ಮಳವಳ್ಳಿ ಮಹೇಶ್ವರಿ ಅವತಾರವೆತ್ತಿದ ಹಿರಿಯ ನಟಿ ಅಂಬಿಕಾ; 'ಜೈಲಲಿತಾ' ಜೈ ಅಂತಾರಾ ವೀಕ್ಷಕರು?
ಸಿನಿಮಾಗಳಿಗೆ ಕಿರುತೆರೆ ಧಾರಾವಾಹಿಗಳು ಪೈಪೋಟಿ ನೀಡುತ್ತಿವೆ. ಕನ್ನಡ ಕಿರುತೆರೆ ವಾಹಿನಿಗಳು ಹೊಸ ಧಾರಾವಾಹಿಗಳನ್ನು ವೀಕ್ಷಕರ ಮುಂದಿಡುತ್ತಿವೆ. ಹಾಗಂತ ಇಲ್ಲಿಗೆ ಸುಮ್ಮನಾಗಿಲ್ಲ. ಕಿರುತೆರೆಗೆ ಹಿರಿಯ ನಟಿಯರನ್ನು ಕರೆದುಕೊಂಡು ಬರುತ್ತಿದ್ದಾರೆ. ಹೀಗಾಗಿ ಧಾರಾವಾಹಿಗಳು ಇನ್ನಷ್ಟು ಕಲರ್‌ಫುಲ್ ಹಾಗೂ ಪವರ್‌ಫುಲ್ ಆಗಿ ಮೂಡಿ ಬರುತ್ತಿವೆ.
ಕಿರುತೆರೆ ವೀಕ್ಷಕರಿಗಾಗಿ ಸ್ಟಾರ್ ಸುವರ್ಣ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ಹಿರಿಯ ನಟಿ ಅಂಬಿಕಾ ಅವರನ್ನು ತಮ್ಮ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಧಾರಾವಾಹಿಗೆ ಕರೆದುಕೊಂಡು ಬಂದಿದ್ದಾರೆ. ಅವರು ಮತ್ಯಾರೂ ಅಲ್ಲ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ನಟಿಸಿರುವ ಹಿರಿಯ ನಟಿ ಅಂಬಿಕಾ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ 'ಜೈಲಲಿತಾ' ಧಾರಾವಾಹಿ ಪ್ರಸಾರವಾಗುತ್ತಿದೆ. ಈ ಜನಪ್ರಿಯ ಧಾರಾವಾಹಿ ಧಾರಾವಾಹಿಗೆ ಹಿರಿಯ ನಟಿ ಅಂಬಿಕಾ ಅದ್ಧೂರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಅಂಬಿಕಾ ಅವರು ಸುಮಾರು 15 ವರ್ಷಗಳ ಬಳಿಕ 'ಜೈಲಲಿತಾ' ಧಾರಾವಾಹಿಯ ಪವರ್‌ಫುಲ್ ಪಾತ್ರದ ಮೂಲಕ ಮತ್ತೆ ಸ್ಟಾರ್ ಸುವರ್ಣದ ಪರಿವಾರಕ್ಕೆ ಮರಳುತ್ತಿದ್ದಾರೆ.
ಚಳಿ ಬಿಡಿಸಲು ಬಂದ ಹಿರಿಯ ನಟಿ ಅಂಬಿಕಾ
ಹಿರಿಯ ನಟಿ ಅಂಬಿಕಾ ಹೆಸರು ಕೇಳಿದ ಕೂಡಲೇ ರೆಬೆಲ್ ಸ್ಟಾರ್ ಅಂಬರೀಶ್ ಜೊತೆ ನಟಿಸಿದ್ದ "ಚಳಿ ಚಳಿ ತಾಳೆನು ಈ ಚಳಿಯ.." ಹಾಡು ಕಣ್ಮುಂದೆ ಬರುತ್ತೆ. ಕನ್ನಡದ ಹಲವು ಸಿನಿಮಾಗಳ ಮೂಲಕ ಅಂಬಿಕಾ ಕನ್ನಡಿಗರ ಮನಸ್ಸಿನಲ್ಲಿ ನೆಲೆಸಿದ್ದಾರೆ. ಸದ್ಯ ಸಿನಿಮಾ ಹಾಗೂ ಕಿರುತೆರೆ ಎರಡರಲ್ಲೂ ಬ್ಯುಸಿಯಾಗಿದ್ದಾರೆ. ಅಂಬಿಕಾ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದೇ ಸ್ಟಾರ್ ಸುವರ್ಣ ವಾಹಿನಿಯ 'ಪ್ರೀತಿಯಿಂದ' ಧಾರಾವಾಹಿ ಮೂಲಕ.
2011ರಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿ 'ಪ್ರೀತಿಯಿಂದ' ಕಿರುತೆರೆ ಲೋಕದಲ್ಲಿ ಸಂಚಲನ ಸೃಷ್ಟಿಸಿತ್ತು. ಆ ಧಾರಾವಾಹಿಯಲ್ಲಿ ಅಂಬಿಕಾ 'ಅಮ್ಮಾಜಿ' ಹಾಗೂ 'ಪ್ರಭಾಮಣಿ' ಎಂಬ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿದ್ದರು. ಅದಾದ ಬಳಿಕ ಕನ್ನಡದ ಹಲವು ಸೀರಿಯಲ್‌ನಲ್ಲಿ ನಟಿಸಿದ್ದರೂ, ಸ್ಟಾರ್ ಸುವರ್ಣ ಧಾರಾವಾಹಿಗಳಲ್ಲಿ ನಟಿಸಿರಲಿಲ್ಲ. ಈಗ ಸರಿ ಸುಮಾರು 15 ವರ್ಷಗಳ ನಂತರ ಮತ್ತೆ ಸ್ಟಾರ್ ಸುವರ್ಣಗೆ 'ಜೈಲಲಿತಾ' ಸೀರಿಯಲ್ ಮೂಲಕ ವೀಕ್ಷಕರನ್ನು ರಂಜಿಸಲು ಬರುತ್ತಿದ್ದಾರೆ.

'ಮಳವಳ್ಳಿ ಮಹೇಶ್ವರಿ' ಖದರ್ ಹೇಗಿದೆ?
'ಜೈಲಲಿತಾ' ಧಾರಾವಾಹಿಯಲ್ಲಿ ಅಂಬಿಕಾ ನಿರ್ವಹಿಸುತ್ತಿರುವ ಪಾತ್ರದ ಹೆಸರು 'ಮಳವಳ್ಳಿ ಮಹೇಶ್ವರಿ'. ಅಂಬಿಕಾ ಅವರ ಖದರ್ ನೋಡಿದವರೇ ಇದೊಂದು ಪವರ್‌ಫುಲ್ ಹಾಗೂ ಖಡಕ್ ಪಾತ್ರ ಅನ್ನೋದು ಗೊತ್ತಾಗುತ್ತೆ. 'ಮಳವಳ್ಳಿ ಮಹೇಶ್ವರಿ' ಪಾತ್ರದ ಹಿನ್ನೆಲೆಯನ್ನು ನೋಡುವುದಾರೇ, ಹೀರೋನ ಅಜ್ಜಿ. ಹಾಗೇ ಪರಮೇಶ್ವರಿಯ ತಾಯಿ ಕೂಡ ಹೌದು. ಕಥೆಯಲ್ಲಿ ಇಡೀ ಊರಿಗೆ ಹಾಗೂ ಮನೆಗೆ ಡಾನ್ ತರ ಇರುವ ಗಂಡನಿಗೂ ಹೆದರದ 'ಪರಮೇಶ್ವರಿ'ಯ ಹೆತ್ತ ತಾಯಿ ಇವರು.
ಊರು, ಮನೆ ಮಂದಿಯನ್ನೆಲ್ಲ ನಡುಗಿಸುವ ಪರಮೇಶ್ವರಿ, ತನ್ನ ತಾಯಿ ಮಹೇಶ್ವರಿಯನ್ನು ಕಂಡರೆ ಹೆದರಿ ಗಡ ಗಡ ನಡುಗುತ್ತಾಳೆ. ಈಗ ಧಾರಾವಾಹಿಗೆ ಇದೇ ಪಾತ್ರದ ಗ್ರ್ಯಾಂಡ್ ಎಂಟ್ರಿ ಆಗುತ್ತಿದೆ. ಮಳವಳ್ಳಿ ಮಹೇಶ್ವರಿ ಪಾತ್ರ ನೋಡುವುದಕ್ಕೆ ತುಂಬಾನೇ ಸ್ಟ್ರಿಕ್ಟ್. ಅವರಲ್ಲಿನ ಗತ್ತು, ಗಾಂಭೀರ್ಯ, ಶಿಸ್ತು ಸುತ್ತಮುತ್ತ ಇರುವವರಲ್ಲಿ ಭಯ ಹುಟ್ಟಿಸುತ್ತೆ. ಆದರೆ, ಒಳ ಮನಸ್ಸಿನಲ್ಲಿ ಅವರು ತುಂಬಾನೇ ಒಳ್ಳೆಯವರು.
ಇದೇ ವಾರದಿಂದ ಮಹೇಶ್ವರಿ ಎಂಟ್ರಿ
'ಜೈಲಲಿತಾ ಧಾರಾವಾಹಿಗೆ ರೋಚಕ ತಿರುವು ನೀಡುವುದಕ್ಕೆ 'ಮಳವಳ್ಳಿ ಮಹೇಶ್ವರಿ' ಪಾತ್ರವನ್ನು ಎಂಟ್ರಿ ಕೊಡಲಾಗಿದೆ. ಇದೇ ವಾರದಿಂದ ಅಂಬಿಕಾ ಎಂಟ್ರಿ ಆಗಲಿದೆ. ಅಂಬಿಕಾ ಅದ್ಧೂರಿ ಎಂಟ್ರಿ ಆದ ಸಂಚಿಕೆಗಳು ಇದೇ ವಾರದಿಂದ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿವೆ. ಖದರ್ ಹಾಗೂ ಗಾಂಭೀರ್ಯದ ಈ ಮಳವಳ್ಳಿ ಮಹೇಶ್ವರಿ ಪಾತ್ರಕ್ಕೆ ನಟಿ ಅಂಬಿಕಾ ಅವರು ಎಷ್ಟು ಅದ್ಭುತವಾಗಿ ಜೀವ ತುಂಬಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಧಾರಾವಾಹಿ ಪ್ರತಿದಿನ ರಾತ್ರಿ 9:30ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.


Click it and Unblock the Notifications
