Sri Raghavendra Mahathme: 'ಶ್ರೀರಸ್ತು ಶುಭಮಸ್ತು' ಮುಗಿದ ಬಳಿಕ 'ಶ್ರೀ ರಾಘವೇಂದ್ರ ಮಹಾತ್ಮೆ' ಪ್ರಸಾರ; ಎಷ್ಟೊತ್ತಿಗೆ? ಎಲ್ಲಿ?
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಇಂದು (ಆಗಸ್ಟ್ 29) ಅಂತ್ಯ ಕಂಡಿದೆ. ಸುಮಾರು ಮೂರು ವರ್ಷಗಳ ಕಾಲ ಜನರನ್ನು ರಂಜಿಸಿದ್ದ ಈ ಧಾರಾವಾಹಿ ಕೊನೆಗೊಂಡಿದೆ. ಇದಕ್ಕೆ ಬದಲಿಯಾಗಿ ಹೊಸ ಆಧ್ಯಾತ್ಮಕ ಧಾರಾವಾಹಿಯನ್ನು ಪ್ರಸಾರ ಮಾಡುವುದಕ್ಕೆ ಜೀ ಕನ್ನಡ ಸಿದ್ಧತೆಗಳನ್ನು ಮಾಡಿಕೊಂಡಿದೆ. ಅದುವೇ 'ಶ್ರೀ ರಾಘವೇಂದ್ರ ಮಹಾತ್ಮೆ'.
ಜೀ ಕನ್ನಡದಲ್ಲಿ ಇತ್ತೀಚೆಗೆ ಭಕ್ತಿ ಪ್ರಧಾನ ಸೀರಿಯಲ್‌ಗಳು ಬಂದಿರಲಿಲ್ಲ. ಹಾಗಂತ ಹಿಂದೆ 'ಉಘೆ ಉಘೆ ಮಾದೇಶ್ವರ' ಮತ್ತು 'ವಿಷ್ಣು ದಶಾವತಾರ' ಎಂಬ ಜನಪ್ರಿಯ ಭಕ್ತಿಪ್ರಧಾನ ಧಾರಾವಾಹಿಗಳನ್ನು ಪ್ರಸಾರ ಮಾಡಿತ್ತು. ಅದನ್ನು ಕನ್ನಡಿಗರ ಮನಸಾರೆ ಮೆಚ್ಚಿಕೊಂಡಿದ್ದರು. ಅಂತಹ ವೀಕ್ಷಕರನ್ನು ಮತ್ತೆ ಸೆಳೆಯುವುದಕ್ಕೆ ಜೀ ಕನ್ನಡ ಮತ್ತೆ ದಿಟ್ಟ ನಿರ್ಧಾರ ಮಾಡಿದೆ. ಈಗ ಮತ್ತೊಂದು ಭಕ್ತಿಪ್ರಧಾನ ಧಾರಾವಾಹಿಯನ್ನು ಜನರ ಮುಂದಿಡಲು ಸಜ್ಜಾಗಿದೆ.

'ಶ್ರೀ ರಾಘವೇಂದ್ರ ಮಹಾತ್ಮೆ' ಎಂಬ ಭಕ್ತಿ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯ ಅಂತ್ಯವಾದ ಬಳಿಕ ಟೆಲಿಕಾಸ್ಟ್ ಆಗಲಿದೆ. ಈಗಾಗಲೇ 'ಶ್ರೀ ರಾಘವೇಂದ್ರ ಮಹಾತ್ಮೆ'ಯ ತುಣುಕುಗಳನ್ನು ವೀಕ್ಷಕರಿಗಾಗಿ ಜೀ ಕನ್ನಡ ಹೊರ ಹಾಕಿದೆ. ಹಾಗಿದ್ದರೆ, ಯಾವಾಗಿಂದ? ಎಷ್ಟೊತ್ತಿಗೆ ಪ್ರಸಾರವಾಗುತ್ತಿದೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ನಂಬಿಕೆ, ಸಂಪ್ರದಾಯ ಹಾಗೂ ಭಕ್ತಿಯ ಸಾರವೇ ಬೇರು ಬಿಟ್ಟಿರುವ ಭವ್ಯವಾದ ಕಥೆಯನ್ನು ವೀಕ್ಷಕರ ಮುಂದಿಡುವುದಕ್ಕೆ ಜೀ ಕನ್ನಡ ನಿರ್ಧರಿಸಿದೆ. ಜೀ ಕನ್ನಡ ಇದೀಗ ʼಶ್ರೀ ರಾಘವೇಂದ್ರ ಮಹಾತ್ಮೆʼ ಎಂಬ ಭಕ್ತಿ ಪ್ರಧಾನ ಧಾರಾವಾಹಿಯನ್ನು ತನ್ನ ವೀಕ್ಷಕರಿಗೆ ನೀಡುತ್ತಿದೆ. ಈ ಧಾರಾವಾಹಿಯ ಮೂಲಕ ಶ್ರೀ ರಾಘವೇಂದ್ರ ಸ್ವಾಮಿಗಳ ಅಸಾಮಾನ್ಯ ಜೀವನ ಯಾತ್ರೆಯನ್ನು ಕಿರುತೆರೆಯಲ್ಲಿ ಬಿಂಬಿಸಲಾಗುತ್ತಿದೆ.
'ಶ್ರೀ ರಾಘವೇಂದ್ರ ಮಹಾತ್ಮೆ' ರಾಯರ ಬಾಲ್ಯದಿಂದ ಹಿಡಿದು ಅವರ ಆಧ್ಯಾತ್ಮ ಪಯಣ, ಉಪದೇಶಗಳು, ಪವಾಡಗಳು ಹಾಗೂ ಪರಂಪರೆಯನ್ನು ಈ ಧಾರಾವಾಹಿ ಮೂಲಕ ಹೇಳುವುದಕ್ಕೆ ಹೊರಟಿದೆ. ಇಲ್ಲಿ ಕಥಾಶೈಲಿ, ಅದ್ಭುತ ದೃಶ್ಯಗಳನ್ನು ವೀಕ್ಷಕರು ನೋಡಬಹುದಾಗಿದೆ. ಇನ್ನು ರಾಯರ ಆತ್ಮಚರಿತ್ರೆ ಮಾತ್ರವಲ್ಲದೆ ಅವರು ತಿಳಿಸಿದ ಜೀವನದ ಮೌಲ್ಯಗಳನ್ನು ತಮ್ಮ ವೀಕ್ಷಕರಿಗೆ ಮುಟ್ಟಿಸುವುದಕ್ಕೆ ಮುಂದಾಗಿದೆ.
ಧಾರಾವಾಹಿಯಲ್ಲಿ ಜನಪ್ರಿಯ ನಟ-ನಟಿಯರ ತಾರಾಬಳಗವಿದೆ. ಈ ಧಾರಾವಾಹಿಯ ನಿರ್ಮಾಣ ಹಾಗೂ ಕ್ರಿಯೇಟಿವ್ ಹೆಡ್ ಆಗಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಮಹೇಶ್ ಸುಖಧರೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನು ನಿರ್ದೇಶನವನ್ನು ಟಾಲೆಂಟೆಡ್ ಆಕ್ಟರ್ ಹಾಗೂ ಡೈರೆಕ್ಟರ್ ನವೀನ್ ಕೃಷ್ಣ ಮಾಡುತ್ತಿದ್ದಾರೆ. ಈ ಭಕ್ತಿ ಪ್ರಧಾನ ಧಾರಾವಾಹಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ.

ವಿಷ್ಣು ಪಾತ್ರದಲ್ಲಿ ಅಮಿತ್ ಕಶ್ಯಪ್ ನಟಿಸುತ್ತಿದ್ದರೆ, ಸಿರಿ ಪ್ರಹ್ಲಾದ್ ಲಕ್ಷ್ಮಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವ್ಯಾಸರಾಯರ ಪಾತ್ರದಲ್ಲಿ ಪರೀಕ್ಷಿತ್ ನಟಿಸಿದ್ದಾರೆ. ಇವರೊಂದಿಗೆ ವಿಕಾಸ್ ವಸಿಷ್ಠ, ದೀಪಿಕಾ, ಕಾರ್ತಿಕ್ ಸಾಮಗ, ಧನ್ಯಶ್ರೀ ಪ್ರಭು, ವಿಕ್ರಂ ಸೂರಿ, ಡಾ.ಸಂಜಯ್, ಸ್ನೇಹಾ ಹೆಗ್ಡೆ, ಶ್ರೀನಿಧಿ, ಶ್ರೀಲತಾ, ಅನುರಾಗ್ ಸೇರಿ ಅನೇಕ ಹಲವು ಪ್ರತಿಭಾನ್ವಿತ ಕಲಾವಿದರ ದಂಡು ಕಾಣಿಸಿಕೊಳ್ಳಿದೆ. ಅಷ್ಟೇ ಅಲ್ಲದೆ ಈ ಧಾರಾವಾಹಿಯಲ್ಲಿ ಹಿರಣ್ಯ ಕಶಿಪುವಾಗಿ ಚೆಲುವರಾಜು, ಕಯಾದು ಪಾತ್ರದಲ್ಲಿ ಲೂಸಿಯಾ ಚೆಲುವೆ ಶ್ರುತಿ ಹರಿಹರನ್ ಈ ಧಾರಾವಾಹಿಯಲ್ಲಿ ನಟಿಸಿರೋದು ಹೈಲೈಟ್.
ಇಷ್ಟೆಲ್ಲ ಹೇಳಿದ ಮೇಲೆ ರಾಯರ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ? ಎಂಬುದನ್ನು ಮುಂದಿನ ದಿನಗಳಲ್ಲಿ ಸಿಗಲಿದೆ.'ಶ್ರೀ ರಾಘವೇಂದ್ರ ಮಹಾತ್ಮೆʼ ಕೇವಲ ಭಕ್ತಿ ಪ್ರಧಾನ ಕಥೆಯಾಗಿರದೆ ಇಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದಕ್ಕೆ ಜೀ ಟೀಮ್ ಸನ್ನದ್ಧವಾಗಿದೆ. ಈ ಧಾರಾವಾಹಿಯಲ್ಲಿ ಅತ್ಯಾಧುನಿಕ ಟೆಕ್ನಾಲಜಿ, ಭವ್ಯವಾದ ಸೆಟ್‌ಗಳು, ಗಟ್ಟಿಯಾದ ಕಥೆ ಈ ಧಾರಾವಾಹಿಯ ನಿರೂಪಣಾ ಶೈಲಿಗೆ ಹೊಸ ಅರ್ಥ ನೀಡಲು ಸಜ್ಜಾಗಿದೆ. ಇದೇ ಸೆಪ್ಟೆಂಬರ್ 1 ರಿಂದ, ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9 ಗಂಟೆಗೆ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿ ಪ್ರಸಾರ ಆಗಲಿದೆ.


Click it and Unblock the Notifications











