಯ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇಷ್ಟು ದಿನ ಮೇಕಿಂಗ್‌ನಲ್ಲಿ ಬ್ಯುಸಿಯಾಗಿದ್ದ ತಂಡ ಈಗ ಪ್ರಚಾರವನ್ನು ಆರಂಭಿಸಿದೆ. ಅದಕ್ಕೂ ಮುನ್ನ ಸಿನಿಮಾದ ಹಾಡುಗಳನ್ನು ರಿಲೀಸ್ ಮಾಡಲಾಗಿದೆ.
ಸುಧೀರ್ ಅತ್ತಾವರ್ ನಿರ್ದೇಶಿಸಿರುವ 'ಕೊರಗಜ್ಜ' ಸಿನಿಮಾದ ಆಡಿಯೋ ಹಕ್ಕುಗಳನ್ನು ಜೀ಼ ಮ್ಯೂಸಿಕ್ ಖರೀದಿ ಮಾಡಿದೆ. ಕನ್ನಡ ಸಿನಿಮಾದ ಹಾಡುಗಳನ್ನು ಜೀ ಮ್ಯೂಸಿಕ್ ಸಂಸ್ಥೆ ಖರೀದಿ ಮಾಡುವುದನ್ನು ನಿಲ್ಲಿಸಿತ್ತು. ಆದ್ರೀಗ ಈ ಸಿನಿಮಾದ ಎಲ್ಲಾ ಭಾಷೆಗಳ ಒಟ್ಟು 31 ಹಾಡುಗಳ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ವಿಷಯವನ್ನು ಆಡಿಯೋ ಲಾಂಚ್ ವೇಳೆ ಬಹಿರಂಗಗೊಳಿಸಲಾಗಿದೆ.

'ಕೊರಗಜ್ಜ' ಸಿನಿಮಾಗೆ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಗೋಪಿ ಸುಂದರ್ ಟ್ಯೂನ್ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಸುಧೀರ್ ಅತ್ತಾವರ್ ಈ ಟ್ಯೂನ್‌ಗಳಿಗೆ ಸಾಹಿತ್ಯವನ್ನು ರಚಿಸಿದ್ದಾರೆ. ಇನ್ನು ಈ ಸಿನಿಮಾದಲ್ಲಿ 'ಗುಳಿಗ' ಪಾತ್ರದಲ್ಲಿ ಹಾಲಿವುಡ್-ಬಾಲಿವುಡ್-ಫ್ರೆಂಚ್ ಸಿನಿಮಾಗಳಲ್ಲಿ ನಟಿಸಿರುವ ಸಂದೀಪ್ ಸೋಪಾರ್ಕರ್ ನಿರ್ವಹಿಸಿದ್ದಾರೆ. ಈ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಶೂಟಿಂಗ್ ಸಮಯದಲ್ಲಿ ಈ ಪಾತ್ರ ಮಾಡುವಾಗ ತಮ್ಮ ಮೇಲೆ ಆವೇಶ ಬಂದಂತಹ ಅನುಭವ ಆಗಿತ್ತು ಎಂದಿದ್ದಾರೆ.
ಇದೇ ಮೊದಲ ಬಾರಿಗೆ ದೆಹಲಿ, ಮುಂಬೈ, ಚಂಡೀಗಡ್, ಹೈದರಾಬಾದ್, ಕೊಚ್ಚಿ, ಬೆಂಗಳೂರು, ಮಂಗಳೂರಿನ ಸುಮಾರು 160ಕ್ಕೂ ಹೆಚ್ಚು ಪತ್ರಕರ್ತರು ಈ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸುಧೀರ್ ಅತ್ತಾವರ್ ದೈವಾರಾಧನೆ ಮೂಲದ ಬಗ್ಗೆ ವಿವರಿಸಿದರು. "ದೈವಾರಾಧನೆಯ ಮೂಲ ಷಮನಿಸಂ ಎನ್ನುವುದನ್ನು ಪ್ರತಿಪಾದಿಸುತ್ತಾ, ಸೈಬೀರಿಯಾ ದೇಶದಿಂದ ಆರಂಭವಾಗಿರುವ ಷಮನಿಸಂ, ಕರಾವಳಿಯ ನಲಿಕೆ ಜನಾಂಗದ ರೀತಿಯಲ್ಲೇ ಸೆಮಿ ಭಾಷೆ ಮಾತನಾಡುವ ಸೆಮಿನೋಯ್ಡ್ಸ್ ಜನಾಂಗದವರು ಆವೇಶಗೊಂಡು, ಮುಖಕ್ಕೆ ಹಳದಿ ಬಣ್ಣ, ಬೆನ್ನಿಗೆ ಅಣಿ (ದೊಡ್ಡ ಕಿರೀಟ) ಧರಿಸಿ ಟ್ರಾನ್ಸ್ ಸ್ಥಿತಿಯಲ್ಲಿ ಭೂತ-ಭವಿಷ್ಯಗಳ ವಿಚಾರ ತಿಳಿಸುವ ಮಾದರಿಯಲ್ಲೇ ಭೂತಕೋಲ ಮತ್ತು ಕೇರಳದ ತೈಯಂ ವಿಕಸನ ಹೊಂದಿರುವುದಾಗಿ ತಿಳಿಸಿದರು.


Click it and Unblock the Notifications











